ADVERTISEMENT

‘ಪುಂಗಿದಾಸ’ ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್

ಅಮಿತ್ ಎಂ.ಎಸ್.
Published 9 ಜನವರಿ 2014, 19:30 IST
Last Updated 9 ಜನವರಿ 2014, 19:30 IST

ಹಾಸ್ಯ ನಟ ಶರಣ್‌ಗೆ ನಾಯಕನ ಇಮೇಜ್‌ ತಂದು ಕೊಟ್ಟ ‘ರ್‍್ಯಾಂಬೋ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವ ಶ್ರೀನಾಥ್‌ ಅವರ ಹೊಸ ಚಿತ್ರ ಬಿಡುಗಡೆಗೆ ಮುನ್ನವೇ ಸುದ್ದಿ ಮಾಡುತ್ತಿದೆ. ಅವರ ನಿರ್ದೇಶನದ ‘ಪುಂಗಿದಾಸ’ ಹೊರರಾಜ್ಯಗಳಲ್ಲಿಯೂ ಮಾಡುತ್ತಿರುವ ಸದ್ದು ಕೆಲ ಸೋಲುಗಳ ಬಳಿಕ ದೊಡ್ಡ ಗೆಲುವಿನ ಭರವಸೆಯನ್ನು ನಟ ಕೋಮಲ್‌ ಅವರಲ್ಲೂ ಮೂಡಿಸಿದೆ.

ಚಿತ್ರೀಕರಣದ ಹಂತದಲ್ಲಿರುವಾಗಲೇ ತಮಿಳಿನ ನಟ ಸಂತಾನಂ 30ಲಕ್ಷ ರೂ.ಗೆ ಈ ಚಿತ್ರದ ರೀಮೇಕ್‌ ಹಕ್ಕು ಖರೀದಿಸಿದ್ದರು. ಈಗ ತೆಲುಗು ಚಿತ್ರರಂಗವೂ ‘ಪುಂಗಿದಾಸ’ನ ಮೇಲೆ ಕಣ್ಣುಹಾಕಿದೆ. ನಟ ವಿಕ್ಟರಿ ವೆಂಕಟೇಶ್‌ ‘ಪುಂಗಿದಾಸ’ನ ತೆಲುಗು ಆವೃತ್ತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನ ನಿರ್ಮಾಪಕ ರಾಧಾಕೃಷ್ಣ ಈ ಚಿತ್ರದ ಹಕ್ಕುಗಳನ್ನು ಖರೀದಿಸಿದ್ದಾರೆ.

ಮನೆಯ ಹಿರೀಕ ತಾತ ಸಾವಿನ ಹಿಂದೆಯೇ ಶುರುವಾಗುವ ಹನ್ನೊಂದು ದಿನಗಳ ಕದನಗಳನ್ನು ರಂಜನೀಯವಾಗಿ ಹೇಳುವುದು ನಿರ್ದೇಶಕ ಶ್ರೀನಾಥ್‌ ಬಯಕೆ. ತಾತನ ಸಾವಿನೊಂದಿಗೇ ತೆರೆದುಕೊಳ್ಳುವ ಈ ಹಾಸ್ಯಮಯ ಚಿತ್ರದ ಪ್ರೇಮದ ಎಳೆಯೂ ಇದೆ. ಸುಳ್ಳುಗಳಿಗೆ ಸುಳ್ಳುಗಳನ್ನು ಪೋಣಿಸುವ ಕಥನವೇ ‘ಪುಂಗಿದಾಸ’ನದು. ಆರ್‌.ಎನ್‌. ಸುದರ್ಶನ್‌ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಹಿರಿಯ ನಟಿ ಸಾಹುಕಾರ್‌ ಜಾನಕಿ ಅಜ್ಜಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾಜೇಂದ್ರ ಕಾರಂತ್‌ ನಾಯಕನ ತಂದೆಯ ಪಾತ್ರ ಮಾಡುತ್ತಿದ್ದಾರೆ. ಆಸ್ಮ ಎಂಬ ಹೊಸ ಮುಖ ಚಿತ್ರದ ನಾಯಕಿ.

ಸದಾಶಿವ ಈ ಚಿತ್ರದ ನಿರ್ಮಾಪಕರು. ಬಿ.ಸಿ. ಪಾಟೀಲ್, ಆಶಿಷ್, ತಬಲಾ ನಾಣಿ, ಕುರಿ ಪ್ರತಾಪ್, ಬುಲೆಟ್ ಪ್ರಕಾಶ್‌, ಪದ್ಮಜಾ ರಾವ್‌ ಇನ್ನಿತರರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಸಂಗೀತ ಹೊಸೆಯುತ್ತಿರುವವರು ಫರ್ಹಾನ್ ರೋಶನ್. ‘ನಂದ ಲವ್ಸ್‌ ನಂದಿತಾ’ ಚಿತ್ರದಲ್ಲಿ ಎಮಿಲ್‌ ಹೆಸರಿನ ಮೂಲಕ ಪದಾರ್ಪಣೆ ಮಾಡಿದ್ದ ಅವರು ಎರಡನೇ ಇನ್ನಿಂಗ್ಸ್‌ ಅನ್ನು ಹೊಸ ನಾಮದೊಂದಿಗೆ ಪ್ರಾರಂಭಿಸುತ್ತಿದ್ದಾರೆ. ಅರುಳ್ ಛಾಯಾಗ್ರಹಣ ಚಿತ್ರಕ್ಕಿದೆ.
–ಅಮಿತ್ ಎಂ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT