ADVERTISEMENT

ಫ್ಲಿಕಿಂಗ್ ಸಿಖ್ ಸಂದೀಪ್ ಸಿಂಗ್!

ಗಿರೀಶದೊಡ್ಡಮನಿ
Published 26 ಫೆಬ್ರುವರಿ 2012, 19:30 IST
Last Updated 26 ಫೆಬ್ರುವರಿ 2012, 19:30 IST
ಫ್ಲಿಕಿಂಗ್ ಸಿಖ್ ಸಂದೀಪ್ ಸಿಂಗ್!
ಫ್ಲಿಕಿಂಗ್ ಸಿಖ್ ಸಂದೀಪ್ ಸಿಂಗ್!   

ಹರಿಯಾಣ ರಾಜ್ಯದ ಊರು ಕುರುಕ್ಷೇತ್ರದ ಹೆಸರಿನಲ್ಲಿಯೇ ದಿಟ್ಟ ಹೋರಾಟದ ಪ್ರತಿಧ್ವನಿಯಿದೆ. ರಾಜಕೀಯದ ದೃಷ್ಟಿಯಿಂದ ಮಹತ್ವದ ಕ್ಷೇತ್ರವಾಗಿರುವ ಈ  ಸ್ಥಳ ರಾಷ್ಟ್ರೀಯ ಕ್ರೀಡೆಗೆ ಕೊಟ್ಟಿರುವ ಕಾಣಿಕೆಯೂ ದೊಡ್ಡದು!

ಲಂಡನ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯ ಕೆಲ ಪಂದ್ಯಗಳಲ್ಲಿ ಭಾರತದ ಗೆಲುವಿನ ರೂವಾರಿಯಾಗಿರುವ ಸಂದೀಪ್ ಸಿಂಗ್ ಕೂಡ ಕುರುಕ್ಷೇತ್ರ ಕ್ಷೇತ್ರದ ಶಹಾಬಾದ್‌ನಲ್ಲಿ ಹುಟ್ಟಿದವರು. ತಂದೆ ಗುರುಚರಣ್ ಸಿಂಗ್ ಮತ್ತು ತಾಯಿ  ದಲ್ಜೀತ್ ಕೌರ್ ಅವರು ಮಕ್ಕಳಾದ ಸಂದೀಪ್ ಸಿಂಗ್ ಮತ್ತು ಅವರ ಅಣ್ಣ ವಿಕ್ರಮಜೀತ್ ಸಿಂಗ್ ಅವರ ಹಾಕಿ ಪ್ರೀತಿಗೆ ನೀರೆರೆದರು. ವಿಕ್ರಮಜೀತ್ ಸದ್ಯ ಇಂಡಿಯನ್ ಆಯಿಲ್ ಕಾರ್ಪೋರೇಷನ್ ತಂಡದ ಆಟಗಾರ. ಅವರ ಹಾದಿಯಲ್ಲಿಯೇ ನಡೆದ ಸಂದೀಪ್ ಸಿಂಗ್ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

ಅವರು ಇಂದು (ಫೆಬ್ರುವರಿ 27) ತಮ್ಮ  26ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಅರ್ಹತಾ ಸುತ್ತಿನ ಮೊದಲ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ತಮ್ಮ `ಡ್ರ್ಯಾಗ್ ಫ್ಲಿಕ್~ ಬ್ರಹ್ಮಾಸ್ತ್ರದ  ನೆರವಿನಿಂದಲೇ ಭಾರತ ತಂಡ ಗೆಲುವಿನ ಪತಾಕೆ ಹಾರಿಸಿತ್ತು. ಪ್ರತಿ ಗಂಟೆಗೆ 145 ಕಿಲೋಮೀಟರ್ ವೇಗದಲ್ಲಿ ಅವರು ಫ್ಲಿಕ್ ಪ್ರಯೋಗಿಸುತ್ತಾರೆ. ಇದೊಂದು ವಿಶ್ವದಾಖಲೆಯೂ ಹೌದು.

ಇದು ಎದುರಾಳಿ ಗೋಲ್‌ಕೀಪರ್ ಮತ್ತು ರಕ್ಷಣಾ ತಂಡದ ಆಟಗಾರರನ್ನು ವಂಚಿಸುತ್ತದೆ.  ತಲೆಗೆ ಬಿಳಿ ಟರ್ಬನ್ ಕಟ್ಟಿಕೊಂಡು ಮೈದಾನಕ್ಕೆ ಇಳಿಯುವ ಸಂದೀಪ್, ತಂಡ ಬಹುವಾಗಿ ನೆಚ್ಚಿಕೊಂಡಿರುವ ಡಿಫೆಂಡರ್. ಫಾರ್ವರ್ಡ್ ಲೈನ್‌ನಲ್ಲಿಯೂ ಚುರುಕಿನಿಂದ ಆಡುತ್ತಾರೆ. ಪೆನಾಲ್ಟಿ ಕಾರ್ನರ್ ಸಿಕ್ಕರೆ ಹಾಲು ಕುಡಿದಷ್ಟೇ ಸಂಭ್ರಮಿಸುತ್ತಾರೆ. 

`ಪ್ರಜಾವಾಣಿ~ಯೊಂದಿಗೆ  ಮನ ಬಿಚ್ಚಿ ಮಾತನಾಡಿದ ಸಂದೀಪ್ ಬದುಕಿನ ಕೆಲ ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಈ ದೇಶದ ಗಡಿ ಕಾಯಲು ಲಕ್ಷಾಂತರ ಯೋಧರನ್ನು ಸಮರ್ಪಿಸಿದೆ. ಅದೇ ರೀತಿ ಕ್ರೀಡೆಗಳಲ್ಲಿ ತ್ರಿವರ್ಣಧ್ವಜಕ್ಕೆ ಗೌರವ ತಂದುಕೊಟ್ಟವರೂ ಹಲವರಿದ್ದಾರೆ. ಅದರಲ್ಲೂ ಹಾಕಿ ಕ್ರೀಡೆ ಇಲ್ಲಿ ಮನೆಯಂಗಳದ ಆಟ. ನನ್ನ ಅಣ್ಣನೊಂದಿಗೆ ಆಡುತ್ತ ಬೆಳೆದೆ. 2004ರಲ್ಲಿ ಕೌಲಾಲಂಪುರದಲ್ಲಿ ನಡೆದ ಸುಲ್ತಾನ್ ಅಜ್ಲನ್ ಷಾ ಕಪ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಸಿಕ್ಕ ಅವಕಾಶ ಅವಿಸ್ಮರಣೀಯ.

2006ರಲ್ಲಿ ನನ್ನ ಜೀವನದಲ್ಲಿ ಅತ್ಯಂತ ಕೆಟ್ಟ ಸಮಯವನ್ನು ನಾನು ಎದುರಿಸಿದೆ. ಜರ್ಮನಿಯಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಆಡಲು ಹೋಗುತ್ತಿದ್ದ ತಂಡವನ್ನು ಸೇರಲು ರೈಲಿನಲ್ಲಿ ಹೋಗುತ್ತಿದೆ. ಯಾರದೋ ಗುಂಪುಘರ್ಷಣೆಯಲ್ಲಿ ಹಾರಿದ ಗುಂಡು ನನ್ನನ್ನು ಗಾಯಗೊಳಿಸಿತ್ತು. ತೀವ್ರ ರಕ್ತಸ್ರಾವದಿಂದ ಸ್ಥಿತಿ ಗಂಭೀರವಾಗಿತ್ತು. ಆದ್ದರಿಂದ ನನಗೆ ಆಡಲು ಆಗಲಿಲ್ಲ. ಅದೊಂದು ಕೆಟ್ಟ ನೆನಪು. ಆದರೆ ದೇವರ ದಯೆಯಿಂದ ಸಂಪೂರ್ಣ ಗುಣಮುಖನಾಗಿ ಬಂದೆ.

2009ರಲ್ಲಿ ತಂಡದ ನಾಯಕನಾಗುವ ಅವಕಾಶವೂ ಸಿಕ್ಕಿತ್ತು. ಆಗ ಸುಲ್ತಾನ್ ಅಜ್ಲನ್ ಷಾ ಕಪ್ ಗೆದ್ದುಕೊಂಡು ಬಂದಿದ್ದು ಮರೆಯಲಾಗದ ಕ್ಷಣ. ಇಪ್ಪೋದಲ್ಲಿ 13 ವರ್ಷಗಳ ನಂತರ ಈ ಕಪ್ ಗೆದ್ದಿದ್ದೆವು. ಅಲ್ಲಿಯೂ ನಾನು ಗರಿಷ್ಠ ಗೋಲುಗಳನ್ನು ಗಳಿಸಿದ ಆಟಗಾರನಾಗಿದ್ದೆ.

ಭಾರತ ಒಲಿಂಪಿಕ್ಸ್‌ನಲ್ಲಿ ತನ್ನ ವೈಭವವನ್ನು ಮರಳಿ ಪಡೆಯಬೇಕು ಎಂಬುದು ನನ್ನ ಗುರಿ. ದೇಶಕ್ಕಾಗಿ ಚೆನ್ನಾಗಿ ಆಡಿದಾಗ ಸಿಗುವ ತೃಪ್ತಿ ಬೇರೆ ಯಾವುದರಿಂದಲೂ ಸಿಗುವುದಿಲ್ಲ. ಅರ್ಹತಾ ಟೂರ್ನಿಯಲ್ಲಿ ಈಗ ಹನ್ನೊಂದು ಗೋಲು ಗಳಿಸಿದ್ದೇನೆ. ಇದರಲ್ಲಿ ಒಟ್ಟು 12 ಗೋಲು ಗಳಿಸುವ ಗುರಿ ನನ್ನದು ಎಂದು ಹೇಳುತ್ತಾರೆ ಸಂದೀಪ್.

 ಟೂರ್ನಿಯ ಮೊದಲ ಪಂದ್ಯದಲ್ಲಿ ಸಿಂಗಪುರ ವಿರುದ್ಧ  ಕೇವಲ ಒಂದು ಗೋಲು ಗಳಿಸಿದ್ದ ಸಂದೀಪ್, ನಂತರ ಇಟಲಿ ವಿರುದ್ಧ ಮೂರು, ಮೂರನೇ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಮೂರು ಮತ್ತು ಕೆನಡಾ ವಿರುದ್ಧದ ರೋಚಕ ಹಣಾಹಣಿಯಲ್ಲಿ ಎರಡು ಗೋಲು ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.

ಟೂರ್ನಿ ಆರಂಭಕ್ಕೂ ಮುನ್ನ ಅವರ ಖಾತೆಯಲ್ಲಿ ಒಟ್ಟು 118 ಗೋಲುಗಳಿದ್ದವು. ಟೂರ್ನಿ ಮುಗಿಯುವ ವೇಳೆಗೆ ಅದನ್ನು 130 ಗಡಿಯನ್ನು ಮುಟ್ಟಿಸುವ ಗುರಿ ಅವರದ್ದು. ಅದು ಪೂರ್ಣವಾಗಲು ಅವರಿಗೆ ಇನ್ನೂ ಮೂರು ಗೋಲುಗಳು ಬೇಕಷ್ಟೇ. ಈ ಲೇಖನ ಬರೆಯುವ ಹೊತ್ತಿಗೆ ಟೂರ್ನಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇತ್ತು. ಈ ಲೇಖನ ಪ್ರಕಟವಾಗುವ ಹೊತ್ತಿಗೆ ಅರ್ಹತಾ ಸುತ್ತಿನ ಫೈನಲ್ ಮುಗಿದಿರುತ್ತದೆ. ಭಾರತವನ್ನು ಲಂಡನ್ ಒಲಿಂಪಿಕ್ಸ್‌ಗೆ ಕರೆದೊಯ್ಯುವಲ್ಲಿ ಸಂದೀಪ್ ಸಿಂಗ್ ಬಿರುಗಾಳಿ ವೇಗದ ಫ್ಲಿಕ್‌ಗಳು ಸಫಲವಾಗುತ್ತವೆಯೋ ಇಲ್ಲವೋ ಎನ್ನುವುದೂ ಗೊತ್ತಾಗಿರುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.