ADVERTISEMENT

ಮನೆ ಮಾರಾಟದ ಎಡವಟ್ಟು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 19:30 IST
Last Updated 14 ನವೆಂಬರ್ 2019, 19:30 IST
ರವಿಶಂಕರ್‌ ಗೌಡ
ರವಿಶಂಕರ್‌ ಗೌಡ   

‘ಮನೆ ಮಾರಾಟಕ್ಕಿದೆ’ –ಪತ್ರಿಕೆಗಳ ಜಾಹೀರಾತು ಪುಟ ತೆರೆದಾಗ ಥಟ್ಟನೆ ಕಣ್ಣಿಗೆ ಕಾಣುವ ಶೀರ್ಷಿಕೆ ಇದು. ಅಂದಹಾಗೆ ಈ ಹೆಸರಿನ ಸಿನಿಮಾವೊಂದು ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

ಇದಕ್ಕೆ ತೆಲುಗು ಸಿನಿಮಾವೊಂದು ಸ್ಫೂರ್ತಿಯಂತೆ. ಚಿತ್ರಕ್ಕೆ ಮಂಜು ಸ್ವರಾಜ್‌ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ‘ಹಾರರ್‌, ಕಾಮಿಡಿಯ ಚಿತ್ರ ಇದು. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಾವಾಗಲೂ ಕುಡಿಯುವ ಪಾತ್ರದಲ್ಲಿ ಸಾಧುಕೋಕಿಲ ಬಣ್ಣ ಹಚ್ಚಿದ್ದಾರೆ. ಚಿಕ್ಕಣ್ಣ ಅವರದು ಬಾರ್‌ನಲ್ಲಿ ಕ್ಯಾಷಿಯರ್‌ ಪಾತ್ರ. ಇರಳುಗಣ್ಣಿನ ಎಟಿಎಂ ಸೆಕ್ಯುರಿಟಿ ಗಾರ್ಡ್‌ ಆಗಿ ರವಿಶಂಕರ್‌ ಗೌಡ ಕಾಣಿಸಿಕೊಂಡಿದ್ದಾರೆ. ನಟನಾಗುವ ಹುಚ್ಚು ಹತ್ತಿಸಿಕೊಂಡಿರುವ ಪಾತ್ರದಲ್ಲಿ ಕುರಿ ಪ್ರತಾಪ್ ನಟಿಸಿದ್ದಾರೆ. ಹಾಗಾಗಿ, ಕಾಮಿಡಿಗೆ ಕೊರತೆ ಇಲ್ಲ ಎನ್ನುವುದು ಚಿತ್ರತಂಡದ ಅಂಬೋಣ.

ADVERTISEMENT

ಅದೊಂದು ಪುರಾತನ ಮನೆ. ಅದನ್ನು ಮಾರಾಟ ಮಾಡಿಸುವ ಸಂದರ್ಭ ಎದುರಾಗುತ್ತದೆ. ಈ ನಾಲ್ವರು ಪರಸ್ಪರ ಭೇಟಿಯಾಗಿ ಆ ಮನೆಗೆ ಕಾಲಿಡುತ್ತಾರೆ. ಆ ಮನೆಯೊಳಗೆ ದೆವ್ವ ಇದೆ ಎಂದು ತಿಳಿದುಕೊಂಡು ಅದನ್ನು ಹೆದರಿಸಲು ಮುಂದಾಗುತ್ತಾರೆ. ಆಗ ಏನೆಲ್ಲಾ ಅವಾಂತರ ನಡೆಯುತ್ತದೆ ಎನ್ನುವುದೇ ಚಿತ್ರದ ಕಥಾಹಂದರ.

ಶ್ರುತಿ ಹರಿಹರನ್‌ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕಾರುಣ್ಯ ರಾಮ್‌ ಕೂಡ ನಟಿಸಿದ್ದಾರೆ.

ಚಿತ್ರಕಥೆಗೆ ಅನುಗುಣವಾಗಿ ನೆಲಮಂಗಲ ಬಳಿ ದೊಡ್ಡದಾದ ಮನೆ ಸೆಟ್‌ ಹಾಕಿ ಅಲ್ಲಿಯೇ ಬಹುಪಾಲು ಚಿತ್ರೀಕರಣ ನಡೆಸಲಾಗಿದೆಯಂತೆ. ಮೂರು ಹಾಡುಗಳಿಗೆ ಅಭಿಮನ್‍ರಾಯ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ಸುರೇಶ್‍ಬಾಬು ಅವರದು. ವಿಶ್ವ ಅವರ ಸಂಕಲನವಿದೆ. ಎಸ್.ವಿ. ಬಾಬು ಬಂಡವಾಳ ಹೂಡಿದ್ದಾರೆ. ಇದು ಅವರ 16ನೇ ಸಿನಿಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.