ADVERTISEMENT

‘ತಾತಾ ಮಾತಾಡು’ ಎನ್ನುವ ನಟನ ಪುಟಾಣಿಗಳು...

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 19:45 IST
Last Updated 25 ಜನವರಿ 2019, 19:45 IST
ತಾತಾ ಮಾತಾಡು ನಾಟಕದ ದೃಶ್ಯ
ತಾತಾ ಮಾತಾಡು ನಾಟಕದ ದೃಶ್ಯ   

ಓಹಿಲ ಎಂ.ಪಿ.

ವಾರಾಂತ್ಯಕ್ಕೊಂದು ನಾಟಕ ಮೈಸೂರಿಗರಿಗಂತೂ ಬೇಕೇ ಬೇಕು. ಸಾಂಸ್ಕೃತಿಕ ನಗರಿ ಇದೀಗಷ್ಟೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಂಭ್ರಮದಿಂದ ಮಿಂದೆದ್ದಿದೆ. ವಾರಾಂತ್ಯ ನಾಟಕಗಳು, ರಂಗ ಚಟುವಟಿಕೆಗಳು ನಗರದಾದ್ಯಂತ ಮತ್ತೆ ರಂಗುಗೊಂಡಿವೆ. ರಾಮಕೃಷ್ಣ ನಗರದ ‘ನಟನ’ ಶಾಲೆಯ ವಾರಾಂತ್ಯ ರಂಗಶಾಲೆಯ ಪುಟಾಣಿಗಳು ತಮ್ಮ ಎರಡನೇ ನಾಟಕವನ್ನು ಪ್ರದರ್ಶಿಸಲಿದ್ದಾರೆ.

ಭಾನುವಾರ ಮತ್ತು ಬುಧವಾರ (ಜ.27, 30) ಡಾ.ಟಿ.ಗೋವಿಂದರಾಜು ವಿರಚಿತ ‘ತಾತಾ ಮಾತಾಡು’ ನಾಟಕವನ್ನು ‘ರಾಮು ನಟನ’ ಅವರ ನಿರ್ದೇಶನದಲ್ಲಿ ನಟನ ರಂಗಶಾಲೆಯಲ್ಲಿ ಮಕ್ಕಳು ಪ್ರದರ್ಶಿಸಲಿದ್ದಾರೆ. ಹಿರಿಯರ ನಾಟಕಗಳಿಗೆ ಹೋಲಿಸಿದರೆ ಮಕ್ಕಳ ನಾಟಕಗಳು ಒಂದರ್ಥದಲ್ಲಿ ವಿರಳವೇ. ಬೇಸಿಗೆ ಶಿಬಿರ, ಕಾರ್ಯಾಗಾರಗಳಲ್ಲಿ ಮಾತ್ರ ಕಾಣಸಿಗುವ ಮಕ್ಕಳ ರಂಗಭೂಮಿ ಕುರಿತ ಚಟುವಟಿಕೆಗಳು ಈಚೆಗೆ ಮುನ್ನೆಲೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನಾರ್ಹ. ಜ.30 ರಾಷ್ಟ್ರಪಿತ ಗಾಂಧೀಜಿ ಗುಂಡೇಟಿಗೆ ಬಲಿಯಾದ ದಿನ. ಅದನ್ನು ‘ಹುತಾತ್ಮರ ದಿನ’ವಾಗಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ. ಅಂದು ಈ ನಾಟಕ ಪುನರ್ ಪ್ರದರ್ಶನಗೊಳ್ಳಲಿದೆ.

ADVERTISEMENT

ಇಲ್ಲಿ ಮಕ್ಕಳು ಗಾಂಧಿತ್ವದ ಸಂವಾದವನ್ನು ಮಾಡುತ್ತಾರೆ. ಹಿರಿಯರ ಹಾಗೂ ಕಿರಿಯರ ನಡುವಿನ ‘ಗಾಂಧಿತ್ವ ಜ್ಞಾನಾಂತರ’ವನ್ನು ನಾಟಕ ಜೋಡಿಸುತ್ತಾ ಹೋಗುತ್ತದೆ. ಸತ್ಯ, ಅಹಿಂಸೆ, ಸತ್ಯಾಗ್ರಹ, ಭ್ರಾತೃತ್ವ, ಸ್ವಾವಲಂಬನೆಗಳ ಕುರಿತು ಮಕ್ಕಳು ಗಾಂಧಿ ತಾತಾನ ಜತೆ ಮಾತನಾಡುತ್ತಾ ಸಾಗುತ್ತಾರೆ.

ಪ್ರಸ್ತುತದಲ್ಲಿ ಗಾಂಧಿ ಹೇಗೆ ತಮ್ಮನ್ನ ಮಕ್ಕಳೊಟ್ಟಿಗೆ ಪರಿಚಯಿಸಿಕೊಳ್ಳುತ್ತಾರೆ. ಇಂದಿನ ಪುಟಾಣಿಗಳಿಗೆ ಗಾಂಧಿಯಂತಹ ಮಹಾನ್ ವ್ಯಕ್ತಿ ಇದ್ದರು ಎಂಬುದು ಕಲಿಸಿಕೊಳ್ಳಲು ಆಗದ ಸ್ತರದಲ್ಲಿ ನಾವೀಗ ಬಂದು ನಿಂತೆದ್ದೇವೆ. ಮೌಲ್ಯ, ತತ್ವ, ಆದರ್ಶಗಳ ದೂಳೀಪಟವಾಗಿಸಿ ಸ್ವಾರ್ಥಪರ ಬದುಕನ್ನ ನಮ್ಮದಾಗಿಕೊಂಡಿರುವ ಈ ಹೊತ್ತಲ್ಲಿ ನಾಟಕದಲ್ಲಿ ನಿರ್ದೇಶಕರು ಮಕ್ಕಳ ಮೂಲಕ ಗಾಂಧಿಜಿ ಅವರ ತತ್ವ- ಸಿದ್ಧಾಂತಗಳನ್ನು ಸ್ಮರಣೆಗೆ ತರುತ್ತಾರೆ. ಗಾಂಧಿಜಿ ಅವರ ಆತ್ಮಕಥೆ ‘ನನ್ನ ಸತ್ಯಾನ್ವೇಷಣೆ’ಯ ಭಾಗವಾಗಿ ಈ ನಾಟಕ ಮೂಡಿಬರುತ್ತದೆ.

ಸರಳ ಭಾಷೆಯ ಮೂಲಕ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಗಾಂಧಿ ಇಲ್ಲಿ ಮಾತನಾಡುತ್ತಾರೆ. ಗಾಂಧೀಜಿ ಅವರ ಮೂರು ಕೋತಿಗಳೆಂಬ ಪ್ರತಿಮಾ ರೂಪದ ಕೋತಿಗಳು ಮಕ್ಕಳಿಗೆ ಗಾಂಧಿ ಹುಡುಕಲು ನೆರವಾಗುತ್ತವೆ. ಮಕ್ಕಳ ನಾಟಕವಾದ್ದರಿಂದ ಫ್ಯಾಂಟಸಿಯೂ ಇಲ್ಲಿದೆ. ಒಟ್ಟು 20 ಮಕ್ಕಳು ಸೇರಿ ಈ ನಾಟಕ ಮಾಡುತ್ತಾರೆ. 1 ಗಂಟೆ 15ನಿಮಿಷಗಳ ಕಾಲಾವಧಿಯ ನಾಟಕ ಇದು. ಗಾಂಧಿ ಹುಡುಕುವ ಈ ಸಂಧರ್ಭವನ್ನು ನಿರ್ದೇಶಕರು ಇಲ್ಲಿ ಸಂಕೇತ ರೂಪದಲ್ಲಿ ಬಳಸಿಕೊಂಡಿದ್ದಾರೆ. ಮಕ್ಕಳ ಒಂದೊಂದು ಪ್ರಶ್ನೆಗಳಿಗೂ ಗಾಂಧಿ ಸಾವಧಾನ ಚಿತ್ತರಾಗಿ ಉತ್ತರಿಸುತ್ತಾ ಹೋಗುತ್ತಾರೆ. ಹಾಸ್ಯ, ಮನರಂಜನೆಗಳ ಜತೆಗೆ ಮಕ್ಕಳು ಗಾಂಧಿಯನ್ನು ತಮ್ಮ ಸ್ಮೃತಿಪಟಲದಲ್ಲಿ ಅಚ್ಚಾಗಿಸಿಕೊಳ್ಳುವ ಪರಿ ವಿಶೇಷ.

ನಾಟಕಕ್ಕೆ ಬೆಳಕಿನ ವಿನ್ಯಾಸ ಮೇಘ ಸಮೀರ, ಸಂಗೀತ ಶ್ರೇಷ್ಠ ಎಸ್. ಜುಪ್ತಿಮಠ, ಪ್ರಸಾಧನ ದಿಶಾ ರಮೇಶ್ ಹಾಗೂ ಮನೋಜ್ ಪಾರ್ಥ. ಈ ವಾರಕ್ಕೊಂದು ಮಕ್ಕಳ ನಾಟಕ ನಿಮಗಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.