ADVERTISEMENT

ಸಡ್ಡು ಹೊಡೆದ ಹುಡುಗಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST
‘ದೊಡ್ಡುಲಿ ಪೋಡಿನ ಕಲ್ಲಿ’ ನಾಟಕದ ತಾಲೀಮಿನ ದೃಶ್ಯ
‘ದೊಡ್ಡುಲಿ ಪೋಡಿನ ಕಲ್ಲಿ’ ನಾಟಕದ ತಾಲೀಮಿನ ದೃಶ್ಯ   

ನಾಗರಿಕ ಜಗತ್ತಿನಿಂದ ದೂರ ಇರುವ ಆದಿವಾಸಿಗಳ ಬದುಕಿನ ಪರಿಚಯ ನಗರವಾಸಿಗಳಿಗೆ ಅಷ್ಟಾಗಿ ಇಲ್ಲ. ಆದರೆ ನಮ್ಮ ದೇಶದ ಎಷ್ಟೋ ಆದಿವಾಸಿಗಳು ದೇಶ ರಕ್ಷಿಸಲು ಶ್ರಮಿಸುತ್ತಿದ್ದಾರೆ, ಸಮಾಜಸೇವೆಗಾಗಿ ಜೀವತೆತ್ತಿದ್ದಾರೆ. ಇಂಥವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಕೊಪ್ಲುಮನೆ ಕಲಾಕೂಟ ವಿಶಿಷ್ಟ ನಾಟಕವೊಂದನ್ನು ರಂಗಭೂಮಿಗೆ ತಂದಿದೆ.

ಜನರಕ್ಷಣೆಗೆ ರಾಜಕಾರಣಿಯೇ ಆಗಬೇಕಿಲ್ಲ. ದೈವಭಕ್ತಿಗೆ ಮಂತ್ರಘೋಷಗಳ ಮೊರೆಹೋಗಬೇಕಿಲ್ಲ, ರಾಜಕೀಯದ, ಕಾನೂನು ಅರಿವಿನ ಅಗತ್ಯವಿಲ್ಲ ಎಂಬುದನ್ನು ರಂಗಭೂಮಿಯ ಮೂಲಕ ನಿರೂಪಿಸಲು ಯತ್ನಿಸುತ್ತಿದೆ.

ಶುಕ್ರವಾರ (ಫೆ.9) ಸಂಜೆ 7.30ಕ್ಕೆ ಕೆ.ಎಚ್‌.ಕಲಾಸೌಧದಲ್ಲಿ ಪ್ರದರ್ಶನಗೊಳ್ಳುತ್ತಿರುವ ‘ದೊಡ್ಡುಲಿ ಪೋಡಿನ ಕಲ್ಲಿ’ ನಾಟಕ ಹಲವು ಕಾರಣಗಳಿಂದ ವಿಭಿನ್ನ ಎನಿಸುತ್ತದೆ. ಕಲ್ಲಿ ಎಂಬ ಅನಕ್ಷರಸ್ಥ ಆದಿವಾಸಿ ಮಹಿಳೆ ಪೋಡಿಯನ್ನು (ಹಾಡಿ) ಹೇಗೆ ರಕ್ಷಿಸಿಕೊಳ್ಳುತ್ತಾರೆ ಎನ್ನುವುದು ಈ ನಾಟಕದ ಕೇಂದ್ರ. ಭಯೋತ್ಪಾದಕರ ದಾಳಿಯಿಂದ ತನ್ನವರನ್ನೆಲ್ಲಾ ಕಳೆದುಕೊಂಡು ಅವರ ವಿರುದ್ಧ ಪ್ರತಿಭಟಿಸುವ ದನಿ ಅಡಗಿದಾಗ, ಆಕೆಯ ಜಾಣ್ಮೆ ಹಾಗೂ ಮನದಲ್ಲಿ ಆರಾಧಿಸುವ ದೈವವೇ ಆಕೆಗೆ ಊರನ್ನು ರಕ್ಷಿಸಲು ನೆರವಾಗುತ್ತದೆ.

ADVERTISEMENT

ದೊಡ್ಡುಲಿ ಎಂಬ ಪೋಡಿಯ ಮೇಲೆ ಭಯೋತ್ಪಾದಕರು ದಾಳಿ ಮಾಡಿ ಅಲ್ಲಿನ ಮುಗ್ಧ ಜನರನ್ನು ಕೊಲ್ಲುತ್ತಾರೆ. ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಕಲ್ಲಿಯ ಮೇಲೆ ಅತ್ಯಾಚಾರ ನಡೆಯುತ್ತದೆ. ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವ ಕಲ್ಲಿ ಭಯೋತ್ಪಾದಕರ ಸಂಚನ್ನು ನಿಧಾನವಾಗಿ ಅರ್ಥೈಸಿಕೊಳ್ಳುತ್ತಾಳೆ. ಅವರಿಂದ ತಪ್ಪಿಸಿಕೊಂಡು ಪೋಲಿಸರ ಬಳಿಗೆ ತೆರಳಿ ದೂರು ನೀಡಿ ಕೊನೆಗೆ ತನ್ನ ನೋವು, ಹತಾಶೆಗೆ ಪ್ರತೀಕಾರ ಎಂಬಂತೆ ಭಯೋತ್ಪಾದಕರನ್ನು ಪೊಲೀಸರ ತುಪಾಕಿಯಿಂದ ಗುಂಡುಹಾರಿಸಿ ಕೊಲ್ಲುತ್ತಾಳೆ.

ನಾಟಕವನ್ನು ಕಾಲ್ಪನಿಕ ಪಾತ್ರಗಳು ಹಾಗೂ ಊರಿನ ಹೆಸರುಗಳೊಂದಿಗೆ ಹೆಣೆಯಲಾಗಿದೆ. ಆದಿವಾಸಿಗಳ ಉಡುಪು, ಪೋಡಿಯಲ್ಲಿನ ಹಬ್ಬದ ಸಂಭ್ರಮಗಳು ರಂಗದ ಮೇಲೆ ಮೇಳೈಸಲಿವೆ.

ನಾಟಕವನ್ನು ಕೆ.ಎಂ. ವಿಜಯಲಕ್ಷ್ಮಿ ಅವರು ರಚಿಸಿದ್ದಾರೆ. ಶರತ್‌ ಪರ್ವತವಾಣಿ ಹಾಗೂ ಡಾ.ರಾಜ್‌ಶ್ರೀ ಅವರ ನಿರ್ದೇಶನ ಮತ್ತು ವಿನ್ಯಾಸ ನಾಟಕಕ್ಕಿದೆ. ನಿಖಿಲ್ ಪಾರ್ಥಸಾರಥಿ ಅವರು ಸಂಗೀತ ನೀಡಿದ್ದರೆ, ರಾಜ್‌ಶ್ರೀ ಅವರ ಬೆಳಕಿನ ವಿನ್ಯಾಸವಿದೆ.

‘7 ವರ್ಷಗಳ ಹಿಂದೆ ಉತ್ತರ ಭಾರತದ ಒಂದು ಹಳ್ಳಿಯಲ್ಲಿ ನಡೆದ ಘಟನೆಯನ್ನು ಆಧರಿಸಿ ಈ ನಾಟಕ ರಚಿಸಲಾಗಿದೆ. ಆದರೆ ನಾಟಕದ ಎಲ್ಲ ಪಾತ್ರಗಳು ಹಾಗೂ ಸ್ಥಳಗಳು ಕಾಲ್ಪನಿಕವಾಗಿವೆ’ ಎನ್ನುತ್ತಾರೆ ವಿಜಯಲಕ್ಷ್ಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.