ADVERTISEMENT

ವಿಕ್ರಮ್ ಕಾದಂಬರಿ ಆಧರಿಸಿ ವೆಬ್ ಸರಣಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 20:30 IST
Last Updated 26 ಮಾರ್ಚ್ 2020, 20:30 IST
ವಿಕ್ರಮ್ ಸೇಠ್ (ಚಿತ್ರ: ವಿಕಿಕಾಮನ್ಸ್‌)
ವಿಕ್ರಮ್ ಸೇಠ್ (ಚಿತ್ರ: ವಿಕಿಕಾಮನ್ಸ್‌)   

ವಿಕ್ರಮ್ ಸೇಠ್ ಬರೆದ ಕಾದಂಬರಿ ‘ಎ ಸೂಟೆಬಲ್‌ ಬಾಯ್’, ವೆಬ್‌ ಸಿರೀಸ್‌ ಮಾದರಿಗೆ ಬಹಳ ಸೂಕ್ತವಾಗುತ್ತದೆ ಎಂದು ನಟ ನಮಿತ್ ದಾಸ್ ಅವರು ಹಿಂದಿನಿಂದಲೂ ನಂಬಿದ್ದರು. ಈ ಕಾದಂಬರಿಯನ್ನು ವೆಬ್ ಸರಣಿಯ ರೂಪದಲ್ಲಿ ನಿರೂಪಿಸುವ ಕೆಲಸವನ್ನು ನಿರ್ದೇಶಕಿ ಮೀರಾ ನಾಯರ್‌ ಕೈಗೆತ್ತಿಕೊಂಡರು. ಅಷ್ಟೇ ಅಲ್ಲ, ನಮಿತ್ ಅವರಿಗೆ ಇದರಲ್ಲಿ ಮುಖ್ಯ ಪಾತ್ರವೊಂದನ್ನು ಕೂಡ ನೀಡಿದ್ದಾರೆ.

ಈಗ ನಮಿತ್ ಅವರಿಗೆ ತಮ್ಮದೊಂದು ಕನಸು ನನಸಾದ ಸಂಭ್ರಮ. ‘ವೇಕ್ ಅಪ್ ಸಿದ್’, ‘ಆಂಖೋ ದೇಖಿ’ಯಂತಹ ಸಿನಿಮಾಗಳು, ‘ಸುಮಿತ್ ಸಂಭಾಲ್ ಲೇಗಾ’ದಂತಹ ಕಾರ್ಯಕ್ರಮಗಳ ಮೂಲಕ ನಮಿತ್ ಅವರು ಬಾಲಿವುಡ್‌ನಲ್ಲಿ ತಮ್ಮದೇ ಆದ ನೆಲೆ ರೂಪಿಸಿಕೊಂಡಿದ್ದಾರೆ.

‘ನನ್ನ ಜೀವನದಲ್ಲಿ ನಡೆದಿರುವ ಜಾದೂಗಳಲ್ಲಿ ಸೂಟೆಬಲ್ ಬಾಯ್ ಕಾದಂಬರಿಯ ಸಂಗತಿಯನ್ನು ಉಲ್ಲೇಖಿಸಬೇಕು. ಈ ಕಾದಂಬರಿಯನ್ನು ನಾನು 2015–2016ರಲ್ಲಿ ಓದಿ ಮುಗಿಸಿದೆ. ಈ ಕಾದಂಬರಿಯನ್ನು ಆಧರಿಸಿದ ಒಂದು ವೆಬ್ ಸರಣಿ ನಿರ್ಮಾಣ ಆಗಬೇಕು ಎಂದು ನಾನು ಅಂದಿನಿಂದಲೂ ಬಯಸಿದ್ದೆ. ಹರೇಶ್ ಖನ್ನಾ ಪಾತ್ರವನ್ನು ನಿಭಾಯಿಸಬೇಕು ಎಂದು ನಾನು ಬಯಸಿದ್ದೆ ಕೂಡ. ಈಗ ಅದನ್ನೇ ನಾನು ಮಾಡಲಿದ್ದೇನೆ’ ಎಂದು ನಮಿತ್ ಅವರು ಹೇಳಿದ್ದಾರೆ.

ADVERTISEMENT

‘ಮೀರಾ ಅವರು ಬಹಳ ಸಂವೇದನಾಶೀಲ ನಿರ್ದೇಶಕಿ. ಈ ಕಾದಂಬರಿ ಆಧರಿಸಿ ಬರಲಿರುವ ಸರಣಿಯು, ಅತ್ಯಂತ ವಿಶೇಷವಾಗಿ ಇರಲಿದೆ. ವಿಕ್ರಮ್ ಸೇಠ್ ಅವರು ಬರೆದಿದ್ದನ್ನು ಮೀರಾ ಅವರು ಇನ್ನೊಂದು ಹಂತ ಮೇಲಕ್ಕೆ ಒಯ್ದಿದ್ದಾರೆ’ ಎಂದು ನಮಿತ್ ಅವರು ಮೆಚ್ಚುಗೆಯ ಮಾತು ಆಡಿದ್ದಾರೆ.

ಈ ವೆಬ್ ಸರಣಿಯಲ್ಲಿ ತಬು, ಇಶಾನ್ ಖಟ್ಟರ್, ರಸಿಕಾ ದುಗ್ಗಲ್, ರಾಮ್ ಕಪೂರ್ ಮತ್ತು ವಿಜಯ್ ವರ್ಮಾ ಕೂಡ ನಟಿಸುತ್ತಿದ್ದಾರೆ. ನಮಿತ್ ಅವರು ತಮ್ಮನ್ನು ‘ಆಕಸ್ಮಿಕ ನಟ’ ಎಂದು ಕರೆದುಕೊಳ್ಳುತ್ತಾರೆ. ಈ ವೆಬ್ ಸರಣಿಗಾಗಿ ಅವರು ಮೂರು ಹಾಡುಗಳಿಗೆ ಸಂಗೀತ ಕೂಡ ನೀಡಿದ್ದಾರೆ.

‘ನಾನು ಸಂಗೀತ ನೀಡಿರುವ ಹಾಡುಗಳನ್ನು ಈ ಸರಣಿಯ ಪಾತ್ರಗಳು ಬೇರೆ ಬೇರೆ ಸಂದರ್ಭಗಳಲ್ಲಿ ಹಾಡಲಿವೆ. ಈ ಮೂರೂ ಹಾಡುಗಳಿಗೆ ನಾನೇ ಸಂಗೀತ ನೀಡಬೇಕು ಎಂದು ಮೀರಾ ಅವರು ನನಗೆ ಸೂಚಿಸಿದ್ದರು. ನಾನು ನೀಡಿರುವ ಸಂಗೀತವನ್ನು ಮೀರಾ ಇಷ್ಟಪಟ್ಟಿದ್ದಾರೆ’ ಎನ್ನುವುದು ನಮಿತ್ ಅವರ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.