ADVERTISEMENT

ಮಾಸ್ಕ್‌ಗೆ ಹಿಂದಿ ಪದ ಕಂಡುಹಿಡಿದ ಅಮಿತಾಭ್‌ !

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 10:37 IST
Last Updated 24 ಜೂನ್ 2020, 10:37 IST
ಅಮಿತಾಭ್‌ ಬಚ್ಚನ್‌
ಅಮಿತಾಭ್‌ ಬಚ್ಚನ್‌   

ಕೊರೊನಾ ವೈರಸ್‌ ದೇಶಕ್ಕೆ ಕಾಲಿಟ್ಟಾಗಿನಿಂದಲೂ ಪ್ರತಿನಿತ್ಯ ಎಲ್ಲರ ಬಾಯಲ್ಲೂ ಮಾಸ್ಕ್‌, ಸ್ಯಾನಿಟೈಸರ್‌ ಪದಗಳೇ ಹೆಚ್ಚು ಹರಿದಾಡುತ್ತಿವೆ. ಮಾಸ್ಕ್ ಎನ್ನವುದು ಕೊರೊನಾ ವೈರಸ್‌ ವಿರುದ್ಧದ ಹೋರಾಟಕ್ಕೆ ಬಳಸುವ ಪ್ರಮುಖ ಅಸ್ತ್ರವಾಗಿದೆ‌.

ಇಂಥ ‘ಮಾಸ್ಕ್‌‘ಗೆ ಕನ್ನಡದಲ್ಲಿ ‘ಮುಖಗವಸು‘ ಎಂದು ಕರೆಯುತ್ತೇವೆ. ಹಾಗಾದರೆ, ಹಿಂದಿಯಲ್ಲಿ ಏನೆಂದು ಕರೆಯಬಹುದು ?

ಬಾಲಿವುಟ್‌ ನಟ ಅಮಿತಾಭ್‌ ಬಚ್ಚನ್‌ ಹಿಂದಿಯಲ್ಲಿ ಮಾಸ್ಕ್‌ಗೆ ಪದವೊಂದನ್ನು ಪತ್ತೆ ಮಾಡಿದ್ದಾರೆ. ಅದನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಆ ಪೋಸ್ಟ್‌ ವೈರಲ್‌ ಆಗಿದೆ.

ADVERTISEMENT

ಅಮಿತಾಭ್‌ ಅವರು ‘ಮಾಸ್ಕ್‌‘ ಪದಕ್ಕೆ ಹುಡುಕಿರುವ ಹಿಂದಿ ಅರ್ಥ ಹೀಗಿದೆ; ‘ನಾಸಿಕಾಮುಖಸಂರಕ್ಷಕ್‌ ಕೀಟಾಣುರೋಧಕ್‌ ವಾಯುಛಾನಕ್‌ ವಸ್ತ್ರ್‌ಡೊರೀಯುಕ್ತಪಠಿಕಾ!’(*"नासिकामुखसंरक्षक कीटाणुरोधक वायुछानक वस्त्रडोरीयुक्तपट्टिका !).

ಇಷ್ಟು ಉದ್ದವಿರುವ ಅನುವಾದದ ಸಾಲನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಜತೆಗೆ ತಾವು ಮುಖ್ಯಪಾತ್ರದಲ್ಲಿ ನಟಿಸಿರುವ ‘ಗುಲಾಬೊ ಸಿತಾಬೋ’ ಸಿನಿಮಾ ಥೀಮ್‌ನ ಮಾಸ್ಕ್‌ ತೊಟ್ಟಿರುವ ಕಪ್ಪುಬಿಳುಪಿನ ಫೋಟೊವನ್ನೂ ಅಪ್‌ಲೋಡ್‌ ಮಾಡಿದ್ದಾರೆ. ಫೋಟೊ ಕೆಳಗೆ, ‘ಸಿಕ್ಕಿತು! ಸಿಕ್ಕಿತು! ತುಂಬ ಕಷ್ಟಪಟ್ಟ ನಂತರ ಮಾಸ್ಕ್‌ಗೆ ನಾನು ಹಿಂದಿಯಲ್ಲಿ ಅರ್ಥವನ್ನು ಕಂಡುಹಿಡಿದೆ‘ ಎಂದು ಹೇಳಿಕೊಂಡಿದ್ದಾರೆ.

ಈ ಪೋಸ್ಟ್‌ಗೆ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿವೆ.‘ಈ ಪದವನ್ನೇ ಉಚ್ಛರಿಸಲು ಕಷ್ಟವಾಗುತ್ತದೆ. ಇದಕ್ಕಿಂತ ಮಾಸ್ಕ್‌ ಬಳಕೆಯೇ ಉತ್ತಮ’ ಎಂದು ನೆಟ್ಟಿಗರು ಅಮಿತಾಭ್‌ ಬಚ್ಚನ್‌ ಕಾಲೆಳೆದಿದ್ದಾರೆ. ‘ನೀವು ಇಷ್ಟು ಉದ್ದದ ಕಠಿಣ ಪದವನ್ನು ಹೇಗೆ ನೆನಪಿಟ್ಟುಕೊಳ್ಳುತ್ತೀರಿ?’ ಎಂದು ಕೆಲವರು ಪ್ರಶ್ನಿಸಿದರೆ, ‘ಇದು ಮುಂದಿನ ಸೀಸನ್‌ ಕೌನ್‌ ಬನೇಗಾ ಕರೋಡ್‌ಪತಿಯ ಪ್ರಶ್ನೆಯಾ?’ ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ. ಇನ್ನು ಕೆಲವರು ನಮಗೆ ಇದನ್ನು ಸರಿಯಾಗಿ ಓದಲೂ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಅಮಿತಾಭ್‌ ಅವರ ಈ ಪೋಸ್ಟ್‌ ಅನ್ನು 3ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಅಮಿತಾಭ್‌ ಬಚ್ಚನ್‌ ಹಾಗೂ ಆಯುಷ್ಮಾನ್‌ ಖುರಾನಾ ಅಭಿನಯದ ‘ಗುಲಾಬೊ ಸಿತಾಬೋ’ ಸಿನಿಮಾವು ಅಮೆಜಾನ್ ಪ್ರೈಮ್‌ ವಿಡಿಯೊದಲ್ಲಿ ಈಚೆಗೆ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ವೃದ್ಧ ಮಿರ್ಜಾನ ಪಾತ್ರದಲ್ಲಿ ಅಭಿನಯಿಸಿರುವ ಅಮಿತಾಭ್‌ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಈ ಚಿತ್ರವನ್ನು ಸೂರ್ಜಿತ್ ಸರ್ಕಾರ್‌ ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.