ADVERTISEMENT

ಮುನೋಟ್ ಕನ್ನಡ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 10:09 IST
Last Updated 1 ಫೆಬ್ರುವರಿ 2019, 10:09 IST
ಮಹೇಂದ್ರ ಮುನೋಟ್‌
ಮಹೇಂದ್ರ ಮುನೋಟ್‌   

ಉದ್ಯಮಿ ಮಹೇಂದ್ರ ಮುನೋಟ್ ಅವರ ಮುಖ ಜನರಿಗೆ ಪರಿಚಿತವಾಗಿದ್ದು ಭಿತ್ತಿಪತ್ರಗಳ ಮುಖಾಂತರ. ಗೋವಿನ ಜೊತೆಗಿನ ಅವರ ಚಿತ್ರದ ಜತೆಗೆ ಗೋರಕ್ಷಣೆಯ ಕುರಿತು ವಿವಿಧ ಘೋಷವಾಕ್ಯಗಳಿರುವ ಭಿತ್ತಿಪತ್ರಗಳನ್ನು ಓದುವುದೇ ಮೋಜುದಾಯಕ ಅನುಭವ. ಈಗ ಭಿತ್ತಿಪತ್ರ ನಿಷೇಧವಾದ ಮೇಲೆ ಆ ಭಾಗ್ಯ ಇಲ್ಲವಾಗಿದೆ ಬಿಡಿ. ಅವರು ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ಅವರು ಮುಖ್ಯಪಾತ್ರದಲ್ಲಿ ನಟಿಸಿರುವ ಚಿತ್ರ ‘ಸಪ್ಲಿಮೆಂಟರಿ’. ಈ ಚಿತ್ರದಲ್ಲಿ ಅವರು ಹಳಿತಪ್ಪಿದ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವ ಒಳ್ಳೆಯ ಗುರುವಾಗಿ ಕಾಣಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಸುದ್ದಿಗೋಷ್ಠಿಯಲ್ಲಿ ಮುನೋಟ್ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವಾಗಲೂ ಸಿನಿಮಾ ಡೈಲಾಗ್‌ ಹೇಳುತ್ತಿರುವಂತೆಯೇ ಭಾಸವಾಗುತ್ತದೆ. ಇತ್ತೀಚೆಗಿನ ಒಂದು ಗೋಷ್ಠಿಯಲ್ಲಿ ‘ಕನ್ನಡದ ಬಗ್ಗೆ ಅತಿಯಾದ ಪ್ರೇಮ ಹೊಂದಿರುವ ಅವರು ತಾವೇ ಡಬ್‌ ಮಾಡಿದ್ದಾರೆ’ ಎಂದು ಪ್ರಶಂಸಿಸಲಾಯ್ತು. ಆದರೆ ಅಂದು ಮುನೋಟ್ ಆಡಿದ ಮಾತುಗಳನ್ನು ಕೇಳಿದವರಿಗೆ ಇದು ಕನ್ನಡವಾ ಎಂದು ಅನುಮಾನ ಬಂದಿದ್ದೂ ಸುಳ್ಳಲ್ಲ. ಮುನೋಟ್‌ ಎಂಬ ತಮ್ಮ ಹೆಸರಿನಲ್ಲಿನ ವ್ಯಂಜನವನ್ನು ಪ್ರತಿ ಪದದ ಮುಂದೆಯೂ ಜೋಡಿಸುತ್ತ ಹೋಗುವ ಅವರ ಕನ್ನಡ ಪದಸಿರಿವಂತಿಕೆಯನ್ನು ಅವರ ಮಾತಿನಲ್ಲಿಯೇ ಕೇಳಬೇಕು:

‘ಶತಶತಮಾನಗಳೇ ಉರುಳಲಿ... ಒಬ್ಬನೇ ಉಳಿದರೂ ಅವನ್ ಒಬ್ಬನೇ ಕನ್ನಡಿಗ್‌ ಆದರೂ... ಕನ್ನಡ್ ಉಳಿವುದು. ಕನ್ನಡ್ ಬೆಳೆವುದು. ಕನ್ನಡ್‌ ಅರಳುವುದು. ಕನ್ನಡ್‌ ಸತ್ಯ ಕನ್ನಡ್‌ ನಿತ್ಯ...

ADVERTISEMENT

ಸಿನಿಮಾಗೆ ಬರಿ ಮನರಂಜನ್ ಉದ್ದೇಸ ಅಲ್ಲ. ಅದು ವ್ಯಕ್ತಿತ್ವ್ ವಿಕಾಸನ್‌ದ ಮಾಧ್ಯಮ. ಮೊದಲು ಶಿಕ್ಷಣ್. ನಂತ್ರ ಮೋಟಿವೇಸನ್. ಜತೆಗೆ ಸಾಮಾಜಿಕ್ ಕಳ್‌ಕಳಿ ಇರಬೇಕ್‌. ಕೊನೆಯಲ್ಲಿ ಮನರಂಜನ್‌... ಇದು ಸಿನಿಮಾ ಬಗ್ ನನ್ನ ವ್ಯಾಖ್ಯಾನ್‌... ಜೈ ಕನ್ನಡ್... ಜೈ ಕರ್ನಾಟಕ್‌, ಜೈ ಭಾರತ್, ಜೈ ಗೋಮಾತಾ...’

–––

(ಕೃಪೆ: ಸುಧಾ, ಫೆ.7, 2019ರ ಸಂಚಿಕೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.