‘ಕೆಜಿಎಫ್’ನಲ್ಲಿ ರಾಕಿಬಾಯ್ ತಾಯಿಯಾಗಿ ಗಮನ ಸೆಳೆದವರು ನಟಿ ಅರ್ಚನಾ ಜೋಯ್ಸ್. ಅವರು ಮುಖ್ಯಭೂಮಿಕೆಯಲ್ಲಿರುವ ಯುದ್ಧಕಾಂಡ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಅದರ ಟ್ರೇಲರ್ ಬಿಡುಗಡೆ ನೆಪದಲ್ಲಿ ಅವರು ಮಾತಿಗೆ ಸಿಕ್ಕರು...
‘ಕೆಜಿಎಫ್ ಚಿತ್ರದ ತಾಯಿ ಪಾತ್ರ ಒಂದು ರೀತಿ ವರ. ಇನ್ನೊಂದು ರೀತಿ ಶಾಪ. ಈಗೀಗ ತಾಯಿ ಪಾತ್ರಗಳೇ ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ನನಗೆ ಅದದೇ ಪಾತ್ರ ಮಾಡುತ್ತ ಒಂದು ಜಾನರ್‌ಗೆ ಸೀಮಿತವಾಗಲು ಇಷ್ಟವಿಲ್ಲ. ಹೀಗಾಗಿ ಅಂಥ ಪಾತ್ರಗಳನ್ನು ಒಪ್ಪಿಕೊಳ್ಳದೆ ಸೂಕ್ತ ಪಾತ್ರಗಳಿಗೆ ಕಾಯುತ್ತಿರುವೆ’ ಎಂದು ಮಾತು ಆರಂಭಿಸಿದರು.
‘ಯುದ್ಧಕಾಂಡ’ ಚಿತ್ರದಲ್ಲಿ ನಿವೇದಿತಾ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಕಥೆಯ ಮುಖ್ಯ ಭಾಗವಾದ ಶ್ಯಾಮಿಲಿ ಎಂಬ ಪುಟಾಣಿ ಮಗುವಿನ ತಾಯಿಯ ಪಾತ್ರವಿದು. ತನ್ನ ಮಗಳಿಗಾದ ಅನ್ಯಾಯದ ವಿರುದ್ಧ ನಿವೇದಿತಾ ಹೇಗೆ ಹೋರಾಡುತ್ತಾಳೆ, ಸಿಡಿದೇಳುತ್ತಾಳೆ ಎಂಬುದೇ ಈ ಚಿತ್ರದ ಮುಖ್ಯಕಥೆ.
‘ಒಂದು ರೀತಿಯಲ್ಲಿ ಸಮಾಜದಲ್ಲಿ ಶೋಷಣೆಗೆ, ಅನ್ಯಾಯಕ್ಕೆ ಒಳಗಾದ ಹೆಣ್ಣುಮಕ್ಕಳ ಪ್ರತಿನಿಧಿ ಪಾತ್ರ. ದಿನನಿತ್ಯ ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯದಂತಹ ಸುದ್ದಿ ಓದುತ್ತ, ನೋಡುತ್ತ ಇರುತ್ತೇವೆ. ಆಗ ಮನಸು ಕರಗುತ್ತದೆ. ಹೀಗಾಗಬಾರದಿತ್ತು ಎನ್ನಿಸುತ್ತದೆ. ಈ ರೀತಿ ಘಟನೆಗಳು ನಡೆಯದಂತೆ ತಡೆಯುವ ಆಲೋಚನೆಗಳು ಬರುತ್ತವೆ. ಆಲೋಚನೆಗೆ ಹಚ್ಚುವ ಒಂದು ಗಂಭೀರವಾದ ಪಾತ್ರವನ್ನು ಮಾಡಿರುವ ತೃಪ್ತಿಯಿದೆ’ ಎಂದರು.
ಕಿರುತೆರೆ ನಟಿಯಾಗಿ ಬಂದ ಅರ್ಚನಾ ‘ದುರ್ಗಾ’, ‘ಮಹಾದೇವಿ’ಯಂತಹ ದೈವಿಕ ಪಾತ್ರಗಳಿಂದ ಮನೆಮಾತಾದವರು. ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ‘ಹೊಂದಿಸಿ ಬರೆಯಿರಿ’, ‘ಕ್ಷೇತ್ರಪತಿ’ ಚಿತ್ರಗಳಲ್ಲಿಯೂ ತುಸು ಗಾಂಭೀರ್ಯದಿಂದ ಕೂಡಿದ ಪಾತ್ರಗಳಲ್ಲಿಯೇ ಕಾಣಿಸಿಕೊಂಡರು.
‘ಗಂಭೀರ ಪಾತ್ರಗಳು ಸಾಕೆನಿಸಿದೆ. ಹಾಸ್ಯಮಯ, ರಾಮ್‌ಕಾಮ್ ರೀತಿಯ ಪಾತ್ರಗಳಿಗೆ ಎದುರು ನೋಡುತ್ತಿರುವೆ. ಅಂಥ ಪಾತ್ರಗಳು ಸಿಗುತ್ತಿಲ್ಲ. ಹೀಗಾಗಿ ‘ಯುದ್ಧಕಾಂಡ’ದ ಬಳಿಕ ಯಾವುದೇ ಚಿತ್ರ ಕೈಯ್ಯಲ್ಲಿ ಇಲ್ಲ. ನಟನೆಯಲ್ಲಿ ಪೈಪೋಟಿ, ಚಿತ್ರಗಳ ಯಶಸ್ಸಿನ ಕೊರತೆ ಇಂದು ಕಲಾವಿದರಿಗೆ ಸವಾಲಾಗಿದೆ. ಉತ್ತಮ ನಿರ್ಮಾಣ ಸಂಸ್ಥೆಗಳು ಬರಹಗಾರರ ತಂಡ ರಚಿಸಿ, ಉತ್ತಮ ಕಂಟೆಂಟ್ ಸಿನಿಮಾಗಳನ್ನು ಮಾಡಬೇಕು. ಆಗ ಸಾಕಷ್ಟು ಜನರಿಗೆ ಕೆಲಸ ಸಿಗುತ್ತದೆ. ನಮ್ಮಲ್ಲಿ ಬರಹಗಾರರಿಗೆ ಆದ್ಯತೆ ಇಲ್ಲ. ಎಷ್ಟೋ ಚಿತ್ರದ ಸಮಾರಂಭಗಳಲ್ಲಿ ಬರಹಗಾರರು ವೇದಿಕೆ ಬರುವುದಿಲ್ಲ. ಅವರಿಗೊಂದು ಸೂಕ್ತ ಸಂಭಾವನೆ ಸಿಗದಿದ್ದರೆ, ಯಾರು ತಾನೆ ಪ್ಯಾಷನ್ ಎಂದುಕೊಂಡು ಎಷ್ಟು ದಿನ ಆಸಕ್ತಿಯಿಂದ ಬರೆದಾರು? ಬರಹಗಾರರನ್ನು ನಡೆಸಿಕೊಳ್ಳುವ ರೀತಿ ಬದಲಾಗಬೇಕು. ನಟ, ನಟಿ, ನಿರ್ದೇಶಕನಿಗಿಂತ ಮೊದಲ ಆದ್ಯತೆ ಬರವಣಿಗೆಗೆ ಸಿಕ್ಕರೆ ಉತ್ತಮ ಕಥೆಗಳು ಬರಬಹುದು’ ಎನ್ನುತ್ತಾರೆ ಅರ್ಚನಾ.
ಸಿನಿಮಾಗಳಿಗೆ ಜನ ಬರುತ್ತಿಲ್ಲ ಎಂಬ ಆರೋಪವನ್ನು ಅವರು ಒಪ್ಪುವುದಿಲ್ಲ. ಜನ ಬರುವಂತ ಚಿತ್ರಗಳನ್ನು ನಾವು ನೀಡುತ್ತಿಲ್ಲ. ಹಿಟ್ ಆದ ಸಿನಿಮಾಗಳಿಗೆ ಜನ ಬರುತ್ತಾರೆ ಎಂದರೆ, ಅದೇ ಜನ ಉಳಿದ ಸಿನಿಮಾಗಳಿಗೂ ಬರುತ್ತಿದ್ದರು ಎಂಬ ಅರ್ಥವಲ್ಲವೇ ಎನ್ನುವ ಅವರು, ಜನಕ್ಕೆ ಬೇಕಾದ ಚಿತ್ರ ನೀಡುವಲ್ಲಿ ನಾವು ಎಡವುತ್ತಿದ್ದೇವೆ ಎಂಬುದನ್ನು ಬಲವಾಗಿ ಪ್ರತಿಪಾದಿಸಿ ಮಾತಿಗೆ ವಿರಾಮವಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.