ADVERTISEMENT

ಹೊಸತನದ ಮಾನವೀಯ ನಾಟಕ

ಸಂದೀಪ ನಾಯಕ
Published 21 ಅಕ್ಟೋಬರ್ 2016, 12:10 IST
Last Updated 21 ಅಕ್ಟೋಬರ್ 2016, 12:10 IST
ಹೊಸತನದ ಮಾನವೀಯ ನಾಟಕ
ಹೊಸತನದ ಮಾನವೀಯ ನಾಟಕ   
ರಾಮಾ ರಾಮಾ  ರೇ...
ನಿರ್ಮಾಣ: ಕನ್ನಡ ಕಲರ್ಸ್
ಕತೆ, ಚಿತ್ರಕತೆ, ನಿರ್ದೇಶನ: ಡಿ. ಸತ್ಯಪ್ರಕಾಶ್  
ಸಂಗೀತ: ವಾಸುಕಿ ವೈಭವ್
ಛಾಯಾಗ್ರಹಣ: ಲಿವಿತ್
ತಾರಾಗಣ: ನಟರಾಜ್, ಕೆ. ಜಯರಾಂ, ಧರ್ಮಣ್ಣ ಕಡೂರು, ಬಿಂಬಶ್ರೀ ನೀನಾಸಂ 
 
ಬಾಳಿನ ದಾರಿಯಲ್ಲಿ ಮನುಷ್ಯ ಪಡೆಯುವುದೇನು ಕಳೆದುಕೊಳ್ಳುವುದೇನು ಎಂಬ ಪ್ರಶ್ನೆಗೆ ಸರಳ, ಆದರೆ ವಿರಳ ಉತ್ತರ ‘ರಾಮಾ ರಾಮಾ ರೇ...’. ಈ ಸಿನಿಮಾ ಆ ದಾರಿಯ ಮೇಲೆ ನಡೆಯುವ ಮನುಷ್ಯ ಬದುಕಿನ ತಲ್ಲಣಗಳನ್ನು ಪರಿಣಾಮಕಾರಿಯಾಗಿ ದಾಖಲಿಸಿದೆ. ಇಲ್ಲಿ ಮನುಷ್ಯ ಸಂಬಂಧಗಳು, ಜೀವನದ ಅರ್ಥ–ನಿರರ್ಥಕತೆ, ಒಳ್ಳೆಯದು ಕೆಟ್ಟದರ ದ್ವಂದ್ವ – ಹೀಗೆ ಎಲ್ಲವನ್ನೂ ಗಟ್ಟಿಯಾದ ದಾರದಲ್ಲಿ ಪೋಣಿಸಿ ಎದುರಿಗೆ ಇಟ್ಟಿದ್ದಾರೆ ನಿರ್ದೇಶಕ ಡಿ. ಸತ್ಯಪ್ರಕಾಶ್.
 
ನೇಣುಗಂಬಕ್ಕೆ ಏರಬೇಕಿದ್ದ ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡು ಓಡಾಡುವ ಕತೆಯ ಎಳೆಯನ್ನು ಇದು ಇಟ್ಟುಕೊಂಡಿದೆ. ಗಲ್ಲುಶಿಕ್ಷೆಯನ್ನು ಜಾರಿಗೊಳಿಸುವ ಸಿಬ್ಬಂದಿಗೆ ತರಬೇತಿ ನೀಡಲು ವ್ಯಕ್ತಿಯೊಬ್ಬ ಜೀಪಿನಲ್ಲಿ ಹೋಗುತ್ತಿರುತ್ತಾನೆ. ಅನಿರೀಕ್ಷಿತ ಎಂಬಂತೆ ಈ ಕೈದಿ ಅವನಿಗೆ ಜೊತೆಯಾಗುತ್ತಾನೆ. ಈ ಕೈದಿಯನ್ನು ಹಿಡಿದುಕೊಟ್ಟರೆ ಸಿಗುವ ೧೦ ಲಕ್ಷ ರೂಪಾಯಿ ಬಹುಮಾನದ ಆಸೆ ಅದೇ ಜೀಪಿನಲ್ಲಿ ಮುಂದೆ ಅವರೊಂದಿಗೆ ಸಾಗುವ, ಮನೆಬಿಟ್ಟು ಓಡಿ ಬಂದಿರುವ ಯುವ ಪ್ರೇಮಿಗಳಿಗೆ. ಬಯಲುಸೀಮೆಯ ಹಸಿರು ಕಾಣದ, ನೆರಳಿನ ತುಣುಕೂ ಇಲ್ಲದ ದಾರಿಯಲ್ಲಿ ಮುದುಕನ ಮೌನ, ಅಸಹಾಯಕತೆ, ಕೈದಿಯ ಭಯ, ಆತಂಕ, ಬದುಕುವ ಆಸೆ, ಯುವ ಪ್ರೇಮಿಗಳ ಜೀವನೋತ್ಸಾಹ, ಕನಸು ಇವೆಲ್ಲವೂ ಬೆಳೆಯುತ್ತ ಹೋಗುತ್ತವೆ. ಇದರ ನಡುವೆ ಯುವ ಪ್ರೇಮಿಗಳನ್ನು ಅವರ ಮನೆಯವರಿಗೆ ಸಂಬಂಧಿಸಿದವರು ಬೆನ್ನಟ್ಟುತ್ತಾರೆ. ಮುಂದಕ್ಕೆ ಹೋಗುತ್ತಿದ್ದಂತೆ ಇದು ಹುಡುಕಾಟದ, ಬೆನ್ನಟ್ಟುವಿಕೆಯ ಸಿನಿಮಾ ಆಗುತ್ತದೆ. ಆರಂಭದಲ್ಲಿ ಸಾಮಾನ್ಯ ಎನಿಸಬಹುದಾದ ಕತೆ ಅಸಾಧಾರಣ ಮಗ್ಗಲುಗಳಲ್ಲಿ ಕುತೂಹಲಕರವಾಗಿ ಬೆಳೆಯುತ್ತದೆ. ದಾರಿ ಇಲ್ಲಿ ಬದುಕು ಚಲಿಸುವ ಸಂಕೇತ ಮಾತ್ರವಲ್ಲ, ಅದಕ್ಕೊಂದು ಕೊನೆ–ಗುರಿ ಇರುವುದನ್ನು ಸೂಚಿಸುವಂತಿದೆ.
 
ನಿರ್ದೇಶಕ ಸತ್ಯಪ್ರಕಾಶ್ ಗಾಂಧಿನಗರದ ಅನೇಕ ‘ನಿರುದ್ದೇಶಕರು’ ಮುಟ್ಟಲು ಇಷ್ಟಪಡದ, ವಿಶಿಷ್ಟವಾದ, ಎಲ್ಲ ರೀತಿಯಲ್ಲೂ ಹೊಸತನವಿರುವ ಕತೆಯನ್ನು ಇಲ್ಲಿ ನಿರೂಪಿಸಿದ್ದಾರೆ. ಸಿನಿಮಾದ ಬಹುಪಾಲು ಕತೆಯನ್ನು ಬಯಲಿನ ನಡುವೆ ಸಾಗುವ ದಾರಿಯಲ್ಲಿ ಹೇಳಿರುವ ಅವರು ಮನುಷ್ಯನ ಬದುಕಿನ ಅನಂತ ಸಾಧ್ಯತೆಗಳನ್ನು ತೆರೆಯ ಮೇಲೆ ತೆರೆದಿಟ್ಟಿದ್ದಾರೆ.
 
ಮಾತಿನ ಸಿಡಿಗುಂಡುಗಳನ್ನು ಮುಲಾಜಿಲ್ಲದೇ ಪ್ರೇಕ್ಷಕರ ಕಿವಿಗಳ ಮೇಲೆ ಎಸೆಯುವ ಎಂದಿನ ವ್ಯಾಪಾರೀ ಸಿನಿಮಾಗಳ ನಡುವೆ ಇದು ಎಲ್ಲಿಯೂ ಸಡಿಲವಾಗದ ಚಿತ್ರಕತೆ, ಚುರುಕಾದ ಸಂಭಾಷಣೆ, ನವಿರಾದ ಹಾಸ್ಯದಿಂದ ನೋಡಿಸಿಕೊಳ್ಳುತ್ತದೆ. ಬದುಕಿನ ದಾರಿಯ ಈ ಮಾನವೀಯ ನಾಟಕದಲ್ಲಿ ಕಾಣಿಸಿಕೊಂಡ ನಟರಾದ ಕೆ. ಜಯರಾಂ, ನಟರಾಜ್ ಸಿನಿಮಾದ ಎರಡು ಕಣ್ಣುಗಳು. ಸಿನಿಮಾದ ನಿಜವಾದ ಕಣ್ಣಾದ ಛಾಯಾಗ್ರಾಹಕ ಲಿವಿತ್, ಕರ್ನಾಟಕದ ಬಯಲುಸೀಮೆಯನ್ನು ಅದರ ಹಲಬಗೆಯ ಬಣ್ಣಗಳಿಂದ ಕೂಡಿದ ವಿನ್ಯಾಸಗಳಲ್ಲಿ ಹಿಡಿದುಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಕೆಲಸ ಮಾಡಿರುವ ತಂತ್ರಜ್ಞರ ಈ ಮನಮುಟ್ಟುವ ಪ್ರಯತ್ನ ಗಂಭೀರವಾಗಿದೆ ಮಾತ್ರವಲ್ಲ, ಮನರಂಜನೆಯನ್ನೂ ಕೊಡುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.