ADVERTISEMENT

ನಿಂಬೆಯಂಥ ಬೆಡಗಿಯ ಸಿನಿಯಾನ

ಸುಮನಾ ಕೆ
Published 8 ಅಕ್ಟೋಬರ್ 2018, 19:30 IST
Last Updated 8 ಅಕ್ಟೋಬರ್ 2018, 19:30 IST
ಅನುಷಾ ರೈ
ಅನುಷಾ ರೈ   

‘ನೃತ್ಯಗಾರ್ತಿಯಾದ ಈ ನಟಿಗೆ ಅನಾಯಾಸವಾಗಿ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬಂದವು. ಬಾಲ್ಯದಲ್ಲಿ ಎಂಜಿನಿಯರ್‌ ಆಗಬೇಕೆಂದು ಕನಸು ಕಂಡಿದ್ದರೂ ಕೈಬೀಸಿ ಕರೆದಿದ್ದು ನಟನಾ ಲೋಕ. ತನ್ನಲ್ಲಿನ ಅಭಿನಯದ ಕೌಶಲವನ್ನೇ ನಂಬಿ, ಸವಾಲೆನಿಸುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲದಲ್ಲಿದ್ದಾರೆ ನಟಿ ಅನುಷಾ ರೈ.

ತುಮಕೂರು ಮೂಲದ ಅನುಷಾ, ಆಚಾರ್ಯ ಕಾಲೇಜ್‌ ಆಫ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಎಂಜಿನಿಯರಿಂಗ್‌ ಮುಗಿಸಿದ್ದಾರೆ. ಸಿನಿಮಾ ಕ್ಷೇತ್ರ ಪ್ರವೇಶಿಸುವ ಬಗ್ಗೆ ಅವರಿಗೆ ಈ ಕ್ಷೇತ್ರದ ಬಗ್ಗೆ ಯಾವುದೇ ನಿರೀಕ್ಷೆಗಳಿರಲಿಲ್ಲ.

‘ನನಗೆ ನೃತ್ಯ ಇಷ್ಟ. ಕಾಲೇಜಿನಲ್ಲಿ ನೃತ್ಯ ಕಾರ್ಯಕ್ರಮವೊಂದರಲ್ಲಿ ನಿರ್ದೇಶಕರೊಬ್ಬರು ನನ್ನನ್ನು ನೋಡಿ ಸಿನಿಮಾದಲ್ಲಿ ನಟಿಸುತ್ತೀರಾ ಎಂದು ಕೇಳಿದರು. ನನಗೆ ನಟನೆಯ ಗಂಧಗಾಳಿಯೂ ಗೊತ್ತಿರಲಿಲ್ಲ. ಹೀಗಾಗಿ ಹಿಂದೆ ಮುಂದೆ ನೋಡಿದೆ. ಅವರೇ ನನ್ನ ತಂದೆ ತಾಯಿ ಹತ್ತಿರ ಮಾತನಾಡಿ ಒಪ್ಪಿಸಿದರು’ ಎಂದು ತಮ್ಮ ಮೊದಲ ಚಿತ್ರ ‘ಮಹಾನುಭಾವರು’ ಆಯ್ಕೆಯಾಗಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಅದರಲ್ಲಿ ನಾಯಕಿ ಪಾತ್ರ. ಈ ಚಿತ್ರ 2016ರಲ್ಲಿ ಬಿಡುಗಡೆಯಾಗಿದೆ.

ADVERTISEMENT

ಅದಾದ ನಂತರ ಅವರನ್ನು ಹುಡುಕಿಕೊಂಡು ಬಂದಿದ್ದು ಕಿರುತೆರೆ. ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಣ್ಣಯ್ಯ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದರು. ಇದರಲ್ಲಿ ಅನುಷಾ ನಾಲ್ವರು ಅಣ್ಣಂದಿರ ಮುದ್ದಿನ ತಂಗಿ. ಈ ಪಾತ್ರ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತಂತೆ. ‘ನಾನು ಹೋದಲೆಲ್ಲಾ ಜನರು ಪಾತ್ರದ ಮೂಲಕ ಗುರುತಿಸುತ್ತಿದ್ದರು. ಹಾಗೇ ನಟನೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನೆರವಾಯಿತು. ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಕನ್ನಿಕೆ ಎಂಬ ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ಕಿರುತೆರೆ ಅನುಭವಗಳನ್ನೂ ಹಂಚಿಕೊಳ್ಳುತ್ತಾರೆ.

ಅಣ್ಣಯ್ಯ ಧಾರಾವಾಹಿ ಸಂದರ್ಭದಲ್ಲೇ ಅನುಷಾ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಬಿಎಂಡಬ್ಲ್ಯೂ’ ಹಾಗೂ ‘ಕರ್ಷಣಂ’ ಎಂಬ ಎರಡು ಸಿನಿಮಾಗಳಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಆಡಿಯೊ ಬಿಡುಗಡೆಯಾಗಿದ್ದು, ಈ ವರ್ಷದ ಕೊನೆಯಲ್ಲಿ ಎರಡೂ ಸಿನಿಮಾಗಳು ಬಿಡುಗಡೆಯಾಗಲಿವೆ.

ಅನುಷಾ ಅವರ ನಟನೆಯ ಹಂಬಲಕ್ಕೆ ಕಿರುಚಿತ್ರ, ವೆಬ್‌ಸಿರೀಸ್‌ಗಳಲ್ಲೂ ಅವಕಾಶ ದೊರೆತಿದೆ. ಎಲ್ಲಾ ಕಡೆಗಳಲ್ಲೂ ನಟಿಸುತ್ತಾ ನಟನೆಯ ಅನೇಕ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡಿದ್ದಾರೆ.ಈಚೆಗೆ ಅವರು ನಟಿಸಿರುವ ‘ಪ್ರಾರ್ಥನಾ’ ಕಿರುಚಿತ್ರವನ್ನೂಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಇದು ಸಸ್ಪೆನ್ಸ್‌ ಥ್ರಿಲ್ಲರ್‌ ಕಿರುಚಿತ್ರ. 35 ನಿಮಿಷದ ಈ ಕಿರುಚಿತ್ರ ಯಾವ ಸಿನಿಮಾಕ್ಕೂ ಕಡಿಮೆಯಿಲ್ಲ. ಸಿನಿಮಾ, ಕಿರುತೆರೆ, ವೆಬ್‌ಸೀರಿಸ್‌... ನಟನೆಗೆ ಅವಕಾಶವಿರುವ ಯಾವುದಾದರೂ ಓಕೆ. ಉತ್ತಮ ನಟಿ ಎಂದು ಗುರುತಿಸಿಕೊಳ್ಳಬೇಕು’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ಸದ್ಯ ಅನುಷಾ ತೆಲುಗಿನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ.‘ದಮಯಂತಿ’ ಚಿತ್ರದ ಮೂಲಕ ನಟಿ ರಾಧಿಕಾ ಕುಮಾರಸ್ವಾಮಿ ಅನೇಕ ವರ್ಷಗಳ ನಂತರ ಚಂದನವನದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರದ ಫಸ್ಟ್‌ಲುಕ್‌ ಸಹ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಅನುಷಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ‘ಚಿತ್ರದ ಬಗ್ಗೆ ಮಾತುಕತೆ ನಡೆದಿದೆ. ಆದರೆ ಪಾತ್ರದ ಬಗ್ಗೆ ಈಗೇನೂ ಹೇಳಲಾರೆ’ ಎಂದು ಪಾತ್ರದ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡುವುದಿಲ್ಲ.

‘ನಟಿಯಾಗದೇ ಇರುತ್ತಿದ್ದರೆ ಎಂಜಿನಿಯರ್‌ ಆಗುತ್ತಿದ್ದೆ’ ಎನ್ನುವ ಈ ಹೊಳಪು ಕಂಗಳ ಬೆಡಗಿಗೆ ಅವಕಾಶಗಳೇ ಹುಡುಕಿಕೊಂಡು ಬಂದಂತವು. ‘ಸಿನಿಮಾ ಒಪ್ಪಿಕೊಂಡರೂ ನನಗೆ ವಿದ್ಯಾಭ್ಯಾಸ ಮೊಟಕುಗೊಳಿಸುವುದು ಇಷ್ಟವಿರಲಿಲ್ಲ. ಪರೀಕ್ಷೆ ಇದ್ದಾಗ ನಾನು ಸಿನಿಮಾ ಒಪ್ಪಿಕೊಳ್ಳುತ್ತಿರಲಿಲ್ಲ. ಕಾಲೇಜಿನಲ್ಲಿ ಅನುಮತಿ ಪಡೆದುಕೊಂಡು ರಜೆ ತೆಗೆದುಕೊಳ್ಳುತ್ತಿದ್ದೆ. ಶೂಟಿಂಗ್‌ ಇಲ್ಲದೇ ಇದ್ದಾಗ ಟ್ಯೂಷನ್‌ಗೆ ಹೋಗುತ್ತಿದ್ದೆ’ ಎನ್ನುತ್ತಾರೆ.

ಫಿಟ್‌ನೆಸ್‌ ಬಗ್ಗೆ ಅನುಷಾ ಅವರಿಗೆ ವಿಶೇಷ ಕಾಳಜಿಯಿದೆ. ‘ನೃತ್ಯಗಾರ್ತಿಯಾಗಿರುವುದರಿಂದ ಮನೆಯಲ್ಲಿ ಹಾಡು ಹಾಕಿಕೊಂಡು ನೃತ್ಯ ಮಾಡುತ್ತೇನೆ. ಹಾಗೇ ವಾರದಲ್ಲಿ ನಾಲ್ಕು ದಿನವಾದರೂ ನಾನು ಜಿಮ್‌ಗೆ ಹೋಗಿ ಕಾರ್ಡಿಯೊ, ಸೈಕ್ಲಿಂಗ್‌, ಎಲ್ಲಾ ಬಗೆಯ ವರ್ಕೌಟ್‌ ಮಾಡುತ್ತೇನೆ. ಹಾಗೇ ಚೆನ್ನಾಗಿ ನಿದ್ದೆ ಮಾಡುತ್ತೇನೆ. ಇದು ನನ್ನ ಫಿಟ್‌ನೆಸ್‌ ಗುಟ್ಟು’ ಎಂದು ನಗುತ್ತಾರೆ.

ಬೆಳಿಗ್ಗೆ ಬಿಸಿನೀರಿಗೆ ನಿಂಬೆರಸ ಹಾಕಿಕೊಂಡು ಕುಡಿಯುತ್ತಾರೆ. ಬಳಿಕ ಕ್ಯಾರೆಟ್‌– ಬೀಟ್‌ರೂಟ್‌ ಜ್ಯೂಸ್‌ ಕುಡಿಯುತ್ತಾರೆ ಅಷ್ಟೇ. ಡಯೆಟ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಇಷ್ಟಪಟ್ಟಿದ್ದನ್ನು ತಿನ್ನುತ್ತಾರೆ. ಬ್ಯೂಟಿಪಾರ್ಲರ್‌ಗೆ ಹೆಚ್ಚು ಹೋಗಲ್ಲ ಎನ್ನುವ ಈ ನಟಿ, ಶೂಟಿಂಗ್‌ನಲ್ಲಿ ಟ್ಯಾನ್‌ ಆದಾಗ ಮನೆಯಲ್ಲಿಯೇ ಟೊಮೆಟೊ, ನಿಂಬೆರಸ, ವೈನ್‌, ಮಿಲ್ಕ್‌ಪೌಡರ್‌ ಬೆರಸಿಕೊಂಡು ಹಚ್ಚಿಕೊಳ್ಳುತ್ತಾರಂತೆ.

‘ನನಗೆ ಮಹಿಳಾ ಪ್ರಧಾನಗಳಲ್ಲಿ ನಟಿಸಬೇಕು ಎಂಬ ಆಸೆಯಿದೆ. ಆದರೆ ಎಲ್ಲ ಪಾತ್ರಗಳನ್ನೂ ಒಪ್ಪಿಕೊಳ್ಳುವುದಿಲ್ಲ. ಸಿನಿಮಾದಲ್ಲಿ ನನ್ನ ಪಾತ್ರ ಎಷ್ಟು ಪ್ರಾಮುಖ್ಯ ಎಂದು ನೋಡುತ್ತೇನೆ’ ಎಂದು ಹೇಳುವ ಅವರು ಪಾತ್ರ ಆಯ್ಕೆ ವಿಚಾರದಲ್ಲಿ ತಾನು ತುಂಬಾ ಲೆಕ್ಕಾಚಾರದವಳು ಎಂಬ ಸುಳಿವನ್ನೂ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.