ADVERTISEMENT

ಗಲ್ಲಾಪೆಟ್ಟಿಗೆಯಲ್ಲಿಯೂ ‘ಚಮಕ್‌’ ಚಲ್ಲೋ...

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 8:57 IST
Last Updated 8 ಜನವರಿ 2018, 8:57 IST
ಗಣೇಶ್‌, ರಶ್ಮಿಕಾ
ಗಣೇಶ್‌, ರಶ್ಮಿಕಾ   

‘ಗಾಂಧಿನಗರದ ಭಾಷೆಯಲ್ಲಿಯೇ ಹೇಳುವುದಾದರೆ ನಾನು ಸೇಫ್‌ ಆಗಿದ್ದೇನೆ’ ಹೀಗೆಂದು ನಕ್ಕರು ‘ಚಮಕ್‌’ ಸಿನಿಮಾದ ನಿರ್ಮಾಪಕ ಟಿ.ಆರ್‌. ಚಂದ್ರಶೇಖರ್‌. ಅವರ ನಗುವಿನಲ್ಲಿಯೇ ‘ಸೇಫ್‌ ಜೋನ್‌’ ಆಚೆಗೂ ಗಳಿಕೆಯ ಗ್ರಾಫ್‌ ಏರುತ್ತಲೇ ಇರುವ ಸೂಚನೆಯೂ ಇತ್ತು. ಆದರೆ ಅವರು ಮಾತ್ರ ಹಾಗೆ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.

‘ನೂರಕ್ಕೆ ನೂರು ಎಂದು ಹೇಳಿದರೆ ತಪ್ಪಾಗುತ್ತದೆ. ತೊಂಬತ್ತೊಂಬತ್ತರಷ್ಟು ಬಂಡವಾಳ ವಾಪಸ್‌ ಬಂದಿದೆ’ ಎಂದರು. ‘ಚಮಕ್‌’ ಗಲ್ಲಾಪೆಟ್ಟಿಗೆಯಲ್ಲಿಯೂ ಗಳಿಕೆಯ ಝಲಕ್‌ ತೋರುತ್ತಿರುವ ಖುಷಿಯನ್ನು ಹಂಚಿಕೊಳ್ಳಲಿಕ್ಕಾಗಿಯೇ ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು. ಖುಷಿಯ ಅಭಿವ್ಯಕ್ತಿಯ ಅವಕಾಶವನ್ನು ನಿರ್ಮಾಪಕರಿಗೇ ಬಿಟ್ಟುಕೊಟ್ಟು ನಿರ್ದೇಶಕ ಸುನಿ, ನಟ ಗಣೇಶ್‌, ನಟಿ ರಶ್ಮಿಕಾ ಸುಮ್ಮನೇ ಕೂತಿದ್ದರು. ಚಂದ್ರಶೇಖರ್‌ ಮಾತ್ರ ಉತ್ಸಾಹದಿಂದ ಮಾತನಾಡುತ್ತಲೇ ಹೋದರು.

‘ಒಂದು ಸಿನಿಮಾ ಗೆಲ್ಲಬೇಕು ಎಂದರೆ ಅದರ ನಾಲ್ಕು ಅಂಗಗಳು ಸರಿಯಾಗಿ ಕೆಲಸ ಮಾಡಬೇಕು. ಅದರ ಮೊದಲನೇ ಅಂಗ ಚಿತ್ರತಂಡ. ಎರಡನೇ ಅಂಗ ಪ್ರೇಕ್ಷಕ ಸಮೂಹ. ಮೂರನೇ ಅಂಗ ದೈವಕೃಪೆ. ನಾಲ್ಕನೇ ಅಂಗ ಮಾಧ್ಯಮ. ಈ ಎಲ್ಲವೂ ಸೇರಿ ಚಮಕ್‌ ಗೆದ್ದಿದೆ’ ಎಂದು ಅವರು ವ್ಯಾಖ್ಯಾನಿಸಿದರು. ‘ವೈಕುಂಠ ಏಕಾದಶಿ ದಿನದಂದು ಬಿಡುಗಡೆಯಾದ ಚಿತ್ರ ನನಗೆ ವೈಕುಂಠದ ದ್ವಾರವನ್ನೇ ಕಾಣಿಸಿದೆ. ಈ ಗೆಲುವು ಕನ್ನಡ ಜನತೆ ನನಗೆ ನೀಡಿರುವ ಹೊಸ ವರ್ಷದ ಉಡುಗೊರೆ’ ಎಂದೂ ಹೇಳಿದರು.

ADVERTISEMENT

(ನಿರ್ದೇಶಕ ಸುನಿ)

‘ಚಮಕ್‌’ ಕರ್ನಾಟಕದಲ್ಲಿಯಷ್ಟೇ ಅಲ್ಲ, ಬೇರೆ ರಾಜ್ಯ– ದೇಶಗಳಲ್ಲಿಯೂ ಯಶಸ್ಸು ಕಾಣುತ್ತಿದೆ. ಹೈದರಾಬಾದ್‌, ಗೋವಾ, ಮುಂಬೈ, ನೋಯಿಡಾ, ಚೆನ್ನೈ ಎಲ್ಲ ಕಡೆಗಳಲ್ಲಿಯೂ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವುದು ತಂಡದ ವಿಶ್ವಾಸವನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲ, ಸಾಗರ ಸೀಮೆಯ ದಾಟಿ ಅಮೆರಿಕ, ಕೆನಡಾಗಳಲ್ಲಿಯೂ ಮೂವತ್ತರಿಂದ ಮೂವತ್ತೈದು ಕೇಂದ್ರಗಳಲ್ಲಿ ಪ್ರದರ್ಶನ ಬಿಡುಗಡೆಯಾಗಿದೆ.

‘ನಾನು ಮೊದಲು ಕಥೆ ಕೇಳಿದಾಗ ಯಾವ ರೀತಿಯ ಭಾವನೆ ಮನಸ್ಸಿನಲ್ಲಿ ಹುಟ್ಟಿತೋ ಇಂದು ಚಿತ್ರಮಂದಿರದಲ್ಲಿ ಕೂತು ಸಿನಿಮಾ ನೋಡುತ್ತಿರುವ ಪ್ರೇಕ್ಷಕನಿಗೂ ಅದೇ ರೀತಿ ಅನಿಸುತ್ತಿದೆ. ಈ ಯಶಸ್ಸು ಇಡೀ ಚಿತ್ರ ತಂಡಕ್ಕೆ ಸಲ್ಲಬೇಕು’ ಎಂದರು ಗಣೇಶ್‌.

ಗಿರಿ ‘ಚಮಕ್‌’ ಅನ್ನು ಎರಡು ಬಾರಿ ನೋಡಿದ್ದಾರಂತೆ. ಎರಡೂ ಸಲವೂ ಜನರ ಪ್ರತಿಕ್ರಿಯೆ ನೋಡಿ ಅವರಿಗೆ ಖುಷಿಯಾಗಿದೆ. ‘ಗಣೇಶ್‌ ಅವರನ್ನು ನೋಡಲು ಸಾಧ್ಯವಾಗದ ಜನರು ಅವರ ಮೇಲಿನ ಪ್ರೀತಿಯನ್ನು ನನ್ನ ಮೇಲೆ ಸುರಿದರು. ಮೈಯೆಲ್ಲ ಗಿಂಡಿ ಗಿಂಡಿ ಎರಡು ದಿನ ಮೈನೋವಾಗಿ ಮಲಗಿದ್ದೆ’ ಎಂದು ತಮಾಷೆ ಮಾಡಿದರು ಗಿರಿ. ಅವರ ಮಾತನ್ನು ಕೇಳಿದ ಗಣೇಶ್‌ ‘ಪುಣ್ಯ, ನಾನು ಕಾಣಲಿಲ್ಲ ಎಂದು ನನ್ನ ಮೇಲಿನ ಪ್ರೀತಿಯನ್ನು ನಿಮಗೆ ತೋರಿಸಿದ್ದಾರೆ. ರಶ್ಮಿಕಾ ಕಾಣಲಿಲ್ಲ ಎಂದು ಅವರ ಮೇಲಿನ ಪ್ರೀತಿಯನ್ನು ನಿನ್ನಮೇಲೆ ತೋರಿಸುವ ಪ್ರಯತ್ನ ಮಾಡಲಿಲ್ಲವಲ್ಲ’ ಎಂದು ಕಾಲೆಳೆದರು.

‘ನಮ್ಮದು ನೂರಕ್ಕೆ ನೂರರಷ್ಟು ಪರಿಪೂರ್ಣ ಸಿನಿಮಾ ಅಲ್ಲ. ಆದರೆ ನಮ್ಮಲ್ಲಿನ ಕೊರತೆಗಳನ್ನು ಮರೆಮಾಚಿ ಧನಾತ್ಮಕ ಅಂಶಗಳನ್ನೇ ಮೆರೆಸಿ ಜನರು ಸಿನಿಮಾ ಗೆಲ್ಲಿಸಿದ್ದಾರೆ’ ಎಂದು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ರಶ್ಮಿಕಾ ತಮ್ಮೆಲ್ಲ ಮಾತುಗಳನ್ನು ಥ್ಯಾಂಕ್ಸ್‌ ಹೇಳುವುದಕ್ಕೇ ಮೀಸಲಿಟ್ಟರು.

‘ಚಮಕ್‌’ ತೆಲುಗಿನಲ್ಲಿಯೂ ರೀಮೆಕ್‌ ಆಗಲಿದ್ದು, ಆ ಕುರಿತು ಮಾತುಕತೆ ನಡೆಯುತ್ತಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.