ADVERTISEMENT

ನಾಯಿಯಂತೆ ಬೊಗಳುವ ತೋಳ ‘ಕಯೊಟೆ’

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 19:30 IST
Last Updated 13 ಜೂನ್ 2019, 19:30 IST
ಕಯೊಟೆಗಳ ಗುಂಪು
ಕಯೊಟೆಗಳ ಗುಂಪು   

ಚುರುಕು ಬುದ್ಧಿ ಮತ್ತು ವೇಗಕ್ಕೆ ಹೆಸರುವಾಸಿಯಾದ ಕೆಲವು ಪ್ರಾಣಿಗಳಲ್ಲಿ ತೋಳ ಕೂಡ ಒಂದು.ನೋಡಿದ ಕೂಡಲೇ ದೊಡ್ಡಗಾತ್ರದ ನಾಯಿಯಂತೆ ಕಂಡರೂ ಲಕ್ಷಣಗಳು ಮತ್ತು ವರ್ತನೆ ಸಂಪೂರ್ಣ ಭಿನ್ನವಾಗಿರುತ್ತವೆ. ವಿಶ್ವದ ವಿವಿಧ ಭೂಭಾಗಗಳಲ್ಲಿ ಹಲವು ತೋಳ ಪ್ರಭೇದಗಳನ್ನು ಗುರುತಿಸಲಾಗಿದೆ. ಅವುಗಳಲ್ಲೆ ಕಯೊಟೆ (Coyote) ಕೂಡ ಒಂದು. ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಈ ತೋಳವನ್ನು ಪ್ರಾಯಿರಿ ವೂಲ್ಫ್‌ (Prairie Wolf) ಎಂದೂ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಕ್ಯಾನಿಸ್ ಲ್ಯಾಟರನ್ಸ್ (Canis latrans). ಮೆಕ್ಸಿಕನ್ ಸ್ಪ್ಯಾನಿಷ್‌ ಭಾಷೆಯಲ್ಲಿ ಹೀಗೆಂದರೆ, ‘ಬೊಗಳುವ ನಾಯಿ’ ಎಂದು ಅರ್ಥ. ಇದು ಮಾಂಸಹಾರಿ ಪ್ರಾಣಿಗಳಕ್ಯಾನಿಡೆ (Canidae) ಕುಟುಂಬಕ್ಕೆ ಸೇರಿದೆ. ಕಂದು ತೋಳ, ಕೆಂಪು ತೋಳ ಮತ್ತು ನಗರ ನಾಯಿಗಳ ಜಿನೆಸ್ ಕ್ಯಾನಿಸ್‌ (Genus Canis) ಉಪ ಕುಟುಂಬದ ಪ್ರಾಣಿ ಇದು.

ಹೇಗಿರುತ್ತದೆ?
ನೋಡಿದ ಕೂಡಲೇ ನಗರವಾಸಿ ನಾಯಿಯಂತೆ ಕಾಣಿಸುತ್ತದೆ. ಕಂದು ಮತ್ತು ತಿಳಿಹಳದಿ ಬಣ್ಣ ಮಿಶ್ರಿತ ಕೂದಲಿನಿಂದ ಕೂಡಿರುವ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಉದರ ಮತ್ತು ಕತ್ತಿನ ಕೆಳಭಾಗ ಬಿಳಿ ಬಣ್ಣದಲ್ಲಿರುತ್ತದೆ. ಕಾಲುಗಳು, ತಲೆಯಭಾಗ ಮತ್ತು ಪಾದಗಳು ಕಂದು ಬಣ್ಣದಲ್ಲಿರುತ್ತವೆ. ಬಾಲ ನೀಳವಾಗಿದ್ದು, ದಟ್ಟವಾಗಿ ಕೂದಲು ಬೆಳೆದಿರುತ್ತವೆ. ತಲೆ ಪುಟ್ಟದಾಗಿದ್ದರೂ ತ್ರಿಕೋನಾಕಾರದ ಕಿವಿಗಳು ಸದಾ ಸೆಟೆದು ನಿಂತಿರುತ್ತವೆ. ಹಲವು ನಾಯಿಗಳಿಗೆ ಇರುವಂತೆ ಇದರ ಅಂಗಾಲುಗಳಲ್ಲೂ ಬೆವರುಗ್ರಂಥಿಗಳು ಇರುತ್ತವೆ. ಮುಂಗಾಲಿನ ಪಾದಗಳಲ್ಲಿ 5 ಬೆರಳುಗಳು ಇದ್ದರೆ, ಹಿಂಗಾಲಿನ ಪಾದಗಳಲ್ಲಿ 4 ಬೆರಳುಗಳು ಇರುತ್ತವೆ. ಪಾದಗಳಿಗಿಂತ ಬೆರಳುಗಳ ಮೇಲೆ ಹೆಚ್ಚು ಬಲ ಬಿಟ್ಟು ನಡೆಯುತ್ತದೆ.

ADVERTISEMENT

ಎಲ್ಲಿದೆ?
ಉತ್ತರ ಮತ್ತು ಮಧ್ಯ ಅಮೆರಿಕ ಈ ತೋಳದ ಮೂಲ ನೆಲೆ. ಉತ್ತರ ಅಲಾಸ್ಕಾ ಮತ್ತು ಕೆನಡಾದಲ್ಲೂ ಈ ನಾಯಿಯನ್ನು ಕಾಣಬಹುದು. ನೆಲದಲ್ಲಿ ಬಿಲಗಳನ್ನು ತೋಡಿಕೊಂಡು ವಾಸಿಸುತ್ತದೆ. ಬ್ಯಾಡ್ಗರ್‌ಗಳು (ಮುಂಗುಸಿಯಂತಹ ಪ್ರಾಣಿ) ನಿರ್ಮಿಸಿಕೊಂಡಿರುವ ಬಿಲಗಳನ್ನೂ ಆಕ್ರಮಿಸಿಕೊಳ್ಳುತ್ತದೆ.

ಜೀವನಕ್ರಮ ಮತ್ತು ವರ್ತನೆ
ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಪ್ರಾಣಿ. ಆಹಾರ ಹುಡುಕುವಾಗ ಮಾತ್ರ ಎರಡು ಕಯೊಟೆಗಳು ಜೊತೆಯಾಗಿ ಸುತ್ತುತ್ತವೆ. ಗುಂಪಿನಲ್ಲಿ ಗಂಡು ಮತ್ತು ಹೆಣ್ಣು ಕಯೊಟೆಗಳು, ಮರಿಗಳು ಇರುತ್ತವೆ. ಇದು ಹಗಲಿನಲ್ಲಿ ಚುರುಕಾಗಿದ್ದು, ರಾತ್ರಿಯಲ್ಲಿ ವಿರಮಿಸುತ್ತದೆ. ಆದರೆ ಇವುಗಳ ವಾಸಸ್ಥಾನಗಳು ಮತ್ತು ಪ್ರದೇಶಗಳ ಮೇಲೆ ಮಾನವರ ಅತಿಕ್ರಮಣ ಹೆಚ್ಚಾದ್ದರಿಂದ ರಾತ್ರಿ ಜೀವನಕ್ಕೂ ಒಗ್ಗಿಕೊಂಡಿದೆ.

ದೃಷ್ಟಿಶಕ್ತಿಗಿಂತ ಶ್ರವಣ ಶಕ್ತಿ ತೀಕ್ಷ್ಣವಾಗಿರುತ್ತದೆ. ಜೋರಾಗಿ ಗೀಳುಡುವ ಮತ್ತು ಬೊಗಳುವ ಮೂಲಕ ಸಂವಹನ ನಡೆಸುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ ಮತ್ತು ಮರಿಗಳು ತಮ್ಮ ಗಡಿ ಗುರಿತಿಸಕೊಳ್ಳುವಾಗ ಹೆಚ್ಚು ಜೋರಾಗಿ ಕಿರುಚುತ್ತವೆ. ಬೇಟೆಯಾಡುವುದಕ್ಕೆ ಹಲವು ಕಸರತ್ತುಗಳನ್ನು ನಡೆಸುತ್ತದೆ. ನೆಲದ ಮೇಲೆ ನಡೆದಾಡುವ ಪುಟ್ಟ ಸರೀಸೃಪಗಳನ್ನು ಹಿಡಿಯುವುದಕ್ಕೆ ಒಂದು ರೀತಿ ತಂತ್ರ ಬಳಸಿದರೆ, ದೊಡ್ಡಗಾತ್ರದ ಪ್ರಾಣಿಗಳನ್ನು ಬೇಟೆಯಾಡುವುದಕ್ಕೆ ಮತ್ತೊಂದು ರೀತಿ ತಂತ್ರ ಹೆಣೆಯುತ್ತದೆ. ಒಂದು ಪ್ರಾಣಿಯನ್ನು ಬೇಟೆಯಾಡುವುದಕ್ಕೆ ನಿರ್ಧರಿಸಿದರೆ 14 ನಿಮಿಷಗಳಿಂದ 21 ಗಂಟೆಗಳವರೆಗೆ ನಿರಂತರವಾಗಿ ಶ್ರಮಿಸುತ್ತದೆ. ಆಹಾರ ಹುಡುಕುತ್ತಾ ನಿತ್ಯ 4 ಕಿ.ಮೀ ಅಲೆಯುತ್ತದೆ.

ಆಹಾರ
ಶೇ90ರಷ್ಟು ಮಾಂಸಾಹಾರವನ್ನೇ ಸೇವಿಸುತ್ತದೆ. ಅಳಿಲು, ಹಕ್ಕಿ, ಹಾವು, ಹಲ್ಲಿ, ಜಿಂಕೆ, ಇಲಿ, ದೊಡ್ಡಗಾತ್ರ ಕೀಟಗಳು, ಅಕಶೇರುಕಗಳನ್ನು ಭಕ್ಷಿಸುತ್ತದೆ. ವಸಂತ ಋತು ಮತ್ತು ಚಳಿಗಾಲದಲ್ಲಿ ಕೆಲವು ಬಗೆಯ ತರಕಾರಿಗಳು ಮತ್ತು ಹಣ್ಣುಗಳನ್ನೂ ಸೇವಿಸುತ್ತದೆ. ಸತ್ತ ಪ್ರಾಣಿಗಳ ಮಾಂಸವನ್ನೂ ತಿನ್ನುತ್ತದೆ. ಆದರೆ ತಾಜ ಮಾಂಸವನ್ನು ಭಕ್ಷಿಸಲು ಹೆಚ್ಚು ಇಷ್ಟಪಡುತ್ತದೆ.

ಸಂತಾನೋತ್ಪತ್ತಿ
ವರ್ಷಕ್ಕೆ ಒಮ್ಮೆ ಮಾತ್ರಜನವರಿ ಅಥವಾ ಮಾರ್ಚ್‌ ತಿಂಗಳಲ್ಲಿಇದು ಸಂತಾನೋತ್ಪತ್ತಿ ನಡೆಸುತ್ತದೆ. ಹೆಣ್ಣು ಕಯೊಟೆ ಸೂಕ್ತ ಗಂಡು ಕಯೊಟೆಯನ್ನು ಆಯ್ಕೆ ಮಾಡಿಕೊಳ್ಳುತ್ತದೆ. ತನಗೆ ಇಷ್ಟವಾದರೆ ಅದೇ ಕೊಯಟೆಯೊಂದಿಗೆ ಹಲವು ವರ್ಷ ಜೊತೆಯಾಗಿರುತ್ತದೆ.2ರಿಂದ 5 ದಿನಗಳು ಮಾತ್ರ ಸಂತಾನೋತ್ಪತ್ತಿಗೆ ಮೀಸಲಿಡುತ್ತದೆ.

60ರಿಂದ 63 ದಿನಗಳವರೆಗೆ ಗರ್ಭಧರಿಸಿ ಕನಿಷ್ಠ 1 ಮರಿ, ಗರಿಷ್ಠ 19 ಮರಿಗಳಿಗೆ ಜನ್ಮ ನೀಡುತ್ತದೆ. ಸಾಮಾನ್ಯವಾಗಿ 6 ಮರಿಗಳು ಜನಿಸುತ್ತವೆ. ಇದರ ಮರಿಗಳನ್ನು ಪಪ್ಸ್ ಎನ್ನುತ್ತಾರೆ. ಮರಿಗಳಿಗೆ ಜನಿಸಿದಾಗ ಕಣ್ಣು ಮೂಡಿರುವುದಿಲ್ಲ. ಕಿವಿಗಳು ಕೂಡ ಸರಿಯಾಗಿ ಕೇಳಿಸುವುದಿಲ್ಲ ಹೀಗಾಗಿ ವರ್ಷ ಪೂರೈಸುವವರೆಗೆ ಹಲವು ಅಪಾಯಗಳನ್ನು ಎದುರಿಸುತ್ತವೆ. 10 ದಿನಗಳ ನಂತರ ಕಣ್ಣುಗಳು ಕಾಣಿಸುತ್ತವೆ. 21ರಿಂದ 28 ದಿನಗಳ ನಂತರ ಬಿಲಬಿಟ್ಟು ಹೊರಗೆ ಸುತ್ತಾಡಲು ಆರಂಭಿಸುತ್ತವೆ. 5ರಿಂದ 7 ವಾರಗಳ ವರೆಗೆ ತಾಯಿ ಕಯೊಟೆ ಹಾಲು ಕುಡಿದು ಬೆಳೆಯುತ್ತವೆ. 35 ದಿನಗಳ ವರೆಗೆ ಸಂಪೂರ್ಣ ತಾಯಿ ಆರೈಕೆಯಲ್ಲೇ ಬೆಳೆಯುತ್ತವೆ.

ಗಂಡು ಮತ್ತು ಹೆಣ್ಣು ಎರಡೂ ಕಯೊಟೆಗಳು ಮರಿಗಳ ಆರೈಕೆಯಲ್ಲಿ ಸಮಾನ ಕಾಳಜಿ ತೋರುತ್ತವೆ. 6ರಿಂದ 9 ತಿಂಗಳ ನಂತರ ಗಂಡು ಮರಿಗಳು ಬಿಲ ಬಿಟ್ಟು ಸ್ವತಂತ್ರ್ಯವಾಗಿ ಜೀವಿಸಲು ಆರಂಭಿಸುತ್ತವೆ. 9ರಿಂದ 12 ತಿಂಗಳ ನಂತರ ವಯಸ್ಕ ಹಂತ ತಲುಪುತ್ತವೆ. ಆದರೆ 2 ವರ್ಷಗಳ ನಂತರ ಸಂತಾನೋತ್ಪತ್ತಿ ನಡೆಸುತ್ತದೆ.

ಗಾತ್ರ ಮತ್ತು ಜೀವಿತಾವಧಿ
* ದೇಹದ ಉದ್ದ:
2-3 ಅಡಿ
* ತೂಕ: 7–21 ಕೆಜಿ
* ಜೀವಿತಾವಧಿ: 10–14 ವರ್ಷ

ಸ್ವಾರಸ್ಯಕರ ಸಂಗತಿಗಳು
* ಇದರ ಗುಂಪನ್ನು ಬ್ಯಾಂಡ್, ಪ್ಯಾಕ್ ಮತ್ತು ರೌಟ್ಸ್ ಎನ್ನುತ್ತಾರೆ.
* 13 ಅಡಿ ದೂರದ ವರೆಗೆ ಜಿಗಿಯುವ ಸಾಮರ್ಥ್ಯವಿದೆ.
* ವಾಸಯೋಗ್ಯ ವಾತಾವರಣವಿದ್ದರೆ ಗರಿಷ್ಠ 18 ವರ್ಷದ ವರೆಗೆ ಜೀವಿಸುತ್ತದೆ.
* 64ರಿಂದ 72 ಕಿ.ಮೀ ವೇಗದಲ್ಲಿ ಓಡುವ ಸಾಮರ್ಥ್ಯ ಇದಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.