ADVERTISEMENT

ಕಳ್ಬೆಟ್ಟದವರು ಬಂದರು!

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 9:20 IST
Last Updated 23 ಫೆಬ್ರುವರಿ 2019, 9:20 IST
ಶ್ವೇತಾ ಆರ್‌. ಪ್ರಸಾದ್‌
ಶ್ವೇತಾ ಆರ್‌. ಪ್ರಸಾದ್‌   

ದರೋಡೆಕೋರರು, ಅಂತಿಂಥ ದರೋಡೆಕೋರರಲ್ಲ. ಕಳ್ಬೆಟ್ಟದ ದರೋಡೆಕೋರರು ಬಂದಿದ್ದಾರೆ! ಇದೇನು ದರೋಡೆಕೋರರು ಮೊದಲೇ ಸೂಚನೆ ನೀಡಿ ಪ್ರಚಾರಕೊಟ್ಟು ಬರುತ್ತಾರೆಯೇ ಎಂದು ಹುಬ್ಬೇರಿಸಬೇಡಿ. ಇವರಿಗೆ ಪ್ರಚಾರ ಸಿಕ್ಕಷ್ಟೂ ಖುಷಿ. ಯಾಕೆಂದರೆ ಇವರು ಬರುತ್ತಿರುವುದು ವಾಸ್ತವ ಜಗತ್ತಿನಲ್ಲಲ್ಲ, ಚಿತ್ರಮಂದಿರದೊಳಗಿನ ಬೆಳ್ಳಿತೆರೆಯ ಮೇಲೆ. ದೀಪಕ್‌ ನಿರ್ದೇಶನ ‘ಕಳ್ಬೆಟ್ಟದ ದರೋಡೆಕೋರರು’ ಫೆ. 22ರಂದು ಬಿಡುಗಡೆಯಾಗಿದೆ.

ಹೊಸಬರ ತಾಜಾತನ ಮತ್ತು ಸಿನಿಮಾಧ್ಯಮದ ಕುಶಲಗುಣ ಎರಡನ್ನೂ ಮೇಳೈಸಿಕೊಂಡು ನಿರ್ಮಿತವಾಗಿರುವ ಈ ಚಿತ್ರದ ಕುರಿತು ನಿರೀಕ್ಷೆ ಹುಟ್ಟಿಕೊಳ್ಳಲು ಹಲವು ಕಾರಣಗಳಿವೆ. ಮೊದಲನೆಯದು ಇದು ಕಾದಂಬರಿ ಆಧರಿಸಿದ ಚಿತ್ರ. ಅನುಷ್‌ ಶೆಟ್ಟಿ ಬರೆದಿರುವ ರೋಚಕ ಕಾದಂಬರಿಯನ್ನು ಅದೇ ಹೆಸರಿನಲ್ಲಿ ನಿರ್ದೇಶಕರು ಇನ್ನಷ್ಟು ರೋಚಕಗೊಳಿಸಿ ತೆರೆಗೆ ಅಳವಡಿಸಿದ್ದಾರೆ. ಈ ಚಿತ್ರದ ನಾಯಕ ನಟರಾಜ್‌. ಹೆಸರಿನಲ್ಲಿಯೇ ‘ನಟ’ನೆಯನ್ನೂ ಇಟ್ಟುಕೊಂಡಿರುವ ಇವರು ‘ರಾಮಾ ರಾಮಾ ರೇ’ ಚಿತ್ರದಲ್ಲಿ ಗಲ್ಲಿಗೊಳಗಾದ ಕೈದಿಯ ಪಾತ್ರದಲ್ಲಿ ಗಮನ ಸೆಳೆದಿದ್ದರು. ಎರಡು ವರ್ಷಗಳ ನಂತರ ಅವರು ನಾಯಕನಾಗಿ ನಟಿಸಿದ ಮತ್ತೊಂದು ಸಿನಿಮಾ ತೆರೆಯ ಮೇಲೆ ಬರುತ್ತಿದೆ. ಈ ಸುದೀರ್ಘಾವಧಿಯೇ ಅವರೆಷ್ಟು ಚೂಸಿ ಎನ್ನುವುದನ್ನು ಹೇಳುವಂತಿದೆ. ನಟನೆಗೆ ಸವಾಲು ಒದಗಿಸದ ನಾಮಕಾವಸ್ತೆ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಾರೆ ಎನ್ನುವುದು ಅವರ ಬದ್ಧತೆ. ಕಿರುತೆರೆ ನಟಿ ಶ್ವೇತಾ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರತಿಭಾವಂತ ರಂಗಭೂಮಿ ನಟ ಹೇಮಂತ್‌ ಸುಶೀಲ್‌ ಈ ಚಿತ್ರದಲ್ಲಿ ಖಳನಟನಾಗಿ ಮಿಂಚಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವುದೂ ಮತ್ತೊಂದು ಪ್ಲಸ್‌ ಪಾಯಿಂಟ್‌.

ADVERTISEMENT

ಒಂದು ಊರಿನ ನಂಬಿಕೆ, ಅದನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವ ಕುತಂತ್ರ, ಹರೆಯದ ಹುಡುಗರ ಸಂಘರ್ಷ ಇವುಗಳ ನಡುವೆಯೇ ಅರಳುವ ಗುಲಾಬಿಪ್ರೇಮ ಹೀಗೆ ಪಕ್ಕಾ ಹಳ್ಳಿ ಕ್ಯಾನ್ವಾಸಿನಲ್ಲಿ ಕಟ್ಟಿದ ಕಥೆ ಕಳ್ಬೆಟ್ಟದ ದರೋಡೆಕೋರರು. ಬಹುತೇಕ ಕಾದಂಬರಿಯಲ್ಲಿನ ಎಲ್ಲ ಅಂಶಗಳನ್ನೂ ಸಿನಿಮಾದಲ್ಲಿ ಇರಿಸಿಕೊಂಡಿದ್ದರೂ ದೃಶ್ಯಮಾಧ್ಯಮದ ಅಗತ್ಯಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನೂ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ‘ಬದಲಾವಣೆ ಏನಿದ್ದರೂ ಮನರಂಜನೆಯನ್ನೇ ಗುರಿಯಾಗಿಸಿಕೊಂಡಿದ್ದು. ಮಂಡ್ಯದ ಹಳ್ಳಿಯೊಂದರಲ್ಲಿ ಚಿತ್ರೀಕರಿಸಲಾಗಿರುವ ಸಿನಿಮಾದಲ್ಲಿಯೂ ಮಂಡ್ಯಭಾಷೆಯನ್ನೇ ಬಳಸಿಕೊಳ್ಳಲಾಗಿದೆ’ ಎಂಬುದು ಚಿತ್ರತಂಡದ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.