‘ಥಾಮಸ್ ಕಪ್ ಟೂರ್ನಿಯಲ್ಲಿ ಫಲಿತಾಂಶ ನಿರೀಕ್ಷೆಯಂತೆಯೇ ಬಂದಿದೆ. ಬಲಿಷ್ಠ ರಾಷ್ಟ್ರಗಳ ಸಾಮರ್ಥ್ಯಕ್ಕೆ ತಕ್ಕಂತೆ ನಾವಿನ್ನು ಸಜ್ಜಾಗಿಲ್ಲ. ಅದರಲ್ಲೂ ಡಬಲ್ಸ್ ವಿಭಾಗದಲ್ಲಿ ನಮ್ಮ ತಂಡ ಸಾಕಷ್ಟು ದುರ್ಬಲವಾಗಿದೆ...’
ಈ ಸಲದ ಥಾಮಸ್ ಕಪ್ ತಂಡದಲ್ಲಿದ್ದ ಕರ್ನಾಟಕದ ಆಟಗಾರ ಅರವಿಂದ್ ಭಟ್ ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಅನಿಸಿಕೆಯಿದು.
ಹೋದ ವಾರ ನವದೆಹಲಿಯಲ್ಲಿ ನಡೆದ ಥಾಮಸ್ ಕಪ್ ಟೂರ್ನಿಯಲ್ಲಿ ಭಾರತ ನೀರಸ ಪ್ರದರ್ಶನ ತೋರಿತು. ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾದ ವಿರುದ್ಧ ಸೋಲು ಕಂಡಿತು. ಜರ್ಮನಿ ಎದುರು ಜಯ ಪಡೆಯಿತಾದರೂ, ಅದು ಪ್ರಯೋಜನಕ್ಕೆ ಬರಲಿಲ್ಲ.
ರಾಷ್ಟ್ರೀಯ ತಂಡದಲ್ಲಿ ಕರ್ನಾಟಕದ ಅನೂಪ್ ಶ್ರೀಧರ್, ಅರವಿಂದ್ ಭಟ್ ಸ್ಥಾನ ಪಡೆದಿದ್ದರು. ಆದರೆ, ಅಂತಿಮ ತಂಡದಲ್ಲಿ ಆಡಲು ಅವಕಾಶ ಲಭಿಸಲಿಲ್ಲ. ಉಬೇರ್ ಕಪ್‌ನಲ್ಲಿ ಸ್ಥಾನ ಗಳಿಸಿದ್ದ ರಾಜ್ಯದ ಅಶ್ವಿನಿ ಪೊನ್ನಪ್ಪ ಅವರಿದ್ದ ತಂಡ ಸೆಮಿಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿತು.
ಉಬೇರ್ ಕಪ್‌ನಲ್ಲಿ ಅಶ್ವಿನಿ ಪೊನ್ನಪ್ಪ ಪ್ರಮುಖ ಆಟಗಾರ್ತಿ. 2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮ ನ್‌ವೆಲ್ತ್ ಕ್ರೀಡಾಕೂಟದ ಡಬಲ್ಸ್‌ನಲ್ಲಿ ಚಿನ್ನ ಜಯಿಸಿದ್ದರು.
ಥಾಮಸ್ ಕಪ್‌ನಲ್ಲಿ ಭಾರತ ಮೊದಲಿನಿಂದಲೂ ಗಮನಾರ್ಹ ಸಾಧನೆ ತೋರಿಲ್ಲ. ಇದುವರೆಗೆ ಎಂಟು ಸಲ ಟೂರ್ನಿಯಲ್ಲಿ ಆಡಿರುವ ಭಾರತ ಮೂರು ಸಲವಷ್ಟೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. 2006ರಲ್ಲಿ ಅನೂಪ್ ಶ್ರೀಧರ್ ಥಾಮಸ್ ಕಪ್ ತಂಡದ ನಾಯಕರಾಗಿದ್ದರು. ಆ ತಂಡದಲ್ಲಿ ರಾಜ್ಯದ ಅರವಿಂದ್ ಭಟ್ ಕೂಡಾ ಇದ್ದರು. ಇವರಿದ್ದ ತಂಡ ಎಂಟರ ಘಟ್ಟ ತಲುಪಿದ್ದು ಇದುವರೆಗಿನ ಶ್ರೇಷ್ಠ ಸಾಧನೆ ಎನಿಸಿದೆ.
1952ರಲ್ಲಿ ಮೊದಲ ಸಲ ಥಾಮಸ್ ಕಪ್‌ಗೆ ಅರ್ಹತೆ ಪಡೆದುಕೊಂಡಿದ್ದ ಭಾರತ ನಾಲ್ಕು ಬಾರಿ ಮೊದಲ ಸುತ್ತಿನಲ್ಲಿಯೇ ಸೋಲು ಕಂಡಿದೆ. ಪ್ರಕಾಶ್ ಪಡುಕೋಣೆ ಅವರು ತಂಡದಲ್ಲಿದ್ದಾಗಲೂ ಭಾರತಕ್ಕೆ ಎಂಟರ ಘಟ್ಟ ದಾಟಲು ಸಾಧ್ಯವಾಗಿರಲಿಲ್ಲ.
‘ಬಲಿಷ್ಠ ತಂಡಗಳ ಜೊತೆ ಪೈಪೋಟಿ ನಡೆಸಬೇಕಿದ್ದ ಕಾರಣ ನಮಗೆ ಥಾಮಸ್ ಕಪ್‌ನಲ್ಲಿ ಹೆಚ್ಚು ನಿರೀಕ್ಷೆ ಇರಲಿಲ್ಲ. ಆದರೆ, ಹೋದ ವರ್ಷ ಐಬಿಎಲ್‌ನಲ್ಲಿ ವಿದೇಶಿ ಆಟಗಾರರ ಜೊತೆ ಆಡಿದ್ದರಿಂದ ಹೊಸ ಕೌಶಲ ಕಲಿತು ಕೊಳ್ಳಲು ಸಾಧ್ಯವಾಗಿದೆ’ ಎಂದು ಅರವಿಂದ್ ಹೇಳಿದರು.
‘ಮಲೇಷ್ಯಾ, ಕೊರಿಯಾ, ಜರ್ಮನಿ ಮತ್ತು ಚೀನಾದಂಥ ಬಲಿಷ್ಠ ರಾಷ್ಟ್ರಗಳ ಎದುರು ನಮ್ಮ ತಂಡ ದುರ್ಬಲ ಎಂಬುದು ನಮಗೆ ಗೊತ್ತಿದೆ. ಗೆಲುವು ಪಡೆಯಲು ಅವಕಾಶವಿದ್ದರೆ ಅದು ಸಿಂಗಲ್ಸ್‌ನಲ್ಲಿ ಮಾತ್ರ ಎನ್ನುವುದೂ ತಿಳಿದಿತ್ತು. ಡಬಲ್ಸ್ ವಿಭಾಗದಲ್ಲಿ ಎದು ರಾಳಿಗೆ ಸರಿಸಾಟಿಯಾಗಬಲ್ಲ ತಂಡ ನಮ್ಮದಾಗಿರಲಿಲ್ಲ’ ಎಂದು ಅರವಿಂದ್ ಅಭಿಪ್ರಾಯಪಟ್ಟರು.
ಆತಿಥ್ಯದ ಸಂಭ್ರಮ: ಥಾಮಸ್ ಮತ್ತು ಉಬೇರ್ ಕಪ್ ಟೂರ್ನಿಗೆ ಆತಿಥ್ಯ ವಹಿಸಿದ ಭಾರತ ಬ್ಯಾಡ್ಮಿಂಟನ್ ರಂಗ ದಲ್ಲಿ ಹೊಸ ಭಾಷ್ಯ ಬರೆದಿದೆ. ಏಕೆಂದರೆ, ಈ ಮಹತ್ವದ ಟೂರ್ನಿ ಇಲ್ಲಿ ನಡೆಯುತ್ತಿರುವುದು ಇದೇ ಮೊದಲು.
ಸೈನಾ ನೆಹ್ವಾಲ್, ಪಿ.ವಿ. ಸಿಂಧು, ಪರುಪಳ್ಳಿ ಕಶ್ಯಪ್ ಸೇರಿದಂತೆ ಸಾಕಷ್ಟು ಪ್ರತಿಭಾವಂತರು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಮರ್ಥ್ಯ ಸಾಬೀತು ಮಾಡಿ ದ್ದಾರೆ. ಹಾಗಾಗಿ ಬ್ಯಾಡ್ಮಿಂಟನ್‌ನಲ್ಲಿ ಪ್ರಾಬಲ್ಯ ಹೊಂದಿರುವ ಚೀನಾ, ಮಲೇಷ್ಯಾ ಮತ್ತು ಹಾಂಕಾಂಗ್ ರಾಷ್ಟ್ರಗಳ ಕಣ್ಣು ಭಾರತದ ಮೇಲೆ ಬಿದ್ದಿದೆ.
ಬೇರೆ ರಾಷ್ಟ್ರಗಳು ಆಟದ ವಿಷಯದಲ್ಲಿ ಸಾಕಷ್ಟು ಪರಿಣತಿ ಹೊಂದಿರಬಹುದು. ಆದರೆ, ಆಟದ ಹೊಸ ಮಾದರಿಗಳನ್ನು ಪರಿಚಯಿಸುವ ವಿಚಾರದಲ್ಲಿ ಭಾರತದ ಪಾತ್ರ ಹಿರಿದು. ಐಪಿಎಲ್‌ನಿಂದ ಪ್ರೇರಣೆ ಪಡೆದು ಹುಟ್ಟಿಕೊಂಡ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಟೂರ್ನಿ ಇದಕ್ಕೊಂದು ಸಾಕ್ಷಿ.
ವಿಶ್ವದ ಅಗ್ರಮಾನ್ಯ ಆಟಗಾರ ಲೀ ಚೊಂಗ್ ವೀ ಸೇರಿದಂತೆ ಸಾಕಷ್ಟು ಚೀನಾ, ಥಾಯ್ಲೆಂಡ್, ಮಲೇಷ್ಯಾ ಆಟಗಾರರು ಭಾರತದಲ್ಲಿ ಆಡಿದರು. ಇದರಿಂದ ಜಗತ್ತಿನ ಬ್ಯಾಡ್ಮಿಂಟನ್ ನಕಾಶೆಯಲ್ಲಿ ಭಾರತದ ಪ್ರಾಬಲ್ಯ ಎದ್ದು ಕಂಡಿತು. ಐಬಿಎಲ್‌ನಲ್ಲಿ ವಿದೇಶಿಗರ ಜೊತೆ ಆಡುವ ಅವಕಾಶ ಗಳಿಸಿರುವ ಭಾರತದ ಆಟಗಾರರು ಅಲ್ಲೂ ಛಾಪು ಮೂಡಿಸಿದ್ದಾರೆ. ವಿದೇಶಿ ಮಾದರಿಗೆ ತಕ್ಕಂತೆ ತರಬೇತಿ ಪಡೆಯಲು ಅವಕಾಶ ಕೂಡಾ ಲಭಿಸುತ್ತಿದೆ.
ಥಾಮಸ್ ಕಪ್ ಕುರಿತು...
ಥಾಮಸ್ ಕಪ್ ಟೂರ್ನಿಯನ್ನು ಮೊದಲು ವಿಶ್ವ ಪುರುಷರ ತಂಡ ಚಾಂಪಿಯನ್‌ಷಿಪ್ ಎಂದು ಕರೆಯಲಾಗುತ್ತಿತ್ತು. 1949ರಿಂದ 1982ರ ವರೆಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಟೂರ್ನಿ ನಡೆಯುತ್ತಿತ್ತು. 1982ರ ನಂತರ ಎರಡು ವರ್ಷಕ್ಕೊಮ್ಮೆ ಆಯೋಜನೆ ಮಾಡಲಾಗುತ್ತಿದೆ. ಥಾಮಸ್ ಕಪ್‌ನಲ್ಲಿ ಹೆಚ್ಚು ಬಾರಿ ಪ್ರಶಸ್ತಿ ಜಯಿಸಿದ್ದು ಇಂಡೊನೇಷ್ಯಾ (13 ಸಲ).
ಉಬೇರ್ ಕಪ್ ಬಗ್ಗೆ
ಬ್ರಿಟನ್‌ನ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಬೆಟ್ಟಿ ಉಬೇರ್ ನೆನಪಿನಲ್ಲಿ 1957ರಲ್ಲಿ ಶುರುವಾಗಿದ್ದೇ ಉಬೇರ್ ಕಪ್. ಎರಡು ವರ್ಷಕ್ಕೊಮ್ಮೆ ನಡೆಯುವ ಟೂರ್ನಿಯಲ್ಲಿ 12 ತಂಡಗಳು ಪೈಪೋಟಿ ನಡೆಸುತ್ತವೆ. 12 ಸಲ ಪ್ರಶಸ್ತಿ ಗೆದ್ದಿರುವ ಚೀನಾ ಉಬೇರ್ ಕಪ್‌ನಲ್ಲಿ ಯಶಸ್ವಿ ತಂಡ. ಜೊತೆಗೆ, ಜಪಾನ್ (ಐದು ಸಲ), ಇಂಡೊನೇಷ್ಯಾ ಮತ್ತು ಅಮೆರಿಕ (ತಲಾ ಮೂರು ಸಲ) ಪ್ರಶಸ್ತಿ ಜಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.