ದಪ್ಪನೆ ಮ್ಯಾಟ್ ಮೇಲೆ ಚೆಂಡನ್ನು ಸ್ವಿಂಗ್ ಮಾಡಿ ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದ ಆ ಯುವ ಬೌಲರ್‌ಗೆ ರಾಜ್ಯ ತಂಡದಿಂದ ಆಹ್ವಾನ ಬಂದಿತ್ತು.
ರಾಜಧಾನಿಯ ಅಂಗಳದಲ್ಲಿ ನೀಟಾಗಿ ಕತ್ತರಿಸಿದ ಹುಲ್ಲಿನ ಹೊದಿಕೆಯಿದ್ದ ಪಿಚ್ ಮೇಲೆ ಬೌಲಿಂಗ್ ಮಾಡಲು ಆ ಹುಡುಗ ಪರದಾಡಿದ. ಅವನ ಬೌಲಿಂಗ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ರನ್ನು ಸೂರೆ ಹೊಡೆದುಬಿಟ್ಟರು!
ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವ ಕೊರಗು ಆ ಯುವಪ್ರತಿಭೆಯಲ್ಲಿ ಉಳಿಯಿತು. ನಮ್ಮ ಊರಿನಲ್ಲಿ ಇಂತಹದೊಂದು ಟರ್ಫ್ ಪಿಚ್ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎನ್ನುವ ಹಳಹಳಿಕೆ ಜೀವನಪೂರ್ತಿ ಕಾಡಿತು. ಇಂತಹದೇ ಪರಿಸ್ಥಿತಿಯನ್ನು ರಾಜ್ಯದ ಹಲವು ಊರುಗಳಲ್ಲಿ ಕ್ರಿಕೆಟ್ ಆಡುವ ಎಲ್ಲ ಹುಡುಗರು ಅನುಭವಿಸಿದ್ದಾರೆ.
ತರಬೇತಿ ಸೌಲಭ್ಯಕ್ಕೆ ಆದ್ಯತೆ ಬೆಂಗಳೂರಿನಿಂದ ಹೊರಗೆ ಸಾಕಷ್ಟು ಪ್ರತಿಭೆಗಳಿವೆ. ಎಲ್ಲರೂ ರಾಜಧಾನಿಯನ್ನೇ ಆಶ್ರಯಿಸಲು ಸಾಧ್ಯವಾಗುವುದಿಲ್ಲ. ಅಂತಹ ಪ್ರತಿಭಾನ್ವಿತ ಕ್ರಿಕೆಟಿಗರನ್ನು ಹುಡುಕಿ ತರಬೇತಿ ನೀಡಲು ಇದೇ ಬೇಸಿಗೆ ರಜೆಯಲ್ಲಿ ಅಕಾಡೆಮಿಯ ವಿಶೇಷ ಶಿಬಿರಗಳನ್ನು ರಾಜ್ಯದಾದ್ಯಂತ ಆರಂಭಿಸಲಾಗುತ್ತಿದೆ. ಈಗ ಅಭಿವೃದ್ಧಿಯಾಗುತ್ತಿರುವ ಮೂಲ ಸೌಲಭ್ಯಗಳು ತರಬೇತಿ ಮತ್ತು ಟೂರ್ನಿಗಳ ಆಯೋಜನೆಗೂ ಸಹಕಾರಿಯಾಗುತ್ತದೆ. ಕ್ರಿಕೆಟ್‌ನ ಮೂಲ ತರಬೇತಿಯ್ನೀು ನೀಡಲು ಪರಿಣಿತ ಕೋಚ್‌ಗಳು ಇಲ್ಲಿ ಇರು್ತೀಾರೆ. -ರೋಜರ್ ಬಿ್ನೀಿ ಮಾಜಿ ್ರೀಿಕೆಟಿಗ |
ಇಂತಹ ಕಠಿಣ ಪರೀಕ್ಷೆಯನ್ನು ಎದುರಿಸಿಯೂ ಅಂತರರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡಿದವರಲ್ಲಿ ಜಾವಗಲ್ ಶ್ರೀನಾಥ್ ಕೂಡ ಒಬ್ಬರು. ಬೆಂಗಳೂರು ಬಿಟ್ಟು ಉಳಿದ ಯಾವ ಊರಿನಲ್ಲಿಯೂ ಟರ್ಫ್ ಸೌಲಭ್ಯವಿಲ್ಲದ ಕಾಲವಿತ್ತು. ಆದರೆ ಈಗ ನಿಧಾನವಾಗಿ ಕಾಲ ಬದಲಾಗುತ್ತಿದೆ. ರಾಜಧಾನಿಯಿಂದ ಹೊರಗೂ ಹುಲ್ಲಿನಂಕಣಗಳು ಅರಳುತ್ತಿವೆ.
ಈಗ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯೂ ಹೌದು. ರಾಜ್ಯದ ಎಲ್ಲ ಕಡೆಯೂ ಜೂನಿಯರ್ ಮಟ್ಟದ ಕ್ರಿಕೆಟಿಗರಿಗೆ ಟರ್ಫ್ ಸೌಲಭ್ಯ ದೊರೆಯಬೇಕೆಂಬ ಅವರ ಗುರಿಯ ಪ್ರತೀಕವಾಗಿ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಳೆದ ವಾರ ಅಂತರರಾಷ್ಟ್ರೀಯ ದರ್ಜೆಯ `ಜೆಎಸ್‌ಎಸ್-ಕೆಎಸ್‌ಸಿಎ~ ಕ್ರಿಕೆಟ್ ಮೈದಾನ ಉದ್ಘಾಟನೆಯಾಯಿತು.
ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಶ್ರೀನಾಥ್ ಅವರಿಗೂ ಇದು ಕನಸಿನ ಅಂಗಳ. ಜೊತೆಗೆ ಮೈಸೂರಿನ ಕ್ರಿಕೆಟ್ ಹಿರಿಮೆಯ ಕಿರೀಟಕ್ಕೆ ಮತ್ತೊಂದು ಚಿನ್ನದ ಗರಿಯ ಅಲಂಕಾರ. ಸ್ವತಃ ತಾವೇ ನಿಂತು ಮೈದಾನದ ಕಾಮಗಾರಿ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ. ಉಬ್ಬು, ತಗ್ಗುಗಳಿಂದ ಕೂಡಿದ್ದ ನೆಲದ ಒಂದು ಬದಿಯ ಮಣ್ಣನ್ನು ಪೂರ್ತಿ ತೆಗೆಸಿ ತಗ್ಗು ಇದ್ದಲ್ಲಿ ಹಾಕಿಸಿ ಸಮತಟ್ಟು ಮಾಡಲಾಗಿರುವ ಮೈದಾನದಲ್ಲಿ ಈಗ ಹಸಿರು ಹುಲ್ಲು ನಳನಳಿಸುತ್ತಿದೆ.
ಅತಿ ಕಡಿಮೆ ಸಮಯದಲ್ಲಿ ಈ ಮೈದಾನದ ಕಾಮಗಾರಿ ಮುಗಿದಿದೆ. ಪ್ರತಿದಿನವೂ ನೂರಕ್ಕೂ ಹೆಚ್ಚು ಕೆಲಸಗಾರರ ಶ್ರಮ ಇದರ ಹಿಂದಿದೆ. ಒಟ್ಟು ಮೂರುವರೆ ಎಕರೆ ಜಾಗದಲ್ಲಿ ಅರಳಿರುವ ಅಂಗಳಕ್ಕೆ ತಗುಲಿರುವ ವೆಚ್ಚ 70 ಲಕ್ಷ. ಶ್ರೀನಾಥ್ ಅವರೇ ಹೇಳುವಂತೆ ಇನ್ನೂ ಸಾಕಷ್ಟು ಕೆಲಸ ಇದೆ. ಪೆವಿಲಿಯನ್ ಕಟ್ಟಡ, ಪ್ರಾಕ್ಟೀಸ್ ನೆಟ್ಸ್ ಸಿದ್ಧವಾಗಬೇಕು. ಮೈದಾನ ನಿರ್ವಹಣೆಗೆ ಬೇಕಾದ ಅತ್ಯಾಧುನಿಕ ಯಂತ್ರೋಪಕರಣಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.
ಈಗಾಗಲೇ ರಣಜಿ ಫೈನಲ್ ಪಂದ್ಯವನ್ನೇ ಆಯೋಜಿಸಿ ಸೈ ಎನಿಸಿಕೊಂಡಿರುವ ಗಂಗೋತ್ರಿ ಗ್ಲೇಡ್ಸ್ ಮೈದಾನದಿಂದ ಸ್ವಲ್ಪವೇ ದೂರದಲ್ಲಿ ಈ ಹೊಸ ಮೈದಾನವಿದೆ. ಗ್ಲೇಡ್ಸ್‌ನಲ್ಲಿ ಇದೇ ಬೇಸಿಗೆ ರಜೆಯಲ್ಲಿ ಕೆಸಿಎ ತರಬೇತಿ ಅಕಾಡೆಮಿ ಆರಂಭವಾಗಲಿದೆ. ವಯೋಮಿತಿಯ ಕ್ರಿಕೆಟ್‌ನ ರಾಜ್ಯ ಮತ್ತು ರಾಷ್ಟ್ರಮಟ್ಟದ ಟೂರ್ನಿಗಳನ್ನು ಮೈಸೂರಿನಲ್ಲಿ ನಡೆಸುವ ಇರಾದೆಯೂ ಕೆಎಸ್‌ಸಿಎಗೆ ಇದೆ.
`ಬೆಂಗಳೂರಿನಲ್ಲಿ ರಣಜಿ ಪಂದ್ಯ ಆಡಿಸಿದರೆ ಪ್ರೇಕ್ಷಕರೇ ಇರುವುದಿಲ್ಲ. ಕಳೆದ ಬಾರಿ ಶಿವಮೊಗ್ಗದ ಪಂದ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇಲ್ಲಿಯೂ ಒಂದು ರಣಜಿ ಪಂದ್ಯ ನಡೆಯಲಿ~ ಎನ್ನುವ ಇಂಗಿತವನ್ನು ಮೈದಾನ ಉದ್ಘಾಟನೆಗೆ ಬಂದಿದ್ದ ಅನಿಲ್ ಕುಂಬ್ಳೆ ತಮ್ಮ ಭಾಷಣದಲ್ಲಿಯೇ ಪ್ರಸ್ತಾಪಿಸಿದ್ದರು.
2010ರಲ್ಲಿ ರಣಜಿ ಫೈನಲ್ ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ ರಣಜಿ ಪಂದ್ಯಗಳನ್ನು ಇಲ್ಲಿಯ ಗ್ಲೇಡ್ಸ್‌ನಲ್ಲಿ ಆಯೋಜಿಸಲಾಗಿತ್ತು. ಆದರೆ ಕಳೆದ ಋತುವಿನಲ್ಲಿ ಮಾತ್ರ ಮೈಸೂರಿಗೆ ಪಂದ್ಯ ಸಿಕ್ಕಿರಲಿಲ್ಲ. ಆದರೆ ಆ ನಿರಾಸೆಯನ್ನು ತೊಡೆದುಹಾಕುವಂತೆ ಮೂಲ ಸೌಲಭ್ಯಗಳ ಅಭಿವೃದ್ಧಿ ನಡೆಯುತ್ತಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಇಂತಹ ಟರ್ಫ್ ವಿಕೆಟ್‌ಗಳನ್ನು ಸಿದ್ಧಪಡಿಸುವ ಯೋಜನೆಯೂ ಕೆಎಸ್‌ಸಿಎಗೆ ಇದೆ. ಈಗಾಗಲೇ ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಮಂಡ್ಯ, ಹಾಸನ, ಚಿಕ್ಕಮಗಳೂರುಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ.
ಗ್ರಾಮಾಂತರ ವಿಭಾಗಗಳಲ್ಲಿ ಮೊದಲಿನಿಂದಲೂ ಸೌಲಭ್ಯಗಳ ಕೊರತೆಯಿಂದಾಗಿ ಹಲವು ಪ್ರತಿಭಾವಂತ ಕ್ರಿಕೆಟಿಗರು ಬೆಳಕಿಗೆ ಬರಲೇ ಇಲ್ಲ. ಇದೀಗ ಹೊಸ ಸೌಕರ್ಯಗಳ ಅಭಿವೃದ್ಧಿ ಕಾರ್ಯ ನಿರೀಕ್ಷಿತ ಗುರಿ ಮುಟ್ಟಿದರೆ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್ ಅವರಂತಹ ಮತ್ತಷ್ಟು ಆಟಗಾರರು ಕರ್ನಾಟಕದಲ್ಲಿ ತಯಾರಾಗಬಹುದು.
`ಫೀಲ್ಡಿಂಗ್ ಸುಧಾರಣೆಗೆ ಸೌಲಭ್ಯ ಸಹಕಾರಿ~
ಭಾರತ ತಂಡದ ಫೀಲ್ಡರ್‌ಗಳು ಮೈದಾನದಲ್ಲಿ ನಿರ್ಭಯವಾಗಿ ಡೈವ್ ಮಾಡಿ ಚೆಂಡನ್ನು ತಡೆಯುವುದಿಲ್ಲ ಎಂಬ ಆರೋಪ ಯಾವಾಗಲೂ ಕೇಳಿಬರುತ್ತದೆ. ಇದಕ್ಕೆ ಮೂಲ ಕಾರಣವೆಂದರೆ ನಮ್ಮಲ್ಲಿಯ ಸೌಕರ್ಯಗಳ ಕೊರತೆ.
ಕಲ್ಲು, ಮಣ್ಣು ಇರುವ ಮೈದಾನದಲ್ಲಿ ಡೈ ಹೊಡೆದ ಹುಡುಗ ಆರೇಳು ತಿಂಗಳು ಗಾಯದಿಂದ ನರಳಬೇಕಾಗುತ್ತದೆ. ಆತನ ಭವಿಷ್ಯದ ಗತಿಯೇನು. ಜೂನಿಯರ್ ಆಟಗಾರರಿಗೆ ಟರ್ಫ್ ಮೈದಾನಗಳು ಸಿಕ್ಕರೆ ಡೈವ್ ಮಾಡಿ ಫೀಲ್ಡಿಂಗ್ ಮಾಡುವ ಅಭ್ಯಾಸ ಬೆಳೆಯುತ್ತದೆ.
ಅಲ್ಲದೇ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದ ಮೇಲೂ ಟರ್ಫ್ ಅಂಗಳದ ಪ್ರಭಾವ ಬೇರೆಯದೇ ರೀತಿಯಾಗಿರುತ್ತದೆ. ಈ ವ್ಯತ್ಯಾಸವನ್ನು ಹೋಗಲಾಡಿಸಿ, ತಳಮಟ್ಟದಿಂದಲೇ ಆಟಗಾರರನ್ನು ಸಿದ್ಧ ಮಾಡಲು ಮೂಲ ಸೌಕರ್ಯ ಅಭಿವೃದ್ಧಿಗೆ ನಾವು ಆದ್ಯತೆ ನೀಡುತ್ತಿದ್ದೇವೆ.
-ಜಾವಗಲ್ ಶ್ರೀನಾಥ್, ಕೆಎಸ್‌ಸಿಎ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.