ADVERTISEMENT

‘ಒಳಿತು ಮಾಡು ಮನುಸಾ...’ ಮರು ಜನ್ಮ ನೀಡಿದೆ..!

ಚಲನಚಿತ್ರ ನಿರ್ದೇಶಕ ನಮ್‌ ಋಷಿ ಮನದಾಳ

ಶಾಂತೂ ಹಿರೇಮಠ
Published 16 ಮಾರ್ಚ್ 2019, 19:46 IST
Last Updated 16 ಮಾರ್ಚ್ 2019, 19:46 IST
ನಮ್ ಋಷಿ
ನಮ್ ಋಷಿ   

ಸಿಂದಗಿ:‘ಒಳಿತು ಮಾಡು ಮನುಸಾ... ನೀ ಇರೋದು ಮೂರು ದಿವಸ...’ ಈ ಹಾಡು ಕೇಳದಿರುವವರು ಯಾರೂ ಇರಲಿಕ್ಕಿಲ್ಲ. ದೇಶ-ವಿದೇಶಗಳಲ್ಲೂ ಖ್ಯಾತಿ ಗಳಿಸಿದೆ.

ಈ ಹಾಡನ್ನು ಬರೆದವರು ಖಾಸಗಿ ಕಂಪನಿಯೊಂದರ ಮುಂಭಾಗ ಕಾವಲು ಕಾಯುತ್ತಿದ್ದ ಭದ್ರತಾ ಸಿಬ್ಬಂದಿ. ಅದಕ್ಕೂ ಮೊದಲು ಹೊಟೇಲ್‌ನಲ್ಲಿ ಸಪ್ಲೈರ್‌ ಆಗಿ ಕೆಲಸ ಮಾಡಿದಾತ. ಚೆಕ್ ಬೌನ್ಸ್ ಪ್ರಕರಣದಲ್ಲಿ ಜಾಮೀನಿಗೆ ₨ 20,000 ಹೊಂದಿಸಲಾಗದೇ, 11 ತಿಂಗಳು ಜೈಲು ಪಾಲಾಗಿದ್ದವರು.

ಮೂಲತಃ ರಾಯಚೂರು ಜಿಲ್ಲೆ ಮಾನ್ವಿ (ಬಾಹುಬಲಿ ಖ್ಯಾತಿಯ ರಾಜಮೌಳಿ ಊರು)ಯವರು. ಓದು ಪಿಯುಸಿ. ಇವರೇ ನಮ್ ಋಷಿ. ಸಿಂದಗಿ ಪಟ್ಟಣದ ಸಂಗಮೇಶ್ವರ ವಿದ್ಯಾಲಯ ಈಚೆಗೆ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಸಂದರ್ಭ ‘ಪ್ರಜಾವಾಣಿ’ ಜತೆ ತಮ್ಮ ಮನದಾಳದ ಮಾತುಗಳನ್ನಾಡಿದರು.

* ಒಳಿತು ಮಾಡು ಮನುಸಾ... ಹಾಡಿಗೆ ಪ್ರೇರಣೆ ಏನು ?

ADVERTISEMENT

ವರನಟ ಡಾ.ರಾಜ್‌ಕುಮಾರ್ ನಿಧನರಾದಾಗ ಅಭಿಮಾನಿಯಾಗಿ ಅವರ ಮನೆಗೆ ಹೋಗಿದ್ದೆ. ಆಗ ಡೆಡ್ ಬಾಡಿ ಎಲ್ಲಿಗೆ ಒಯ್ಯತಾರ ಎಂಬ ಮಾತು ಜನರಿಂದ ಕೇಳಿ ಬರುತ್ತಿತ್ತು. ಆ ಸಂದರ್ಭಕ್ಕೆ ದುಃಖದಲ್ಲಿ ‘ಉಸಿರು ನಿಂತ ಮ್ಯಾಲೆ ನಿನ್ನ ಹೆಸರು ಹೇಳುತಾರ, ಹೆಣ ಅನ್ನುತಾರ ಚಟ್ಟು ಕಟ್ಟುತಾರ, ನಿನ್ನ ಸುಟ್ಟು ಹಾಕುತಾರ, ಮಣ್ಣಾಗ ಉಳುತಾರ' ಎಂಬ ಸಾಲುಗಳು ಹೊರ ಹೊಮ್ಮಿದವು.

* ಸಾಹಿತ್ಯ ಕೃಷಿ ಆರಂಭಗೊಂಡಿದ್ದು ಹೇಗೆ...?

ನಾನೇನು ಸಾಹಿತಿ ಅಲ್ಲ. ಅಷ್ಟೊಂದು ಓದಿದವನೂ ಅಲ್ಲ. ಒಂದು ದಿನ ಸೆಕ್ಯುರಿಟಿ ಕೆಲಸ ಮಾಡುವಾಗ, 12 ಗಂಟೆ ನಾನೊಬ್ಬನೇ ಇರಬೇಕಾಗಿ ಬಂದಾಗ, ತೀರ ಬೇಸರಗೊಂಡು ‘ಬ್ರಹ್ಮನು ಬರೆದನು ಹಣೆಯಲ್ಲಿ, ಗಂಡನೇ ದೇವರು ನಿನಗಿಲ್ಲ, ಅವನಿಗೆ ದ್ರೋಹವ ಬಗೆದಲ್ಲಿ ಸ್ವರ್ಗಕ್ಕೆ ದಾರಿ ನಿನಗೆಲ್ಲಿ...?’ ಎಂಬ ಹಾಡು ಬರೆದೆ. ಬೆಂದವನು ಬೇಂದ್ರೆ ಎಂದರೇ, ನನ್ನ ದೃಷ್ಟಿಯಲ್ಲಿ ನೊಂದವನಿಗೆ ನೋಬಲ್. ಹಸಿವು ಕಲಿಸಿದ ಪಾಠವೇ ನನ್ನ ಸಾಹಿತ್ಯ.

ಖಾಸಗಿ ವಾಹಿನಿಯೊಂದು ನನ್ನ ಕುರಿತಾಗಿ ಪರಿಚಯಿಸಿದ ಮೇಲೆ, ಸಿದ್ಧಗಂಗಾ ಮಠದಿಂದ ಭಕ್ತರೊಬ್ಬರು ಬಂದು ಶ್ರೀಗಳ ಮೇಲೆ ಹಾಡು ಬರಿ ಎಂದು ಕೇಳಿದಾಗ ಆವಾಗ್ಗೆ ನನ್ನೆದುರು ಇದ್ದುದು ಬೇರೇನೂ ಇಲ್ಲ. ಹಸಿವು. ₨ 1000. ತಕ್ಷಣವೇ ಮಠಕ್ಕೆ ಹೋಗಿ ‘ಕಾಯಕವೇ ಕೈಲಾಸ ಅಂದರು ಬಸವ...’ ಎಂಬ ಹಾಡು ಬರೆದೆ.

ನನ್ನದು ಸಾಹಿತ್ಯ ಸಾಧನೆ ಏನೂ ಇಲ್ಲ ಅಂದ್ರೂ ಸಾಧನೆಯ ಖುಷಿ ಇದೆ. ನನ್ನ ಬದುಕೇ ಒಂದು ಶೋಕಗೀತೆಯಾಗಿತ್ತು. ಜೀವನವೇ ಬೇಡ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ ನನಗೆ ‘ಒಳಿತು ಮಾಡು ಮನುಸಾ...’ ಹಾಡು ಮರು ಜನ್ಮ ನೀಡಿತು. ಈಗ ಜೀವನ ಸಾರ್ಥಕ ಎನಿಸುತ್ತಿದೆ.

ಮಸಣ ಮತ್ತು ಜೈಲು ನನಗಿಷ್ಟವಾಗಿರುವ ಸ್ಥಳಗಳು. ನನ್ನ ಬದುಕಿಗೆ ಹೊಸ ತಿರುವು ತಂದ ಕೊಟ್ಟ ಜಾಗಗಳು.
ತಂದೆ-ತಾಯಿಯಿಲ್ಲದ ಅನಾಥನಾದರೂ ಅನಾಥನಲ್ಲ. ನನ್ನ ಜತೆ ಸಾಹಿತ್ಯ ಇದೆ. ವಿದೇಶದಿಂದ ಆಮಂತ್ರಣದ ಕರೆಗಳು ಬರುತ್ತಲಿವೆ. ಆದರೆ ನನ್ನಲ್ಲಿ ಪಾಸ್‌ಪೋರ್ಟ್ ಇಲ್ಲ. ಚೆಕ್ ಬೌನ್ಸ್ ಪ್ರಕರಣ ಪಾಸ್‌ಪೋರ್ಟ್‌ಗೆ ಅಡ್ಡಿ ಆಗಿದೆ.

* ಬ್ರಹ್ಮಚಾರಿ ಆಗಿ ಉಳಿಯಲು ಕಾರಣ ?

ಒಂದ್‌ ಹುಡಿಗಿನ್ ಪ್ರೀತಿ ಮಾಡಿದ್ದೆ. ಅವಳಿಂದ ನಿರಾಸೆ ಎದುರಾಗಿ ಭಗ್ನಪ್ರೇಮಿಯಾಗಿ ಬ್ರಹ್ಮಚಾರಿಯನ್ನಾಗಿ ಉಳಿಯುವಂತೆ ಮಾಡಿದೆ. ಋಷಿ ಮುಖದಲ್ಲಿ ಋಷಿ ಗಡ್ಡವೂ ಈ ಕಾರಣಕ್ಕಾಗಿಯೇ. ನಮ್ ಋಷಿ ಹೆಸರಿನ ಅರ್ಥವಿಷ್ಟೇ. ನಮ್ ಇದರರ್ಥ ನಮ್ಮವರು ಬುದ್ಧ ಹೇಳಿದಂತೆ ದ್ವೇಷ ಬೇಡ. ಎಲ್ರೂ ನಮ್ಮವರೇ.

* ನೀವು ನಿರ್ದೇಶಿಸಿದ ಚಿತ್ರಗಳು...?

ಸೂರ್ಯ ದಿ ಗ್ರೇಟ್, ಮರುಭೂಮಿ, ಕೊಟ್ನಲ್ಲಪೋ ಕೈ ಮತ್ತು ಇದೇ ತಿಂಗಳು ಬಿಡುಗಡೆಗೊಳ್ಳಲಿರುವ ಒನ್ ವೇ... ಒಟ್ಟು ನಾಲ್ಕು ಚಿತ್ರಗಳನ್ನು ನಿರ್ದೇಶನ ಮಾಡಿರುವೆ. ಒನ್ ವೇ ಚಿತ್ರದ ಕಥೆ, ಸಂಭಾಷಣೆ, ನಿರ್ದೇಶನ, ಹಂಚಿಕೆ ಎಲ್ಲವೂ ನಂದೇ. ಮುಂಬರುವ ಚಿತ್ರ ಪಾಯಿಂಟ್ ಔಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.