ADVERTISEMENT

ಜಳಕದ ವೇಳೆ ಸಿನಿಮಾ ಪುಳಕ!

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 12:40 IST
Last Updated 17 ಮಾರ್ಚ್ 2019, 12:40 IST
‘ಪ್ರಯಾಗ್‌ರಾಜ್‌’ನ ಪೋಸ್ಟರ್‌ ಲುಕ್‌
‘ಪ್ರಯಾಗ್‌ರಾಜ್‌’ನ ಪೋಸ್ಟರ್‌ ಲುಕ್‌   

‘ತೇರಿ ಭಾಭಿ ಹೈ ಪಗ್‌ಲೆ’ ಚಿತ್ರದ ಮೂಲಕ ನಿರ್ದೇಶಕರಾಗಿ ಬಾಲಿವುಡ್‌ ಪ್ರವೇಶಿಸಿದ ವಿನೋದ್‌ ತಿವಾರಿ ತಲೆಯಲ್ಲಿ ಹೊಸ ಸಿನಿಮಾದ ಕತೆಯೊಂದು ಓಡುತ್ತಿದೆಯಂತೆ. ಕಳೆದ ತಿಂಗಳು ಕುಂಭ ಮೇಳಕ್ಕೆ ಹೋಗಿದ್ದ ವೇಳೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ವೇಳೆ ಜ್ಞಾನೋದಯವಾದಂತೆ ಕತೆಯೊಂದು ಹೊಳೆಯಿತಂತೆ! ಅದನ್ನೇ ಸಿನಿಮಾವಾಗಿ ತೆರೆಗೆ ತರಲಿದ್ದಾರಂತೆ ತಿವಾರಿ!

ಪವಿತ್ರ ಸ್ನಾನದ ವೇಳೆ ಹೊಳೆದ ಕತೆ ಯಾವುದು ಎಂಬ ಕುತೂಹಲದ ಪ್ರಶ್ನೆ ಕಾಡದೇ ಇರದು. ಕುಂಭ ಮೇಳದ ಆಳ ವಿಸ್ತಾರಗಳನ್ನು ತೋರಿಸುವ ಮೊದಲ ಸಿನಿಮಾವನ್ನು ಬಾಲಿವುಡ್‌ಗೆ ನೀಡಲು ತಿವಾರಿ ಮುಂದಾಗಿದ್ದಾರೆ. ಬಿ ಟೌನ್‌ನ ನಿರ್ದೇಶಕರು, ನಿರ್ಮಾಪಕರು ಮತ್ತು ಹೊಸಬರೂ ಕುಂಭ ಮೇಳವನ್ನೇ ವಸ್ತುವಾಗಿಟ್ಟುಕೊಂಡು ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದುಂಟು. ಇನ್ನು ಕೆಲವು ಸಿನಿಮಾಗಳಲ್ಲಿ ಕುಂಭ ಮೇಳ ಮತ್ತು ತ್ರಿವೇಣಿ ಸಂಗಮದ ಸ್ನಾನದ ಬಗ್ಗೆ ಸನ್ನಿವೇಶಗಳನ್ನು ಸೃಷ್ಟಿಯಾಗಿದ್ದುಂಟು. ಆದರೆ ಮೇಳವನ್ನೇ ಕಥಾವಸ್ತುವಾಗುಳ್ಳ ಮೊದಲ ಸಿನಿಮಾವನ್ನು ತಿವಾರಿ ಕೊಡಲಿದ್ದಾರೆ. ಚಿತ್ರದ ಹೆಸರು ‘ಪ್ರಯಾಗ್‌ರಾಜ್‌’.

ವಿನೋದ್‌ ತಿವಾರಿ ನಿರ್ದೇಶಿಸಿದ್ದು ಒಂದೇ ಸಿನಿಮಾ. ಅದು‘ತೇರಿ ಭಾಭಿ ಹೈ ಪಗ್‌ಲೆ’. ನಿರ್ದೇಶನದ ಅನುಭವವಿಲ್ಲದಿದ್ದರೂ ಮೊದಲ ಸಿನಿಮಾದಲ್ಲೇ ಬಾಲಿವುಡ್‌ ಮಂದಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಮಾಡಿ ತೋರಿಸಿದವರು. ಕೃಷ್ಣಾ ಅಭಿಷೇಕ್‌, ರಜನೀಶ್‌ ದುಗ್ಗಲ್‌, ನಾಜಿಯಾ ಹುಸೇನ್‌ ಮತ್ತು ಮುಕುಲ್‌ ದೇವ್‌ ಪ್ರಮುಖ ಭೂಮಿಕೆಯಲ್ಲಿದ್ದ ‘ತೇರೆ ಭಾಭಿ...’ ಕಥಾ ವಸ್ತು ಮತ್ತು ಮೇಕಿಂಗ್‌ನಿಂದ ಸುದ್ದಿಯಾಗಿತ್ತು.

ADVERTISEMENT

ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವವಾಗಿ ಗುರುತಿಸಿಕೊಳ್ಳುವ ಕುಂಭ ಮೇಳದ ಬಗ್ಗೆ ಸಿನಿಮಾ ಮಾಡುತ್ತಿರುವ ಬಗ್ಗೆ ತಿವಾರಿಗೆ ಹೆಮ್ಮೆ ಇದೆ. ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಇಡೀ ಜಗತ್ತಿಗೇ ಸಾರುವ ಬಹುದೊಡ್ಡ ವೇದಿಕೆ ಕುಂಭ ಮೇಳ ಎಂಬುದು ಅವರ ನಂಬಿಕೆ.

ಸಲ್ಮಾನ್‌ ಖಾನ್‌ ನಿರ್ಮಾಣದ, ಕಿರುತೆರೆಯ ಹೆಸರಾಂತ ಕಾಮಿಡಿ ಶೋದ ಹೋಸ್ಟ್‌ ಕಪಿಲ್‌ ಶರ್ಮಾ ಕುರಿತು ಸಿನಿಮಾ ಮಾಡಲು ತಿವಾರಿ ಆಸಕ್ತಿ ವ್ಯಕ್ತಪಡಿಸಿ ಸುದ್ದಿಯಾಗಿದ್ದರು. ತಮ್ಮ ಚೊಚ್ಚಿಲ ಸಿನಿಮಾದ ನಾಯಕನಟ ಕೃಷ್ಣಾ ಅಭಿಷೇಕ್‌ ಅವರೇ ಕಪಿಲ್‌ ಶರ್ಮಾ ಪಾತ್ರ ಮಾಡಲಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ವಿನೋದ್‌ ತಿವಾರಿ ಅದರ ಬಗ್ಗೆ ಹೇಳಿಕೊಳ್ಳುತ್ತಿಲ್ಲ.

ಆದರೆ ‘ಪ್ರಯಾಗ್‌ರಾಜ್‌’ ಮಾತ್ರ ಶೀಘ್ರವೇ ಸೆಟ್ಟೇರಲಿದೆ ಎನ್ನಲಾಗಿದೆ. ’ಸಿಟಿ ಆಫ್‌ ಸಂಗಮ್‌’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಇಂಗ್ಲಿಷ್‌ನಲ್ಲಿ ಶೀರ್ಷಿಕೆಯನ್ನೂ ವಿನೋದ್‌ ತಿವಾರಿ ವಿನ್ಯಾಸ ಮಾಡಿಸಿದ್ದಾರೆ. ಆದರೆ ಶೀರ್ಷಿಕೆ ಮತ್ತು ಟ್ಯಾಗ್‌ಲೈನ್‌ ಬಿಂಬಿಸುವಂತೆ ‘ಪ್ರಯಾಗ್‌ರಾಜ್‌’ ಇಂಗ್ಲಿಷ್‌ನಲ್ಲಿ ಮೂಡಿಬರಲಿದೆಯೇ ಎಂಬುದನ್ನು ಅವರು ಹೇಳಿಲ್ಲ. ರಾಜ್‌ ನಾಸ್ಟ್ರಮ್‌ ಎಂಟರ್‌ಟೇನ್‌ಮೆಂಟ್ಸ್‌ ಬ್ಯಾನರ್‌ನಡಿ ಸಿನಿಮಾ ನಿರ್ಮಾಣವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.