ಕಣ್ಮರೆಯ ಅಂಚಿನಲ್ಲಿರುವ ಸಿರಿಧಾನ್ಯ ಸಾವೆಅಕ್ಕಿಯನ್ನು ಬಳಸಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಹಾಗೂ ಪೋಷಣಾ ವಿಭಾಗದ ಸಂಶೋಧನಾ
ವಿದ್ಯಾರ್ಥಿನಿ ಯು.ರೂಪಾ ಅವರು ಸಿದ್ಧ ಪಡಿಸಿದ `ಸ್ಪೋರ್ಟ್ಸ್ ಫುಡ್ ಮಿಕ್ಸ್~ ಹೆಸರಿನ ಸಿದ್ಧ ಆಹಾರಕ್ಕೆ ನ್ಯೂಟ್ರೀಶನ್ ಸೊಸೈಟಿ ಆಫ್ ಇಂಡಿಯಾ (ಎನ್‌ಎಸ್‌ಐ) ಮನ್ನಣೆ ನೀಡಿದೆ.
ಕ್ರೀಡಾಪಟುಗಳ ಸಾಮರ್ಥ್ಯ ವೃದ್ಧಿಗೆ ಯಾವುದೇ ಕೃತಕ ರಾಸಾಯನಿಕಗಳನ್ನು ಬಳಸದೇ ನಿಸರ್ಗದತ್ತವಾಗಿ ದೊರೆ ಯುವ ಶಕ್ತಿವರ್ಧಕಗಳನ್ನು ಬಳಸಿಕೊಂಡು `ಸ್ಪೋರ್ಟ್ಸ್ ಫುಡ್ ಮಿಕ್ಸ್~ ಅನ್ನು ತಯಾರಿಸಲಾಗಿದೆ. ಕೇಂದ್ರದ ಕೃಷಿ ಸಚಿವಾಲಯದ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ನೆರವಿನಡಿ ಈ ಪ್ರಯೋಗ ನಡೆದಿದೆ.
ಹುರಿದ ಸಾವೆ, ಸೋಯಾಬೀನ್, ಕೆನೆರಹಿತ ಹಾಲಿನ ಪುಡಿ, ಸಕ್ಕರೆ ಮತ್ತು ಏಲಕ್ಕಿ ಪುಡಿಯಿಂದ ಈ ಸಿದ್ಧ ಆಹಾರ ತಯಾರಿಸಲಾಗಿದೆ. ಹಿಂದೊಮ್ಮೆ ಸಾಂಪ್ರದಾಯಿಕ ಆಹಾರ ಧಾನ್ಯಗಳು ಎನಿಸಿ ಇಂದು ನೇಪಥ್ಯಕ್ಕೆ ಸರಿಯುತ್ತಿರುವ ಸಿರಿಧಾನ್ಯಗಳ ಮಹತ್ವವನ್ನು ಈ ಪ್ರಯೋಗ ಸಿದ್ಧಪಡಿಸಿದೆ.
ಸ್ಪೋರ್ಟ್ಸ್‌ಮಿಕ್ಸ್ ಸಿದ್ಧ ಆಹಾರವು ಪೌಡರ್ ರೂಪದಲ್ಲಿದ್ದು, ಆರು ತಿಂಗಳು ಕಾಲ ಬಳಸಲು ಯೋಗ್ಯವಾಗಿದೆ. ಇದರಲ್ಲಿ ಪ್ರತೀ 100 ಗ್ರಾಂಗೆ 14.29ರಷ್ಟು ಪ್ರೊಟೀನ್ ಅಡಕವಾಗಿದ್ದು, 262 ಮಿಲಿ ಗ್ರಾಂ.ನಷ್ಟು ಕ್ಯಾಲ್ಸಿಯಂ ಹಾಗೂ ಐದು ಮಿಲಿ ಗ್ರಾಂನಷ್ಟು ಕಬ್ಬಿಣದ ಅಂಶ ಇದೆ.
ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಪ್ರಯೋಗ: ಸ್ಪೋರ್ಟ್ಸ್ ಫುಡ್ ಮಿಕ್ಸ್‌ನ ಕಾರ್ಯಕ್ಷಮತೆ ಅಳೆಯಲು ಸತತ 60 ದಿನಗಳ ಕಾಲ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದ ಧಾರವಾಡದ ಪ್ರಾದೇಶಿಕ ಕೇಂದ್ರದ 31 ಕ್ರೀಡಾಪಟುಗಳ ಮೇಲೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಪ್ರತಿ ದಿನ ಪ್ರಯೋಗಕ್ಕೆ ಒಳಗಾದ ಕ್ರೀಡಾಪಟುವಿನ ತೂಕ ಹಾಗೂ ರಕ್ತದ ಸ್ಯಾಂಪಲ್ ಪಡೆದು ಪ್ರಯೋಗಕ್ಕೆ ಒಳಪಡಿಸಲಾಗುತ್ತಿತ್ತು.
ಸಾಯ್‌ನ ವೈದ್ಯರ ಸಹಕಾರದಿಂದ ನಡೆದ ಈ ಪ್ರಯೋಗದಲ್ಲಿ ಸ್ಪೋರ್ಟ್ಸ್ ಫುಡ್ ಮಿಕ್ಸ್ ಸೇವನೆಯ ನಂತರ ಕ್ರೀಡಾಪಟುಗಳ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಶೇ.3.55ರಷ್ಟು ಹೆಚ್ಚಳಗೊಂಡಿದೆ.
ಕ್ರೀಡಾಪಟುಗಳು ರೂಢಿಗತವಾಗಿ ಪಡೆಯುತ್ತಿದ್ದ ಆಹಾರ ಸೇವಿಸಿದಾಗಿನ ಪ್ರದರ್ಶನಕ್ಕಿಂತ ಸ್ಪೋರ್ಟ್ಸ್ ಫುಡ್ ಬೆರೆಸಿದ ಆಹಾರ ಸೇವನೆಯ ನಂತರ ನೀಡಿದ ಪ್ರದರ್ಶನ ಮಟ್ಟ ಗಣನೀಯವಾಗಿ ಹೆಚ್ಚಳ ಗೊಂಡಿರುವುದು ಪ್ರಯೋಗದ ವೇಳೆ ಸಾಬೀತಾಗಿದೆ.
ಸಾಮಾನ್ಯವಾಗಿ ಕ್ರೀಡಾಪಟುಗಳು ಪ್ರದರ್ಶನ ಅಥವಾ ಸಿದ್ಧತೆಯ ವೇಳೆ ಪೋಷಕಾಂಶ ಕೊರತೆಯಾದರೆ ಬಹುಬೇಗನೆ ಆಯಾಸಗೊಳ್ಳುವರು. ರಕ್ತದಲ್ಲಿ ಅಗತ್ಯ ಪ್ರಮಾಣದಷ್ಟು ಪ್ರೊಟೀನ್ ಹಾಗೂ ಕಬ್ಬಿಣದ ಅಂಶವನ್ನು ಸಾವೆ ಹಾಗೂ ಸೋಯಾಬೀನ್ ಒದಗಿಸಲಿವೆ.
ಸ್ನಾಯುಗಳು ಬಲಗೊಳ್ಳಲು ಕ್ಯಾಲ್ಸಿಯಂ ಅಗತ್ಯವಿದ್ದು, ಹಾಲಿನಿಂದ ಪಡೆಯಬಹುದಾಗಿದೆ. ಈ ಎಲ್ಲಾ ಪೋಷಕಾಂಶವನ್ನು ಸ್ಪೋರ್ಟ್ಸ್ ಫುಡ್‌ಮಿಕ್ಸ್ ಒದಗಿಸಲಿದೆ. ಎನ್‌ಎಸ್‌ಐನ ಮಾನದಂಡದಂತೆ ಪೋಷಕಾಂಶಗಳು ಇದರಲ್ಲಿ ಅಡಕವಾಗಿವೆ ಎನ್ನುತ್ತಾರೆ ರೂಪಾ.
ಸಾಯ್‌ನ ಕ್ರೀಡಾಪಟುಗಳೊಂದಿಗೆ ಧಾರವಾಡ ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ವ್ಯಾಪ್ತಿಯ ಆಟಗಾರರು ಹಾಗೂ ಮಲ್ಲಸಜ್ಜನ ವ್ಯಾಯಾಮ ಶಾಲೆಯ ದೈಹಿಕ ಕಸರತ್ತುದಾರರ ಮೇಲೂ ಪ್ರಯೋಗ ನಡೆಸಿ ಪೂರಕ ಫಲಿತಾಂಶ ಪಡೆಯಲಾಗಿದೆ.
ದೈಹಿಕ ಕಸರತ್ತಿನ ಸ್ವಲ್ಪ ಹೊತ್ತು ಮುಂಚೆ ಈ ಆಹಾರವನ್ನು ಸೇವಿಸಿದ ಪರಿಣಾಮ ಹೆಚ್ಚು ಸಮಯ ಆಯಾಸವಾಗದೇ ಕಸರತ್ತಿನಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ಪ್ರದರ್ಶನ ಮಟ್ಟ ಹೆಚ್ಚಳಗೊಂಡಿದೆ. ವಾಣಿಜ್ಯ ಮಹತ್ವದ ಬೆಳೆಗಳ ಕಡೆ ಗಮನ ನೀಡಿ ಇಂದು ಸಾವೆ ಬೆಳೆಯುವುದರಿಂದ ಕೃಷಿಕರು ಸಂಪೂರ್ಣ ವಿಮುಖರಾಗುತ್ತಿದ್ದಾರೆ.
ರೈತಾಪಿ ಕುಟುಂಬದಿಂದ ಬಂದ ತಾವು ಚಿಕ್ಕಂದಿನಿಂದಲೂ ಮನೆಯಲ್ಲಿ ಸಾವೆ ಬಳಸುತ್ತಿದ್ದು, ಅದನ್ನೇ ಸಂಶೋಧನೆಗೆ ಆಯ್ಕೆ ಮಾಡಿಕೊಂಡಿದ್ದಾಗಿ ರೂಪಾ ಹೇಳುತ್ತಾರೆ
ಸಾವೆ ಬಳಕೆ ಮಾಡಿ ನಡೆಸಿದ ಸಂಶೋಧನೆ ನೈಸರ್ಗಿಕವಾಗಿ ಶಕ್ತಿವರ್ಧನೆಯಲ್ಲಿ ಕಿರು ಧಾನ್ಯದ ಮಹತ್ವಕ್ಕೆ ರಾಷ್ಟ್ರಮಟ್ಟದಲ್ಲಿ ದೊರೆತ ಮನ್ನಣೆ ಎನ್ನುತ್ತಾರೆ ರೂಪಾ ಅವರಿಗೆ ಸಂಶೋಧನಾ ಮಾರ್ಗದರ್ಶಕರಾಗಿರುವ ಡಾ.ಬಿ.ಕಸ್ತೂರಬಾ. ಗಂಜಿ ರೂಪದಲ್ಲಿ ಅಥವಾ ಹಾಲಿನಲ್ಲಿ ಬೆರೆಸಿ ಇಲ್ಲವೇ ಪೌಡರ್ ರೂಪದಲ್ಲಿಯೇ ಸೇವಿಸಬಹುದಾದ ಸ್ಪೋರ್ಟ್ಸ್ ಫುಡ್ ಮಿಕ್ಸನ್ನು ಅತಿ ಕಡಿಮೆ ಸಮಯದಲ್ಲಿ ತಯಾರಿಸಬಹುದಾಗಿದೆ.
ಸಾವೆ ಅಕ್ಕಿಯಂತಹ ಸಿರಿ ಧಾನ್ಯ ಬಳಸಿ ಸಂಶೋಧನೆ ಕೈಗೆತ್ತಿಕೊಂಡು ಪೂರಕ ಫಲಿತಾಂಶ ಪಡೆದಿರುವುದು ನಮ್ಮಲ್ಲಿಯೇ ಪ್ರಥಮ ಎನ್ನುತ್ತಾರೆ ಕೃಷಿ ವಿವಿಯ ಆಹಾರ ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ.ಪುಷ್ಪಾ ಭಾರತಿ.
ಶಕ್ತಿವರ್ಧಕವಾಗಿರುವ ಈ ಸಿದ್ಧ ಆಹಾರವನ್ನು ಕ್ರೀಡಾಪಟುಗಳಿಗೇ ಹೆಚ್ಚು ಉಪಯುಕ್ತವಾಗಿರುವುದರಿಂದ ಇದಕ್ಕೆ `ಸ್ಪೋರ್ಟ್ಸ್ ಫುಡ್‌ಮಿಕ್ಸ್~ ಎಂದು ಹೆಸರಿಸಲಾಗಿದೆ. ತಮ್ಮ ಈ ಪ್ರಯೋಗಕ್ಕೆ ಕಳೆದ ನವೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ನ್ಯೂಟ್ರಿಶನ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ `ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಳದಲ್ಲಿ ಸ್ಪೋರ್ಟ್ಸ್ ಫುಡ್‌ಮಿಕ್ಸ್ ಪಾತ್ರ~ ಕುರಿತು ರೂಪಾ ಅವರು ಪ್ರಬಂಧ ಮಂಡಿಸಿದ್ದರು.
ರೂಪಾ ಅವರಿಗೆ ಎನ್‌ಎಸ್‌ಐ ರಾಷ್ಟ್ರೀಯಮಟ್ಟದಲ್ಲಿ `ಯುವ ವಿಜ್ಞಾನಿ~ ಗೌರವ ಪ್ರದಾನ ಮಾಡಿದೆ. ಈ ಉತ್ಪನ್ನಕ್ಕೆ ಮಾರುಕಟ್ಟೆ ಮೌಲ್ಯ ಒದಗಿಸುವ ಕಾರ್ಯವನ್ನು ಐಸಿಎಆರ್‌ನ ಅಂಗ ಸಂಸ್ಥೆ ರಾಷ್ಟ್ರೀಯ ಕೃಷಿ ನವೀನತೆ ಯೋಜನೆ (ಎನ್‌ಎಐಪಿ) ಅಡಿ ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.