ADVERTISEMENT

‘ರಾಘವೇಂದ್ರ ಸ್ಟೋರ್ಸ್‌’ ಉದ್ಘಾಟನೆಗೆ ಮತ್ತೊಂದು ಮುಹೂರ್ತ!

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 8:42 IST
Last Updated 20 ಮಾರ್ಚ್ 2023, 8:42 IST
ಚಿತ್ರದ ಪೋಸ್ಟರ್‌
ಚಿತ್ರದ ಪೋಸ್ಟರ್‌   

ನವರಸನಾಯಕ ಜಗ್ಗೇಶ್‌ ನಟನೆಯ, ಸಂತೋಷ್‌ ಆನಂದರಾಮ್‌ ಆ್ಯಕ್ಷನ್‌ ಕಟ್‌ ಹೇಳಿರುವ ಹೊಸ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್‌’ ಬಿಡುಗಡೆಗೆ ಮತ್ತೊಂದು ಮುಹೂರ್ತ ನಿಗದಿಯಾಗಿದೆ.

ಕಳೆದ ವರಮಹಾಲಕ್ಷ್ಮಿ ಹಬ್ಬಕ್ಕೆ ರಸದೌತಣ ಬಡಿಸಲು ಚಿತ್ರತಂಡ ಸಜ್ಜಾಗಿತ್ತು. 2022ರ ಆಗಸ್ಟ್‌ 5ರಂದು ರಿಲೀಸ್‌ಗೆ ಸಿನಿಮಾ ಸಜ್ಜಾಗಿತ್ತು. ಆದರೆ ಚಿತ್ರತಂಡ ಕೊನೆಯ ಕ್ಷಣದಲ್ಲಿ ಚಿತ್ರ ಬಿಡುಗಡೆಯನ್ನು ಮುಂದೂಡಿತ್ತು. ಇದೀಗ ಚಿತ್ರತಂಡವು ಮತ್ತೊಂದು ದಿನಾಂಕವನ್ನು ಘೋಷಿಸಿದ್ದು, ಮುಂದಿನ ಏಪ್ರಿಲ್‌ 28ರಂದು ‘ರಾಘವೇಂದ್ರ ಸ್ಟೋರ್ಸ್‌’ ಚಿತ್ರಮಂದಿರಗಳಲ್ಲಿ ತೆರೆಯಲಿದೆ. ಜಗ್ಗೇಶ್‌ ಅವರ ಜನ್ಮದಿನದಂದೇ ರಿಲೀಸ್‌ ದಿನಾಂಕ ಘೋಷಣೆಯಾಗಿದೆ.

ಹೊಂಬಾಳೆ ಫಿಲ್ಮ್ಸ್‌ ಹಾಗೂ ಸಂತೋಷ್‌ ಆನಂದರಾಮ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ‘ರಾಜಕುಮಾರ’ ಹಾಗೂ ‘ಯುವರತ್ನ’ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದಿದ್ದವು. ಇದಾದ ಬಳಿಕ ‘ರಾಘವೇಂದ್ರ ಸ್ಟೋರ್ಸ್‌’ ಮೂಲಕ ಮತ್ತೊಮ್ಮೆ ಹೊಂಬಾಳೆ ಫಿಲ್ಮ್ಸ್‌, ಸಂತೋಷ್‌ ಅವರ ಜೊತೆ ಕೈಜೋಡಿಸಿತ್ತು. ಇದೀಗ ಸಂತೋಷ್‌ ಅವರ ‘ಯುವ’ ಸಿನಿಮಾವನ್ನೂ ಹೊಂಬಾಳೆ ನಿರ್ಮಾಣ ಮಾಡುತ್ತಿದೆ. ಹೊಂಬಾಳೆ ಫಿಲ್ಮ್ಸ್‌ನ 12ನೇ ಚಿತ್ರವಾಗಿ ‘ರಾಘವೇಂದ್ರ ಸ್ಟೋರ್ಸ್‌’ ಸೆಟ್ಟೇರಿತ್ತು. ಈ ಮೂಲಕ ಜಗ್ಗೇಶ್‌ ಅವರು ಮೊದಲ ಬಾರಿಗೆ ಹೊಂಬಾಳೆ ಬ್ಯಾನರ್‌ನಲ್ಲಿ ನಟಿಸಿದ್ದಾರೆ. ಬ್ರಹ್ಮಚಾರಿ ಬಾಣಸಿಗನಾಗಿ ಕಾಣಿಸಿಕೊಂಡಿರುವ ಜಗ್ಗೇಶ್‌ ಅವರು, ಚಿತ್ರದ ಟೀಸರ್‌ನಲ್ಲೇ ಗಮನಸೆಳೆದಿದ್ದಾರೆ. ‘ಬದುಕಿನ ಪರಿಪೂರ್ಣ ಅರ್ಥವನ್ನು ನಗಿಸುತ್ತಾ ಬಿಡಿಸಿ ಹೇಳುವ ಅದ್ಭುತ ಅವಕಾಶ ಈ ಚಿತ್ರದ ಮುಖಾಂತರ ಸಿಕ್ಕಿದೆ’ ಎಂದಿದ್ದಾರೆ ಜಗ್ಗೇಶ್‌.

ADVERTISEMENT

‘ಭಾವನೆ, ಮನರಂಜನೆ ಹಾಗೂ ಸಂವೇದನೆಯ ಪಾಕಶಾಲೆ ಈ ರಾಘವೇಂದ್ರ ಸ್ಟೋರ್ಸ್‌. ಜಗ್ಗೇಶ್‌ ಅವರು ಇದುವರೆಗೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎನ್ನುತ್ತಾರೆ ಸಂತೋಷ್‌ ಆನಂದರಾಮ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.