ADVERTISEMENT

ಆಲಿಯಾ ವಿರಾಮ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 20:30 IST
Last Updated 23 ಜೂನ್ 2019, 20:30 IST
ಅಲಿಯಾ ಭಟ್
ಅಲಿಯಾ ಭಟ್   

ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಇಬ್ಬರೂ ಆಯನ್‌ ಮುಖರ್ಜಿ ನಿರ್ದಶನದ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಅದರ ಕೆಲವು ದೃಶ್ಯಗಳ ಚಿತ್ರೀಕರಣ ಇತ್ತೀಚೆಗೆ ವಾರಾಣಸಿಯಲ್ಲಿ ನಡೆಯುತ್ತಿತ್ತು. ಚಿತ್ರೀಕರಣ ಕೊನೆಯ ಹಂತದಲ್ಲಿ ಇರುವಾಗಲೇ ಪ್ಯಾಕಪ್‌ ಮಾಡಬೇಕಾಯ್ತು. ಕಾರಣ, ಆಲಿಯಾಳನ್ನು ಕಾಡಿದ ಅನಾರೋಗ್ಯ. ಚಿತ್ರೀಕರಣದಲ್ಲಿದ್ದಾಗಲೇ ಅಲಿಯಾಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗೆ ತರಾತುರಿಯಲ್ಲಿ ಮುಂಬೈಗೆ ವಾಪಸ್ಸಾಗಿದ್ದರು.

ಇದಾಗಿ ಎರಡೇ ದಿನಗಳಲ್ಲಿ ಆಲಿಯಾ ತನ್ನ ಸ್ನೇಹಿತ ರಣಬೀರ್ ಕಪೂರ್ ಜೊತೆಯಲ್ಲಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಅವರು ಮುಂಬೈನಲ್ಲಿ ಚಿಕಿತ್ಸೆ ತೆಗೆದುಕೊಳ್ಳಲಿಲ್ಲವೇ? ರಣಬೀರ್ ಜೊತೆಯಲ್ಲಿ ಅವರು ಹೋಗಿದ್ದೆಲ್ಲಿಗೆ? ಈ ಪ್ರಶ್ನೆಗಳಿಗೆ ಗಾಸಿಪ್‌ಲೋಕದ ಗೂಢಚಾರರು ಉತ್ತರ ಪತ್ತೆ ಹಚ್ಚಿದ್ದಾರೆ.

ಮೂಲಗಳ ಪ್ರಕಾರ, ಆಲಿಯಾ ಮತ್ತು ರಣಬೀರ್‌ ಇಬ್ಬರೂ ಹತ್ತು ದಿನಗಳ ವಿರಾಮಕ್ಕಾಗಿ ನ್ಯೂಯಾರ್ಕ್‌ಗೆ ಹೋಗಿದ್ದರಂತೆ. ಅಲ್ಲಿ ರಣಬೀರ್ ಅವರ ಅಪ್ಪ ರಿಶಿ ಮತ್ತು ಅಮ್ಮ ನೀತು ಕಪೂರ್ ಜೊತೆಯಲ್ಲಿ ಕೆಲಸಮಯ ಕಳೆದು ಮತ್ತೆ ವಾಪಸ್ಸಾಗಿದ್ದಾರೆ. ಹಾಗಾದರೆ ಆಲಿಯಾಗೆ ಕಾಡಿದ್ದ ಹೊಟ್ಟೆನೋವು ಸುಳ್ಳೇ? ಖಂಡಿತ ಸುಳ್ಳಲ್ಲ. ಅನಾರೋಗ್ಯದ ಕಾರಣಕ್ಕಾಗಿಯೇ ಅವರು ನ್ಯೂಯಾರ್ಕ್‌ನಲ್ಲಿ ವಿಶ್ರಾಂತಿ ತೆಗೆದುಕೊಂಡಿದ್ದಂತೆ. ‘ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿಯೂ ರಣಬೀರ್ ಮತ್ತು ಆಲಿಯಾ ನ್ಯೂಯಾರ್ಕ್‌ನಲ್ಲಿದ್ದರು. ಈ ಸಲ ರಣಬೀರ್ ಅವರ ಸಹೋದರಿ ರಿಧಿಮಾ ಕೂಡ ಅವರಿಗೆ ಜೊತೆಯಾಗಿದ್ದಾರೆ. ಇದೊಂದು ಬಗೆಯಲ್ಲಿ ಫ್ಯಾಮಿಲಿ ಗೆಟ್‌ಟುಗೆದರ್’ ಎಂದು ಮುಂಬೈ ಮೂಲದ ಪತ್ರಿಕೆಯೊಂದರಲ್ಲಿ ವರದಿಯಾಗಿದೆ.

ADVERTISEMENT

ನ್ಯೂಯಾರ್ಕ್‌ನಿಂದ ಮರಳಿದ್ದೇ ಇಬ್ಬರೂ ಮತ್ತೆ ‘ಬ್ರಹ್ಮಾಸ್ತ್ರ’ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ವಾರಾಣಸಿಯಲ್ಲಿ ಒಂದು ಪ್ರೇಮಗೀತೆಯ ಚಿತ್ರೀಕರಣ ನಡೆಸಲಾಗಿದೆ. ಪ್ರೇಮಗೀತೆಯಲ್ಲಿ ನಟಿಸಲು ಈ ಪ್ರೇಮಪಕ್ಷಿಗಳು ನ್ಯೂಯಾರ್ಕ್‌ಗೆ ಹೋಗಿ ಸ್ಫೂರ್ತಿ ಪಡೆದುಕೊಂಡು ಬಂದಿದ್ದಾರೆ ಎಂಬುದು ಬಾಲಿವುಡ್‌ ಗಲ್ಲಿ ಬಾಯ್ಸ್‌ ಚೇಷ್ಟೆ.

‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್, ನಾಗಾರ್ಜುನ, ಡಿಂಪಲ್‌ ಕಪಾಡಿಯಾ, ಮೌನಿ ರಾಯ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರ 2019ರ ಕ್ರಿಸ್‌ಮಸ್‌ಗೆ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಸಲ್ಮಾನ್‌ ಖಾನ್‌ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ ‘ದಬಾ.ಂಗ್‌ 3’ ಸಿನಿಮಾ ಕೂಡ ಅಂದೇ ಬಿಡುಗಡೆಯಾಗುತ್ತಿದೆ. ಅಲ್ಲದೆ ‘ಬ್ರಹ್ಮಾಸ್ತ್ರ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ಗೆ ಕೂಡ ಇನ್ನಷ್ಟು ಸಮಯ ಬೇಕಾಗಿರುವುದರಿಂದ ಚಿತ್ರತಂಡ ಬಿಡುಗಡೆಯನ್ನು ಇನ್ನಷ್ಟು ಮುಂದೂಡಿದೆ. 2020ರ ಬೇಸಿಗೆಯಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.