ADVERTISEMENT

ಸತ್ಯ ಗೆಲ್ಲುವ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 19:30 IST
Last Updated 7 ನವೆಂಬರ್ 2019, 19:30 IST
ಪ್ರಭು ಮುಂಡ್ಕೂರ್
ಪ್ರಭು ಮುಂಡ್ಕೂರ್   

ಎರಡು ದಶಕದ ಹಿಂದೆ ರಾಮ್‌ಗೋಪಾಲ್‌ ವರ್ಮ ನಿರ್ದೇಶಿಸಿದ್ದ ಹಿಂದಿಯ ‘ಸತ್ಯ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿತ್ತು. ನಟ ಶಿವರಾಜ್‌ಕುಮಾರ್‌ ನಟಿಸಿದ್ದ ‘ಸತ್ಯ ಇನ್‌ ಲವ್‌’ ಚಿತ್ರವೂ ಗೆಲುವು ಕಂಡಿತ್ತು. ಈ ಸತ್ಯ ಕೂಡ ಗೆಲ್ಲಲಿದ್ದಾನೆ ಎಂಬ ಧೈರ್ಯದಿಂದಲೇ ಚಿತ್ರತಂಡ ವೇದಿಕೆ ಏರಿತ್ತು.

ಅದು ‘ರಿಲ್ಯಾಕ್ಸ್ ಸತ್ಯ’ ಚಿತ್ರದ ಸುದ್ದಿಗೋಷ್ಠಿ. ನವೆಂಬರ್‌ 15ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಹಾಜರಾಗಿತ್ತು. ಈ ಹಿಂದೆ ‘ಅಕಿರ’ ಚಿತ್ರ ನಿರ್ದೇಶಿಸಿದ್ದ ನವೀನ್‌ ರೆಡ್ಡಿ ಜಿ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ಹುಡುಗಿಯೊಬ್ಬಳ ಕಿಡ್ನಾಪ್‌ ಡ್ರಾಮಾ ಇದು. ಆಕೆಯನ್ನು ಅಪಹರಣ ಮಾಡಿದ ದುಷ್ಕರ್ಮಿಗಳು ಮೂರು ದಿನಗಳ ಕಾಲ ಅಜ್ಞಾತ ಸ್ಥಳವೊಂದರಲ್ಲಿ ಇಟ್ಟಿರುತ್ತಾರೆ. ಆ ಅಪಹರಣದ ಕಥೆಯನ್ನು ಎರಡು ಗಂಟೆ ಕಾಲ ತೆರೆಯ ಮೇಲೆ ಕಟ್ಟಿಕೊಡುವುದೇ ಚಿತ್ರದ ತಿರುಳು’ ಎಂದು ವಿವರಿಸಿದರು.

‘ನಗರ ಕೇಂದ್ರಿತ ಕಥೆ ಇದಾಗಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗಲಿದೆ. ದೇವನಹಳ್ಳಿ ಮತ್ತು ಬೆಂಗಳೂರಿನ ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದೆ’ ಎಂದರು.

ADVERTISEMENT

ಪ್ರಭು ಮುಂಡ್ಕೂರ್ ಈ ಚಿತ್ರದ ನಾಯಕ. ‘ಕ್ರೈಮ್‌, ಕಾಮಿಡಿ ಕಥೆ ಇದು. ಹತಾಶೆಗೆ ಒಳದಾಗದ ವ್ಯಕ್ತಿಯೊಬ್ಬ ಕೊನೆಗೆ ಜೀವನದಲ್ಲಿ ಹೇಗೆ ರಿಲ್ಯಾಕ್ಸ್‌ ಆಗುತ್ತಾನೆ ಎನ್ನುವುದೇ ಇದರ ಹೂರಣ’ ಎಂದರು.

‘ಉಗ್ರಂ’ ಮಂಜು ಅವರದು ಚಿತ್ರದಲ್ಲಿ ಭಿನ್ನವಾದ ಪಾತ್ರವಂತೆ. ಮಾನ್ವಿತಾ ಹರೀಶ್‌ ಇದರ ನಾಯಕಿ. ಮೋಹನ್‌ಕುಮಾರ್‌ ಎಚ್.ಆರ್‌., ಜಿ. ಮೋಹನ್‌ ಗೌಡ, ಚೇತನ್‌ ಆರ್‌.ಬಿ. ಬಂಡವಾಳ ಹೂಡಿದ್ದಾರೆ. ಆನಂದ್‌ ರಾಜಾ ವಿಕ್ರಮ್‌ ಅವರ ಸಂಗೀತವಿದೆ. ಛಾಯಾಗ್ರಹಣ ಯೋಗಿ ಅವರದು. ವಿಕ್ರಮ್‌ ಮೋರ್‌ ಸಾಹಸ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.