ADVERTISEMENT

ವಿಕ್ಕಿ ವರುಣ್ ಹೊಸ ಅವತಾರ

ಪದ್ಮನಾಭ ಭಟ್ಟ‌
Published 13 ಅಕ್ಟೋಬರ್ 2018, 11:58 IST
Last Updated 13 ಅಕ್ಟೋಬರ್ 2018, 11:58 IST
ವಿಕ್ಕಿ ವರುಣ್
ವಿಕ್ಕಿ ವರುಣ್   

‘ಕಾಲೇಜ್ ಕುಮಾರ’ ಚಿತ್ರದ ನಂತರ ವಿಕ್ಕಿ ವರುಣ್, ಡಿ. ಸತ್ಯಪ್ರಕಾಶ್ ಬರೆದ ಕಥೆಯೊಂದಕ್ಕೆ ಬಣ್ಣ ಹಚ್ಚುತ್ತಿರುವುದು ಹಳೆಯ ಸುದ್ದಿ. ಸತ್ಯಪ್ರಕಾಶ್ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ರಘುನಂದನ ಕಾನಡ್ಕ ಈ ಚಿತ್ರದ ಮೂಲಕ ನಿರ್ದೇಶಕನಾಗುತ್ತಿದ್ದಾರೆ.

ಈಗಾಗಲೇ ಚಿತ್ರಕಥೆ ಮುಗಿದಿದ್ದು, ಸಂಭಾಷಣೆ ಬರವಣಿಗೆಯ ಕೆಲಸ ನಡೆಯುತ್ತಿದೆ. ವಿಭಿನ್ನ ಕಥಾಹಂದರವುಳ್ಳ ಈ ಚಿತ್ರದಲ್ಲಿ ವಿಕ್ಕಿಯ ಪಾತ್ರವೂ ಅಷ್ಟೇ ವಿಭಿನ್ನವಾಗಿರಲಿದೆಯಂತೆ.

‘ಇದು ನನ್ನ ನಟನಾಜೀವನದ ದೊಡ್ಡ ಬಜೆಟ್ ಸಿನಿಮಾ. ಸಾಮಾನ್ಯವಾಗಿ ಸಿನಿಮಾದಲ್ಲಿ ಒಬ್ಬ ಹೀರೊ, ಒಬ್ಬ ವಿಲನ್ ಇರುತ್ತಾರೆ. ಆದರೆ ಇಲ್ಲಿ ಅಂಥ ಸ್ಟಿರಿಯೊಟೈಪ್ ಪಾತ್ರಗಳು ಇರುವುದಿಲ್ಲ. ಮಾಮೂಲಿ ಪ್ಯಾಟರ್ನ್ ಬಿಟ್ಟು ಮಾಡಿದ ಬೇರೆಯೇ ಥರದ ಸಿನಿಮಾ ಇದು. ಇದರಲ್ಲಿ ನಾನೇ ಹೀರೊ ನಾನೇ ವಿಲನ್!’ ಎಂದು ಹೇಳಿಕೊಳ್ಳುತ್ತಾರೆ ವಿಕ್ಕಿ ವರುಣ್. ಸಿದ್ಧಮಾದರಿಯನ್ನು ಬಿಟ್ಟು ಬೇರೆ ರೀತಿಯ ಸಿನಿಮಾ ಮಾಡಬೇಕು ಎಂಬ ಕಾರಣಕ್ಕಾಗಿಯೇ ಸಾಕಷ್ಟು ಸಮಯ ತೆಗೆದುಕೊಂಡು ಚಿತ್ರಕಥೆ ಕಟ್ಟಿದ್ದಾರಂತೆ.

ADVERTISEMENT

‘ಇಂದು ಬೇರೆ ಭಾಷೆಯ ಸಿನಿಮಾಗಳು ಯಾವ ಗುಣಮಟ್ಟದಲ್ಲಿ ಬರುತ್ತಿವೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಇತ್ತೀಚೆಗೆ ಡಬ್ಬಿಂಗ್ ಸಿನಿಮಾಗಳೂ ಬರುತ್ತಿವೆ. ಅವುಗಳೊಂದಿಗೆ ಹೋರಾಟಿ ಕನ್ನಡ ಸಿನಿಮಾ ಉಳಿದುಕೊಳ್ಳಬೇಕು ಎಂದರೆ ನಾವು ಗುಣಮಟ್ಟದ ಸಿನಿಮಾ ಮಾಡಬೇಕು. ನಾವೂ ಗುಣಮಟ್ಟಕ್ಕೇ ವಿಶೇಷ ಒತ್ತುನೀಡಿ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ವಿಕ್ಕಿ.

ಮುಗ್ಧತೆಯೇ ಈ ಚಿತ್ರದ ಜೀವಾಳವಂತೆ. ‘ನಾವು ಮಗುವಾಗಿದ್ದಾಗ ಇರುವ ಮುಗ್ಧ ಮನಸ್ಸು ನಂತರದ ದಿನಗಳಲ್ಲಿ ಯಾಕೆ ಕಲುಷಿತಗೊಳ್ಳುತ್ತದೆ? ಶಿಕ್ಷಣವೂ ನಮಗೆ ನಿರ್ಮಲವಾಗಿರುವ ಪಾಠವನ್ನೇ ಹೇಳಿಕೊಡುತ್ತದೆ. ಆದರೆ ನಂತರದ ಪರಿಸರವೇ ಕಲುಷಿತಗೊಳ್ಳುತ್ತದಲ್ಲ... ಈ ರೂಪಾಂತರದ ಕುರಿತಾಗಿಯೇ ಇರುವ ಕಥೆ ಇದು’ ಎಂದು ಅವರು ವಿವರಿಸುತ್ತಾರೆ.

ಉತ್ತರ ಕರ್ನಾಟಕದ ಪಾವಗಡದಲ್ಲಿ ಮತ್ತು ಉತ್ತರ ಭಾರತದ ಕೆಲವು ಕಡೆಗಳಲ್ಲಿ ಚಿತ್ರೀಕರಣ ಮಾಡುವ ಯೋಜನೆಯನ್ನೂ ತಂಡ ಹಾಕಿಕೊಂಡಿದೆ.

‘ಸತ್ಯಪ್ರಕಾಶ್ ಅವರು ಮೊದಲು ಒನ್ ಲೈನ್ ಕಥೆ ಹೇಳಿದಾಗ ನನಗೆ ತುಂಬ ಥ್ರಿಲ್ ಆಯ್ತು. ಇದೊಂದು ಸೋಷಿಯಲ್ ಡ್ರಾಮಾ. ಫ್ಯಾಂಟಸಿಯ ಅಂಶವೂ ಇದೆ. ಲಘು ಹಾಸ್ಯದ ಧಾಟಿಯಲ್ಲಿಯೇ ಕಥೆ ಹೇಳುತ್ತ ಹೋಗುತ್ತೇವೆ. ಇಡೀ ಚಿತ್ರ ಹಳ್ಳಿಯ ವಾತಾವರಣದಲ್ಲಿ ನಡೆಯುತ್ತದೆ’ ಎಂದು ವಿವರಿಸುತ್ತಾರೆ ನಿರ್ದೇಶಕ ರಘು ಕಾನಡ್ಕ. ರಾಜ್‌ಕುಮಾರ್ ಹಿರಾನಿ ಅವರ ನೆಚ್ಚಿನ ನಿರ್ದೇಶಕ. ಲಘು ದಾಟಿಯಲ್ಲಿ ಗಂಭೀರ ವಿಷಯವನ್ನು ಹೇಳುವ ಹಿರಾನಿ ಶೈಲಿಯಿಂದ ಅವರು ಸಾಕಷ್ಟು ಪ್ರಭಾವಿತರಾಗಿದ್ದಾರೆ.

ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸಿ ಐವತ್ತು ದಿನಗಳ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಮುಗಿಸುವ ಯೋಜನೆ ನಿರ್ದೆಶಕರದ್ದು.

ಎಟಿಎಂ ಸಿನಿಮಾ ಮಾಡಿದ ಎಸ್.ವಿ. ನಾರಾಯಣ್ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ವಿಶ್ವೇಶ್‌ ಶಿವಪ್ರಸಾದ್ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.