ADVERTISEMENT

‘ಅಡ್ವೆಂಚರ್ಸ್‌ ಆಫ್‌ ಜೊಜೊ’ ಟ್ರೇಲರ್‌

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 20:00 IST
Last Updated 9 ಡಿಸೆಂಬರ್ 2018, 20:00 IST
ಜೊಜೊ ಪಾತ್ರದಲ್ಲಿ ಜಶೊಜೀತ್‌ ಬ್ಯಾನರ್ಜಿ
ಜೊಜೊ ಪಾತ್ರದಲ್ಲಿ ಜಶೊಜೀತ್‌ ಬ್ಯಾನರ್ಜಿ   

ಮಕ್ಕಳ ಸಾಹಸ, ದಟ್ಟ ಅಡವಿಯಲ್ಲಿ ಹುಲಿ, ಆನೆ ಮತ್ತು ಕಾಡುಗಳ್ಳರ ಮಧ್ಯೆ ನಡೆಯುವ ರೋಚಕ ಕಥನದ ದೃಶ್ಯಾವಳಿಗಳ ಮೂಟೆಯಂತಿರುವಮರಾಠಿಯ‘ಅಡ್ವೆಂಚರ್ಸ್‌ ಆಫ್‌ ಜೊಜೊ’ದ ಎರಡನೇ ಆಫೀಷಿಯಲ್‌ ಟ್ರೇಲರ್‌ ಬಿಡುಗಡೆಯಾಗಿದೆ.

ಎರಡನೇ ಟ್ರೇಲರ್‌ ಕೂಡಾಯೂಟ್ಯೂಬ್‌ನಲ್ಲಿ ಸುದ್ದಿ ಮಾಡುತ್ತಿದೆ. ಆರೂಪ್‌ ದತ್ತಾ ಅವರ ಕತೆಯನ್ನು ಆಧರಿಸಿ ರಾಜ್‌ ಚಕ್ರವರ್ತಿ ಮತ್ತು ಪದ್ಮನಾಭ ದಾಸ್‌ಗುಪ್ತಾ ಜಂಟಿಯಾಗಿ ಸಿನಿಮಾಕ್ಕೆ ಹೊಂದುವಂತೆ ಮಾರ್ಪಡಿಸಿದ್ದಾರೆ. ರಾಜ್‌ ಚಕ್ರವರ್ತಿ ಅವರದೇನಿರ್ದೇಶನವಿರುವ ಈ ಸಿನಿಮಾ‘ದಿ ಜಂಗಲ್‌ ಬುಕ್‌’ನ ಮುಂದಿನ ಆವೃತ್ತಿಯಂತಿದೆ. ಇಂಗ್ಲಿಷ್‌ ಸಬ್‌ಟೈಟಲ್‌ಗಳು ಚಿತ್ರವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ.

ದಟ್ಟ ಅಡವಿ, ಮೀಟರ್‌ನಷ್ಟು ಉದ್ದದ ದಂತವಿರುವ ಆಸ್ಟ್ರೇಲಿಯನ್‌ ಆನೆ, ಮೌಗ್ಲಿ ಎಂಬ ಪ್ರಾಣಿಪ್ರೇಮಿ, ಟಾರ್ಜಾನ್‌ ಎಂಬ ಹುಲಿ ‘.. ಜೊಜೊ’ದಲ್ಲಿಯೂ ಇದೆ. 12ರ ಬಾಲಕ ಜೊಜೊನ ಪಾತ್ರ ಮಾಡಿರುವುದು ಜಶೊಜೀತ್‌ ಬ್ಯಾನರ್ಜಿ ಎಂಬ ಚೂಟಿ ಬಾಲ ನಟ. ತನ್ನ ಪಾತ್ರದ ಮೂಲಕ ವೀಕ್ಷಕರನ್ನೂ ಈ ಕಾಡಿನ ಜೀವನದ ಕತೆಗೆ ಕರೆದೊಯ್ಯುತ್ತಾನೆ.

ADVERTISEMENT

ಜೊಜೊ ಕಾಡಿನ ಮಧ್ಯೆ ಹರಿಯುವ ಹೊಳೆಯ ಬದಿಯಲ್ಲಿ ಸಫಾರಿ ವಾಹನದಲ್ಲಿ ಸಾಗುವ ದೃಶ್ಯದೊಂದಿಗೆ ಟ್ರೇಲರ್‌ ತೆರೆದುಕೊಳ್ಳುತ್ತದೆ. ತನ್ನ ಕಾಡಿನ ಸಂಗಾತಿಗಳು ಸಹಜವಾಗಿ ನೆನಪಾಗುತ್ತವೆ. ‘ಮೌಗ್ಲಿ, ಶೇರ್ ಖಾನ್‌, ಬಘೀರಾ, ಟಾರ್ಜಾನ್‌’ ಎಂದು ತನ್ನ ಪಾಡಿಗೆ ಹೇಳಿಕೊಳ್ಳುವ ಜೊಜೊಗೆ, ‘ಅವರೆಲ್ಲಾ ಈಗ ಕಾಡಿನಲ್ಲಿಲ್ಲ’ ಎಂದು ಗಡುಸಾದ ದನಿ ಉತ್ತರಿಸುತ್ತದೆ. ಜೋಜೊ ಬೆಚ್ಚಿ ಪ್ರತಿಕ್ರಿಯಿಸುವಷ್ಟರಲ್ಲಿ ಹೆಬ್ಬುಲಿಯ ಘರ್ಜನೆ, ವ್ಯಕ್ತಿಯ ಆಕ್ರಂಧನ ಕೇಳಿಬರುತ್ತದೆ. ಕಾಡಿನ ಮಧ್ಯೆ ಡಾಂಬರು ರಸ್ತೆಯಲ್ಲಿ ಮುಂದುವರಿಯುವ ಸಫಾರಿ ಒಂದು ಬಂಗಲೆಯ ಮುಂದೆ ನಿಲ್ಲುತ್ತದೆ. ‘ಇನ್ನು ಕೆಲದಿನಗಳ ವರೆಗೆ ಇದುವೇ ನಿನ್ನ ವಿಳಾಸ’ ಎನ್ನುತ್ತಾನೆ ಆ ‘ಅಂಕಲ್‌’. ಮುಂದಿನದು ಕಾಡು ಮತ್ತು ಹೊಸ ಮನೆಯಲ್ಲಿ ಜೊಜೊಗೆ ಸಿಗುವ ಸ್ನೇಹಿತರ ಕಾಡಿನ ಕತೆ ಮತ್ತು ಪಯಣದ ದೃಶ್ಯಾವಳಿಗಳು. ಪ್ರತಿ ದೃಶ್ಯವೂ ರೋಮಾಂಚಕಾರಿಯಾಗಿದೆ.

ಟ್ರೇಲರ್‌ ನೋಡಿದರೆ ‘ಅಡ್ವೆಂಚರ್ಸ್‌ ಆಫ್‌ ಜೊಜೊ’ ಹಿಟ್‌ ಆಗುವ ಲಕ್ಷಣ ಕಾಣುತ್ತದೆ. ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಸಮೀವುಲ್‌ ಆಲಮ್‌, ರುದ್ರಾಣಿ ಘೋಷ್‌, ಬುದ್ಧದೇವ್‌ ಭಟ್ಟಾಚಾರ್ಯ ನಟಿಸಿದ್ದಾರೆ.

ನವೆಂಬರ್ 14ರಂದು ಮಕ್ಕಳ ದಿನದಂದು ಮೊದಲ ಟ್ರೇಲರ್‌ನ್ನು ಯೂಟ್ಯೂಬ್‌ಗೆ ಬಿಡುಗಡೆ ಮಾಡಲಾಗಿತ್ತು.ಕ್ರಿಸ್ಮಸ್‌ ವೇಳೆಗೆ ಚಿತ್ರ ತೆರೆ ಕಾಣಲಿದೆ ಎಂದು, ಅಂದುನಿರ್ದೇಶಕ ರಾಜ್‌ ಚಕ್ರವರ್ತಿ ಹೇಳಿದ್ದರು. ಅವರ ಮಾತು ನಿಜವಾದರೆ ಚಳಿಗಾಲದ ರಜೆಗೆ ಈ ಸಾಹಸ ಚಿತ್ರವನ್ನು ವೀಕ್ಷಿಸುವ ಅದೃಷ್ಟ ಮಕ್ಕಳದ್ದಾಗಲಿದೆ.

ಟ್ರೇಲರ್‌ ವೀಕ್ಷಿಸಲು ಕೊಂಡಿ:https://youtu.be/B3Y6oRFSr3Q

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.