ADVERTISEMENT

ಪಶ್ಚಿಮ ಘಟ್ಟದಲ್ಲಿ ಪತ್ತೆಯಾದ ಬಳ್ಳಿ ಹಾವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 15:08 IST
Last Updated 30 ಜುಲೈ 2019, 15:08 IST
ಪ್ರೋಹೆಟುಲ್ಲಾ ಆಂಟಿಕಾ
ಪ್ರೋಹೆಟುಲ್ಲಾ ಆಂಟಿಕಾ   

ಇತಿಹಾಸವೆಂದರೆ ಹಗುರವಾದ ಮಾತಲ್ಲ. ಇತಿಹಾಸದ ಜಾಡನ್ನು ಹುಡುಕಿಕೊಂಡು, ದೊರೆತ ಕುರುಹುಗಳನ್ನು ಜೋಡಿಸಿಕೊಂಡು ಯಾವುದಾದರೂ ಪ್ರಾಣಿಗೆ ಸಾಧ್ಯವಾಗಬಹುದಾದಂತಹ ಸಂಬಂಧ ಕಲ್ಪಿಸುವುದು ಕ್ಲಿಷ್ಟಕರ ಕಾರ್ಯ. ಕೆಲವೊಮ್ಮೆ ಪ್ರಕೃತಿಯೇ ನಮಗೆ ದಯೆ ತೋರಿ, ಕೇವಲ ಶತಮಾನಗಳಲ್ಲದೇ, ಲಕ್ಷಾಂತರ ವರ್ಷಗಳ ಅಚ್ಚರಿ ಮೂಡಿಸುವಂತಹ ಇತಿಹಾಸದ ಪುಸ್ತಕ ತೆರೆದಿಡುತ್ತದೆ.

ಅಂತೆಯೇ, ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಸರೀಸೃಪ ತಜ್ಞರ ಒಂದು ಸಂಶೋಧನಾ ತಂಡಕ್ಕೆ ಅಕಸ್ಮಿಕವಾಗಿ ಕಂಡುಬಂದ ಒಂದು ಬಳ್ಳಿ ಹಾವಿನ ಪ್ರಭೇದಕ್ಕೆ ಸುಮಾರು2.6 ಕೋಟಿ ವರ್ಷಗಳ ಇತಿಹಾಸವಿದೆ ಎಂದು ತಿಳಿದು
ಬಂದಿದೆ. ಈ ಹೊಸ ಹಾವಿನ ಪ್ರಭೇದಕ್ಕೆ ಪ್ರೋಹೆಟುಲ್ಲಾ ಆಂಟಿಕಾ ಎಂದು ನಾಮಕರಣ ಮಾಡಲಾಗಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರ ಒಂದು ತಂಡ ಪಶ್ಚಿಮ ಘಟ್ಟಗಳ ಹಾವುಗಳನ್ನು ಕ್ರಮಬದ್ಧವಾಗಿ ಅಧ್ಯಯನ ನಡೆಸಲು ಪ್ರಯತ್ನಿಸುತ್ತಿತ್ತು. ಈ ಕ್ರಮಬದ್ಧ ಅಧ್ಯಯನ ನಡೆಸುವಾಗ ಪಶ್ಚಿಮ ಘಟ್ಟಗಳ ಕಾಡುಗಳಿಗೆ ಸ್ವಂತವಾದ ‘ಪ್ರೊಹೇಟುಲ್ಲಾ ಆಂಟಿಕಾ’ ಎನ್ನುವ ಒಂದು ಬಳ್ಳಿಹಾವನ್ನು ಆಕಸ್ಮಿಕವಾಗಿ ಕಂಡರು. ಇದು ಒಂದು ಪುರಾತನ ಪ್ರಭೇದವೆಂದು, ಸುಮಾರು2.6 ಕೋಟಿ ವರ್ಷಗಳ ಹಿಂದೆ ಮಧ್ಯ ಒಲಿಗೋಸೀನ್ ಯುಗದಲ್ಲಿ ವಿಕಸನಗೊಂಡಿತೆಂದು ಊಹಿಸಲಾಗಿದೆ.

ADVERTISEMENT

ಕೃಶವಾದ ದೇಹ, ಬಳ್ಳಿಯಂತೆ ಕಾಣುವುದರಿಂದ ಈ ಹಾವುಗಳಿಗೆ ಬಳ್ಳಿಹಾವುಗಳು ಅಥವಾ ವೈನ್ ಸ್ನೇಕ್ಸ್ ಎನ್ನಲಾಗುತ್ತದೆ. ಇದರಂತೆಯೇ ಇರುವ ಪ್ರಭೇದಗಳು ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕ ಖಂಡಗಳಲ್ಲಿ ಕಾಣಸಿಕ್ಕರೂ ಏಷ್ಯಾ ಖಂಡದಲ್ಲಿ ವ್ಯಾಪಕವಾಗಿ ಕಂಡುಬರುವಂತಹ ಏಷ್ಯಾ ಬಳ್ಳಿಹಾವುಗಳು ಅಹೇಟುಲ್ಲಾ ಕುಲದ ಸದಸ್ಯರು.

ಭಾರತದಲ್ಲಿ ಈ ಕುಲದ4 ಪ್ರಭೇದಗಳು ಹೆಚ್ಚಾಗಿ ಕಾಣಸಿಗುತ್ತವೆ. ಇದರಲ್ಲಿನ ಒಂದು ಪ್ರಭೇದವನ್ನು ಇತ್ತೀಚಿಗೆ ಒಡಿಶಾ ರಾಜ್ಯದಿಂದ ಪತ್ತೆ ಮಾಡಿ ವರ್ಣಿಸಲಾಯಿತು.

ಸಂಶೋಧಕರು, ಈ ಹೊಸದಾಗಿ ವರ್ಣಿಸಲಾಗಿರುವ ಬಳ್ಳಿಹಾವಿನ ವಂಶವೃಕ್ಷವನ್ನು ಅಧ್ಯಯನ ನಡೆಸುತ್ತಿದ್ದಾಗ, ಈ ಪ್ರೋಹೆಟುಲ್ಲಾ ಅಂಟಿಕಾ ಎಂಬ ಪ್ರಭೇದವು ಸುಮಾರು26 ಮಿಲಿಯನ್ ವರುಷಗಳ ಹಿಂದೆಯೇ ಅನ್ಯ ಬಳ್ಳಿ ಹಾವುಗಳಿಂದ ಬೇರೆಯಾಗಿ, ಕೇವಲ ಹೊಸ ಪ್ರಭೇದ ಮಾತ್ರವಲ್ಲದೇ, ಒಂದು ಹೊಸ ಕುಲಕ್ಕೆ (ಪ್ರೋಹೆಟುಲ್ಲಾ) ಸೇರ್ಪಡೆಯಾಯಿತೆಂದು ಹೇಳುತ್ತಾರೆ. ‘ಅಂಟಿಕಾ’ ಎಂಬ ಪ್ರಭೇದದ ಹೆಸರು ಲ್ಯಾಟಿನ್
ಭಾಷೆಯ ಮೂಲವಾದ ‘ಆಂಟಿಕ್’, (ಅಂದರೆ ಪುರಾತನ ಅಥವಾ ಪ್ರಾಚೀನ) ಎಂಬ ಪದದಿಂದ ಬಂದಿದೆ.ಈ ಪ್ರಭೇದದ ಉನ್ನತ ಮಟ್ಟದ ಅನುವಂಶಿಕ
ವೈವಿಧ್ಯ ಅಲ್ಲದೇ ಇದರ ರೂಪುರೇಷೆಯ ವೈಶಿಷ್ಟ್ಯಗಳು ಅನ್ಯ ಬಳ್ಳಿ ಹಾವುಗಳಿಗಿಂತ ವಿಭಿನ್ನವಾಗಿವೆ. ಇದರಲ್ಲಿ ಚಾಕ್ಷುಷ ಮಾಪಕಗಳು ಕ್ರಕಚೀಕೃತವಾಗಿವೆ, ಹೆಚ್ಚಿನಸಂಖ್ಯೆಯಲ್ಲಿ ಕುಕ್ಷಿಯ ಮತ್ತು ಪೃಷ್ಠದ ಮಾಪಕಗಳಿವೆ. ಹಾಗೆಯೇ, ಹೆಚ್ಚಿನ ಸಂಖ್ಯೆಯಲ್ಲಿ ದವಡೆ ಹಲ್ಲುಗಳಿವೆ. ಅಲ್ಲದೇ, ಈ ಪ್ರದೇಶವನ್ನು ಅತಿಕ್ರಮಿಸುವ ಅನ್ಯ ಬಳ್ಳಿಹಾವುಗಳಿಗಿಂತ ಈ ಪ್ರಭೇದವು ಸ್ವಲ್ಪ ಉದ್ದವಾಗಿವೆ.

ಈ ಪ್ರಭೇದವನ್ನು ತಮಿಳುನಾಡಿನ ಕಾಲಕ್ಕಾಡ್ ಮುಂಡಂದುರೈ ಹುಲಿ ಅಭಯಾರಣ್ಯ ಹಾಗೂ ಕೇರಳದ ಶೆಂದೂರ್ನೀ ವನ್ಯಜೀವಿಅಭಯಾರಣ್ಯದ ರಕ್ಷಿತ ಇರುನೆಲೆಗಳಿಂದ ವರ್ಣಿಸಲಾಗಿದೆ. ಈ ಆವಿಷ್ಕಾರ ಬಳ್ಳಿ ಹಾವುಗಳ ವಿಕಸನದ ಬಗ್ಗೆ ಬೆಳಕು
ಚೆಲ್ಲುವುದಲ್ಲದೇ, ಹಿಮಾಲಯ ಪರ್ವತ ಶ್ರೇಣಿಗಳಿಗಿಂತಲೂ ಪುರಾತನವಾದ ನಮ್ಮ ಪಶ್ಚಿಮ ಘಟ್ಟಗಳ ಭೂರಾಶಿಯ ಬಗ್ಗೆ ಎಷ್ಟೋ ಮಾಹಿತಿಯನ್ನು ನಮ್ಮ ಮುಂದಿಡಬಹುದು. ಹಾಗೆಯೇ, ನಮ್ಮ ದೇಶದಲ್ಲಿ ಇರಬಹುದಾದಂತಹ ಜೀವವೈವಿಧ್ಯ ಮೇಲೆ ಇನ್ನಷ್ಟು ಬೆಳಕು ಚೆಲ್ಲುತ್ತದೆ.ಈ ಪ್ರಭೇದವು ಸಧ್ಯಕ್ಕೆ ಯಾವುದೇ ಅಳಿವಿನ ಬೆದರಿಕೆಯನ್ನು ಎದುರು ನೋಡದಿರುವುದು ಸಂತಸದ ವಿಷಯ.

ನಮ್ಮ ದೇಶದಲ್ಲಿ ಅತಿ ಹೆಚ್ಚು ಅಪಾರ್ಥಕ್ಕೊಳಗಾಗಿರುವ ಹಾವುಗಳು ಪೂಜಿಸಲ್ಪಡುತ್ತವೆ, ಹಾಗೆಯೇ ಅವುಗಳ ಅಸ್ತಿತ್ವಕ್ಕೆ ಅಪಾಯವೂ ಇದೆ.ನಮ್ಮ ಪರಿಸರ ವ್ಯವಸ್ಥೆಯಲ್ಲಿ ಹಾವುಗಳು ಒಂದು ಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ. ಚಿಕ್ಕ ಪ್ರಾಣಿಗಳನ್ನು, ಪಕ್ಷಿಗಳನ್ನು ಹಾಗೂ ದಂಶಕಗಳನ್ನು ತಮ್ಮ ಆಹಾರವನ್ನಾಗಿಸಿ, ಅದರ ಸಂಖ್ಯೆಯನ್ನು ಹಿಡಿತದಲ್ಲಿಟ್ಟು ಆಹಾರ ಚಕ್ರವನ್ನು ನಿಯಂತ್ರಿಸುತ್ತವೆ. ಹಾಗಾಗಿ, ಹಾವುಗಳ ಹಾಗೂ ಅವುಗಳಿಂದ ಮಾನವ ಕುಲಕ್ಕೆ ಆಗುವಂತಹ ಲಾಭಗಳ ಬಗ್ಗೆ ಸರಿಯಾದ ಅರಿವು ಮೂಡಿಸುವಂತಹ ಕಾರ್ಯಕ್ರಮಗಳ ಅವಶ್ಯಕತೆ ಇವೆ.

ರಮ್ಯಾ ಬದರೀನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.