ADVERTISEMENT

ಒಂದನ್ನು ಒತ್ತಿ; ಪ್ರೇಮಜಾಡಿನಲ್ಲಿ ಸುತ್ತಿ

ಕೆ.ಎಚ್.ಓಬಳೇಶ್
Published 6 ಜುಲೈ 2018, 16:26 IST
Last Updated 6 ಜುಲೈ 2018, 16:26 IST
‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದ ದೃಶ್ಯ
‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದ ದೃಶ್ಯ   

ಚಿತ್ರ: ಕನ್ನಡಕ್ಕಾಗಿ ಒಂದನ್ನು ಒತ್ತಿ
ನಿರ್ಮಾಣ: ಎಡಬಿಡಂಗಿ ಟಾಕೀಸ್‌ ಲಾಂಛನ
ನಿರ್ದೇಶನ: ಕುಶಾಲ್
ತಾರಾಗಣ: ಅವಿನಾಶ್‌ ಎಸ್‌. ಶತಮರ್ಷಣ, ಕೃಷಿ ತಾಪಂಡ, ಚಿಕ್ಕಣ್ಣ, ದತ್ತಣ್ಣ, ಮಿಮಿಕ್ರಿ ಗೋಪಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್‌

ಅವಿನಾಶ್‌ ಪುಸ್ತಕ ಪ್ರೇಮಿ. ಆದರೆ, ಮಹಾ ಎಡಬಿಡಂಗಿ. ಉದ್ಯೋಗ ಅರಸಿ ಬೆಂಗಳೂರಿಗೆ ಬರುವ ಆತ ಹೋಟೆಲ್‌ನಲ್ಲಿ ಸಪ್ಲೈಯರ್‌ ಆಗುತ್ತಾನೆ. ಕೊನೆಗೆ, ವಾರಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿ ಕೆಲಸ ಆರಂಭಿಸುತ್ತಾನೆ. ಅವನ ಬರಹಗಳಿಗೆ ಪ್ರಮೇಯ ಮನಸೋಲುತ್ತಾಳೆ. ಪ್ರೀತಿಯ ಬೀಜ ಮೊಳೆತು ಗಿಡವಾಗಿ ಬೆಳೆಯುವ ವೇಳೆಗೆ ಅವನ ಬದುಕಿನಿಂದ ಥಟ್ಟನೆ ಮಾಯವಾಗಿಬಿಡುತ್ತಾಳೆ.

ಆಗ ಅವಿನಾಶ್‌ನದ್ದು ಬೆದರಿದ ಜಿಂಕೆಯ ಸ್ಥಿತಿ. ಪತ್ರಿಕೆ ತೊರೆದು ಕಾರಿನಲ್ಲಿ ಕಾಣದ ಊರಿಗೆ ಪ್ರಯಾಣ ಹೊರಡುತ್ತಾನೆ. ಅವನೊಂದಿಗೆ ಬಾಲ್ಯದ ಗೆಳೆಯ ಚಂದ್ರು ಜೊತೆಯಾಗುತ್ತಾನೆ. ಇಬ್ಬರೂ ನಡುರಾತ್ರಿಯಲ್ಲಿ ದಟ್ಟಕಾಡಿನಲ್ಲಿ ಸಾಗುವಾಗ ದಿಕ್ಕು ತಪ್ಪುತ್ತಾರೆ.

ADVERTISEMENT

ಪ್ರೀತಿ ಕೈಬಿಟ್ಟು ಹೋಗಿ ನಿರ್ಜೀವದಂತಹ ಬದುಕು ಧುತ್ತನೆ ಎದುರಾದಾಗ ಪ್ರೇಮಿಗಳು ಎದುರಿಸುವ ತಾಕಲಾಟವನ್ನು ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕುಶಾಲ್. ನಾಯಕಿಯನ್ನು ಇಬ್ಬರು ನಾಯಕರು ಪ್ರೀತಿಸುವ ಕಥೆಗಳು ಹೊಸತೇನಲ್ಲ. ಆದರೆ, ಹಳೆಯ ಕಥೆಯನ್ನೇ ಹೊಸ ನಿರೂ‍ಪಣೆಯಲ್ಲಿ ಹೇಳುವ ನಿರ್ದೇಶಕರ ಶೈಲಿ ಮೆಚ್ಚುಗೆಯಾಗುತ್ತದೆ.

ಒಬ್ಬನದು ಹದಿಹರೆಯದ ಪ್ರೀತಿ. ಇನ್ನೊಬ್ಬನದು ಹದಿಹರೆಯದ ಹಂತ ದಾಟಿದ ಪ್ರೀತಿ. ಈ ಇಬ್ಬರ ಪ್ರೀತಿಯ ಸೆಳೆತಕ್ಕೆ ಸಿಲುಕಿದ್ದು ಒಬ್ಬಳೇ ಹುಡುಗಿ. ಇಬ್ಬರ ಹೃದಯಕ್ಕೂ ಲಗ್ಗೆ ಇಟ್ಟು ಮಾಯವಾದ ಹುಡುಗಿ ಯಾರೆಂಬುದು ಗೊತ್ತಾಗುವುದು ಕ್ಲೈಮ್ಯಾಕ್ಸ್‌ನಲ್ಲಿ. ಅಲ್ಲಿಯವರೆಗೂ ಪ್ರೇಕ್ಷಕರ ಕುತೂಹಲವನ್ನು ಹಿಡಿದಿಡುವಲ್ಲಿ ನಿರ್ದೇಶಕರು ನಡೆಸಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಚಿತ್ರದ ಮೊದಲಾರ್ಧ ಅವಿನಾಶ್‌ ಮತ್ತು ಚಂದ್ರು ಮನದಲ್ಲಿ ಪ್ರೀತಿ ಅಂಕುರಗೊಂಡ ಸನ್ನಿವೇಶ ಹೇಳುವಲ್ಲಿಯೇ ಸಾಗುತ್ತದೆ. ಕಾನನದಲ್ಲಿ ದಿಕ್ಕು ತಪ್ಪಿದ ಈ ಇಬ್ಬರು ಸುಚೇಂದ್ರ‍ ಪ್ರಸಾದ್‌ ಮನೆಗೆ ಹೋದಾಗಲೇ ಕಥೆಗೆ ತಿರುವು ಸಿಗುತ್ತದೆ. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಈ ಇಬ್ಬರ ಕಥೆಯನ್ನು ಕಟ್ಟಿಕೊಡುವುದು ಚೆನ್ನಾಗಿದೆ. ಕೆಲವೆಡೆ ಕಥೆ ಸೊರಗಿದರೂ ದ್ವಿತೀಯಾರ್ಧದಲ್ಲಿ ಚಿತ್ರಕಥೆಯಲ್ಲಿನ ಬಿಗಿತನ ಅದನ್ನು ಮರೆಸುತ್ತದೆ. ಜೊತೆಗೆ, ಕಥೆ ಮಲೆನಾಡಿನ ಹಾದಿಯಲ್ಲಿ ಸಾಗಿ ಪ್ರೇಕ್ಷಕರ ಮನಸ್ಸಿಗೂ ಮುದ ನೀಡುತ್ತದೆ.

ಕೆಲವೆಡೆ ನಿರ್ದೇಶಕರು ಮಾಡಿರುವ ಎಡವಟ್ಟು ಎದ್ದುಕಾಣುತ್ತದೆ. ಒಮ್ಮೆಯೂ ಪತ್ರಿಕೆಯಲ್ಲಿ ಸಂಬಳ ಕೇಳದ ನಾಯಕ ದಿಢೀರ್‌ ಆಗಿ ಕಾರು ತೆಗೆದುಕೊಂಡು ಹೊರಡುತ್ತಾನೆ. ಅವನಿಗೆ ಡೀಸೆಲ್‌ ತುಂಬಿಸಲು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಕಾಡದೆ ಇರದು. ನಾಯಕನ ಪಾತ್ರಕ್ಕೆ ಗಟ್ಟಿತನ ನೀಡುವ ಆತುರದಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ಚಂದ್ರುವಿಗೆ ಕಾಡುಗಳ್ಳರಿಂದ ಗುಂಡು ಹೊಡೆಸಿ ಸಾಯಿಸಲಾಗುತ್ತದೆ. ಸಾವಿನ ಅಂತ್ಯದಲ್ಲಿರುವ ಆತ ನಿನ್ನ ತೊಡೆಯ ಮೇಲೆ ಮಲಗುವ ಆಸೆ ಇದೆಯೆಂದು ಪ್ರಮೇಯಳನ್ನು ಕೋರುವುದು ದೊಡ್ಡ ಪ್ರಹಸನ.

ಹದಿಹರೆಯದ ದಿನಗಳ ಫ್ಲ್ಯಾಶ್‌ಬ್ಯಾಕ್‌ನಲ್ಲಿ ಚಿಕ್ಕಣ್ಣನ ನಟನೆ ಸೊಗಸಾಗಿದೆ. ಕೃಷಿ ತಾಪಂಡ ಅವರ ಮೋಹಕ ನಟನೆ ಮನಸೆಳೆಯುತ್ತದೆ. ಅವಿನಾಶ್‌ ಎಸ್. ಶತಮರ್ಷಣ ಅವರದ್ದು ಅಚ್ಚುಕಟ್ಟಾದ ನಟನೆ. ದತ್ತಣ್ಣ, ಮಿಮಿಕ್ರಿ ಗೋ‍ಪಿ, ರಂಗಾಯಣ ರಘು, ಸುಚೇಂದ್ರಪ್ರಸಾದ್‌ ತಮ್ಮ ‍ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಲೆನಾಡಿನ ಸೊಬಗು ರಿಷಿಕೇಶ್ ಅವರ ಕ್ಯಾಮೆರಾ ಕಣ್ಣಲ್ಲಿ ಸೊಗಸಾಗಿ ಸೆರೆಸಿಕ್ಕಿದೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.