ADVERTISEMENT

ಕಂಗೆಡಿಸುವ ಆಧುನಿಕ ಕುಟುಂಬ ಕಥನ

ವಸುಧೇಂದ್ರ, ಬೆಂಗಳೂರು
Published 24 ಫೆಬ್ರುವರಿ 2018, 15:18 IST
Last Updated 24 ಫೆಬ್ರುವರಿ 2018, 15:18 IST
ಲವ್‌ಲೆಸ್‌ ಸಿನಿಮಾದ ದೃಶ್ಯ
ಲವ್‌ಲೆಸ್‌ ಸಿನಿಮಾದ ದೃಶ್ಯ   

ಪ್ರೀತಿಸುವ ಗುಣ ಹುಟ್ಟಿನಿಂದಲೇ ಬರುವಂತಹದ್ದಲ್ಲ; ಬೆಳೆಯುತ್ತಾ ರೂಢಿಸಿಕೊಳ್ಳಬೇಕು. ‘ಮೊದಲು ಮಾನವನಾಗು’ ಎನ್ನುವ ಕವಿವಾಣಿ ಅದನ್ನೇ ಧ್ವನಿಸುತ್ತದೆ. ಸ್ವಾರ್ಥವನ್ನು ಬದಿಗೊತ್ತಿ, ಪ್ರೀತಿಸುವುದನ್ನು ಕಲಿತುಗೊಳ್ಳಬೇಕು. ಆದರೆ ಸ್ವಾರ್ಥವೇ ಬದುಕಿನ ಮೇಳಕರ್ಥ ರಾಗವಾದರೆ, ಜನ್ಯರಾಗಗಳು ಬೇರೆಯಾಗಿರಲು ಸಾಧ್ಯವೆ? ‘ಲವ್‌ಲೆಸ್‌’ ಎನ್ನುವ ರಷ್ಯಾದ ಸಿನಿಮಾ ಈ ಭಯಾನಕ ಸ್ಥಿತಿಯನ್ನು ಎದೆ ನಡುಗುವಂತೆ ಧ್ವನಿಸುತ್ತದೆ.

ಒಂದು ದೊಡ್ಡ ನಗರದ ಮದುವೆಯಾದ ಗಂಡು- ಹೆಣ್ಣು, ಅವರಿಗೊಬ್ಬ ಹನ್ನೆರಡು ವಯಸ್ಸಿನ ಮುದ್ದಾದ ಮಗ. ಈಗ ದಂಪತಿಗಳಿಬ್ಬರೂ ಬೇರೆಯಾಗಲು ನಿರ್ಧರಿಸಿದ್ದಾರೆ. ಹೆಂಡತಿಯು ಒಬ್ಬ ವಿಧುರನೊಂದಿಗೆ ಸಂಬಂಧ ಬೆಳೆಸಿದ್ದಾಳೆ. ಗಂಡ ಈಗಾಗಲೇ ಮತ್ತೊಬ್ಬಳನ್ನು ತುಂಬು ಬಸುರಿಯನ್ನಾಗಿಸಿ, ಮದುವೆಯಾಗಲು ತುದಿಗಾಲಿನಲ್ಲಿ ನಿಂತಿದ್ದಾನೆ. ಮೊದಲ ಸಂಬಂಧದ ಮಗು ಈಗ ಇಬ್ಬರಿಗೂ ಬೇಡವಾಗಿದೆ. ಅದು ಮುಂದಿನ ತಮ್ಮ ಬದುಕಿಗೆ ಹೊರೆಯಾಗುತ್ತದೆ ಎಂಬುದು ಅವರಿಬ್ಬರಿಗೂ ಗೊತ್ತು. ಆ ಜವಾಬ್ದಾರಿಯಿಂದ ಕಳಚಿಕೊಂಡು, ಇನ್ನೊಬ್ಬರ ತಲೆಗೆ ಕಟ್ಟುವ ಕೆಲಸಕ್ಕೆ ಸಿದ್ಧರಾಗಿ, ಒಬ್ಬರಿಗೊಬ್ಬರು ಕಚ್ಚಾಡುವ ಸ್ಥಿತಿ ತಲುಪಿದ್ದಾರೆ. ಪುಟ್ಟ ಮಗುವಿಗೆ ಇದೆಲ್ಲಾ ಅರ್ಥವಾಗುತ್ತಿದೆ. ಒಬ್ಬನೇ ತನ್ನ ರೂಮಿನಲ್ಲಿ ಕುಳಿತು ಕಣ್ಣೀರು ಹಾಕುತ್ತಾನೆ. ಅವನಿಗೂ ಸಾಕಾಗಿ ಬಿಡುತ್ತದೆ. ಇದ್ದಕ್ಕಿದ್ದಂತೆಯೇ ಒಂದು ದಿನ ಕಣ್ಮರೆಯಾಗುತ್ತಾನೆ.
ಮಗುವನ್ನು ಹುಡುಕುವುದಕ್ಕೆ ಸ್ವಯಂಸೇವಕ ಸಂಘವೊಂದು ಸಿದ್ಧವಾಗುತ್ತದೆ. ಅವರ ಅನ್ವೇಷಣೆಗೆ ಗಂಡ-ಹೆಂಡಿರಿಬ್ಬರೂ ಕೈಜೋಡಿಸಬೇಕು. ಇಬ್ಬರಿಗೂ ಅದು ಒಲ್ಲದ ಸಂಗತಿ. ಆದರೆ ಅಷ್ಟು ಸುಲಭವಾಗಿ ಆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಬಲವಂತದಿಂದ ತಮ್ಮ ಸಮಯವನ್ನು ಅದಕ್ಕೆ ಮೀಸಲಿಡುತ್ತಾರೆ. ಆಧುನಿಕ ಬದುಕು ಪ್ರೀತಿಸುವ ಗುಣವನ್ನು ಹೇಗೆ ಮನುಷ್ಯರಿಂದ ಕಿತ್ತುಕೊಂಡಿದೆ ಎಂಬುದನ್ನು ಈ ಅನ್ವೇಷಣೆಯುದ್ದಕ್ಕೂ ಸೂಕ್ಷ್ಮವಾಗಿ ತಿಳಿಸುವುದಕ್ಕೆ ನಿರ್ದೇಶಕರು ಪ್ರಯತ್ನಿಸಿದ್ದಾರೆ.

ಇಡೀ ಸಿನಿಮಾ ನಮ್ಮನ್ನು ಹೆಚ್ಚು ತಟ್ಟುವುದು ಅದರ ಅಂತ್ಯದ ಸನ್ನಿವೇಶಗಳಿಂದ. ನಮಗೆ ಸೂಕ್ತವೆನ್ನಿಸುವ ಹೊಸ ಬದುಕನ್ನು ಆಯ್ದುಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ಆದರೆ ಪ್ರೀತಿಸುವ ಗುಣವೇ ಇಲ್ಲದಿದ್ದ ಮೇಲೆ ಹೊಸಬದುಕು ಮತ್ತೊಮ್ಮೆ ಹಳಸದೇ ಉಳಿಯುತ್ತದೆಯೆ? ಕೆಲವೇ ದಿನಗಳಲ್ಲಿ ಮತ್ತೆ ನಾವು ಮೊದಲಿನ ಅಸಮಾಧಾನದ ಸ್ಥಿತಿಗೆ ಬಂದು ನಿಲ್ಲುತ್ತೇವೆ. ಬದುಕಿನ ಬಹುತೇಕ ಸಮಸ್ಯೆಗಳಿಗೆ ಪರಿಹಾರವೆನ್ನುವುದು ನಮ್ಮೊಳಗಿಂದಲೇ ಬರಬೇಕು. ಆದರೆ ಹೊರಗೆ ಹುಡುಕಲು ಪ್ರಯತ್ನಿಸಿ ಹತಾಶರಾಗುವ ಕತೆಯನ್ನು ಈ ಸಿನಿಮಾ ಸೂಕ್ಷ್ಮವಾಗಿ ತೋರಿಸಿಕೊಡುತ್ತದೆ.

ADVERTISEMENT

ಪ್ರೀತಿಯ ಗೈರುಹಾಜರಿಯೆನ್ನುವುದು ಕೇವಲ ಕುಟುಂಬ ಕಲಹಕ್ಕೆ ಮಾತ್ರ ಸೀಮಿತವಾಗಿ ಉಳಿಯುವುದಿಲ್ಲ. ಅದು ಇಡೀ ದೇಶದ ಸಮಸ್ಯೆಯಾಗಿ ಪರಿವರ್ತನೆಗೊಳ್ಳುತ್ತದೆ. ದೇಶ- ದೇಶಗಳು ಯುದ್ಧಕ್ಕೆ ನಿಂತು ಒಬ್ಬರನೊಬ್ಬರು ಕೊಂದು ರಕ್ತದೋಕುಳಿ ಹರಿಸುತ್ತಿರುವುದರ ಮೂಲ ಬೀಜ ಎಲ್ಲಿಯದು? ಒಂದು ದೇಶದಲ್ಲಿ ಜನರು ತಿನ್ನಲು ಆಹಾರವೇ ಇಲ್ಲದಂತೆ, ಜೀವ ತೆಗೆಯುವ ಯಮಚಳಿಯನ್ನು ಎದುರಿಸಲು ಸರಿಯಾದ ಬಟ್ಟೆಗಳೇ ಇಲ್ಲದಂತೆ ಒದ್ದಾಡುತ್ತಿರುವ ಸಮಾಚಾರವೂ ನಮ್ಮನ್ನು ಒಂದಿಷ್ಟೂ ವಿಚಲಿತಗೊಳಿಸದಂತೆ ಮಾಡುವುದರ ಮೂಲ ಯಾವುದು?
ಮಾತೃತ್ವ, ಪಿತೃಪ್ರೇಮ ಮುಂತಾದವುಗಳನ್ನು ಪ್ರಶ್ನೆ ಮಾಡದೆ ಗೌರವಿಸುವ ಗುಣ ಭಾರತೀಯರಲ್ಲಿದೆ. ಆದರೆ ಹುಟ್ಟಿದ ಮಗುವಿನಿಂದಾಗಿ ತನ್ನ ಬದುಕಿನ ಸುಖ ಹಾಳಾಯ್ತು ಎಂದು ಕೊರಗುವ ತಾಯಿ, ಮಗರಾಯ ಎರಡು ದಿನದಿಂದ ಕಣ್ಮರೆಯಾಗಿದ್ದಾನೆ ಎಂದು ತಿಳಿದರೂ ತನ್ನ ಕಾರ್ಪೊರೇಟ್‌ ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡುವ ತಂದೆ – ಇಂತಹ ಸಂಗತಿಗಳನ್ನು ನೋಡಿದಾಗ ಭಯವಾಗುತ್ತದೆ. ಅವುಗಳು ಎಲ್ಲಿಯೋ ದೂರದ ದೇಶದಲ್ಲಿ ನಡೆಯುವ ವಿದ್ಯಾಮಾನಗಳಲ್ಲ, ಇಲ್ಲೇ ನಮ್ಮ ಸುತ್ತಮುತ್ತಲೇ ನಡೆಯುತ್ತಲಿವೆ ಎಂಬ ವಾಸ್ತವ ಸಂಗತಿ ನಮ್ಮಲ್ಲಿ ಸಣ್ಣಗೆ ನಡುಕವನ್ನುಂಟು ಮಾಡುತ್ತದೆ.

ಇಡೀ ಸಿನಿಮಾವನ್ನು ಅತ್ಯಂತ ಸಾವಧಾನದಿಂದ ಮತ್ತು ಕಲಾತ್ಮಕವಾಗಿ ಕಟ್ಟಲಾಗಿದೆ. ಏಷ್ಯಾ ದೇಶಗಳಲ್ಲಿ ಕುಟುಂಬದ ಬದುಕು ಬಹಳ ಮುಖ್ಯ, ಅದೇ ಅದರ ಆರೋಗ್ಯದ ಗುಟ್ಟು ಎಂದು ನಾವೆಲ್ಲಾ ನಂಬಿಕೊಂಡಿದ್ದೇವೆ. ಆದರೆ ಆ ನಂಬಿಕೆಯೇ ಹುಸಿದುಹೋಗುವಂತೆ ಮಾಡುವ ಈ ಆಧುನಿಕ ಕುಟುಂಬ ಕಥನ ನಮ್ಮನ್ನು ಕಂಗೆಡಿಸುತ್ತದೆ.

***
ಚಿತ್ರ: ಲವ್‌ಲೆಸ್‌
ನಿರ್ದೇಶಕ: ಆಂಡ್ರೇ ಜ್ವಾಜಿಂಟೆಸೆವ್‌
ದೇಶ: ರಷ್ಯಾ
ಅವಧಿ: 127 ನಿಮಿಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.