ADVERTISEMENT

ಕ್ರೀಡಾಡಳಿತ ಪಾರದರ್ಶಕವಾಗಿರುವುದೇ ಮುಖ್ಯ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ಕ್ರೀಡಾಡಳಿತದಲ್ಲಿ ರಾಜಕಾರಣಿಗಳು ಬೇಡ ಎಂದು ಈಚೆಗೆ ರಾಹುಲ್‌ ಗಾಂಧಿಯವರು ಹೇಳಿರುವುದನ್ನು ನಾನು ಒಪ್ಪುತ್ತೇನೆ. ಆದರೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅಜರುದ್ದೀನ್‌, ಭಾರತ ಹಾಕಿ ತಂಡದ ಮಾಜಿ ಆಟಗಾರ ಅಸ್ಲಮ್‌ ಷೇರ್‌ಖಾನ್‌  ಅವರಂತಹ ಅನುಭವಿ ಕ್ರೀಡಾಪಟುಗಳು ಲೋಕಸಭಾ ಸದಸ್ಯರಾದ ತಕ್ಷಣ ಕ್ರೀಡಾ ಚಟುವಟಿಕೆ ಗಳಿಂದ ಅಥವಾ ಕ್ರೀಡಾಡಳಿತದಿಂದ ದೂರವಿರಬೇಕು ಎಂದೇನೂ ನಾನು ಹೇಳುವುದಿಲ್ಲ. ಸ್ವತಃ ರಾಹುಲ್‌ ಗಾಂಧಿ ಯವರೂ ಅಜರ್‌, ಅಸ್ಲಮ್‌ ಅವರಂತ ಹವರು ಕ್ರೀಡಾಡಳಿತವನ್ನು ಕೈಗೆತ್ತಿಕೊಳ್ಳ ಬೇಕೆಂದು ಬಯಸುವವರೇ ಆಗಿದ್ದಾರೆ.

ಕ್ರೀಡಾಪಟುವೊಬ್ಬ ಕ್ರೀಡಾಡಳಿತ­ದೊಳಗೆ ಬಂದಾಗ ಆ ಕ್ಷೇತ್ರಕ್ಕೆ ಮೌಲಿಕ­ವಾದಂತಹದ್ದನ್ನು ಕೊಡಲು ಸಾಧ್ಯ. ಕ್ರೀಡಾಪಟುಗಳ ನೋವು ನಲಿವು­ಗಳೆ ಲ್ಲವೂ ಇಂತಹ ಕ್ರೀಡಾಡಳಿತ­ಗಾರರಿಗೆ ಅನುಭವಿಸಿಯೇ ಗೊತ್ತಿರುವುದರಿಂದ ಆಟಗಾರರಿಗೆ ಒಳಿತಾಗುವಂತಹದ್ದು ಏನು ಎಂಬುದು ಗೊತ್ತಿರುತ್ತದೆ.

ನಾನು 1972ರಿಂದ 79ರವರೆಗೆ ಬ್ಯಾಸ್ಕೆಟ್‌ಬಾಲ್‌ನಲ್ಲಿ ಕರ್ನಾಟಕ ರಾಜ್ಯದ ಸಬ್‌ ಜೂನಿಯರ್‌, ಜೂನಿ ಯರ್‌ ತಂಡಗಳಲ್ಲಿ ಆಡಿದ್ದೆ. ದೇಶದ ವಿವಿಧ ನಗರಗಳಲ್ಲಿ ನಡೆದಿದ್ದ ಹಲವು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲೂ ಆಡಿದ್ದೆ.  ಆ ದಿನಗಳಲ್ಲಿ ರಾಜ್ಯದ ವಿವಿಧ ಕಡೆ ನಡೆದಿದ್ದ ಹತ್ತು ಹಲವು ಟೂರ್ನಿ­ಗಳಲ್ಲಿ ಸಾಕಷ್ಟು ಬೆವರು ಹರಿಸಿದ್ದೆ. ನನ್ನ ಆ ಅನುಭವ ನಾನೊಬ್ಬ ಕ್ರೀಡಾಡಳಿತ­ಗಾರನಾದಾಗ ಬಹಳಷ್ಟು ನೆರವಿಗೆ ಬಂದಿತು. ನಾನು ರಾಜ್ಯವನ್ನು ಪ್ರತಿನಿಧಿ­ಸುತ್ತಿದ್ದ ದಿನಗಳಲ್ಲಿ ಹೊರಗೆ ಹೋದಾಗ ಊಟಕ್ಕೆ ಸಾಕಾಗುವಷ್ಟು ಹಣ ಕೊಡುತ್ತಿರಲಿಲ್ಲ. ಕಿಟ್‌ ಪಡೆಯಲಿಕ್ಕೂ ಹಣ ಕೊಡಬೇಕಿತ್ತು.

ಆ ಹಣವನ್ನು ಸರ್ಕಾರದಿಂದ ಬಂದ ಮೇಲೆ ಕೊಡುವು­ದಾಗಿ ಸಂಬಂಧಪಟ್ಟವರು ಹೇಳು­ತ್ತಿದ್ದರು. ಅದು ನಮ್ಮ ಕೈಗೆಟುಕದ ಗಂಟು ಆಗಿತ್ತು ಬಿಡಿ. ನಾನು ಬ್ಯಾಸ್ಕೆಟ್‌ಬಾಲ್‌ ಸಂಸ್ಥೆಯ ಆಡಳಿತವನ್ನು ಕೈಗೆತ್ತಿಕೊಂಡ ಮೇಲೆ ಆಟಗಾರರು ಅಂತಹ ಪಡಿಪಾಟಲು ಪಡದಂತೆ ನೋಡಿಕೊಂಡೆ. ಒಲಿಂಪಿಕ್‌ ಸಂಸ್ಥೆಯ ಅಧಿಕಾರ ಸಿಕ್ಕಿದ ನಂತರ ಸರ್ಕಾರದ ಮೇಲೆ ಒತ್ತಡ ಹೇರಿ ರಾಜ್ಯ ತಂಡಗಳ ಆಟಗಾರರ ದಿನಭತ್ಯೆ ಏರು­ವಂತೆ ಪ್ರಯತ್ನಿಸಿದೆ. ಮೊದಲಿಗೆ ರೂ.50 ಇದ್ದಿದ್ದು, ಹಂತ ಹಂತವಾಗಿ ಏರುತ್ತಾ ಇದೀಗ ರೂ. 200 ಸಿಗುತ್ತಿದೆ.
ಆಟಗಾರರಿಗೆ ಪೌಷ್ಠಿಕಾಂಶ ಇರುವ ಆಹಾರ ನೀಡುವ ಬಗ್ಗೆ, ಉತ್ತಮ ಗುಣ ಮಟ್ಟದ ಶೂ ಕೊಡುವ ಕುರಿತು, ಉತ್ತಮ ಗುಣಮಟ್ಟದ ಪ್ರಯಾಣ ಸೌಲಭ್ಯ ಎಟುಕುವಂತೆ ಮಾಡುವಲ್ಲಿ, ಉತ್ತಮ ವಸತಿ ವ್ಯವಸ್ಥೆ ಇತ್ಯಾದಿಗಳೆಲ್ಲ ದರ ಬಗ್ಗೆಯೂ ಕ್ರೀಡೆಯ ಬಗ್ಗೆ ಅತ್ಯುತ್ತಮ ಅರಿವು ಇರುವ ಆಡಳಿತ ಗಾರರು ಮಾತ್ರ ಸಕಾರಾತ್ಮಕವಾಗಿ ಸ್ಪಂದಿಸಬಲ್ಲರು ಎಂಬುದು ನಿಜ.

ಸರ್ಕಾರವೇ ಎಲ್ಲದಕ್ಕೂ ಹಣ ಕೊಡಲು ಆಗುವುದಿಲ್ಲ. ಯಾವುದಾದ ರೊಂದು ಕ್ರೀಡೆಯ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಸಂಘಟಿಸಬೇಕೆಂದರೆ ಸರ್ಕಾರ ₨ 5 ಲಕ್ಷ ಕೊಡಬಹುದಷ್ಟೆ. ಅದಕ್ಕೆ ಅಗತ್ಯವಾದ ಇನ್ನೂ ₨ 45 ಲಕ್ಷಗಳನ್ನು ಪ್ರಾಯೋಜಕರ ಮೂಲಕವೇ ಹೊಂದಿಸಿಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಕ್ರೀಡಾಸಕ್ತ ರಾಜಕಾರ­ಣಿಗಳ ನೆರವು ಬೇಕಾಗುತ್ತದೆ.

ಹೀಗಾಗಿ ಕ್ರೀಡೆಯಲ್ಲಿ ಸಾಕಷ್ಟು ಪರಿಶ್ರಮ ಇರುವವರು ಆಕಸ್ಮಿಕವಾಗಿ ರಾಜಕಾರಣಿಗಳಾದರೆ, ಅಂತಹವರು ಕ್ರೀಡಾಡಳಿವನ್ನು ಕೈಗೆತ್ತಿಕೊಂಡರೆ ಒಳಿತು ತಾನೆ. ಆದರೆ ಅಂತಹ ರಾಜಕಾರಣಿಗಳು ಕ್ರೀಡೆಗೇ ಹೆಚ್ಚು ಕೊಡುವಂತಹವರಿ ರಬೇಕೇ ಹೊರತು, ಕ್ರೀಡೆಯಿಂದ ಕಿತ್ತು ಕೊಳ್ಳುವವರಾಗಿರಬಾರದು. ಅಂತಹ ಮಂದಿಯನ್ನು ಕ್ರೀಡಾಪಟುಗಳೇ ಗುರುತಿಸಿ ನಿರ್ಲಕ್ಷಿಸಬೇಕಾದ ಅಗತ್ಯವೂ ಇದೆ.

ಕ್ರೀಡಾಡಳಿತದಲ್ಲಿ ಯಾರು ಇರಬೇಕು, ಯಾರು ಇರಬಾರದು ಎನ್ನುವುದಕ್ಕಿಂತ ಸಂಬಂಧ ಪಟ್ಟ ಕ್ರೀಡಾ ಸಂಸ್ಥೆಯು ತಾನು ಪಡೆದ ಒಟ್ಟು ಹಣ ಮತ್ತು ಅದನ್ನು ಖರ್ಚು ಮಾಡಿದ ಸಂಪೂರ್ಣ ವಿವರ ಗಳನ್ನು ಪ್ರತಿ ವರ್ಷವೂ ಎಷ್ಟರ ಮಟ್ಟಿಗೆ ಸಾರ್ವಜನಿಕರ ಮುಂದಿಡುತ್ತದೆ ಎನ್ನುವುದು ಮುಖ್ಯವಾಗಬೇಕು. ಪ್ರತಿಯೊಂದು ಕ್ರೀಡಾ ಸಂಸ್ಥೆ ಮತ್ತು ಫೆಡರೇಷನ್‌ಗಳ ಆಡಳಿತ ಪಾರದರ್ಶಕ ವಾಗಿದ್ದಷ್ಟೂ ಕ್ರೀಡಾಪಟುಗಳಿಗೆ ಅನುಕೂಲಕರವಾದಂತಹ ಆರೋಗ್ಯಕರ ವಾತಾವರಣ ಮೂಡಲು ಸಾಧ್ಯ. ಇದು ಕ್ರೀಡಾಡಳಿತಗಾರರೆಲ್ಲರೂ ಗಮನಿಸ ಬೇಕಾದಂತಹ ಸಂಗತಿಯಾಗಿದೆ. ಬಹುಶಃ ರಾಹುಲ್‌ ಗಾಂಧಿಯವರ ಮನಸ್ಸಿನಲ್ಲಿ ರುವುದೂ ಇದೇ ಅಂಶ ಎಂದು ನನಗನಿಸುತ್ತದೆ.
(ಲೇಖಕರು: ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT