ADVERTISEMENT

ಚೆಂಡೆಯಿಂದ ವಯಲಿನ್‌...ಗೋವಿಂದ ಸ್ವರ

ವಿಶಾಖ ಎನ್.
Published 18 ನವೆಂಬರ್ 2018, 19:30 IST
Last Updated 18 ನವೆಂಬರ್ 2018, 19:30 IST
ಗೋವಿಂದ ಮೆನನ್
ಗೋವಿಂದ ಮೆನನ್   

‘96’ ತಮಿಳು ಸಿನಿಮಾದಲ್ಲಿ ಕೇಳುವ ವಯಲಿನ್ ನಾದವು ಇಳಯರಾಜ ಮಿಡಿದ ಶ್ರುತಿಯನ್ನು ನೆನಪಿಸುವುದಲ್ಲವೇ? ಆದರೆ, ಆ ನಾದದ ರುಜು ಹಾಕಿದ್ದು ಗೌತಮ್ ಪಿ. ಮೆನನ್.

ಕೇರಳದ ಇರಿಂಜಲಕುಡದಲ್ಲಿ ಬೆಳೆದ ಗೋವಿಂದ್ ಕಿವಿಮೇಲೆ ಬಾಲ್ಯದಲ್ಲಿ ಪದೇ ಪದೇ ಬೀಳುತ್ತಿದ್ದದ್ದು ಚೆಂಡೆ ಶಬ್ದ. ಕೂಡಲಮಾಣಿಕ್ಯಂ ಹಾಗೂ ತ್ರಿಪಾಯ ತ್ರಿಮೂರ್ತಿ ದೇವಸ್ಥಾನಗಳಿಂದ ಹೊಮ್ಮಿ ಬರುತ್ತಿದ್ದ ಚೆಂಡೆ ನಾದ ನೀಡುತ್ತಿದ್ದ ಕರ್ಣಾನಂದ ಅವರ್ಣನೀಯ. ಮನೆಯಲ್ಲಿ ಎಲ್ಲರೂ ಸಂಗೀತಪ್ರಿಯರೇ.

ಅಮ್ಮ ವಸಂತ ಕುಮಾರಿ 1960ರ ದಶಕದ ಹಾಡುಗಳನ್ನು ಹಾಡಿದರೆಂದರೆ, ಹೊಸ ಬಾಟಲಿಯಲ್ಲಿ ಹಳೆ ವೈನು ಅಲುಗಾಡಿದಂತೆ. ಅಪ್ಪ ಪೀತಾಂಬರನ್ ಶಾರೀರದ್ದೂ ಕರತಾಡನ ಗಿಟ್ಟಿಸಿದ ಹೆಗ್ಗಳಿಕೆ. ಸಹೋದರಿ ಧನ್ಯಾ ಬರೆದ ಸಾಹಿತ್ಯಕ್ಕೆ ಗೋವಿಂದ್ ಸ್ವರ ಸಂಯೋಜನೆ ಮಾಡಿರುವ ಉದಾಹರಣೆಗಳಿವೆ. ಅಣ್ಣ ವಿವೇಕ್ ಬಚ್ಚಲುಮನೆಯಲ್ಲಿ ಕೂತು ಹಾಡಿದರೆ, ಅದನ್ನು ಗೋವಿಂದ್ ಮುಂದುವರಿಸಬಲ್ಲರು.

ADVERTISEMENT

ಇಡೀ ‘96’ ಸಿನಿಮಾದಲ್ಲಿ ಸಂಗೀತವನ್ನೂ ಒಂದು ಪಾತ್ರವನ್ನಾಗಿ ಕಟೆದಿಟ್ಟಿರುವ ಗೌತಮ್, ಬಾಲ್ಯದಲ್ಲಿ ವಯಲಿನ್‌ ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದರು. ಅವರಿಗೆ ಗಿಟಾರ್‌ ಕಲಿಯಲು ಇಷ್ಟವಿತ್ತು. ಅಪ್ಪನಿಗೆ ಮಗ ವಯಲಿನ್ ನುಡಿಸುವುದೇ ಒಳಿತು ಎಂಬ ಭಾವನೆ. ಗುರುವಿನ ಬಳಿ ಕರೆದುಕೊಂಡು ಹೋಗಿ ಬಿಟ್ಟರು. ಆ ಶಾಲೆಯಲ್ಲಿ ಮೊದಲ ದಿನ ಹೋದಾಗ ಗಿಟಾರ್‌ ಮೇಷ್ಟರು ಬಂದಿರಲಿಲ್ಲ. ಕೊನೆಗೆ ವಯಲಿನ್‌ ಕಲಿಯುವುದು ಅನಿವಾರ್ಯವಾಯಿತು. ಒಲ್ಲದ ಮನಸ್ಸಿನಿಂದಲೇ ಅದನ್ನು ಕಲಿತರೂ ಆಮೇಲೆ ಅದು ಹೊಸತೇ ಬೆಳಕು ಕೊಟ್ಟಿತೆನ್ನಬೇಕು. ಗುರು ಅಶ್ರಫ್ ಅವರನ್ನು ವಯಲಿನ್‌ ಸಾಧ್ಯತೆಯ ಜಗತ್ತಿಗೆ ಆ ರೀತಿ ಪರಿಚಯಿಸಿದ್ದರು.

ಶಾಲಾ ಬಾಲಕನಾಗಿದ್ದಾಗ ಕರ್ನಾಟಕ ಶೈಲಿಯ ಸಂಗೀತ ಕಲಿತ ಗೋವಿಂದ್‌, ಆಮೇಲೆ ಪಾಶ್ಚಾತ್ಯ ಶೈಲಿಯನ್ನು ತಮ್ಮದಾಗಿಸಿಕೊಳ್ಳಲು ನಿರ್ಧರಿಸಿದ್ದೂ ಆಸಕ್ತಿಕರ. ಕಣ್ಣುಮುಚ್ಚಿದರೆ ಬಾಲ್ಯದಲ್ಲಿ ಸ್ನೇಹಿತರಿಂದ ಕಲಿತ ಚೆಂಡೆ ಸ್ವರ ಅವರನ್ನು ಕಾಡುತ್ತಿತ್ತಂತೆ.

‘ವಯಲಿನ್‌ ಕಲಿಯತೊಡಗಿದ್ದು ಒಲ್ಲದ ಮನಸ್ಸಿನಿಂದ. ಅದಕ್ಕೇ ತಪ್ಪಾಗಿ ತಂತ್ರಗಳನ್ನು ಅಳವಡಿಸಿಕೊಂಡೆ. ವರ್ಷಗಳ ನಂತರ ಔಸೆಪ್ಪಚ್ಚನ್ ಅವರ ಹತ್ತಿರ ಕಲಿಯಲು ಹೋದೆ. ಬಾಲ್ಯದಲ್ಲಿ ನಾನು ವಯಲಿನ್ ಕಲಿತಿದ್ದೆ ಎನ್ನುವ ಸತ್ಯವನ್ನೇ ಮರೆಮಾಚಿದೆ. ಅವರು ‘ಇದೇನೋ, ಅರ್ಧಂಬರ್ಧ ಕಲಿತಿರುವ ಹಾಗೆ ನುಡಿಸುತ್ತೀಯೆ’ ಎಂದು ಕಣ್ಣು ಮಿಟುಕಿಸಿದ್ದರು. ಆಮೇಲಾಮೇಲೆ ಅದರ ಸಾಧ್ಯತೆಗಳು ನನಗೆ ಸ್ಪಷ್ಟವಾಗತೊಡಗಿದವು’–ಇದು ಗೋವಿಂದ್ ಅನುಭವದ ಮಾತು.

ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ಪ 2012ರಲ್ಲಿ ನಿವೃತ್ತರಾದರು. ಅವರು ಸುಮ್ಮನೆ ಕೂರದೆ ಕಟ್ಟಿದ್ದೇ ‘ತೈಕ್ಕುಡಂ ಬ್ರಿಡ್ಜ್‌’ ಎಂಬ ಬ್ಯಾಂಡ್. ಅದನ್ನು ಗೋವಿಂದ್ ವಿಸ್ತರಿಸಿದರು. ಸಮಾನಮನಸ್ಕ ಯುವ ಸಂಗೀತಗಾರರನ್ನು ಕಲೆಹಾಕಿದ ಅವರು ಸ್ವರ ಸಂಯೋಜನೆಯಲ್ಲಿ ಪ್ರಯೋಗಗಳನ್ನು ಮಾಡಲಾರಂಭಿಸಿದರು. ಮೆಟಲ್‌ ಬ್ಯಾಂಡ್‌ನ ಸ್ವರೂಪಕ್ಕೆ ಹಳೆಯ ಹಾಡುಗಳನ್ನು ಒಗ್ಗಿಸುತ್ತಾ ಬಂದ ಬ್ಯಾಂಡ್, ‘ನವರಸಂ’ ಎಂಬ ಆಲ್ಬಂ ಹೊರತಂದಿತು.

ಅಮ್ಮನ ಕೈಲಿ ಹಾಡಿಸಿದ ಹಳೆಯ ಸಿನಿಮಾ ಹಾಡನ್ನು ಅವರು ಯೂ–ಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದರು. ಅದು ಜನಪ್ರಿಯವಾಯಿತು. ಬ್ಯಾಂಡ್‌ನ ಹಾಡುಗಳಿಗೂ ಯೂ–ಟ್ಯೂಬ್‌ ವೇದಿಕೆಯಾದದ್ದೇ ಸಿನಿಮಾ ಅವಕಾಶಗಳೂ ಅವರನ್ನು ಹುಡುಕಿಕೊಂಡು ಬಂದವು. ಕೀ–ಬೋರ್ಡ್‌ ಅರೇಂಜರ್ ಆಗಿಯೂ ಕೈಪಳಗಿಸಿಕೊಂಡ ಗೋವಿಂದ್‌, ಎರಡು ಮೂರು ವರ್ಷಗಳಲ್ಲೇ ಸಿನಿಮಾ ಸಂಗೀತದಲ್ಲಿ ಛಾಪು ಮೂಡಿಸಿದರು.

ಮಲೆಯಾಳಂ ಹಾಗೂ ತಮಿಳು ಚಿತ್ರರಂಗದ ಸೂಕ್ಷ್ಮಸಂವೇದನೆ ಇರುವವರು ಈಗ ಅವರ ಹಿನ್ನೆಲೆಯನ್ನು ಕೇಳಿ ತಿಳಿದುಕೊಳ್ಳಲಾರಂಭಿಸಿದ್ದಾರೆ.

‘ಸಿನಿಮಾ ಸಂಗೀತ ಹಾಗೂ ಬ್ಯಾಂಡ್‌ ನನಗೆ ದಡ, ನದಿ ಆಟದಂತೆ. ಸಿನಿಮಾದಲ್ಲಿ ಮಿತಿಗಳಿವೆ. ಬ್ಯಾಂಡ್‌ನಲ್ಲಿ ನಾನು ಸರ್ವತಂತ್ರ ಸ್ವತಂತ್ರ. ಇಲ್ಲಿ ಮೆಟಲ್‌ ಬ್ಯಾಂಡ್‌ ಮೂಲಕ ಏನೇನೋ ಮಾಡುತ್ತೇವೆ. ಸಿನಿಮಾದಲ್ಲಿ ಮಾಧುರ್ಯ, ವೇಗ, ಹೊಸತನದ ಹದವರಿತ ಮಿಶ್ರಣ. ಎರಡೂ ಅನುಭವ ಮಜವಾಗಿದೆ’ ಎನ್ನುವ ಗೋವಿಂದ್ ಅವರಿಗೀಗ 30 ವರ್ಷವಷ್ಟೆ.

ಮನೆಯಲ್ಲಿ ಅವರ ಪತ್ನಿ ರಂಜಿನಿ ಇಂಗ್ಲಿಷ್‌ನಲ್ಲಿ ಸಾಹಿತ್ಯ ಬರೆದಿಟ್ಟಿರುತ್ತಾರೆ. ಅದಕ್ಕೆ ಬಿಡುವಿನಲ್ಲಿ ಸ್ವರ ಸಂಯೋಜನೆ ಮಾಡಿ, ‘ಹೇಗಿದೆ’ ಎಂದು ಕೇಳುವಷ್ಟು ಅವರು ಖಾಸಗಿ ಸಂಗೀತಪ್ರಿಯರೂ ಹೌದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.