ADVERTISEMENT

‘ಧ್ರುವತಾರೆ’ಯ ರಾಜಶೇಖರ್ ವಿಧಿವಶ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 18:08 IST
Last Updated 29 ಅಕ್ಟೋಬರ್ 2018, 18:08 IST
ಎಂ.ಎಸ್. ರಾಜಶೇಖರ್
ಎಂ.ಎಸ್. ರಾಜಶೇಖರ್   

ಬೆಂಗಳೂರು:ಎಂ.ಎಸ್. ರಾಜಶೇಖರ್‌ (75)ಅವರು ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಎಂದು ಕರೆಸಿಕೊಳ್ಳುವುದಕ್ಕೂ ಮೊದಲು ಖ್ಯಾತ ಪ್ರಸಾಧನಕಲಾವಿದರಾಗಿದ್ದರು.

ಡಾ. ರಾಜ್‌ಕುಮಾರ್‌ ಅಭಿನಯದ ‘ಧ್ರುವತಾರೆ’ ಸಿನಿಮಾ ನಿರ್ದೇಶಿಸುವ ಮೂಲಕ ಯಶಸ್ವಿ ನಿರ್ದೇಶಕರ ಪಟ್ಟಿಗೆ ಮೊದಲ ಪ್ರಯತ್ನದಲ್ಲೇ ಸೇರಿದರು.

ರಾಜಶೇಖರ್ ಅವರ ತಂದೆಯ ಹೆಸರು ಎಂ.ಎಸ್. ಸುಬ್ಬಣ್ಣ.

ADVERTISEMENT

ಹದಿನೇಳು ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿದ ನಂತರ ರಾಜಶೇಖರ್‌ ‘ಧ್ರುವತಾರೆ’ ನಿರ್ದೇಶಿಸಿದರು. ಇದನ್ನು ನಿರ್ದೇಶಿಸಲು ರಾಜ್‌ ಅವರ ಪ್ರೋತ್ಸಾಹವೇ ಕಾರಣ ಎಂದು ಅವರ ‍ಆಪ್ತರು ಹೆಳುತ್ತಾರೆ.

ಇದಾದ ನಂತರ ‘ಅನುರಾಗ ಅರಳಿತು’ದಂತಹ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿದರು. ಇವರು ನಿರ್ದೇಶಿಸಿದ. ರಾಘವೇಂದ್ರ ರಾಜ್‌ಕುಮಾರ್‌ ಅಭಿನಯದ ‘ನಂಜುಂಡಿ ಕಲ್ಯಾಣ’ ದೊಡ್ಡ ಮಟ್ಟದ ಯಶಸ್ಸು ಕಂಡಿತು. ‘ಹೃದಯ ಹಾಡಿತು’ ಮತ್ತೊಂದು ಯಶಸ್ವಿ ಚಿತ್ರ.

ರಾಜಶೇಖರ್ ಅವರಿಗೆ ಕಾದಂಬರಿ ಆಧರಿಸಿದ ಸಿನಿಮಾ ನಿರ್ದೇಶನ ಮಾಡುವಲ್ಲಿ ಹೆಚ್ಚಿನ ಒಲವು ಇತ್ತು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತು. ‘ಕಲ್ಯಾಣ ರೇಖೆ’, ‘ಮಣ್ಣಿನ ದೋಣಿ’, ‘ಗಂಡು ಸಿಡಿಗುಂಡು’ ಇವರ ನಿರ್ದೇಶನದ ಇತರ ಕೆಲವು ಚಿತ್ರಗಳು.

ಶಿವರಾಜ್‌ ಕುಮಾರ್‌ ಅವರಿಗೆ ‘ಹ್ಯಾಟ್ರಿಕ್‌ ಹೀರೊ’ ಎಂಬ ಖ್ಯಾತಿ ದಕ್ಕಿದ್ದು ಅವರು ಅಭಿನಯಿಸಿದ ‘ಆನಂದ್‌’, ‘ರಥಸಪ್ತಮಿ’ ಮತ್ತು ‘ಮನಮೆಚ್ಚಿದ ಹುಡುಗಿ’ ಚಿತ್ರಗಳು ಸಾಲಾಗಿ ಸೂಪರ್‌ ಹಿಟ್ ಆದ ಕಾರಣದಿಂದ. ಈ ಮೂರು ಸಿನಿಮಾಗಳ ಪೈಕಿ ‘ರಥಸಪ್ತಮಿ’ ಮತ್ತು ‘ಮನಮೆಚ್ಚಿದ ಹುಡುಗಿ’ ಚಿತ್ರಗಳನ್ನು ನಿರ್ದೇಶಿಸಿದ್ದುರಾಜಶೇಖರ್‌.

ಉಸಿರಾಟ ತೊಂದರೆ

ಚಿತ್ರ ನಿರ್ದೆಶಕ ಎಂ.ಎಸ್‌.ರಾಜಶೇಖರ್‌ ಸೋಮವಾರ ನಿಧನರಾದರು. ಅವರಿಗೆ ಪತ್ನಿ, ಮಗಳು, ಮಗ ಇದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ನಾಗರಬಾವಿ ಸಮೀಪದ ಸೋಮನಹಳ್ಳಿಯಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.