ADVERTISEMENT

ಅಸಹನೆಯ ಕುದಿಗೆ ಕಲಾತ್ಮಕ ಪ್ರತಿರೋಧ

ಮಂಜುಶ್ರೀ ಎಂ.ಕಡಕೋಳ
Published 21 ಅಕ್ಟೋಬರ್ 2018, 19:30 IST
Last Updated 21 ಅಕ್ಟೋಬರ್ 2018, 19:30 IST
‘ದೊಹ್ರಿ ಜಿಂದಗಿ’ ನಾಟಕದ ದೃಶ್ಯ
‘ದೊಹ್ರಿ ಜಿಂದಗಿ’ ನಾಟಕದ ದೃಶ್ಯ   

‘ಪ‍್ರಗತಿಯ ಮೊದಲ ಸಂಕೇತವೆಂದರೆ ಸೆನ್ಸಾರ್‌ಶಿಪ್ ಅನ್ನು ತೆಗೆದು ಹಾಕುವುದು’ – ಜಾರ್ಜ್ ಬರ್ನಾಡ್ ಷಾ ಬಹು ಹಿಂದೆಯೇ ಹೇಳಿದ್ದ ಮಾತಿದು. ಕಾಲ ಯಾವುದಾದರೇನು ನ್ಯಾಯದ ಪರ ಪ್ರಶ್ನಿಸುವ ದನಿಗಳನ್ನು ಅಡಗಿಸುವ ಪ್ರಯತ್ನ ಸದಾ ಕಾಲ ಇದ್ದದ್ದೇ. ರಂಗಭೂಮಿಯಲ್ಲೂ ಇಂಥ ದನಿಗಳನ್ನು ಮುಚ್ಚಿಹಾಕುವ ಪ್ರಯತ್ನ ನಿನ್ನೆ ಮೊನ್ನೆಯದ್ದಲ್ಲ. ಶೇಕ್ಸ್‌ಪಿಯರ್‌ನಿಂದ ಹಿಡಿದು ಇತ್ತೀಚಿನ ‘ಶಿವ’ ನಾಟಕದ ತನಕ ಸಾಮಾಜಿಕ ಪರವಾಗಿರುವ ದನಿಗಳನ್ನು ಅಡಗಿಸುವ ಯತ್ನ ನಡೆಯುತ್ತಲೇ ಇದೆ. ಅಂಥ ದನಿಗಳಿಗೆ ಸಾಂಸ್ಕೃತಿಕ ಪ್ರತಿರೋಧದ ಮೂಲಕ ತನ್ನ ದನಿಯನ್ನು ದಾಟಿಸುವ ಪ್ರಯತ್ನವನ್ನು ರಂಗಭೂಮಿ ಸದಾ ಕಾಲ ಮಾಡುತ್ತಲೇ ಬಂದಿದೆ.

ಜಗತ್ತಿನಾದ್ಯಂತ ಸಾಮಾಜಿಕ, ಧಾರ್ಮಿಕ, ಜಾತೀಯತೆ ಸೇರಿದಂತೆ ನಾನಾ ಕಾರಣಗಳಿಗಾಗಿ ನಿಷೇಧಕ್ಕೊಳಗಾದ ಅಪರೂಪದ ನಾಟಕಗಳು ಈ ಬಾರಿಯ ರಂಗಶಂಕರ ನಾಟಕೋತ್ಸವದಲ್ಲಿ ಪ್ರದರ್ಶನವಾಗಲಿವೆ. ಇದೇ 27ರಿಂದ ನವೆಂಬರ್ 4ರ ತನಕ ರಂಗಶಂಕರದಲ್ಲಿ ವಿವಿಧ ಭಾಷೆಯ ವೈವಿಧ್ಯಮಯ ನಾಟಕಗಳು ಪ್ರೇಕ್ಷಕರನ್ನು ರಂಜಿಸಲಿವೆ.

14 ವರ್ಷಗಳಿಂದ ರಂಗಪ್ರೀತಿಯನ್ನು ಮೆರೆಯುತ್ತಿರುವ ರಂಗಶಂಕರಕ್ಕೀಗ ಜಾಗತಿಕ ರಂಗಭೂಮಿಯಲ್ಲಿ ಮುಖ್ಯ ಸ್ಥಾನ ದಕ್ಕಿದೆ. ನಮ್ಮ ಸಂಸ್ಕೃತಿಯ ಮೂಲ ಬೇರಿನ ಸಂಪರ್ಕವನ್ನು ಕಾಪಾಡಿಕೊಳ್ಳುತ್ತಲೇ ಜಾಗತಿಕ ಶ್ರೇಣಿಯ ರಂಗಭೂಮಿಯನ್ನು ಹುಟ್ಟು ಹಾಕಬೇಕೆಂಬ ಅಭೀಪ್ಸೆಯೊಂದಿಗೆ ಬೆಳೆದ ರಂಗ ಶಂಕರ ಈಗ ಸಾಕಷ್ಟು ದಾರಿ ಕ್ರಮಿಸಿದೆ. ಪ್ರೇಕ್ಷಕರಿಗೆ ನಾಟಕ ಮನರಂಜನೆಯನ್ನೂ ಮೀರಿ ಅಲೋಚನೆಯ ತಿದಿಯನ್ನು ಒತ್ತುವ ಕ್ರಿಯೆಯಾಗಬೇಕೆಂದು ರಂಗಶಂಕರದ ಒತ್ತಾಸೆ. ಈ ಆಶಯಕ್ಕೆ ಪೂರಕವೆಂಬಂತೆ ‘ರಂಗವೇರದೇ ಉಳಿದು ಬಿಡುತ್ತಿದ್ದ ನಾಟಕಗಳು’ ಶೀರ್ಷಿಕೆಯಲ್ಲಿ ಈ ಬಾರಿಯ ನಾಟಕೋತ್ಸವ ಆಯೋಜನೆಗೊಂಡಿರುವುದು ವಿಶೇಷ.

ADVERTISEMENT

‘ನಾಟಕಗಳ ಸದ್ದಡಗಿಸುವುದೆಂದರೆ ವಿಕಸನದ ಹಾದಿಯನ್ನೇ ಮುಚ್ಚಿದಂತೆ. ಇದರಿಂದ ಭವಿಷ್ಯಕ್ಕೆ ಧಕ್ಕೆ ಬರುತ್ತದೆ. ಮನುಷ್ಯನ ಮುಂದಿನ ಹಾದಿ ಮಸುಕಾಗುತ್ತದೆ. ದೃಷ್ಟಿಕೋನಗಳನ್ನು, ಇತಿಹಾಸವನ್ನು ಪ್ರಶ್ನಿಸಲು ನಿಂತ ನಾಟಕಗಳು ಹಲವಾರಿವೆ. ಇವತ್ತು ಅವುಗಳಲ್ಲಿ ಕೆಲವಕ್ಕೆ ನಮ್ಮ ಪ್ರಜ್ಞೆಯ ಮೂಲಕ ವಿವರವಾಗಲು ಸಮಯ ಸೂಕ್ತವಾಗಿದೆ ಎಂದು ನಂಬುತ್ತೇವೆ. ಹೀಗೇ ಹುಟ್ಟಿದ್ದು ಈ ನಾಟಕೋತ್ಸವದ ಮುಖ್ಯ ಹೊಳಹು. ಹಳೆಯ ನಾಟಕಗಳನ್ನು ಇಂದಿನ ಪ್ರಜ್ಞೆಯ ಮೂಲಕ ನೋಡುತ್ತ ಹೊಸದಾಗಿ ಆವಾಹಿಸಿಕೊಳ್ಳುವ ಪ್ರಯತ್ನ ಇದು’ ಎನ್ನುತ್ತಾರೆ ನಾಟಕೋತ್ಸವ ನಿರ್ದೇಶಕ ವಿವೇಕ್ ಮದನ್.

ಉತ್ಸವದಲ್ಲಿ ಅಹಲ್ಯಾ ಬಿ.ಡಿ. (ಕನ್ನಡ), ರಾಜೇಂದ್ರ ಲಕ್ಷ್ಮಿ (ನೇಪಾಳಿ), ದೊಹ್ರಿ ಜಿಂದಗಿ (ಹಿಂದಿ, ಮಾರ್ವಾಡಿ), ಅನಿಮಲ್ ಫಾರ್ಮ್ (ಇಂಗ್ಲಿಷ್), ಐ ಆ್ಯಮ್ ನಾಟ್ ದೇರ್ (ಕನ್ನಡ, ಹಿಂದಿ, ಇಂಗ್ಲಿಷ್), ಅಮ್ಮಿ ಜಾನಿ (ಉರ್ದು, ಕನ್ನಡ), ಚಾಂಡಾಲ ಇಂಪ್ಯೂರ್ (ತಮಿಳು), ಮಹಿಷ್ (ಹಿಂದಿ), ರಾಕ್ಷಸ್ (ಹಿಂದಿ) ನಾಟಕಗಳ ಪ್ರದರ್ಶನವಾಗಲಿವೆ. ಚರ್ಚೆ, ಸಂವಾದ ಮತ್ತು ಪ್ರತಿದಿನ ಮಧ್ಯಾಹ್ನ ಚಲನಚಿತ್ರಗಳ ಪ್ರದರ್ಶನವೂ ನಡೆಯಲಿದೆ.

ನಾಟಕದ ಟಿಕೆಟ್‌ಗಳು ರಂಗಶಂಕರದಲ್ಲಿ ದೊರೆಯುತ್ತವೆ. ಆನ್‌ಲೈನ್ ಟಿಕೆಟ್‌ಗಳಿಗಾಗಿ bookmyshow.com ನೋಡಿ

ವಿರೋಧದ ದನಿಗಳಿಗೆ ರಂಗದಲ್ಲಿ ಉತ್ತರ
‘ಎಲ್ಲಾ ನಾಟಕಗಳು ಒಂದಲ್ಲ ಒಂದು ಕಾಲದಲ್ಲಿ ನಿಷೇಧಕ್ಕೊಳಗಾದವು. ಇದಕ್ಕೆ ಕಾರಣ ಇಂಥದ್ದೇ ಅಂತೇನಿಲ್ಲ. ಕಾಲಾಂತರದಲ್ಲಿ ಈ ನಾಟಕಗಳು ಮತ್ತೆ ರಂಗಪ್ರದರ್ಶನ ಕಂಡಿವೆ. ಜಗತ್ತಿನೆಲ್ಲೆಡೆ ನಿಷೇಧಕ್ಕೊಳಗಾದ ಅಪರೂಪದ ನಾಟಕಗಳು ಈ ಬಾರಿಯ ರಂಗಶಂಕರ ನಾಟಕೋತ್ಸವದ ವಿಶೇಷ. ಯಾವತ್ತೋ ನಿಷೇಧಕ್ಕೊಳಗಾದ ನಾಟಕಗಳು ಈಗಿನ ಕಾಲಕ್ಕೂ ಪ್ರಸ್ತುತವಾಗುವಂತಿವೆ. ದೇಶದ ಸಮಕಾಲೀನ ಸಂದರ್ಭಗಳಿಗೆ ಪ್ರಸ್ತುತವಾಗುವಂತೆ ಈ ನಾಟಕಗಳು ರೂಪಾಂತರವಾಗಿವೆ. ವಿರೋಧದ ದನಿಗಳು ಯಾವತ್ತೂ ಇರುತ್ತವೆ. ಅಂಥ ದನಿಗಳಿಗೆ ಸಾಂಸ್ಕೃತಿಕ ಪ್ರತಿರೋಧದ ಮೂಲಕ ಉತ್ತರ ನೀಡುವಂತಿವೆ ಈ ನಾಟಕಗಳು’


-ಸುರೇಂದ್ರನಾಥ್ ಎಸ್., ಸೃಜನಾತ್ಮಕ ನಿರ್ದೇಶಕ, ರಂಗಶಂಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.