ADVERTISEMENT

ಬಾಹುಬಲಿಯನ್ನು ಮೀರಿಸುತ್ತಾ 2.0?

ಪೃಥ್ವಿರಾಜ್ ಎಂ ಎಚ್
Published 29 ನವೆಂಬರ್ 2018, 19:45 IST
Last Updated 29 ನವೆಂಬರ್ 2018, 19:45 IST
2.0 ಚಿತ್ರದ ಪೋಸ್ಟರ್
2.0 ಚಿತ್ರದ ಪೋಸ್ಟರ್   

ಭಾರತ ಚಲನಚಿತ್ರ ರಂಗದ ಸೂಪರ್‌ಸ್ಟಾರ್‌ ರಜನಿಕಾಂತ್‌ ಸಿನಿಮಾ ಬಿಡುಗಡೆಯಾಗುತ್ತಿದೆ ಅಂದರೆ, ಸಿನಿಮಾ ಥಿಯೇಟರ್‌ಗಳಿಗೆ ಹೊಸ ಕಳೆ ಬರುತ್ತದೆ. ತಲೆ ಎತ್ತಿ ನೋಡುವಂತಹ ಕಟೌಟ್‌ಗಳು, ಹೊರಲಾಗದಂತಹ ಹೂವಿನ ಹಾರಗಳು, ಹಾಲಿನ ಅಭಿಷೇಕ. ಹೂವಿನ ಅಭಿಷೇಕರಾರಾಜಿಸುತ್ತದೆ.

ಅವರು ನಟಿಸಿರುವ 2.0 ಚಿತ್ರ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಭಾರತದಲ್ಲಿ 7,500 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಜಪಾನ್‌, ಅಮೆರಿಕ ಸೇರಿದಂತೆ ವಿದೇಶಿ ಚಿತ್ರಮಂದಿರಗಳ 3 ಸಾವಿರ ಪರದೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಒಟ್ಟು 10,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ 2.0 ಹೊಸ ದಾಖಲೆ ನಿರ್ಮಿಸಿದೆ (ಬಾಹುಬಲಿ ಎರಡನೇ ಭಾಗ 9 ಸಾವಿರ ಪರದೆಗಳಲ್ಲಿ ಬಿಡುಗಡೆಯಾಗಿ ದಾಖಲೆ ಬರೆದಿತ್ತು).

2.0 ಭಾರತದಲ್ಲೇ ಅತಿ ಹೆಚ್ಚು ಬಜೆಟ್‌ನಲ್ಲಿ ನಿರ್ಮಿಸಲಾದ ಚಿತ್ರವಾಗಿದ್ದರಿಂದ ಮತ್ತು ಬಾಲಿವುಡ್‌ನ ಖ್ಯಾತ ನಟ ಅಕ್ಷಯ್‌ಕುಮಾರ್ ಖಳನಟನಾಗಿ ನಟಿಸಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಹೆಚ್ಚಾಗಿದ್ದವು. ಹೀಗಾಗಿ ಥಿಯೇಟರ್‌ಗಳ ಎದುರು ಅಭಿಮಾನಿಗಳು ಬುಧವಾರ ರಾತ್ರಿಯೇ ಜಮಾಯಿಸಿ ಕುಣಿದು, ಪಟಾಕಿ ಸಿಡಿಸಿ ಅಭಿಮಾನದ ಹಬ್ಬ ಆಚರಿಸಿದ್ದಾರೆ.

ADVERTISEMENT

‘ಇಡೀ ವಿಶ್ವವೇ ಭಾರತದ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ 2.0 ಮಾಡಿದೆ. ಇಂತಹ ದಾಖಲೆಗಳು ಕೇವಲ ರಜನಿಕಾಂತ್ ಅವರಿಂದ ಮಾತ್ರ ಸಾಧ್ಯ’ ಎಂದು ಅಭಿಮಾನಿಗಳು ಟ್ವಿಟರ್, ಫೇಸ್‌ಬುಕ್‌ ಗೋಡೆಗಳ ಮೇಲೆ ಬರೆದಿದ್ದಾರೆ. ಕೆಲವರಂತೂ ಕೇಶ ವಿನ್ಯಾಸವನ್ನೂ ಬದಲಿಸಿದ್ದಾರೆ. ಕೂದಲನ್ನು ‘2.0’ ಆಕಾರ ಮೂಡುವಂತೆ ವಿನ್ಯಾಸ ಮಾಡಿಕೊಂಡು ಅಭಿಮಾನದ ಪರಿಯನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಚಿತ್ರಗಳು ರಜನಿಕಾಂತ್ ಅವರಿಂದ ಮಾತ್ರ ಸಾಧ್ಯ ಎಂದು ಹೇಳುತ್ತಿದ್ದಾರೆ.

ಕೆಲಸಕ್ಕೆ ರಜೆ!: ರಜನಿ ಅವರ ಚಿತ್ರ ಬಿಡುಗಡೆಯಾದರೆ ವಿದ್ಯಾರ್ಥಿಗಳು ಕಾಲೇಜಿಗೆ ಗೈರಾಗುವುದು, ಉದ್ಯೋಗಿಗಳು ಕೆಲಸಕ್ಕೆ ರಜೆ ಹಾಕುವುದು ಸಾಮಾನ್ಯ ವಿಷಯ. ಅವರ ಅಭಿಮಾನದ ಪರಿಯನ್ನು ಅರಿತ ತಮಿಳುನಾಡಿನ ಕೆಲವು ಸಂಸ್ಥೆಗಳು ಸ್ವಯಂಪ್ರೇರಿತವಾಗಿ ತಮ್ಮ ಉದ್ಯೋಗಿಗಳಿಗೆ ರಜೆ ಕೊಟ್ಟು ಬೆರಗು ಮೂಡಿಸಿವೆ. ಕೊಯಮತ್ತೂರಿನಲ್ಲಿರುವ ಗೆಟ್‌ ಸೆಟ್ ಗೋ ಎಂಬ ಸಂಸ್ಥೆ ರಜೆ ಕೊಡುವುದರ ಜತೆಗೆ ಟಿಕೆಟ್‌ ವೆಚ್ಚವನ್ನೂ ಭರಿಸುವುದಾಗಿ ತಿಳಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿ, ‘ಭಾರತದ ಚಿತ್ರರಂಗದ ಖ್ಯಾತಿಯನ್ನು ಹೆಚ್ಚಿಸಿರುವ ಶಂಕರ್ ಅವರಿಗೆ ಈ ರೀತಿ ಧನ್ಯವಾದ ಹೇಳುತ್ತಿದ್ದೇವೆ’ ಎಂದು ತಿಳಿಸಿದೆ.

ಮೊದಲ ದಿನವೇ ₹40 ಕೋಟಿ?: ಸುಮಾರು ₹600 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರದ ಸ್ಯಾಟಲೈಟ್‌ ಹಕ್ಕುಗಳು ₹350 ಕೋಟಿಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಾಣವಾಗಿತ್ತು. ಆನ್‌ಲೈನ್‌ನಲ್ಲೇ ಸುಮಾರು 10 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದು ಮತ್ತೊಂದು ದಾಖಲೆ. ಚಿತ್ರದ ಈ ಜೋರು ನೋಡಿರುವ ವಿಶ್ಲೇಷಕರು ದಕ್ಷಿಣ ಭಾರತದಲ್ಲಿ ಮೊದಲ ದಿನವೇ ₹35ರಿಂದ ₹40 ಕೋಟಿ ವಸೂಲಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ.

ಇನ್ನು ಈ ಚಿತ್ರ ಹಿಂದಿಯಲ್ಲೂ ಬಿಡುಗಡೆಯಾಗಿರುವುದರಿಂದ ಮತ್ತು ಅಕ್ಷಯ್‌ಕುಮಾರ್ ನಟಿಸಿರುವುದರಿಂದ ಉತ್ತರ ಭಾರತದಲ್ಲಿ ಸುಮಾರು ₹40ರಿಂದ ₹50 ಕೊಟಿ ವಸೂಲಾಗಬಹುದು ಎಂದು ಹೇಳಿದ್ದಾರೆ. ಕರ್ನಾಟಕದಲ್ಲೇ ಸುಮಾರು ₹10ಕೋಟಿ ವಸೂಲಾಗುತ್ತದೆ ಎನ್ನಲಾಗುತ್ತಿದೆ. ಬಾಹುಬಲಿ 2 ಬಿಡುಗಡೆಯಾದ ಮೊದಲ ದಿನವೇ ₹120 ಕೋಟಿ ಗಳಿಸಿ ದಾಖಲೆ ಬರೆದಿತ್ತು. ಈ ದಾಖಲೆಯನ್ನು 2.0 ಮೀರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಚಿತ್ರಕ್ಕೆ ಎ.ಸುಭಾಸ್ಕರನ್ ಬಂಡವಾಳ ಹೂಡಿದ್ದು, ಆಸ್ಕರ್‌ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. ಸೆಲ್ವ ಅವರು ಹೋರಾಟದ ಸನ್ನಿವೇಶಗಳನ್ನು ತೋರಿಸಿದ್ದಾರೆ. ನೀರವ್ ಷಾ ಅವರ ಸಿನಿಮಾಟೊಗ್ರಫಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.