ADVERTISEMENT

ಗಿಣಿ ಹೇಳಿದ್ದು ಬೇರೆಯದೇ ಕಥೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 7:12 IST
Last Updated 9 ಜನವರಿ 2019, 7:12 IST
   

‘ಇದೊಂದು ಕಾಮಿಡಿ ರೊಮ್ಯಾಂಟಿಕ್ ಸಿನಿಮಾ. ಜ. 11ಕ್ಕೆ ತೆರೆಗೆ ಬರುತ್ತಿದ್ದೇವೆ. ಜನರ ಆಶೀರ್ವಾದ ಸಿಗುತ್ತದೆ ಎಂಬ ಭರವಸೆ ಇದೆ’ ಇಷ್ಟು ಹೇಳಿ ತಮ್ಮ ಮಾತಾಯ್ತು ಎಂಬಂತೆ ಪಕ್ಕದಲ್ಲಿರುವವರಿಗೆ ಮೈಕ್ ವರ್ಗಾಯಿಸಿದರು ನಿರ್ದೇಶಕ ನಾಗರಾಜ ಉಪ್ಪುಂದ. ಅದು ‘ಗಿಣಿ ಹೇಳಿದ ಕಥೆ’ಯ ಪತ್ರಿಕಾಗೋಷ್ಠಿ.

ಇದರ ಛಾಯಾಗ್ರಹಣದ ಜವಾಬ್ದಾರಿಯನ್ನೂ ನಿರ್ದೇಶಕರೇ ವಹಿಸಿಕೊಂಡಿದ್ದಾರೆ. ದೇವರಾಜ್‌ ನಾಯಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಾಯಕನಾಗಿಯೂ ನಟಿಸಿದ್ದಾರೆ. ಆದರೆ ಬಿಡುಗಡೆಯ ವಿಷಯವನ್ನು ಹಂಚಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರೇ ಇರಲಿಲ್ಲ. ಸೆನ್ಸಾರ್ ಸಂಬಂಧಿ ಕೆಲಸದಲ್ಲಿ ಬ್ಯುಸಿಯಾಗಿರುವುದರಿಂದ ಚಿತ್ರತಂಡದ ಉಳಿದವರೇ ಮಾತನಾಡಿದರು.

ಹಿತನ್ ಹಾಸನ್

‘ಇಂಥ ಒಳ್ಳೆಯ ತಾಂತ್ರಿಕ ತಂಡದ ಜತೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ. ಈ ಚಿತ್ರದಲ್ಲಿ ‘ಹೀರೊ’ ಎಂಬ ಒಂದು ಹಾಡಿದೆ. ಸಮಾಜದಲ್ಲಿನ ಪ್ರತಿಯೊಬ್ಬರೂ ಹೀರೊ ಎನ್ನುವುದನ್ನು ಆ ಹಾಡಿನಲ್ಲಿ ತೋರಿಸಿದ್ದೇವೆ. ಡ್ರೈವರ್, ತಾಯಿ, ಫ್ರೆಂಡ್ ಎಲ್ಲರೂ ಹೀರೊಗಳೇ ಎಂಬುದನ್ನು ತೋರಿಸಿದ್ದೇನೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ.‌ ರೀ ರೆಕಾರ್ಡಿಂಗ್‌ ಮಾಡುವ ಸಂದರ್ಭದಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ನನಗೇ ಕಣ್ಣಿನಲ್ಲಿ ನೀರು ಬಂದಿತು’ ಎಂದರು ಸಂಗೀತ ನಿರ್ದೇಶಕ ಹಿತನ್ ಹಾಸನ್‌.

ADVERTISEMENT

ಮುಖ್ಯಪಾತ್ರವೊಂದರಲ್ಲಿ ನಟಿಸಿರುವ ಮಾಲತೇಶ್‌, ‘ಈ ಕಥೆಯನ್ನು ನಾನು ಮತ್ತು ದೇವರಾಜ್‌ ಚರ್ಚಿಸಿ ಬೆಳೆಸಿದ್ದೇವೆ. ನಾಲ್ಕರಿಂದ ಐದು ವರ್ಷ ಈ ಕಥೆಯ ಮೇಲೆ ಕೆಲಸ ಮಾಡಿದ್ದೇವೆ. ಈ ಚಿತ್ರದ ಟ್ರೈಲರ್‌ ನೋಡಿದವರಿಗೆ, ಹಾಡು ಕೇಳಿಸಿಕೊಂಡವರಿಗೆ ಸಿನಿಮಾ ಬಗ್ಗೆ ಒಂದು ಕಲ್ಪನೆ ಮೂಡಿರುತ್ತದೆ. ಆದರೆ ಸಿನಿಮಾದಲ್ಲಿ ಗಿಣಿ ಹೇಳುವ ಕಥೆ ಬೇರೆಯದೇ ಇದೆ’ ಎಂದರು.

ಬೆಂಗಳೂರಿನಿಂದ ಮಡಿಕೇರಿಗೆ ಪ್ರಯಾಣ ಬೆಳೆಸುವಾಗ ವಾಹನದ ಚಾಲಕ ಪ್ಯಾಸೆಂಜರ್‌ಗೆ ಹೇಳುವ ಕಥೆಯೇ ಈ ಚಿತ್ರದ ಹೂರಣ.

ನಾಗರಾಜ್ ಉಪ್ಪಂದ

ಗೀತಾಂಜಲಿ ಈ ಚಿತ್ರದ ನಾಯಕಿ. ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರಿಗೆ ಹೆಚ್ಚಿನ ಸಂಭಾಷಣೆಯೇ ಇಲ್ಲವಂತೆ. ಅದೇ ಕಾರಣಕ್ಕೋ ಏನೋ ಅವರು ಪತ್ರಿಕಾಗೋಷ್ಠಿಯಲ್ಲಿ ವಿಪರೀತ ಮಾತನಾಡಿದರು.

‘ಖುಷಿಯಾಗ್ತಿದೆ; ಅಷ್ಟೇ ಭಯವೂ ಇದೆ. ನಾನು ನಟಿಸಿದ ಸಿನಿಮಾ ಬಿಡುಗಡೆ ಆಗುತ್ತಿರುವ ಬಗ್ಗೆ ಖುಷಿ ಇದೆ. ಅದನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುರಿತು ಭಯವೂ ಇದೆ. ತುಂಬ ಶ್ರಮವಹಿಸಿ ಮಾಡಿದ ಸಿನಿಮಾ ಇದು. ಈ ತಂಡದಲ್ಲಿ ನಾನೂ ಒಬ್ಬಳಾಗಿ ಅವರ ಶ್ರಮವನ್ನು ನೋಡಿದ್ದೇನೆ. ಇದು ಅಪ್ಪಟ ಕನ್ನಡ ಸಿನಿಮಾ. ಸಿನಿಮಾದಲ್ಲಿ ಬೇರೆ ಭಾಷೆ ಬಳಕೆ ಮಾಡಿಲ್ಲ. ಬರೀ ಕನ್ನಡ ಬಳಸಿದ್ದೇವೆ. ಅಮೃತಾ ಎಂಬುದು ನನ್ನ ಪಾತ್ರದ ಹೆಸರು.‌ ನಡವಳಿಕೆಯಿಂದಲೇ ಸೆಳೆಯುವ ಪಾತ್ರ. ಹತ್ತು ಡೈಲಾಗ್ ಇದ್ದರೆ ಹೆಚ್ಚು. ಟೀಚರ್ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ವಿವರಣೆ ನೀಡುತ್ತಲೇ ಹೋದರು ಗೀತಾಂಜಲಿ. ನಟಿಯಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಪುಲಕ ಅವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು.

ನೂರಕ್ಕೂ ಹೆಚ್ಚು ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರಂತೆ.ಐವತ್ತರಿಂದ ಅರವತ್ತು ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಲು ತಂಡ ಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.