ADVERTISEMENT

ಹಣತೆ ಕವಿಯ ಬೆಳಕಿನಲ್ಲಿ...

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

`ನಾವಿಬ್ಬರೂ ಅಂದು
ಹೊಳೆಯ ದಡದಲಿ ನಿಂದು
ಮರಳು ಮನೆಗಳ ಕಟ್ಟಿ
ಆಟವಾಡಿದ ನೆನಪಿದೆಯೇ...~

ಅದು ಸ್ತ್ರೀಶಕ್ತಿ ಚಿತ್ರದ ಒಂದು ಹಾಡು. ಹಣತೆಯ ಕವಿ ಜಿ.ಎಸ್.ಶಿವರುದ್ರಪ್ಪ ಅವರು ಎಷ್ಟೋ ವರ್ಷಗಳ ಹಿಂದೆ ಬರೆದ ಈ ಕವಿತೆಯನ್ನು ಕೈಗೆತ್ತಿಕೊಂಡಿದ್ದಾರೆ ಸಂಗೀತ ನಿರ್ದೇಶಕ ವಿ.ಮನೋಹರ್.

`ಶಿವರುದ್ರಪ್ಪನವರು ನನ್ನ ನೆಚ್ಚಿನ ಕವಿ. ಸಿನಿಮಾದವರು ಹಾಡು ಕೆಡಿಸ್ತಾರೆ ಅನ್ನುವುದು ಅವರ ಮೊದಲ ಅಭಿಪ್ರಾಯವಾಗಿತ್ತು. ಹಾಡಿಗೆ ರಾಗ ಸಂಯೋಜನೆ ಮಾಡಿ ಅವರ ಮನೆಗೆ ಒಯ್ದೆವು. ಹಾಡಿನ ಚಿತ್ರೀಕರಣದ ಪ್ರತಿಯನ್ನೂ ನೀಡಿದೆವು.
 
ಆಗ ಅವರಿಗೆ ಸಮಾಧಾನವಾಯಿತು. ಸಂಭಾವನೆ ನೀಡಿದಾಗ ಅವರು ಅಚ್ಚರಿಪಟ್ಟರು~ ಎಂದು ನೆನಪಿಗೆ ಸರಿದರು ಮನೋಹರ್. ಅಂದಹಾಗೆ, ಹಾಡಿನ ಚಿತ್ರೀಕರಣ ಮಲೆನಾಡಿನ ಹೊರನಾಡು, ಕೆಳಗೂರು ಚಹಾ ಎಸ್ಟೇಟ್, ಕಳಸ ಮುಂತಾದ ಕಡೆ ನಡೆದಿದೆ.

`ಜಿಎಸ್‌ಎಸ್ ಕವಿತೆಯ ದೃಶ್ಯಗಳನ್ನು ಅತ್ಯುತ್ತಮ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಇದು ಸಿನಿಮಾದ ಹೈಲೈಟ್. ಚಿತ್ರಕ್ಕೆ ಎರಡು ಹಾಡು ಸಾಕು ಎಂದಿದ್ದರು. ಆದರೆ ಇನ್ನೆರಡು ಹಾಡನ್ನು ಸೇರಿಸಿದೆ. ಅದೃಷ್ಟವಶಾತ್ ಎಲ್ಲವೂ ಚೆನ್ನಾಗಿ ಮೂಡಿಬಂದಿವೆ~ ಎಂದು ಅವರು ಜೋಕು ಕತ್ತರಿಸಿದಾಗ ಪತ್ರಿಕಾಗೋಷ್ಠಿಯಲ್ಲಿ ನಗೆಯ ಅಲೆ.

ಸುದೀರ್ಘ ಕಾಲದ ನಂತರ, ಅಂದರೆ ಸುಮಾರು ಒಂದು ದಶಕದ ಬಳಿಕ ಎಸ್.ವಿ.ಸುರೇಶ್ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅವರು ಮೊದಲು ನಿರ್ದೇಶಿಸಿದ ಚಿತ್ರ `ಪ್ರೇಮ~. ಆದರೆ ತೆರೆ ಕಾಣುವ ಮೊದಲೇ ಅದಕ್ಕೆ ಅನೇಕ ಅಡ್ಡಿ ಆತಂಕಗಳು ಎದುರಾದವು.

ಜೊತೆಗಾರರು ಕೈ ಹಿಡಿಯಲಿಲ್ಲ. ಹೀಗಾಗಿ ಸಹಾಯಕ ನಿರ್ದೇಶಕನಾಗಿ ದುಡಿದ ಅವರು ಒಳ್ಳೆಯ ಕಥೆಯೊಂದನ್ನು ಹಿಡಿದು ನಟ ಸುದೀಪ್ ಅವರ ಮನೆ ಬಾಗಿಲು ಬಡಿದರು. ಮರುದಿನವೇ ಅವರಿಂದ ತಥಾಸ್ತು. ಹೊ.ನ.ಸತ್ಯ ಅವರ ಕಥೆ ಚಿತ್ರವಾಯಿತು.

`ಹಣದ ಸಹಾಯ ನೀಡಿದರೂ ಅವರು ನಿರ್ಮಾಪಕನಾಗಲು ಮುಂದಾಗಲಿಲ್ಲ. ಎಲ್ಲವನ್ನೂ ನನಗೇ ವಹಿಸಿದರು. ನಿನ್ನ ಬೆವರಿಗೆ ಉತ್ತಮ ಫಲ ಸಿಗಲಿ ಎಂದು ಹಾರೈಸಿದರು. ಅವರ ಉಪಕಾರವನ್ನು ಎಂದಿಗೂ ಮರೆಯಲಾರೆ~ ಎಂದು ಕೊಂಡಾಡಿದರು ಸುರೇಶ್.

ಸಮಾನತೆಗಾಗಿ ಹೋರಾಡುವ ಹೆಣ್ಣುತನ ಚಿತ್ರದ ಕಥಾವಸ್ತು. ಸ್ತ್ರೀ ಭ್ರೂಣ ಹತ್ಯೆಯನ್ನು ಚಿತ್ರ ವಿರೋಧಿಸುತ್ತದೆಯಂತೆ. ಲೋಲುಪ ಕಾಫಿ ಎಸ್ಟೇಟಿನ ಮಾಲೀಕ, ಯಾವುದೋ ಮೂಢನಂಬಿಕೆಗೆ ತುತ್ತಾಗಿ ಹೆಣ್ಣಿನ ದ್ವೇಷಿಯಾಗುತ್ತಾನೆ. ಸ್ವಂತ ಹೆಂಡತಿ ಸೊಸೆಯನ್ನೇ ಹೀಗಳೆಯುತ್ತಾನೆ. ಸ್ತ್ರೀಶಕ್ತಿ ಸಂಘದ ಕೆಲಸವೊಂದು ಆತನನ್ನು ಬದಲಿಸುತ್ತದೆ. ಕಥೆಯ ಈ ಸುಳಿವು ಬಿಟ್ಟುಕೊಟ್ಟಿದ್ದು ನಟ ಶರತ್ ಲೋಹಿತಾಶ್ವ. ಎಸ್ಟೇಟ್ ಮಾಲೀಕನ ಪಾತ್ರಧಾರಿ ಅವರೇ. 

ಚಿತ್ರದ ಮತ್ತೊಬ್ಬ ನಾಯಕ ರಾಜೀವ್. ತನ್ನ ಅಪ್ಪ, ಕಾಫಿ ಎಸ್ಟೇಟ್ ಮಾಲೀಕನಿಗೆ ವಿರುದ್ಧವಾದ ಗುಣ ಅವರದು. ಹೆಣ್ಣನ್ನು ಪ್ರೀತಿ ಗೌರವಗಳಿಂದ ಕಾಣುವ ಪಾತ್ರವದು. `ಕೆಂಪೇಗೌಡ~ ಚಿತ್ರದಲ್ಲಿ ಅಭಿನಯಿಸಿದ ಅನುಭವವಿದ್ದರೂ ಪ್ರಧಾನ ಪಾತ್ರವೊಂದನ್ನು ಪೋಷಿಸಿದ ಸಂತಸ ಅವರಲ್ಲಿತ್ತು.

ಹೆಸರೇನೋ `ಸ್ತ್ರೀಶಕ್ತಿ~. ಆದರೆ ಚಿತ್ರದ ನಟಿಯರಾದ ಸೋನು, ತುಳಸಿ ಶಿವಮಣಿ ಪತ್ರಿಕಾಗೋಷ್ಠಿಯಲ್ಲಿ ಇರಲಿಲ್ಲ. ಕಾರಣಾಂತರಗಳಿಂದ ಬರಲಾಗಿಲ್ಲ ಎಂದರು ನಿರೂಪಣೆಯ ಹೊಣೆ ಹೊತ್ತಿದ್ದ ನಟ ಸುಂದರ್ ರಾಜ್.

ಚಿತ್ರ ನಿರ್ದೇಶಕ ಎಂ.ಎಸ್.ರಮೇಶ್, ನಿರ್ಮಾಪಕ ಯೋಗೀಶ್ ಹುಣಸೂರು, ಛಾಯಾಗ್ರಾಹಕ ಕೆ.ಶಶಿಧರ್, ಸಂಕಲನಕಾರ ಬಿ.ಎಸ್.ಕೆಂಪರಾಜು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT