ADVERTISEMENT

ದೈತ್ಯ ಇರುವೆಭಕ್ಷಕ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 6:28 IST
Last Updated 29 ಆಗಸ್ಟ್ 2019, 6:28 IST
   

ಉದ್ದ ಮೂತಿಯ ದೈತ್ಯ ಇರುವೆ ಭಕ್ಷಕ ನೋಡಲು ವಿಶಿಷ್ಟವಾಗಿದ್ದು, ಇದರಲ್ಲಿ ಮೂರು ತಳಿಗಳಿವೆ. ಒಂದೇ ಏಟಿಗೆ ಗುಂಪು ಗುಂಪು ಇರುವೆಗಳನ್ನು ಮುಕ್ಕುವ ಈ ಭಕ್ಷಕ Myrmecophagidae ಗುಂಪಿಗೆ ಸೇರಿದೆ. ವೈಜ್ಞಾನಿಕ ಹೆಸರು ಮೈರಿಮ್‌ಕೊಗಾ ಟೈಡಸಿಟಿಲ್ Myrmecophaga tridactyla. ಇದರ ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.

ಜೀವಿತಾವಧಿ – 14 ವರ್ಷ

ಉದ್ದ – 40ರಿಂದ 48 ಇಂಚು

ADVERTISEMENT

ಸರಾಸರಿ ಗಾತ್ರ – 60 ಕೆ.ಜಿ.

ಆಹಾರಪದ್ಧತಿ

ಹೆಸರೇ ಹೇಳುವಂತೆ ಇರುವೆ, ಹುಳು ಹುಪ್ಪಟೆಗಳನ್ನು ತಿಂದು ಬದುಕಬಲ್ಲದು.

ಹೇಗಿರುತ್ತೆ?

ದೈತ್ಯ ಇರುವೆಭಕ್ಷಕದ ದೇಹವು ಸಂಪೂರ್ಣ ಬೂದು ಬಣ್ಣದ ಕೂದಲಿನಿಂದ ಕೂಡಿರುತ್ತದೆ. ಮೊಣಕಾಲ ಮೇಲಿನಿಂದ ಬೆನ್ನು, ಭುಜ, ಬಾಲದವರೆಗೂ ಕಪ್ಪು ಕೂದಲು ಇರುತ್ತದೆ. ದಟ್ಟ ಕೂದಲಿನಿಂದಲೂ ಇದರ ಆಕಾರ ತುಸು ದೈತ್ಯವಾಗಿ ಕಾಣುತ್ತದೆ. ಉದ್ದ ಮೂತಿಯ, ಚಿಕ್ಕ ಕಣ್ಣು ಹಾಗೂ ಕಿವಿಗಳನ್ನು ಹೊಂದಿರುವ ಈ ಭಕ್ಷಕದ ಮೂಗು ಕಡುಕಪ್ಪು ಬಣ್ಣದಲ್ಲಿರುತ್ತದೆ. ಪಾದದ ಬಳಿ ಮುಂಭಾಗದಲ್ಲಿ ಕಡಗದಂತೆ ಕಪ್ಪು ಬಣ್ಣವಿರುತ್ತದೆ. ಇರುವೆ ಹಾಗೂ ಗೆದ್ದಲು ಹುಳುಗಳನ್ನು ತಿನ್ನಲು ಸಹಾಯಕವಾಗುವಂತೆ ಇದರ ತಲೆ ಮತ್ತು ಬಾಯಿಯ ರಚನೆ ಇರುತ್ತದೆ.ದೈತ್ಯ ಇರುವೆ ಭಕ್ಷಕಕ್ಕೆ ಹಲ್ಲಿರುವುದಿಲ್ಲ. 30 ಸಾವಿರ ಇರುವೆಗಳನ್ನು ಒಂದೇ ಬಾರಿಗೆ ಎಳೆದುಕೊಳ್ಳುವಷ್ಟು ಇದರ ನಾಲಿಗೆ ಉದ್ದ ಹಾಗೂ ತೀಕ್ಷವಾಗಿರುತ್ತದೆ.

ಎಲ್ಲಿರುತ್ತೆ?

ದಕ್ಷಿಣ ಅಮೆರಿಕದ ಬೊಲಿವಿಯಾ, ಮಧ್ಯ ಅಮೆರಿಕ, ಒಣಗಿದ ಅರಣ್ಯಗಳು, ಹುಲ್ಲುಗಾವಲು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ವರ್ತನೆ : ದೈತ್ಯ ಇರುವೆ ಭಕ್ಷಕ ಏಕಾಂತ ಬಯಸುವ, ಒಂಟಿಯಾಗಿ ಜೀವಿಸುವ, ತಮ್ಮ ಅಗತ್ಯವನ್ನು ತಾವೇ ಪೂರೈಸಿಕೊಳ್ಳುವ ಪ್ರಾಣಿ. ಸಾಮಾನ್ಯವಾಗಿ ಸಂತಾನೋತ್ಪತ್ತಿ ಸಂದರ್ಭದಲ್ಲಿ ಮಾತ್ರ ಇತರೆ ಪ್ರಾಣಿಗಳೊಂದಿಗೆ ಸಂಗ ಬೆಳೆಸುತ್ತದೆ. ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಆಹಾರವನ್ನು ತಿನ್ನುವಷ್ಟು ಸಾಮರ್ಥ್ಯ ಹೊಂದಿರುವ ಈ ಪ್ರಾಣಿಗೆ ಮಂದ ದೃಷ್ಟಿ ಹಾಗೂ ಶ್ರವಣ ಶಕ್ತಿ ಇರುತ್ತದೆ. ಸಂವಹನಕ್ಕಾಗಿ ಶಬ್ದಗಳನ್ನು ಹೊರಡಿಸುತ್ತದೆ. ಬುಸುಗುಡುವ, ಶ್ವಾಸಬಿಡುವ, ಘರ್ಜಿಸುವ ಶಬ್ದಗಳನ್ನು ಬೇರೆ ಬೇರೆ ಕಾರಣಗಳಿಗೆ ಹೊರಡಿಸುತ್ತದೆ.

ಸಂತಾನೋತ್ಪತ್ತಿ

ಸಾಮಾನ್ಯವಾಗಿ ವರ್ಷದ ಯಾವುದೇ ತಿಂಗಳಲ್ಲಿಯಾದರೂ ಈ ಪ್ರಾಣಿ ಸಂತಾನೋತ್ಪತ್ತಿ ನಡೆಸುತ್ತದೆ. ಒಂದು ಮರಿಗೆ ಜನ್ಮ ನೀಡುತ್ತದೆ. ಮರಿಯ ಬಣ್ಣ, ತಾಯಿ ಇರುವೆಭಕ್ಷಕದ ಬಣ್ಣ ಒಂದೇಯಾಗಿರುವುದರಿಂದ ಆಕ್ರಮಣಕಾರರಿಂದ ಬಹುಬೇಗ ತಪ್ಪಿಸಿಕೊಳ್ಳುತ್ತದೆ. ಒಂದು ವರ್ಷ ಮರಿಯು ತಾಯಿಯ ಆರೈಕೆಯಲ್ಲಿ ಬೆಳೆಯುತ್ತದೆ. ಹುಟ್ಟಿದ ಮೊದಲ ನಾಲ್ಕುವಾರಗಳಲ್ಲಿ ಅರೆ ಗಳಿಗೆಯೂ ಮರಿ ತಾಯಿಯನ್ನು ಬಿಟ್ಟಿರುವುದಿಲ್ಲ. ಅಪಾಯ ಎದುರಾದಾಗ ಕೂಗುವುದು ಬಿಟ್ಟರೆ ವಿಶಿಷ್ಟವಾದ ಧ್ವನಿಯೇನೂ ಹೊರಡಿಸುವುದಿಲ್ಲ. ಹುಟ್ಟಿದ ಮೂರು ತಿಂಗಳವರೆಗೆ ಮರಿಯ ಬದುಕುವ ಸಾಮರ್ಥ್ಯ ಶೇ 50ರಷ್ಟು ಇರುತ್ತದೆ. ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಗೆ ಈ ಪ್ರಾಣಿ ಬಹುಬೇಗ ತುತ್ತಾಗುತ್ತದೆ.

ಸ್ವಾರಸ್ಯಕರ ಸಂಗತಿಗಳು

*ದೈತ್ಯ ಇರುವೆಭಕ್ಷಕಗಳ ನಾಲಿಗೆಯು ಅದರ ದೇಹದಷ್ಟೆ ಉದ್ದವಿರುತ್ತದೆ.

*ಮನುಷ್ಯರ ಅಘ್ರಾಣಶಕ್ತಿಗಿಂತಲೂ 40 ಪಟ್ಟು ಬಲಿಷ್ಠವಾದ ಅಘ್ರಾಣಶಕ್ತಿ ಈ ಪ್ರಾಣಿಗಳಿಗೆ ಇರುತ್ತದೆ.

* ದೇಹದ ಉಷ್ಣಾಂಶ ಕಡಿಮೆ ಇರುವ ಸಸ್ತನಿಗಳಲ್ಲಿ ಇದೂ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.