ADVERTISEMENT

ಋಣದ ಹಂಗು, ಸ್ವಾತಂತ್ರ್ಯದ ಗುಂಗು!

1944

ಗಣೇಶ ವೈದ್ಯ
Published 5 ಆಗಸ್ಟ್ 2016, 10:55 IST
Last Updated 5 ಆಗಸ್ಟ್ 2016, 10:55 IST
ಋಣದ ಹಂಗು, ಸ್ವಾತಂತ್ರ್ಯದ ಗುಂಗು!
ಋಣದ ಹಂಗು, ಸ್ವಾತಂತ್ರ್ಯದ ಗುಂಗು!   

ನಿರ್ಮಾಪಕ: ಪರಮೇಶ್ ಕೆ.ಆರ್.ಪೇಟೆ
ನಿರ್ದೇಶಕ: ಎಸ್. ಬದ್ರಿನಾಥ
ತಾರಾಗಣ: ಸುಚೇಂದ್ರ ಪ್ರಸಾದ್, ನವೀನ್ ಕೃಷ್ಣ, ಶ್ರುತಿ, ಭವ್ಯಾ, ಶಿವಾನಿ

ಎನ್.ಎಸ್. ರಾವ್ ರಚಿಸಿದ ‘ರೊಟ್ಟಿಋಣ’ ನಾಟಕದ ಸಿನಿಮಾ ರೂಪ ‘1944’. ಶೀರ್ಷಿಕೆಯೇ ಸೂಚ್ಯವಾಗಿ ಹೇಳುವಂತೆ ಇದು ಸ್ವಾತಂತ್ರ್ಯಪೂರ್ವದ ಕಥೆ ಮತ್ತು ಸ್ವಾತಂತ್ರ್ಯ ಹೋರಾಟ ತೀವ್ರವಾಗಿದ್ದ ಕಾಲಘಟ್ಟವನ್ನು ಕಟ್ಟಿಕೊಡುವ ಕಥೆ. ಸ್ವಾತಂತ್ರ್ಯ ಹೋರಾಟ ಎಂದರೆ ಬ್ರಿಟಿಷರ ದರ್ಪದ ವಿರುದ್ಧದ ಹೋರಾಟವನ್ನಷ್ಟೇ ಈ ಚಿತ್ರ ಹೇಳುವುದಿಲ್ಲ. ಆ ಸಂದರ್ಭದಲ್ಲಿ ಹೋರಾಟಗಾರರು ಮತ್ತು ಬ್ರಿಟಿಷರ ಕೈಕೆಳಗೆ ನೌಕರಿ ಮಾಡುವ ಭಾರತೀಯ ಅಧಿಕಾರಿಗಳ ಮನೆಗಳಲ್ಲಿದ್ದ ಆತಂಕ, ಗೊಂದಲವನ್ನೂ ತೆರೆದಿಡುತ್ತದೆ. ದೇಶಪ್ರೇಮಿಗಳನ್ನು ಹಿಂಸಿಸುವ ಅಧಿಕಾರಿಗಳ ಕ್ರೌರ್ಯ ಹಾಗೂ ಮಾನವೀಯತೆ ಮೆರೆಯುವ ಮಾತೃಹೃದಯದ ಔದಾರ್ಯ ಚಿತ್ರದ ತಿರುಳು.

ಸ್ವಾತಂತ್ರ್ಯ ಹೋರಾಟಗಾರರ ಮುಖಂಡ ದುರ್ಗಪ್ಪ (ನವೀನ್ ಕೃಷ್ಣ) ಜೈಲಿನಿಂದ ತಪ್ಪಿಸಿಕೊಂಡು, ಬೆನ್ನಟ್ಟಿದ ಪೊಲೀಸರನ್ನು ಕಣ್ತಪ್ಪಿಸಿ ಒಂದು ಮನೆಗೆ ಬಂದು ಸೇರುತ್ತಾನೆ. ಆ ಮನೆಯಲ್ಲಿದ್ದ ಹೆಂಗಸು ಗಿರಿಜಾ (ಶ್ರುತಿ) ಆತನಿಗೆ ಬಚ್ಚಿಟ್ಟುಕೊಳ್ಳಲು ಸಹಾಯ ಮಾಡಿ, ರೊಟ್ಟಿ ತಿನ್ನಿಸಿ ಮಾತೃಪ್ರೇಮವನ್ನು ಮೆರೆಯುತ್ತಾಳೆ. ದುರ್ಗಪ್ಪ ರೊಟ್ಟಿ ತಿನ್ನುತ್ತಲೇ ತನ್ನ ಕಥೆಯನ್ನು ಬಿಚ್ಚಿಡುತ್ತಾನೆ. ಆತನ ವಂಶದವರೆಲ್ಲರೂ ದೇಶಕ್ಕಾಗಿ ಮಡಿದವರೇ. ಆದರೆ ಆತನ ತಾಯಿ ಮಾತ್ರ (ಭವ್ಯಾ) ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಮಗನಿಗಾಗಿ ಸಾಯಬೇಕಾಗುತ್ತದೆ. ತಾಯಿಯನ್ನು ಕೊಂದ ಪೊಲೀಸ್ ಅಧಿಕಾರಿ ವಿಷಕಂಠಯ್ಯನನ್ನು (ಸುಚೇಂದ್ರ ಪ್ರಸಾದ್) ತಾನು ಸಾಯುವ ಮುನ್ನ ಹೇಗಾದರೂ ಕೊಲ್ಲಲೇಬೇಕು ಎಂಬುದು ದುರ್ಗಪ್ಪನ ಗುರಿ.

ವಿಷಕಂಠಯ್ಯನ ಹೆಂಡತಿ ಗಿರಿಜಾ. ಒಂದೆಡೆ ತನ್ನ ಗಂಡ ತನ್ನದೇ ದೇಶದ ಪ್ರಜೆಗಳ ಮೇಲೆ ದರ್ಪ ತೋರಿಸುತ್ತಾನೆ ಎಂಬ ಬೇಸರ ಆಕೆಯದ್ದಾದರೆ, ಮತ್ತೊಂದೆಡೆ ದೇಶದ ಹೋರಾಟಕ್ಕೆ ಕಿಂಚಿತ್ ಸಹಾಯ ಮಾಡುವ ಆಸೆ. ದುರ್ಗಪ್ಪ ಮನೆಗೆ ಬಂದ ವಿಚಾರವನ್ನು ಗಂಡನಿಂದ ಬಚ್ಚಿಡಲು ಆಕೆ ಎಷ್ಟು ಪ್ರಯತ್ನಪಟ್ಟರೂ ಅದು ವ್ಯರ್ಥವಾಗುತ್ತದೆ. ಕೊನೆಗೆ ದುರ್ಗಪ್ಪ ಕೊಲ್ಲಲು ಬಂದಿರುವುದು ತನ್ನ ಗಂಡನನ್ನೇ ಎಂದು ತಿಳಿದಾಗ ಗಿರಿಜಾ ಆತನನ್ನು ಕೊಲ್ಲದಿರುವಂತೆ ದುರ್ಗಪ್ಪನಲ್ಲಿ ಬೇಡುತ್ತಾಳೆ.

ಇಲ್ಲಿ ದುರ್ಗಪ್ಪ ಹೆತ್ತ ತಾಯಿಯ ಆತ್ಮಕ್ಕೆ ಶಾಂತಿ ಸಿಗುವಂತೆ ಪೊಲೀಸ್ ಅಧಿಕಾರಿಯನ್ನು ಕೊಲ್ಲುತ್ತಾನೆಯೇ ಅಥವಾ ರೊಟ್ಟಿ ತಿನ್ನಿಸಿದ ‘ಪಡೆದವ್ವ’ನ ತಾಳಿ ಭಾಗ್ಯ ಉಳಿಸಿ ರೊಟ್ಟಿಯ ಋಣ ತೀರಿಸುತ್ತಾನೆಯೇ ಎಂಬುದು ಕ್ಲೈಮ್ಯಾಕ್ಸ್.

ನಿರ್ದೇಶಕ ಬದ್ರಿನಾಥ್ ಅವರೇ ಛಾಯಾಗ್ರಹಣವನ್ನೂ ಮಾಡಿದ್ದಾರೆ. ರಾಜೇಶ್ ರಾಮನಾಥ್ ಸಂಗೀತ ಸಂಯೋಜಿಸಿದ್ದಾರೆ. ಇವೆರಡೂ ಚಿತ್ರಕ್ಕೆ ದೊಡ್ಡ ಕೊಡುಗೆಯನ್ನೇನೂ ನೀಡದಿದ್ದರೂ ನೋಡಿಸಿಕೊಳ್ಳುವ ಗುಣಕ್ಕೆ ಅಡ್ಡಿಯಂತೂ ಮಾಡುವುದಿಲ್ಲ. ಉದ್ದುದ್ದ ದೃಶ್ಯಗಳ ಸರಣಿ ನೋಡುಗನಿಗೆ ಏಕತಾನತೆ ಎನ್ನಿಸುತ್ತದೆ. ಮೂಲ ನಾಟಕ ಇರುವುದು ಕೇವಲ ನಲವತ್ತು ನಿಮಿಷಗಳು. ಅದನ್ನು ಸಿನಿಮಾಕ್ಕಾಗಿ ಒಂದೂಮುಕ್ಕಾಲು ಗಂಟೆಗೆ ಹಿಗ್ಗಿಸುವ ಒತ್ತಡದಲ್ಲಿ ಇಂಥ ದೋಷಗಳು ಆಗಿರಬಹುದು.

ಪ್ರಮುಖ ಪಾತ್ರದಲ್ಲಿರುವ ಸುಚೇಂದ್ರ ಪ್ರಸಾದ್, ನವೀನ್ ಕೃಷ್ಣ, ಶ್ರುತಿ, ಭವ್ಯಾ ನಟನೆ ಸಹಜವಾಗಿದೆ. ಹಿಗ್ಗಿಸುವ ಕಾರಣಕ್ಕೇ ಗೌರಿ (ಶಿವಾನಿ) ಎಂಬ ಪಾತ್ರ ಸೇರಿಸಿದ್ದು ಆ ಪಾತ್ರಕ್ಕೆ ನ್ಯಾಯ ದೊರಕಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿಲ್ಲ. ಆದರೆ ಪ್ರಭುತ್ವವೊಂದು ತನ್ನ ನಾಗರಿಕರನ್ನು ಆಳುವ ಪರಿಯನ್ನು ಹೇಳುವ ಈ ಕಥೆ ಇಂದಿಗೂ ಪ್ರಸ್ತುತ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT