ADVERTISEMENT

ಗೋಲುಪೆಟ್ಟಿಗೆಯ ಮುಂದೆ ಕರ್ನಾಟಕ ವೈಭವ

ಗಿರೀಶದೊಡ್ಡಮನಿ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST
ಗೋಲುಪೆಟ್ಟಿಗೆಯ ಮುಂದೆ ಕರ್ನಾಟಕ ವೈಭವ
ಗೋಲುಪೆಟ್ಟಿಗೆಯ ಮುಂದೆ ಕರ್ನಾಟಕ ವೈಭವ   

`ದ ವಾಲ್ ಆಫ್ ಗಿಬ್ರಾಲ್ಟರ್~ ಶಂಕರ್ ಲಕ್ಷಣ್ ಅವರ ಹೆಸರು ಕೇಳಿದರೆ ಸಾಕು ಕರ್ನಾಟಕದ ಹಾಕಿ ಆಟಗಾರರ ಎದೆ ಹೆಮ್ಮೆಯಿಂದ ಸೆಟೆಯುತ್ತದೆ.

ಒಲಿಂಪಿಕ್ಸ್ ಅಂಗಳದಲ್ಲಿ ಭಾರತ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗೋಲ್‌ಕೀಪರ್ ಅವರು. ಮೂಲತಃ ಮಧ್ಯಪ್ರದೇಶದವರಾದರೂ ಭಾರತೀಯ ಸೇನೆಯಲ್ಲಿದ್ದ ಅವರ ಸೇವೆ ಕರ್ನಾಟಕಕ್ಕೆ ಸಿಕ್ಕಿತ್ತು. ಹಾಕಿ ಇತಿಹಾಸದಲ್ಲಿಯೇ ಭಾರತ ತಂಡಕ್ಕೆ ನಾಯಕರಾಗಿ ಆಯ್ಕೆಯಾದ ಪ್ರಥಮ ಗೋಲ್‌ಕೀಪರ್ ಅವರಾಗಿದ್ದರು. ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ (1956) ಚಿನ್ನ, ರೋಮ್ ಒಲಿಂಪಿಕ್ಸ್‌ನಲ್ಲಿ (1960) ಬೆಳ್ಳಿ ಮತ್ತು ಟೋಕಿಯೋ ಒಲಿಂಪಿಕ್ಸ್ (1964) ಚಿನ್ನ ಗೆದ್ದ ಭಾರತ ತಂಡದ `ಸ್ಟಾರ್ ಗೋಲ್‌ಕೀಪರ್~ ಎನಿಸಿದ್ದರು.

ಹಾಕಿ ಇತಿಹಾಸ ಪುಟಗಳನ್ನು ತಿರುವಿದರೆ ಇಂತಹ ಹಲವು ಗೋಲ್‌ಕೀಪರ್‌ಗಳ ಸಾಧನೆ ಕಣ್ಣು ಮುಂದೆ ನಿಲ್ಲುತ್ತದೆ. ಆದರೆ, ಒಂದು ರೀತಿಯಲ್ಲಿ ಈ ಕೆಲಸ `ಥ್ಯಾಂಕ್‌ಲೆಸ್ ಜಾಬ್~ ಕೂಡ ಹೌದು. ಹಲವು ಗೋಲುಗಳಾಗುವುದನ್ನು ತಡೆದರೂ ಬಿಟ್ಟ ಒಂದು ಗೋಲಿನ ಬಗ್ಗೆಯೇ ಟೀಕೆಗಳ ಸುರಿಮಳೆಯಾಗುತ್ತದೆ.

ADVERTISEMENT

ಆದರೂ ಇಂತಹ ಕಠಿಣ ಸವಾಲಿನ ಕೆಲಸಕ್ಕೆ ಕನ್ನಡನಾಡಿನ ಹಲವು ಆಟಗಾರರು ಎದೆಯೊಡ್ಡಿ ನಿಂತಿದ್ದಾರೆ. ಅಷ್ಟೇ ಅಲ್ಲ ದೇಶದ ಪದಕ ಸಾಧನೆಗೆ ವಿಶಿಷ್ಟ ಕಾಣಿಕೆ ನೀಡಿದ್ದಾರೆ. 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು 1960ರಲ್ಲಿ ರೋಮ್‌ನಲ್ಲಿ ಬೆಳ್ಳಿ ಗೆದ್ದಾಗ ದೇಶಮುತ್ತು, 1964ರ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಾಗ ಆರ್.ಎ. ಕ್ರಿಸ್ಟಿ, 1972ರ ಒಲಿಂಪಿಕ್ಸ್‌ನಲ್ಲಿ ಕಂಚು ಪಡೆದಾಗ ಮ್ಯಾನುವೆಲ್ ಫ್ರೆಡ್ರಿಕ್ಸ್ ಗೋಲ್‌ಕೀಪಿಂಗ್ ನಿರ್ವಹಿಸಿ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದರು.

90ರ ದಶಕದಲ್ಲಿ ಆಶೀಶ್ ಬಲ್ಲಾಳ್ (1992 ಒಲಿಂಪಿಕ್ಸ್), ಎ.ಬಿ. ಸುಬ್ಬಯ್ಯ (1992 ಮತ್ತು 1996) ಭಾರತದ ಗೋಲ್‌ಕೀಪರ್ ಆಗಿ ಸೈ ಎನಿಸಿಕೊಂಡವರು. ಏಷ್ಯನ್ ಕ್ರೀಡಾಕೂಟ ಮತ್ತು ವಿಶ್ವಕಪ್ ಟೂರ್ನಿಗಳಲ್ಲಿ ಇವರ ಸಾಧನೆ ದೊಡ್ಡದು. ಈ ಪರಂಪರೆ ಈಗಲೂ ಮುಂದುವರೆದಿದೆ.

ಸದ್ಯ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾರತ ತಂಡದ ನಾಯಕ, ಗೋಲ್‌ಕೀಪರ್ ಭರತ್ ಚೆಟ್ರಿ ಕೂಡ ಇಲ್ಲಿಯವರೇ. ತಮ್ಮ ಸಹ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರೊಂದಿಗೆ ಒಲಿಂಪಿಕ್ಸ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಕಷ್ಟದ ಸವಾಲು: ಆಕ್ರಮಣಕಾರಿ ಆಟವನ್ನು ಮೇಜರ್ ಧ್ಯಾನಚಂದ್ ಕಾಲದಿಂದಲೂ ನೆಚ್ಚಿಕೊಂಡಿರುವ ಭಾರತ ಹಾಕಿ ತಂಡದಲ್ಲಿ ಗೋಲ್ ಕೀಪಿಂಗ್ ಮಾಡುವುದು ಸುಲಭದ ಕೆಲಸವಲ್ಲ. ಏಕೆಂದರೆ ಎದುರಾಳಿ ಗೋಲುಪೆಟ್ಟಿಗೆಯ ಮೇಲೆ ತಂಡದ ದಾಳಿ ಹೆಚ್ಚು ನಡೆಯುವುದರಿಂದ ಎದುರಾಳಿ ಆಟಗಾರರು ರಕ್ಷಣಾತ್ಮಕ ಆಟಕ್ಕೆ ಇಳಿಯುತ್ತಾರೆ. ಆಗ ಈ ಬದಿಯಲ್ಲಿ ಗೋಲ್‌ಕೀಪರ್ ಹೆಚ್ಚು ಪ್ರತಿರೋಧ ಎದುರಿಸದೇ ಆಟವನ್ನು ಗಮನಿಸುತ್ತ ನಿಲ್ಲಬೇಕಾಗುತ್ತದೆ.

`ಪ್ರಥಮಾರ್ಧದಲ್ಲಿ ಬಹುತೇಕ ಹೊತ್ತಿನಲ್ಲಿ ನಮ್ಮ ತಂಡದವರು ಎದುರಾಳಿ ಗೋಲ್‌ಪೋಸ್ಟ್ ಮೇಲೆ ದಾಳಿ ಮಾಡುವಾಗ, ನಮ್ಮ `ಡಿ~ ವಲಯಕ್ಕೆ ಹೆಚ್ಚು ಬಾರಿ ಚೆಂಡು ಬರುವುದಿಲ್ಲ. ಆಗ ನಮ್ಮ ದೇಹದ ಚಲನೆಯನ್ನು ಕಾಪಾಡಿಕೊಳ್ಳಲು ರಿಫ್ಲೆಕ್ಸ್ ತಂತ್ರಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ನಾವು ಪೂರ್ವಾಭ್ಯಾಸದಲ್ಲಿ ಮಾಡುವ ವ್ಯಾಯಾಮಗಳಿಂದಾಗಿ ನಮ್ಮ ಚಲನೆಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಯಾವುದೋ ಒಂದು ಸಂದರ್ಭದಲ್ಲಿ ಎದುರಾಳಿ ಡಿಫೆಂಡರ್‌ಗಳು ದಾಳಿ ಮಾಡಿದಾಗ ಅಥವಾ ಪೆನಾಲ್ಟಿ ಕಾರ್ನರ್‌ಗಳಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವುದು ಕಷ್ಟವಾಗುತ್ತದೆ~ ಎಂದು ಒಲಿಂಪಿಕ್ ಅರ್ಹತಾ ಟೂರ್ನಿಯ ಫೈನಲ್ ಪಂದ್ಯದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಹೇಳುತ್ತಾರೆ.

ಮೈಮೇಲೆ ಮಣಭಾರದ ರಕ್ಷಾ ಕವಚಗಳನ್ನು ಹಾಕಿಕೊಂಡು ಗೋಲುಪೆಟ್ಟಿಗೆಯ ರಕ್ಷಣೆ ಮಾಡುವುದು ಸವಾಲಿನ ಕೆಲಸ. ಮೈಯೆಲ್ಲಾ ಕಣ್ಣಾಗಿ ಯಾವ ದಿಕ್ಕಿನಿಂದ ಚೆಂಡು ನುಗ್ಗುತ್ತದೆ ಎಂದು ಅಂದಾಜಿಸಿ, ಮಿಂಚಿನ ವೇಗದಲ್ಲಿ ಮುನ್ನುಗ್ಗಿ ಚೆಂಡನ್ನು ತಡೆಯುತ್ತಾರೆ. ಸಂದೀಪ್‌ಸಿಂಗ್ ಅವರಂತಹ ಪೆನಾಲ್ಟಿ ಕಾರ್ನರ್ ತಜ್ಞರು ಸಿಡಿಸುವ 130-140 ಕಿ.ಮೀ ವೇಗದಲ್ಲಿ ಡ್ರ್ಯಾಗ್‌ಫ್ಲಿಕ್‌ಗಳನ್ನು ತಡೆಯಲು ಅಷ್ಟೇ ವೇಗದ ಚುರುಕುತನ ಬೇಕಾಗುತ್ತದೆ.

ತಲೆಯಿಂದ ಕುತ್ತಿಗೆಯವರೆಗೆ ಮುಚ್ಚುವ ಹೆಲ್ಮೆಟ್, ಎಡಗೈಗೆ ಚೌಕಾಕಾರದ ಬೆರಳು ಕಕ್ಷೆಗಳಿಲ್ಲದ ಗ್ಲೌಸ್, ಇನ್ನೊಂದು ಕೈನಲ್ಲಿ   ಸ್ಟಿಕ್, ಕಾಲಿಗೆ ದಪ್ಪ ಪ್ಯಾಡ್, ಕಿಕ್ಕರ್‌ಗಳನ್ನು ಧರಿಸಿ ಥೇಟ್ ರೋಬೋಟ್‌ಗಳಂತೆ ಕಾಣುವ ಗೋಲ್‌ಕೀಪರ್‌ಗಳು ವಹಿಸುವ ಶ್ರಮಕ್ಕೆ ಪ್ರಚಾರ ಸಿಗುವುದು ಅಪರೂಪ. ಆದರೆ ಆಶೀಶ್‌ಬಲ್ಲಾಳ್ ಈ ಏಕಾತನೆಯನ್ನು ಮುರಿದವರು.

1998ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟ ಹಾಕಿ ಫೈನಲ್‌ನ ಟೈ ಬ್ರೇಕರ್‌ನಲ್ಲಿ ಎರಡು ಬಾರಿ ಗೋಲು ಉಳಿಸಿದ ಆಶೀಶ್ ರಾತ್ರಿ ಕಳೆದು ಬೆಳಗಾಗುವುದರೊಳಗೆ `ಹೀರೊ~ ಅಗಿಬಿಟ್ಟಿದ್ದರು. 32 ವರ್ಷಗಳ ನಂತರ ಈ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕ ಗೆಲ್ಲಲು ಅವರ ಈ ಸಾಧನೆಯೇ ಕಾರಣವಾಗಿತ್ತು. ಕ್ರಿಕೆಟ್ ಅಬ್ಬರ ಮುಗಿಲು ಮುಟ್ಟುವ ಕಾಲದಲ್ಲಿಯೂ ದೇಶದ ಗಮನ ಸೆಳೆದ ಗೋಲ್‌ಕೀಪರ್‌ಗಳನ್ನು ದೇಶಕ್ಕೆ ನೀಡಿದ ಹೆಮ್ಮೆ ಕನ್ನಡನಾಡಿನದ್ದು.

ಇದೀಗ ಭರತ್ ಚೆಟ್ರಿಯ ಸರದಿ. ಚೆಟ್ರಿ ಈಗ ಕರ್ನಾಟಕದವರೇ ಆಗಿಬಿಟ್ಟ್ದ್ದಿದಾರೆ. ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡಿರುವ ಈ ಆಟಗಾರ ಗೋಲ್‌ಕೀಪಿಂಗ್‌ನಲ್ಲಿಯೂ ಚುರುಕಾಗಿದ್ದಾರೆ. ಒಲಿಂಪಿಕ್ಸ್ ಪದಕ ಗೆಲ್ಲುವ ಆಸೆ ಅವರ ಎದೆಗೂಡಲ್ಲಿ ಬೆಚ್ಚಗೆ ಕುಳಿತಿದೆ. ಜೊತೆಗೆ ಕರ್ನಾಟಕದ ಗೋಲ್‌ಕೀಪಿಂಗ್ ಪರಂಪರೆಯ ಪ್ರಮುಖ ಕೊಂಡಿಯಾಗುವ ನಿರೀಕ್ಷೆಗಳೂ ಅವರಿಂದ ಇವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.