ADVERTISEMENT

₹ 24.50 ಲಕ್ಷ ಸುಲಿಗೆ: ಸಿನಿಮಾ ಖಳನಟ ರೌಡಿ ನಾರಾಯಣ ಬಂಧನ

ವಜ್ರಾಭರಣ ವ್ಯಾಪಾರಿ ಅಪಹರಣ: ₹ 15 ಲಕ್ಷ ಜಪ್ತಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 19:30 IST
Last Updated 2 ಜೂನ್ 2022, 19:30 IST
ರೌಡಿ ನಾರಾಯಣ
ರೌಡಿ ನಾರಾಯಣ   

ಬೆಂಗಳೂರು: ವಜ್ರಾಭರಣ ವ್ಯಾಪಾರಿ ಅಪಹರಿಸಿ ₹ 24.50 ಲಕ್ಷ ಸುಲಿಗೆ ಮಾಡಿದ್ದ ಆರೋಪದಡಿ ಸಿನಿಮಾ ಖಳನಟನೂ ಆದ ರೌಡಿ ನಾರಾಯಣ (55) ಸೇರಿ ಮೂವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಂಡ್ಯದ ನಿವಾಸಿಯಾಗಿರುವ ವ್ಯಾಪಾರಿ ದೂರು ನೀಡಿದ್ದರು. ರೌಡಿ ನಾರಾಯಣ ಹಾಗೂ ಆತನ ಸಹಚರರಾದ ಪಿ.ಪಿ. ಉಮೇಶ್ (37), ಕೆ. ನೂತನ್ (37) ಎಂಬುವವರನ್ನು ಬಂಧಿಸಲಾಗಿದೆ. ₹ 15 ಲಕ್ಷ ನಗದು, ಕಾರು ಜಪ್ತಿ ಮಾಡಲಾಗಿದೆ. ಬಾಕಿ ಹಣವನ್ನು ಆರೋಪಿಗಳು ಹಂಚಿಕೊಂಡು, ಖರ್ಚು ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ವ್ಯಾಪಾರಿ, ಕೆಲಸ ನಿಮಿತ್ತ ಕಾರಿನಲ್ಲಿ ಬೆಂಗಳೂರಿಗೆ ಏಪ್ರಿಲ್ 20ರಂದು ಬಂದಿದ್ದರು. ಕೆಲಸ ಮುಗಿಸಿಕೊಂಡು ರಾತ್ರಿ ಕಾರಿನಲ್ಲಿ ಮಂಡ್ಯಕ್ಕೆ ಹೊರಟಿದ್ದರು. ಶಿವಾನಂದ ವೃತ್ತದ ಬಳಿ ಕಾರು ಅಡ್ಡಗಟ್ಟಿದ್ದ ಆರೋಪಿಗಳು, ಅಪಘಾತದ ನೆಪದಲ್ಲಿ ಜಗಳ ಮಾಡಿದ್ದರು. ನಂತರ, ತಮ್ಮ ಕಾರಿನಲ್ಲಿ ವ್ಯಾಪಾರಿಯನ್ನು ಅಪಹರಿಸಿದ್ದರು.’

ADVERTISEMENT

‘ಕನಕಪುರ, ಹಾರೋಹಳ್ಳಿ ಹಾಗೂ ಸುತ್ತಮುತ್ತ ವ್ಯಾಪಾರಿಯನ್ನು ಸುತ್ತಾಡಿಸಿದ್ದ ಆರೋಪಿಗಳು, ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿದ್ದರು. ಚಾಕು ತೋರಿಸಿ ಕೊಲೆ ಬೆದರಿಕೆಯೊಡ್ಡಿದ್ದರು. ವ್ಯಾಪಾರಿ ಬಳಿಯ ₹ 24.50 ಲಕ್ಷ ನಗದು ಹಾಗೂ ವಿವಿಧ ಬ್ಯಾಂಕ್‌ಗಳ 5 ಚೆಕ್ ಪುಸ್ತಕಗಳನ್ನು ಕಿತ್ತುಕೊಂಡಿದ್ದರು. ಮಾರ್ಗಮಧ್ಯೆಯೇ ವ್ಯಾಪಾರಿಯನ್ನು ಕಾರಿನಿಂದ ತಳ್ಳಿ ಆರೊಪಿಗಳು ಪರಾರಿಯಾಗಿದ್ದರು’ ಎಂದೂ ತಿಳಿಸಿದರು.

‘ಹಲ್ಲೆಯಿಂದ ಗಾಯಗೊಂಡಿದ್ದ ವ್ಯಾಪಾರಿ, ಚಿಕಿತ್ಸೆ ಪಡೆದುಕೊಂಡ ನಂತರ ಠಾಣೆಗೆ ಬಂದು ದೂರು ನೀಡಿದ್ದರು’ ಎಂದೂ ಹೇಳಿದರು.

ಸಿನಿಮಾದಲ್ಲೂ ಅಭಿನಯ: ‘ಲಗ್ಗೆರೆಯ ಕೆಂಪೇಗೌಡ ಲೇಔಟ್ ನಿವಾಸಿಯಾದ ಆರೋಪಿ ನಾರಾಯಣ, ‘ವೀರಪರಂಪರೆ’, ‘ದುಷ್ಟ’ ಸೇರಿ ಹಲವು ಸಿನಿಮಾಗಳಲ್ಲಿ ಖಳನಟನಾಗಿ ಅಭಿನಯಿಸಿದ್ದ. ಕೊಲೆ ಸೇರಿದಂತೆ 8 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನ ಹೆಸರು ಮಹಾಲಕ್ಷ್ಮಿ ಲೇಔಟ್ ಠಾಣೆಯ ರೌಡಿ ಪಟ್ಟಿಯಲ್ಲಿತ್ತು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ಉಮೇಶ್, ಉದ್ಯಮಿಯೊಬ್ಬರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಉದ್ಯಮಿ ಸ್ನೇಹಿತರಾಗಿದ್ದ ವಜ್ರಾಭರಣ ವ್ಯಾಪಾರಿ ಬಗ್ಗೆ ತಿಳಿದುಕೊಂಡಿದ್ದ. ರೌಡಿ ನಾರಾಯಣ ಹಾಗೂ ಇತರರ ಜೊತೆ ಸೇರಿ ಅಪಹರಣಕ್ಕೆ ಸಂಚು ರೂಪಿಸಿದ್ದ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.