ADVERTISEMENT

ಪುಟ್ಟಗಾತ್ರದ ಮರವಾಸಿ ಕಾಂಗರೂ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 20:15 IST
Last Updated 18 ಸೆಪ್ಟೆಂಬರ್ 2019, 20:15 IST
ಕಾಂಗರೂ
ಕಾಂಗರೂ   

ಜೀವನದ ಬಹುತೇಕ ಅವಧಿಯನ್ನು ಮರಗಳಲ್ಲೇ ಕಳೆಯುವ ಪ್ರಾಣಿಗಳು ಕೆಲವು ಇವೆ. ಅಂತಹ ಪ್ರಾಣಿಗಳಲ್ಲಿ ಕಾಂಗರೂ ಜಾತಿಗೆ ಸೇರಿದ ಒಂದು ಪ್ರಾಣಿ ಇದೆ ಎಂದರೆ ಆಶ್ಚರ್ಯವಾಗುತ್ತದೆ. ಅಂತಹ ಅಪರೂಪದ ಜೀವಿ ಲಮ್‌ಹೋಲ್ಟ್ಸ್ ಟ್ರೀ ಕಾಂಗರೂ (Lumholtz's Tree-Kangaroo). ಇಂದಿನ ಪ್ರಾಣಿ ಪ್ರಪಂಚದಲ್ಲಿ ಈ ವಿಶೇಷ ಪ್ರಾಣಿಯ ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ಡೆಂಡ್ರೊಲಗಸ್‌ ಲಮ್‌ಹೊಲ್ಟ್ಸಿ (Dendrolagus lumholtzi). ಇದು ಕಾಂಗರೂಗಳು ಮ್ಯಾಕ್ರೊಪೊಡಿಡೇ (Macropodidae) ಕುಟುಂಬಕ್ಕೆ ಸೇರಿದ ಸಸ್ತನಿ. ಇದನ್ನು ಡಿಪ್ರೊಟೊಡೊಂಟಿಯಾ (Diprotodontia) ಪ್ರಾಣಿಗಳ ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?
ಪುಟ್ಟಗಾತ್ರದ ಕಾಂಗರೂಗಳಲ್ಲಿ ಇದು ಕೂಡ ಒಂದು. ಕಪ್ಪು ಮತ್ತು ತಿಳಿಗಂದು ಬಣ್ಣದ ಕೂದಲಿನಿಂದ ಕೂಡಿದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಕಾಲುಗಳ ಮುಂಭಾಗದಲ್ಲಿ ಮಾತ್ರ ಕಪ್ಪುಬಣ್ಣವಿರುತ್ತದೆ. ಕಪ್ಪು ಬಣ್ಣದ ಉಗುರುಗಳು ಉದ್ದವಾಗಿ ಬೆಳೆದಿರುತ್ತವೆ. ದುಂಡಾದ ಬಾಲ ದೇಹಕ್ಕಿಂತಲೂ ನೀಳವಾಗಿರುತ್ತದೆ. ಮೂತಿ ನಿಳವಾಗಿದ್ದು, ಕಪ್ಪು ಬಣ್ಣದಲ್ಲಿರುತ್ತದೆ. ಕಪ್ಪು ಬಣ್ಣದ ಕಣ್ಣುಗಳು ಪುಟ್ಟದಾಗಿರುತ್ತವೆ. ವೃತ್ತಾಕಾರದ ಕಿವಿಗಳು ಪುಟ್ಟದಾಗಿರುತ್ತವೆ.

ಎಲ್ಲಿದೆ?
ಇದು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಮಳೆಕಾಡುಗಳಲ್ಲಿ ಮಾತ್ರ ಕಾಣಸಿಗುತ್ತದೆ. ಸಮುದ್ರ ಮಟ್ಟದಿಂದ ಎತ್ತರದಲ್ಲಿರುವ ಕಾಡಿನ ಪ್ರದೇಶದಲ್ಲೇ ಇದರ ಸಂತತಿ ಹೆಚ್ಚಾಗಿದೆ. ತಗ್ಗು ಪ್ರದೇಶದ ಕಾಡುಗಳಲ್ಲೂ ಕಾಣಬಹುದು. ಕೆಲವೊಮ್ಮೆ ಬಯಲು ಪ್ರದೇಶದಲ್ಲೂ ಆಹಾರ ಹುಡುಕುತ್ತಾ ಅಲೆಯುತ್ತದೆ. ಬಳ್ಳಿಗಳು ಹಬ್ಬಿರುವ ಮರಗಳಲ್ಲೇ ಹೆಚ್ಚು ವಾಸಿಸುತ್ತದೆ.

ADVERTISEMENT

ಜೀವನಕ್ರಮ ಮತ್ತು ವರ್ತನೆ
ಇದು ಒಂಟಿಯಾಗಿ ಜೀವಿಸಲು ಇಷ್ಟಪಡುವ ಪ್ರಾಣಿ. ಸಾಮಾನ್ಯವಾಗಿ ಒಂಟಿಯಾಗಿರಲು ಇಷ್ಟಪಡುವ ಪ್ರಾಣಿಗಳು ನಿರ್ದಿಷ್ಟ ಗಡಿ ಗುರುತಿಸಿಕೊಂಡಿರುತ್ತವೆ. ಆದರೆ ಈ ಕಾಂಗರೂ ಮಾತ್ರ ಯಾವುದೇ ಗಡಿ ಗುರುತಿಸಕೊಂಡಿರುವುದಿಲ್ಲ. ಆದರೆ ಒಂದು ಕಾಂಗರೂ ಇರುವ ಮರದ ಮೇಲೆ ಮತ್ತೊಂದು ಕಾಂಗರೂ ಕುಳಿತರೆ ಆಕ್ರಮಣಕಾರಿ ಸ್ವಭಾವ ತೋರುತ್ತವೆ.

ವಯಸ್ಕ ಕಾಂಗರೂಗಳು ದಿನದ ಅವಧಿಯಲ್ಲಿ ಶೇ 90ರಷ್ಟು ಕಾಲ ಸೋಮಾರಿಯಾಗೇ ವರ್ತಿಸುತ್ತವೆ. ಜೀವಿತಾವಧಿಯ ಶೇ 99ರಷ್ಟು ಅವಧಿಯನ್ನು ಮರಗಳ ಮೇಲೆಯೇ ಕಳೆಯುತ್ತವೆ. ನೀರು ಕುಡಿಯುವುದಕ್ಕಾಗಿ ಮಾತ್ರ ಅಪರೂಪಕ್ಕೊಮ್ಮೆ ನೆಲದ ಮೇಲೆ ಕಾಲಿಡುತ್ತವೆ. ಆಹಾರ ಸೇವನೆ, ಸಂಚಾರ, ನಿದ್ರೆ ಎಲ್ಲವೂ ಮರಗಳ ಮೇಲೆಯೇ. ವಿಶಾಲವಾಗಿರುವ ಮರದ ರೆಂಬೆಗಳು ಅಥವಾ ಕೂಡಿಕೊಂಡಿರುವ ಎರಡು ಮೂರು ರೆಂಬೆಗಳ ಮೇಲೆ ನಿದ್ರಿಸುತ್ತದೆ. ಮರದಿಂದ ಮರಕ್ಕೆ ಕೋತಿಯಂತೆ ವೇಗವಾಗಿ ಹಾರುತ್ತಾ ಸಂಚರಿಸುತ್ತದೆ.

ಆಹಾರ
ಇದು ಸಂಪೂರ್ಣ ಸಸ್ಯಹಾರಿ ಪ್ರಾಣಿ. 37ಕ್ಕೂ ಹೆಚ್ಚು ಬಗೆಯ ಗಿಡಗಳ ಎಲೆಗಳನ್ನು ಸೇವಿಸುತ್ತದೆ. ಬಳ್ಳಿಗಳು, ಸಸ್ಯಗಳು, ಪೊದೆ ಗಿಡಗಳ ಎಲೆಗಳನ್ನೂ ಸೇವಿಸುತ್ತದೆ.

ಸಂತಾನೋತ್ಪತ್ತಿ
ಸಂತಾನೋತ್ಪತ್ತಿಗೆ ನಿರ್ದಿಷ್ಟ ಅವಧಿ ಇಲ್ಲ. ವಯಸ್ಕ ಹಂತ ತಲುಪಿದ ಗಂಡು ಕಾಂಗರೂ ಹೆಣ್ಣು ಕಾಂಗರೂಗಳನ್ನು ಆಕರ್ಷಿಸುತ್ತದೆ. ಸಂತಾನೋತ್ಪತ್ತಿ ಮುಗಿಯುವವರೆಗೆ ಮಾತ್ರ ಎರಡೂ ಜೊತೆಗಿರುತ್ತದೆ. ನಂತರ ಬೇರೊಂದು ಕಾಂಗರೂ ಜೊತೆಯಾಗುತ್ತದೆ. ಹೆಣ್ಣು ಕಾಂಗರೂ ಸುಮಾರು 45 ದಿನ ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಮರಿ ಸುಮಾರು 250 ದಿನಗಳ ವರೆಗೆ ತಾಯಿಯ ಹೊಟ್ಟೆ ಚೀಲದಲ್ಲೇ ಬೆಳೆಯುತ್ತದೆ. 250ರಿಂದ 300 ದಿನಗಳ ಅವಧಿಯಲ್ಲಿ ಹೊರ ಬಂದು ಜೀವಿಸುವುದನ್ನು ಕಲಿಯುತ್ತದೆ. 300 ದಿನಗಳ ನಂತರ ಚೀಲಬಿಟ್ಟು ಹೊರಗೆ ಜೀವಿಸುವುದನ್ನು ಕಲಿಯುತ್ತದೆ. 650 ದಿನಗಳ ವರೆಗೂ ತಾಯಿಯ ಸಂಪರ್ಕದಲ್ಲೇ ಇರುತ್ತದೆ. ಗಂಡು ಮರಿ ನಾಲ್ಕು ವರ್ಷದ ನಂತರ ವಯಸ್ಕ ಹಂತ ತಲುಪಿದರೆ, ಹೆಣ್ಣು ಮರಿ ಎರಡೇ ವರ್ಷದಲ್ಲಿ ವಯಸ್ಕ ಹಂತ ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು
* ಮರವಾಸಿ ಕಾಂಗರೂಗಳ ಪೈಕಿ ಇದೇ ಅತಿ ಚಿಕ್ಕದು.
* ನಾರ್ವೆಯ ಜೀವವಿಜ್ಞಾನಿ ಮತ್ತು ಸಂಶೋಧಕ ಡಾ. ಕಾರ್ಲ್‌ ಲಮ್‌ಹೋಲ್ಟ್ಸ್‌ ಈ ಕಾಂಗರೂವನ್ನು ಪತ್ತೆ ಮಾಡಿದರು. ಹೀಗಾಗಿ ಇದಕ್ಕೆ ಅವರ ಹೆಸರನ್ನೇ ಇಡಲಾಗಿದೆ.
* ಇದರ ವೈಜ್ಞಾನಿಕ ಹೆಸರಿನ ಮೊದಲ ಪದ ಡೆಂಡ್ರೊಲಗಸ್‌ (Dendrolagus) ಎಂದರೆ, ಮರವಾಸಿ ಮೊಲ ಎಂದು ಅರ್ಥ.
* ಕಾಂಗರೂಗಳ ಪೈಕಿ ಹಿಂದಕ್ಕೆ ಚಲಿಸಬಲ್ಲ ಸಾಮರ್ಥ್ಯವಿರುವ ಏಕೈಕ ಪ್ರಭೇದ ಇದು.
* ಮಳೆ ನೀರು ದೇಹಕ್ಕೆ ಅಂಟದಂತೆ ಇದರ ತುಪ್ಪಳ ರಚನೆಯಾಗಿರುವುದು ವಿಶೇಷ.
* ದಾರದಂತಹ ಎಳೆ ರೆಂಬೆಗಳು ಮತ್ತು ಬಳ್ಳಿಗಳ ಮೇಲೂ ನಡೆಯುವ ಸಾಮರ್ಥ್ಯ ಇದಕ್ಕಿದೆ.
* ಅಪಾಯ ಎದುರಾದರೆ ಸುಮಾರು 15 ಮೀಟರ್ ಎತ್ತರಿಂದ ದೇಹಕ್ಕೆ ಯಾವುದೇ ಹಾನಿಯಾಗದಂತೆ ಜಿಗಿಯುತ್ತದೆ.
* ಇದರ ತಿಳಿಬಣ್ಣದ ತುಪ್ಪಳದಿಂದಾಗಿ ಗುರುತಿಸುವುದು ಕಷ್ಟ. ದಟ್ಡ ಕಾಡಿನಲ್ಲಿದ್ದರೆ, ಕಾಣಿಸುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.