ADVERTISEMENT

ಹೊಸಬರ ಬಾಳಲ್ಲಿ ‘ಕಾರ್ಮೋಡ ಸರಿದು’

​ಪ್ರಜಾವಾಣಿ ವಾರ್ತೆ
Published 9 ಮೇ 2019, 4:13 IST
Last Updated 9 ಮೇ 2019, 4:13 IST
   

ಖಿನ್ನತೆಯಿಂದ ಬಳಲುತ್ತಿದ್ದ ಯುವಕನೊಬ್ಬ ಅದರಿಂದ ಹೇಗೆ ಹೊರಬರುತ್ತಾನೆ ಮತ್ತು ಮುಂದೆ ಹೇಗೆ ಜೀವನ ನಡೆಸುತ್ತಾನೆ ಹಾಗೂ ಸಣ್ಣಸಣ್ಣ ಸಂಗತಿಗಳಿಂದಲೂ ಹೇಗೆ ಸಂತೋಷ ಕಾಣಬಹುದು ಎನ್ನುವುದು ತಿಳಿಯಬೇಕಾದರೆ ‘ಕಾರ್ಮೋಡ ಸರಿದು’ ಸಿನಿಮಾ ನೋಡಬೇಕಂತೆ. ಪಿ.ಎಸ್‌.ಉದಯಕುಮಾರ್‌ ಕಥೆ–ಚಿತ್ರಕಥೆ ಹೊಸೆದು, ನಿರ್ದೇಶನ ಮಾಡಿರುವ ಈ ಸಿನಿಮಾ ಮೇ 17ರಂದು ರಾಜ್ಯದಾದ್ಯಂತ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ತಮ್ಮ ಚೊಚ್ಚಲ ನಿರ್ದೇಶನದ ‘ಕಾರ್ಮೋಡ ಸರಿದು’ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ನಿರ್ದೇಶಕ ಪಿ.ಎಸ್‌.ಉದಯಕುಮಾರ್‌ ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಬಂದಿದ್ದರು.

"ಸಿನಿಮಾದ ಕಥೆಯೂ ತುಂಬಾ ಚೆನ್ನಾಗಿದೆ. ಕುದುರೆಮುಖದ ಪರಿಸರದ ಸುತ್ತವೇ ಚಿತ್ರೀಕರಣ ಮಾಡಲಾಗಿದೆ. ಕುದುರೆಮುಖದ ಮಳೆಗಾಲದ ಸೌಂದರ್ಯವನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇವೆ. ಈ ಸಿನಿಮಾದಲ್ಲಿ ಶುದ್ಧ ಕನ್ನಡತನದ ಸೊಬಗು ಕಾಣಲಿದ್ದೀರಿ ಮತ್ತು ಕೇಳಲಿದ್ದೀರಿ.ಸೌಂಡ್ ಎಫೆಕ್ಟ್ ಕೂಡ ಚೆನ್ನಾಗಿದೆ. ಸೆನ್ಸಾರ್‌ ಮಂಡಳಿ ನಮ್ಮ ಸಿನಿಮಾಕ್ಕೆ ಯು ಸರ್ಟಿಫಿಕೆಟ್‌ ನೀಡಿದೆ. ಬಿಡುಗಡೆ ಪೂರ್ವ ವೀಕ್ಷಣೆ ಮಾಡಿದವರೂ ತುಂಬಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೊಸಬರ ಈ ಪ್ರಯತ್ನವನ್ನು ಸಿನಿಪ್ರಿಯರು ಪ್ರೋತ್ಸಾಹಿಸುತ್ತಾರೆಂಬ ನಂಬಿಕೆಯೂ ಇದೆ’’ ಎನ್ನುವ ವಿಶ್ವಾಸದ ಮಾತು ಉದಯಕುಮಾರ್‌ ಅವರದ್ದು.

ADVERTISEMENT

ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಮಂಜು ರಾಜಣ್ಣ, ‘ಹದಿನೆಂಟು ವರ್ಷಗಳ ಹಿಂದೆ ಕಂಡ ಕನಸು ನನಸಾಗಿದೆ. ನಾನು ಪೂರ್ಣ ಪ್ರಮಾಣದ ನಾಯಕನಾಗಿ ನಟಿಸುತ್ತೇನೆ ಎಂದು ಭಾವಿಸಿರಲಿಲ್ಲ. ಕಾರಿನಿಂದ ಇಳಿಯುವ ಒಂದು ದೃಶ್ಯದಲ್ಲಿ ನಟಿಸಿದ್ದೆ. ಆ ಸಿನಿಮಾ ತೆರೆ ಕಾಣಲೇ ಇಲ್ಲ. ನಮ್ಮ ತಂದೆ ಮತ್ತು ಉದಯಕುಮಾರ್‌ ತಂದೆ ಕುದುರೆಮುಖ ಕಬ್ಬಿಣ ಅದಿರು ಕಂಪನಿಯಲ್ಲಿ ಉದ್ಯೋಗಿಯಾಗಿದ್ದವರು.ನಾನು ಕುದುರೆಮುಖ ಪರಿಸರದಲ್ಲೇ ಹುಟ್ಟಿ ಬೆಳೆದವನು. ಸಿನಿಮಾ ಕನಸು ನನ್ನಲ್ಲಿ ಚಿಗುರೊಡೆದಿದ್ದು ಕುದುರೆಮುಖದಲ್ಲೇ. ಮುಗಿಲಲ್ಲಿ ಅಷ್ಟೇ ಅಲ್ಲ, ಬದುಕಲ್ಲಿ ಆವರಿಸುವ ಕಾರ್ಮೋಡವೇ ಈ ಸಿನಿಮಾದ ಟೈಟಲ್‌ಗೆ ಪ್ರೇರಣೆಯಾಗಿತ್ತು. ಹಾಗಾಗಿಯೇ ಅದೇ ಟೈಟಲ್‌ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ’ ಎಂದು ಮಾತು ವಿಸ್ತರಿಸುತ್ತಾ ಹೋದರು.

ನಮ್ಮ ಸಿನಿಮಾದಲ್ಲಿ ನಟಿಸಬೇಕಿದ್ದ ಕಲಾವಿದೆಯೊಬ್ಬರು ಅರ್ಧಕ್ಕೆ ಬಿಟ್ಟು ಹೋದ ಮೇಲೆ ಸಿನಿಮಾಕ್ಕೂ ಒಂದರ್ಥದಲ್ಲಿ ಕಾರ್ಮೋಡ ಆವರಿಸಿತ್ತು. ಕಾಮಿಡಿ ಕಿಲಾಡಿ ಖ್ಯಾತಿಯ ವಿದ್ಯಾ ಅವರು ಆ ಪಾತ್ರದಲ್ಲಿ ನಟಿಸುವ ಜತೆಗೆ ನಮ್ಮ ಸಿನಿಮಾಕ್ಕೆ ಆವರಿಸಿದ್ದ ಕಾರ್ಮೋಡವನ್ನು ಸರಿಸಿದರು ಎಂದು ಮಂಜು ರಾಜಣ್ಣ ಅವರು ಮೂಡಿಗೆರೆಯ ದಿವ್ಯಾ ಅವರಿಗೆ ಕೃತಜ್ಞತೆ ಹೇಳುವುದನ್ನು ಮರೆಯಲಿಲ್ಲ.

‘ಕಾಮಿಡಿ ಪಂಚ್‌ ಹೇಳಿಕೊಂಡಿದ್ದ ನಾನು ಆಜಾನರ್‌ನಿಂದ ಹೊರ ಬಂದು, ನಾನೂ ಸಹ ಇಂತಹದೊಂದು ಗಂಭೀರ ಮತ್ತು ವಿಭಿನ್ನ ಪಾತ್ರದಲ್ಲಿ ನಟಿಸಬಲ್ಲೇ ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇನೆ. ಸಿನಿಮಾದ ಉದ್ದಕ್ಕೂ ನನ್ನದು ಅಳುಮುಂಜಿ ಪಾತ್ರ. ನಾನು ಏಕೆ ಅಳುತ್ತೇನೆ ಎನ್ನುವುದು ಕ್ಲೈಮ್ಯಾಕ್ಸ್‌ ನೋಡುವವರೆಗೂ ಯಾರಿಗೂ ಗೊತ್ತಾಗುವುದೇ ಇಲ್ಲ. ಈ ಸಿನಿಮಾದಲ್ಲಿ ಯಾರಿಗೂ ಊಹೆ ಮಾಡದಲಾಗದಂತಹ ಕ್ಲೈಮ್ಯಾಕ್ಸ್‌ ಇದೆ. ಅದು ಅದ್ಭುತವೂ ಆಗಿದೆ’ ಎಂದು ಮಾತು ಸೇರಿಸಿದರು ದಿವ್ಯಾ.

ನಾಯಕಿಯಾಗಿ ನಟಿಸಿರುವಅಧ್ವಿತಿ ಶೆಟ್ಟಿ ‘ನನ್ನದು ಸಿನಿಮಾದಲ್ಲಿ ಡಾಕ್ಟರ್‌ ಪ್ರೀತಿ ಪಾತ್ರ. ಇದೊಂದು ಕಾಮಿಡಿ ಮತ್ತು ಫ್ಯಾಮಿಲಿ ಓರಿಯೆಂಟೆಡ್‌ ಸಿನಿಮಾ. ಎಲ್ಲರೂ ಹೊಸಬರೇ ಈ ಚಿತ್ರದಲ್ಲಿದ್ದೇವೆ. ಹೊಸಬರ ಪ್ರಯತ್ನವನ್ನು ಬೆಂಬಲಿಸಿ’ ಎನ್ನುವ ಕೋರಿಕೆ ಇಟ್ಟರು.

ಕುದುರೆಮುಖ ಟಾಕೀಸ್‌ ಬ್ಯಾನರ್‌ನಡಿ ನಿರ್ಮಿಸಿರುವ ಈ ಸಿನಿಮಾದಲ್ಲಿಡಾ.ವಿ.ನಾಗೇಂದ್ರ ಪ್ರಸಾದ್‌ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ ಮೂರು ಹಾಡುಗಳಿವೆ. ಸತೀಶ್ ಬಾಬು ಸಂಗೀತ ನೀಡಿದ್ದಾರೆ. ಅಮರನಾಥ್‌ ಸಂಭಾಷಣೆ ಹೊಸೆದಿದ್ದಾರೆ. ಅರುಣ್‌ ಸುರೇಶ್‌ ಅವರ ಛಾಯಾಗ್ರಹಣವಿದೆ. ತಾರಗಣದಲ್ಲಿ ಶ್ರೀಧರ್‌, ಅಶೋಕ್‌, ಹೇಮಂತ್‌ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.