ADVERTISEMENT

ಸಿಡಿಯಲು ಸಜ್ಜಾದ ಸುರ್‌ ಸುರ್‌ ಬತ್ತಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 19:45 IST
Last Updated 15 ನವೆಂಬರ್ 2018, 19:45 IST
ಆರ್ವ
ಆರ್ವ   

‘ನನ್ನನ್ನು ಅಭಿಮಾನಿಗಳು ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಕಿರುತೆರೆಯಲ್ಲಿ ಗೌಡ್ರು ಅಂತಾರೆ. ಆದ್ರೆ ನಾನು ಸಿನಿಮಾಕ್ಕಾಗಿ ಆರ್ವ ಎಂದು ಹೆಸರಿಟ್ಟುಕೊಂಡಿದ್ದೇನೆ. ಇನ್ನು ಮುಂದೆ ನೀವೂ ನನ್ನನ್ನು ಇದೇ ಹೆಸರಿನಲ್ಲಿ ಕರೆಯಿರಿ. ನಾನಂತೂ ಮತ್ತೆ ಹೆಸರು ಬದಲಾಯಿಸಿಕೊಳ್ಳುವುದಿಲ್ಲ’

–ಹೀಗೆ ನಟ ಆರ್ವ ಸುರ್‌ ಸುರ್‌ ಬತ್ತಿ ಸಿಡಿದಂತೆ ಮಾತುಗಳನ್ನು ಸಿಡಿಸುತ್ತಲೇ ಇದ್ದರು.

ಮುಗಿಲ್‌ ನಿರ್ದೇಶನದ ‘ಸುರ್‌ ಸುರ್‌ ಬತ್ತಿ’ ಚಿತ್ರ ಈ ಶುಕ್ರವಾರ ತೆರೆಕಾಣುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

ADVERTISEMENT

‘ಪ್ರೇಕ್ಷಕರ ತಲೆಗೆ ಹುಳ ಬಿಡದಂತೆ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಮೂವರು ಅನಾಥರ ನಡುವೆ ಸಾಗುವ ಕಥೆ ಇದು. ಸುರ್‌ ಸುರ್‌ ಬತ್ತಿ ಹಚ್ಚಿದ ತಕ್ಷಣ ಅದು ಕಲರ್‌ಫುಲ್‌ ಆಗಿ ಕಾಣುತ್ತದೆ. ಅಂತೆಯೇ ಕಥೆಯೂ ಜನರಿಗೆ ಮನರಂಜನೆ ನೀಡಲಿದೆ’ ಎಂದರು ಆರ್ವ.

ಅವರು ‘ಶ್ರೀಮಾನ್‌ ಶ್ರೀಮತಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದ ವೇಳೆ ಈ ಚಿತ್ರದ ಕಥೆ ಕೇಳಿದ್ದರಂತೆ. ನೀವೇ ನಾಯಕನಾಗಬೇಕು ಎಂದು ನಿರ್ದೇಶಕರು ಹೇಳಿದಾಗ ಅವರಿಗೆ ನಂಬಲಿಕ್ಕೆ ಆಗಲಿಲ್ಲವಂತೆ. ಸಿನಿಮಾ ಚೆನ್ನಾಗಿ ಮೂಡಿಬಂದಿದ್ದು ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಕೋರಿಕೊಂಡರು.

ನಿರ್ದೇಶಕ ಮುಗಿಲ್, ‘ಚಿತ್ರದಲ್ಲಿ ತಾಯಿ–ಮಗ, ಅಣ್ಣ– ತಂಗಿಯ ಸೆಂಟಿಮೆಂಟ್ ಇದೆ. ಪ್ರೇಕ್ಷಕರನ್ನು ನಗಿಸಲು ಸಾಧುಕೋಕಿಲ ಇದ್ದಾರೆ’ ಎಂದರು.

ಹಿರಿಯ ನಟಿ ಊರ್ವಶಿ ನಾಯಕನ ತಾಯಿಯಾಗಿ ನಟಿಸಿದ್ದಾರೆ. ಹಲವು ವರ್ಷಗಳ ಬಳಿಕ ಅವರ ಕನ್ನಡದಲ್ಲಿ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ಮಿತ್ರಾ ಚಿತ್ರ ಬಿಡುಗಡೆಗೆ ಎದುರಾಗುತ್ತಿರುವ ಸಂಕಷ್ಟಗಳ ಸರಮಾಲೆಯನ್ನು ಬಿಡಿಸಿಟ್ಟರು. ‘ಕೆಲವು ವಿತರಕರು ಮತ್ತು ಚಿತ್ರಮಂದಿರಗಳ ನಡುವೆ ಹೊಂದಾಣಿಕೆ ಇರುತ್ತದೆ. ಅವರು ಕೇಳಿದಷ್ಟು ಹಣ ನೀಡಿದರಷ್ಟೇ ಮುಖ್ಯವಾದ ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆ ಸಾಧ್ಯ. ಈ ಚಿತ್ರಕ್ಕೂ ಅಂತಹ ಸಮಸ್ಯೆ ಎದುರಾಗಿತ್ತು. ಆ ಸೂತ್ರವನ್ನು ಬದಿಗೊತ್ತಿ ‘ಬಿ’ ಮತ್ತು ‘ಸಿ’ ವಲಯದ ಥಿಯೇಟರ್‌ಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ಬಿ.ಡಿ. ಕುಮಾರ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಲೋಕೇಶ್‌ ಸಂಗೀತ ಸಂಯೋಜಿಸಿದ್ದಾರೆ. ಎ.ಸಿ. ಮಹೇಂದರ್‌ ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.