ಐಶ್ವರ್ಯ, ಆಯುಷ್, ಉಪೇಂದ್ರ, ಪ್ರಿಯಾಂಕ
ನಟ ಉಪೇಂದ್ರ–ನಟಿ ಪ್ರಿಯಾಂಕ ಉಪೇಂದ್ರ ಅವರ ಪುತ್ರ ಆಯುಷ್ ಬೆಳ್ಳಿತೆರೆಗೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಯಶ್ ನಟನೆಯ ‘ಮೊದಲಾಸಲ’ ಸಿನಿಮಾ ನಿರ್ದೇಶಿಸಿದ್ದ ಪುರುಷೋತ್ತಮ್ ಸಿ. ಸೋಮನಾಥಪುರ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ನಾಯಕನಾಗಿ ಆಯುಷ್ ನಟಿಸಲಿದ್ದಾರೆ. ವಿಶೇಷವೆಂದರೆ ತಾರಾಜೋಡಿಯ ಪುತ್ರಿ ಐಶ್ವರ್ಯ ಉಪೇಂದ್ರ ಈ ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಈಗಾಗಲೇ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಾಗಿದೆ. ‘ದೇವಕಿ’ ಸಿನಿಮಾದಲ್ಲಿ ಐಶ್ವರ್ಯ ಸಣ್ಣ ಪಾತ್ರವೊಂದನ್ನು ನಿಭಾಯಿಸಿದ್ದರು. ಇದೀಗ ಆಯುಷ್ ಸರದಿ. ಇತ್ತೀಚೆಗಷ್ಟೇ ಮಂತ್ರಾಲಯದಲ್ಲಿ ತಮ್ಮ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆಯ ಜೊತೆ ಜೊತೆಗೇ 21ನೇ ಜನ್ಮದಿನವನ್ನು ಕುಟುಂಬದ ಸಮ್ಮುಖದಲ್ಲಿ ಆಯುಷ್ ಆಚರಿಸಿದ್ದಾರೆ. ಕಲ್ಪವೃಕ್ಷ ಮೂವೀ ಮೇಕರ್ಸ್ ಬ್ಯಾನರ್‌ನಡಿ ಅಭಿಷೇಕ್ ಎನ್.ಎಸ್. ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಸದ್ಯಕ್ಕೆ ಲೊಕೇಷನ್ ಹುಡುಕಾಟ ಹಾಗೂ ಫೋಟೊಶೂಟ್‌ಗೆ ಸಿದ್ಧತೆ ನಡೆಸಿರುವ ಚಿತ್ರತಂಡ ಮೂರ್ನಾಲ್ಕು ತಿಂಗಳಲ್ಲಿ ಚಿತ್ರೀಕರಣಕ್ಕೆ ಇಳಿಯಲಿದೆ.
‘ಅಪ್ಪನ ಬ್ಯಾನರ್‌ನಡಿ ಸಿನಿಮಾ ಮಾಡಲ್ಲ’
‘ಆಯುಷ್‌ಗೆ ಮೊದಲಿನಿಂದಲೂ ಕಲೆ ಹಾಗೂ ಸಂಗೀತದ ಬಗ್ಗೆ ಆಸಕ್ತಿ ಇತ್ತು. ನಟನೆಯತ್ತ ಹೆಚ್ಚಿನ ಒಲವು ಇರಲಿಲ್ಲ. ಕಾಲೇಜು ಶಿಕ್ಷಣದ ಬಳಿಕ ಸೃಷ್ಟಿ ಮಣಿಪಾಲ್‌ನಲ್ಲಿ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡುತ್ತಿದ್ದಾನೆ. ಇನ್ನೂ ಒಂದು ವರ್ಷದ ಓದು ಬಾಕಿ ಇದೆ. ಐಶ್ವರ್ಯಳೂ ಇದೇ ಕೋರ್ಸ್ ಮಾಡುತ್ತಿದ್ದಾಳೆ. ಈ ಸಂದರ್ಭದಲ್ಲಿ ಎಚ್.ಸಿ.ವೇಣು ಅವರು ಕಥೆಯೊಂದನ್ನು ತಂದರು. ಉಪೇಂದ್ರ ಅವರ ‘ಎ’ ಸಿನಿಮಾಗೆ, ನನ್ನ ‘ದೇವಕಿ’ ಸಿನಿಮಾಗೆ ಛಾಯಾಚಿತ್ರಗ್ರಹಣ ಮಾಡಿದ್ದ ವೇಣು ಅವರು ನಮ್ಮ ಕುಟುಂಬದಂತೆ. ಬಹಳ ಕ್ಯೂಟ್ ಆಗಿರುವ ಈ ಪ್ರೇಮಕಥೆ ಆಯುಷ್‌ಗೆ ಸೂಕ್ತವಾಗಿರಲಿದೆ ಎಂದರು. ನಮಗೂ ಕಥೆ ಇಷ್ಟವಾಯಿತು. ಮೊದಲ ಸಿನಿಮಾವನ್ನು ಅಪ್ಪನ ಬ್ಯಾನರ್‌ನಡಿ ಮಾಡುವುದಿಲ್ಲ ಎಂದು ಆಯುಷ್ ನೇರವಾಗಿ ಹೇಳಿದ್ದ. ಸದ್ಯಕ್ಕೆ ಇಂಟರ್ನ್‌ಶಿಪ್ ಮಾಡುತ್ತಿರುವ ಆಯುಷ್ ಸಿನಿಮಾಗೆ ಸಜ್ಜಾಗುತ್ತಿದ್ದಾನೆ’ ಎಂದು ಪ್ರಿಯಾಂಕ ಉಪೇಂದ್ರ ಮಾಹಿತಿ ನೀಡಿದರು.
‘ದೊಡ್ಡ ಜವಾಬ್ದಾರಿ ನಿನ್ನ ಮೇಲಿದೆ. ಒಪ್ಪಿಕೊಂಡ ಮೇಲೆ ಶ್ರಮಪಟ್ಟು ಜವಾಬ್ದಾರಿ ಪೂರ್ಣಗೊಳಿಸಬೇಕು ಎಂಬಿತ್ಯಾದಿ ಸಲಹೆಗಳನ್ನು ನಾನು, ಉಪೇಂದ್ರ ನೀಡಿದ್ದೇವೆ. ಏನೇ ಸಲಹೆ ನೀಡಿದರೂ ಅನುಭವದಿಂದಷ್ಟೇ ಕಲಿಯಲು ಸಾಧ್ಯ. ಆಯುಷ್ ಹಾಗೂ ಐಶ್ವರ್ಯಳ ಆಸಕ್ತಿ ಬೇರೆ ಬೇರೆಯಾಗಿದೆ. ಕೋರ್ಸ್ ಓದುತ್ತಿರುವ ಸಂದರ್ಭದಲ್ಲಿ ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ಆಯುಷ್ ಮಾಡಿದ್ದಾನೆ. ಅಪ್ಪನ ಸಿನಿಮಾಗಳನ್ನು ನೋಡಿದ್ದಾನೆ. ಸಿನಿಮಾದವರೇ ಆತನ ಸುತ್ತಮುತ್ತಲಿರುವಾಗ ಅದರಿಂದಲೂ ಒಂದಿಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾನೆ. ಸಿನಿಮಾ ಕ್ಷೇತ್ರಕ್ಕೆ ಹೆಜ್ಜೆ ಇಡುವಂತೆ ನಮ್ಮ ಒತ್ತಡವಿರಲಿಲ್ಲ. ನಾನೂ ಈ ಕ್ಷೇತ್ರಕ್ಕೆ ಹೆಜ್ಜೆ ಇಡಬಹುದು ಎಂದು ಆತನಿಗೇ ಅನಿಸಿರಬಹುದು. ಆತ ಕಥೆ ಬರೆಯುತ್ತಾನೆ. ನಿರ್ದೇಶನದ ಮೇಲೂ ಆಸಕ್ತಿ ಇದೆ’ ಎಂದು ಮಗನ ಮೊದಲ ಹೆಜ್ಜೆಯ ಬಗ್ಗೆ ವಿವರಿಸಿ ಪ್ರಿಯಾಂಕ ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.