ADVERTISEMENT

ಇನ್ನು ‘ಗೆಲುವಿನತ್ತ ಪಯಣ’...

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST

ಭಾರತದ ಹಾಕಿ ತಂಡ ಇದೀಗ ವಿಶ್ವಕಪ್‌ನಲ್ಲಿ ಎತ್ತರದ ಸಾಮರ್ಥ್ಯ ತೋರುವ ಕನಸು ಕಾಣುತ್ತಿದೆ. ಈಚೆಗೆ ಮಲೇಷ್ಯಾದ ಇಪೊದಲ್ಲಿ ನಡೆದ ಎಂಟನೇ ಏಷ್ಯಾ ಕಪ್ ಹಾಕಿಯಲ್ಲಿ ಭಾರತ ರನ್ನರ್‌ಅಪ್ ಸ್ಥಾನ ಗಳಿಸಿತಾದರೂ, ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆಯಿತು. ಭಾರತದ ಹಾಕಿಗೆ ಸಂಬಂಧಿಸಿದಂತೆ ಇದೊಂದು ಉತ್ತಮ ಬೆಳವಣಿಗೆ.

ಅಲ್ಲಿ ಭಾರತ ಲೀಗ್ ಹಂತದಲ್ಲಿ ಒಮಾನ್, ಕೊರಿಯಾ, ಬಾಂಗ್ಲಾ ತಂಡಗಳನ್ನು ಸೋಲಿಸಿ ಅಗ್ರಸ್ಥಾನ ಗಳಿಸಿತಾದರೂ, ಫೈನಲ್‌ನಲ್ಲಿ ಅದೇ ಕೊರಿಯಾ ತಂಡದ ಎದುರು ಒಂದು ಗೋಲಿನ ಅಂತರದಿಂದ ಸೋತಿತು. ಬಹಳ ನಿರೀಕ್ಷೆ ಮೂಡಿಸಿದ್ದ ಪಾಕಿಸ್ತಾನ ಮೂರನೇ ಸ್ಥಾನಕ್ಕಿಳಿಯಿತು.

ಈ ತಂಡದಲ್ಲಿದ್ದ ಇಪ್ಪತೈದರ ಹರೆಯದ ವಿ.ಆರ್.ರಘುನಾಥ್ ಅತ್ಯುತ್ತಮ ಆಟಗಾರ ಹೆಗ್ಗಳಿಕೆಯೊಂದಿಗೆ ಹಾಕಿ ವಲಯದಲ್ಲಿ ಅಪಾರ ಮೆಚ್ಚುಗೆ ಗಳಿಸಿದ್ದಾರೆ. ಕರ್ನಾಟಕದ ಇವರು ಲಂಡನ್ ಒಲಿಂಪಿಕ್ಸ್‌ನಲ್ಲಿ ಆಡಿದ ಅನುಭವಿ.
ಇಪೊದಿಂದ ಬಂದ ನಂತರ ‘ಪ್ರಜಾವಾಣಿ’ ಜತೆಗೆ ರಘುನಾಥ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿ­ರುವುದನ್ನು ಅವರ ಮಾತುಗಳಲ್ಲೇ ಕೇಳಿ.
**

ಗೋಲು ಗಳಿಸುವುದಕ್ಕಿಂತ ಹೆಚ್ಚಾಗಿ ನಾನು ಎದುರಾಳಿಯ ಗೋಲು ಯತ್ನಗಳನ್ನು ತಡೆಯುವ ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸಾರ್ಥಕತೆ ಕಂಡು ಕೊಳ್ಳುತ್ತೇನೆ.

ಇಪೊಗೆ ಹೊರಡುವುದಕ್ಕಿಂತ ಏಳು ವಾರಗಳಿಗೆ ಮೊದಲು ನಾವು ತಯಾರಿ ಶುರು ಮಾಡಿದೆವು. ಅತ್ಯುತ್ತಮ ಹೊಂದಾಣಿಕೆಯ ಸಾಮಾರ್ಥ್ಯ ಮೂಡಿ ಬರುವಲ್ಲಿ ಕೋಚ್ ರೋಲಂಟ್‌ ಒಲ್ಟಮನ್ಸ್‌್ ಅವರಿಗೆ ಕೃತಜ್ಞತೆ ಹೇಳಲೇ ಬೇಕಾಗುತ್ತದೆ.

ಸಕಾರಾತ್ಮಕ ನೆಲೆಯಲ್ಲಿ ಒಲ್ಟಮನ್ಸ್‌್ ಅವರ ಪ್ರೋತ್ಸಾಹ ಮರೆಯಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರ ನಡೆಗಳನ್ನೂ ಅತ್ಯಂತ ಸೂಕ್ಷ್ಮವಾಗಿ ಗ್ರಹಿಸುತ್ತಾ ತಪ್ಪುಗಳ­ನ್ನು ತಿದ್ದುತ್ತಾ ಒಂದು ತಂಡವಾಗಿ ಆತ್ಮವಿಶ್ವಾಸದಿಂದ ಎದ್ದು ನಿಲ್ಲುವಂತೆ ಮಾಡುವಲ್ಲಿ ಅವರ ಶ್ರಮ ಅಪಾರ.

ಆ ಟೂರ್ನಿಗೆ ಹೋಗುವಾಗ ನಮ್ಮೊಡನೆ ಇದ್ದುದು `ಗೆಲುವಿನತ್ತ ಪಯಣ' ಎಂಬ ಧ್ಯೇಯವಾಕ್ಯ ಅಷ್ಟೇ. ಹೌದು, ಅಲ್ಲಿ ನಮ್ಮ ಶಕ್ತಿ ಮೀರಿ ಆಡಿದೆವು. ನಾಯಕ ಸರ್ದಾರ್ ಸಿಂಗ್, ಗೋಲ್‌ಕೀಪರ್ ಶ್ರೀಜೇಶ್ ಗಮ­ನಾರ್ಹ ಸಾಮರ್ಥ್ಯ ತೋರಿದರು. ಅಲ್ಲಿ ನಮಗೆ ಎದು­ರಾದ ಪ್ರತಿ ತಂಡವನ್ನೂ ಸೋಲಿಸಿದೆವು. ಕೊರಿಯಾ ಎದುರು ಫೈನಲ್‌ನಲ್ಲಿ ನಾವು ಸೋತಿರಬಹುದು, ಆದರೆ ಲೀಗ್ ಹಂತದಲ್ಲಿ ಆ ತಂಡವನ್ನು ನಾವು ಮಣಿಸಿದ್ದೆವು ಎನ್ನುವುದನ್ನು ಮರೆಯುವಂತಿಲ್ಲ ತಾನೆ. ಫೈನಲ್‌ನಲ್ಲಿ ಹೆಜ್ಜೆ ಹೆಜ್ಜೆಗೂ ಪೈಪೋಟಿ ಕಂಡು ಬಂದಿತು. ಕೊನೆಗೆ ಅದೃಷ್ಟ ಕೈಕೊಟ್ಟಿತು ಎಂದರೆ ತಪ್ಪಾಗಲಿಕ್ಕಿಲ್ಲ.

ನಾನು ಇವತ್ತಿಗೂ ಹೊಸ ತಂತ್ರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತೇನೆ. ಸರಿ ಕಂಡರೆ ಅಳವಡಿಸಿ­ಕೊಳ್ಳಲು ಯತ್ನಿಸುತ್ತೇನೆ. ಮುಂದಿನ ದಿನಗಳಲ್ಲಿ ಭಾರತ ಇನ್ನೂ ಮಹತ್ತರ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಶಕ್ತಿ ಮೀರಿ ಯತ್ನಿಸಬೇಕಾಗುತ್ತದೆ. ಅದೇನೇ ಇರಲಿ, ಬಹಳ ಸಮಯದ ನಂತರ ಬಹಳ ಒಳ್ಳೆಯ ಕಾಲ ಶುರುವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಭಾರತದ್ದು `ಗೆಲುವಿನತ್ತ ಪಯಣ' ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.