ADVERTISEMENT

ಕರಾವಳಿ ಕ್ರಿಕೆಟ್‌ಗೆ ತಲಚೇರಿ ನಂಟು...

ಹರಿ ಗೋವಿಂದ
Published 5 ಜನವರಿ 2014, 19:30 IST
Last Updated 5 ಜನವರಿ 2014, 19:30 IST
ಮಂಗಳೂರಿನ ನೆಹರು ಮೈದಾನ ಮತ್ತು ಕ್ರಿಕೆಟ್ ಪೆವಿಲಿಯನ್‌ನ ದೃಶ್ಯ.			–ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಮಂಗಳೂರಿನ ನೆಹರು ಮೈದಾನ ಮತ್ತು ಕ್ರಿಕೆಟ್ ಪೆವಿಲಿಯನ್‌ನ ದೃಶ್ಯ. –ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ   

ರಾಜ್ಯದ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಇದೀಗ ರಣಜಿ ಪಂದ್ಯಗಳದ್ದೇ ಸುದ್ದಿ. ಈ ಸಂದರ್ಭದಲ್ಲಿ ಕನ್ನಡ ಕರಾವಳಿಯ  ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಕ್ರಿಕೆಟಿಗರು ರಾಜ್ಯ ಮತ್ತು ರಾಷ್ಟ್ರ ತಂಡಗಳಲ್ಲಿ ಗಮನ ಸೆಳೆದ ನೆನಪುಗಳು ಕಾಡುತ್ತವೆ.

ಮಂಗಳೂರಿನ ನೆಹರು ಮೈದಾನ ಮತ್ತು ಅಲ್ಲಿರುವ ಪೆವಿಲಿಯನ್‌ ಕಳೆದ ಅರ್ಧ ಶತಮಾನದಲ್ಲಿ ಕಂಡ ಕ್ರಿಕೆಟ್‌ ವೈಭವ ಅನನ್ಯ. ಅಲ್ಲಿನ ಕ್ರಿಕೆಟ್‌ ಸುಮಾರು ಎಂಬತ್ತು ವರ್ಷಗಳ ಈಚೆಗೆ ತನ್ನ ರೆಕ್ಕೆ ಬಿಚ್ಚಿಕೊಂಡಿದೆ ಎನ್ನುವುದೂ ನಿಜ. ಆದರೆ ಸರಿಯಾಗಿ ಒಂದು ಶತಮಾನದ ಹಿಂದೆ ಮಂಗಳೂರಿನಿಂದ ಸುಮಾರು 150 ಕಿ.ಮೀ. ದೂರದ ತಲಚೇರಿಯಲ್ಲಿ ಕ್ರಿಕೆಟ್‌ ಚಟುವಟಿಕೆ ಉತ್ತುಂಗದಲ್ಲಿತ್ತು. 1912ರ ಸುಮಾರಿನಲ್ಲಿ ತಲಚೇರಿಯಲ್ಲಿ ಉತ್ತಮವಾದ ಪಿಚ್‌ ಇತ್ತು.

ಆ ಊರು ಆಗ ಬ್ರಿಟಿಷ್‌ ಕಂಟೋನ್ಮೆಂಟ್‌ ಪ್ರದೇಶ ಆಗಿದ್ದರಿಂದ ಉತ್ತಮ ಸಂಖ್ಯೆಯಲ್ಲಿಯೇ ಆಂಗ್ಲರು ನೆಲೆಸಿದ್ದರು. ಆಂಗ್ಲರು ಅಲ್ಲಿ ದೊಡ್ಡ ಮಟ್ಟದಲ್ಲಿಯೇ ಕ್ರಿಕೆಟ್‌ ಆಡುತ್ತಿದ್ದರು. ನೂರು ಕ್ರಿಕೆಟ್‌ ಪಂದ್ಯಗಳಲ್ಲಿ ಆಡಿದ ಮೊದಲ ಆಟಗಾರ ಎಂಬ ದಾಖಲೆ ಹೊಂದಿರುವ ಕಾಲಿನ್‌ ಕೌಡ್ರೆ ತಮ್ಮ ಎಳವೆಯಲ್ಲಿ ತಲಚೇರಿ ಯಲ್ಲಿಯೇ ಕೆಲವು ಪಂದ್ಯಗಳಲ್ಲಿ ಆಡಿದ್ದರಂತೆ. ಏಕೆಂದರೆ ಅವರ ತಂದೆ ಆ ಪ್ರದೇಶ ದಲ್ಲಿಯೇ ಅಧಿಕಾರಿಯಾಗಿದ್ದರು. ಅವರೇ ತಲಚೇರಿಯ ಮೈದಾನದಲ್ಲಿ ಪಿಚ್‌ ರೂಪಿಸಿದ್ದು ಕೂಡಾ.

ರಣಜಿ ಟೂರ್ನಿ ಶುರುವಾದ ಮೇಲೆ ತಲಚೇರಿಯಲ್ಲಿ ಕೇರಳ ಮತ್ತು ಕರ್ನಾಟಕದ ಕರಾವಳಿಯ ಮಟ್ಟಿಗಿನ ಮೊದಲ ಪಂದ್ಯಗಳು ನಡೆದವು.
ತಲಚೇರಿಯ ಪ್ರಭಾವದಿಂದಾಗಿ ಉತ್ತರದ ಊರುಗಳಿಗೂ ಕ್ರಿಕೆಟ್‌ ಪಸರಿಸತೊಡಗಿತು. ತಲಚೇರಿಯಿಂದ ಬ್ರಿಟಿಷ್‌ ಅಧಿಕಾರಿಗಳು ನಿರಂತರವಾಗಿ ಮಂಗಳೂರಿಗೆ ಬಂದು ಹೋಗುವುದು ಇದ್ದೇ ಇತ್ತಲ್ಲ. ಹೀಗಾಗಿ ಮಂಗಳೂರು ಕ್ರಿಕೆಟ್‌ ಚಟುವಟಿಕೆಗೆ ತೆರೆದುಕೊಂಡಿತು.

ಇವತ್ತು ನೆಹರು ಮೈದಾನ ಎಂದೇ ಜನಪ್ರಿಯವಾಗಿರುವ ಆಗಿನ ಸೆಂಟ್ರಲ್‌ ಮೈದಾನದಲ್ಲಿ ಬ್ರಿಟಿಷ್‌ ಅಧಿಕಾರಿಗಳು ಮತ್ತು ಯೂರೊಪಿಯನ್‌ ವರ್ತಕರ ತಂಡಗಳ ನಡುವೆ ಎಂಟು ದಶಕಗಳ ಹಿಂದೆಯೇ ಪಂದ್ಯವೊಂದು ನಡೆದಿತ್ತು. ಮಂಗಳೂರಲ್ಲಿ 1926ರಲ್ಲಿ ಪೆಟ್‌ಲ್ಯಾಂಡ್‌ ಪೆಟ್‌ ಕ್ರೀಡಾ ಸಂಸ್ಥೆ ಹುಟ್ಟು ಪಡೆದರೆ, 1933ರಲ್ಲಿ ಮಂಗಳೂರು ಸ್ಪೋರ್ಟ್ಸ್‌ ಕ್ಲಬ್‌ ತನ್ನ ಚಟುವಟಿಕೆ ಆರಂಭಿಸಿತು. ಆ ದಿನಗಳಲ್ಲಿಯೇ ಅಂದರೆ 1932ರಲ್ಲಿ ನಡೆದ ರಣಜಿ ಪಂದ್ಯದಲ್ಲಿ ಮಂಗಳೂರಿನ ನಾರಾಯಣ.ಎಸ್‌. ಎಂಬುವವರು ಮದ್ರಾಸ್‌ ತಂಡದಲ್ಲಿ ಸ್ಥಾನ ಪಡೆದಿದ್ದರು.

ನಂತರದ ದಿನಗಳಲ್ಲಿ ಕನ್ನಡ ಕರಾವಳಿಯ ಬಿ.ಸಿ.ಆಳ್ವ, ಸುಂದರಮ್‌, ಬುದಿ ಕುಂದರನ್‌, ದಯಾನಂದ ಕಾಮತ್‌, ಗಣಪತಿ ರಾವ್‌, ರಘುರಾಮ ಭಟ್‌, ಪಿ.ವಿ.ಶಶಿಕಾಂತ್‌ ಸೇರಿದಂತೆ ಅನೇಕ ಮಂದಿ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ತಂಡಗಳಲ್ಲಿ ಸ್ಥಾನ ಪಡೆದು ರಣಜಿಯಲ್ಲಿ ಆಡಿದರು.
ಕನ್ನಡ ಕರಾವಳಿಯ ಈ ಕ್ರಿಕೆಟ್‌ ಸಾಧನೆಗಳ ಹಿಂದೆ ತಲಚೇರಿಯ ಶತಮಾನದ ಹಿಂದಿನ ಪ್ರಭಾವ ಇದೆ ಎಂದರೆ ಅತಿಶಯೋಕ್ತಿಯಂತೂ ಅಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.