ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಜ್ಯೋತಿ ಪೂರ್ವಜ್ ಇದೀಗ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿದ್ಧಗೊಳ್ಳುತ್ತಿರುವ ‘ಕಿಲ್ಲರ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಇದೊಂದು ಮಹಿಳಾ ಕೇಂದ್ರಿತ ಚಿತ್ರವಾಗಿದ್ದು, ನಟನೆಯ ಜೊತೆಗೆ ನಿರ್ಮಾಣವನ್ನೂ ಜ್ಯೋತಿ ಮಾಡುತ್ತಿದ್ದಾರೆ. ಇವರಿಗೆ ಪ್ರಜಯ್ ಕಾಮತ್, ಪದ್ಮನಾಭ ರೆಡ್ಡಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಜ್ಯೋತಿ ಅವರ ಪತಿ ಪೂರ್ವಜ್ ಅವರೇ ಕಥೆ ಬರೆದು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಒಂದು ಮಹತ್ವದ ಪಾತ್ರಕ್ಕೂ ಬಣ್ಣಹಚ್ಚಿದ್ದಾರೆ ಎಂದಿದೆ ಚಿತ್ರತಂಡ. ಪ್ರೀತಿ, ಪ್ರಣಯ, ಸೇಡು ಮತ್ತು ಕೃತಕ ಬುದ್ಧಿಮತ್ತೆಯ ವಿಷಯಗಳು ಈ ಚಿತ್ರದಲ್ಲಿದ್ದು, ಚಿತ್ರವು ಸೈನ್ಸ್ ಫಿಕ್ಷನ್ ಜಾನರ್‌ನಲ್ಲಿದೆ.
‘ಸಿನಿಮಾದಲ್ಲಿ ನಾನು ನಾಲ್ಕೈದು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಆ್ಯಕ್ಷನ್ ದೃಶ್ಯಗಳೂ ಚಿತ್ರದಲ್ಲಿದೆ. ಎರಡು ಭಾಷೆಗೂ ನಾನೇ ಡಬ್ ಮಾಡಿದ್ದೇನೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ’ ಎಂದಿದ್ದಾರೆ ಜ್ಯೋತಿ.
ಚಂದ್ರಕಾಂತ್ ಕೊಲ್ಲು, ವಿಶಾಲ್‌ರಾಜ್, ಅರ್ಚನಾ ಅನಂತ್, ಗೌತಮ್ ಚಕ್ರದಾರ್ ಕೊಪ್ಪಿಸೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹೈದರಾಬಾದ್, ಮೋಹಿನಬಾದ್ ಮುಂತಾದ ಕಡೆ ಚಿತ್ರೀಕರಣ ನಡೆಸಲಾಗಿದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.