ಹೆಸರೇ ಡಸರ್ಟ್ ಸ್ಟಾರ್ಮ್. ಆ ರೇಸ್ ಕಾರುಗಳು 3,500 ಕಿ.ಮೀ. ಉದ್ದದ ಮರುಭೂಮಿ ಯಾತ್ರೆಯಲ್ಲಿ ಅಕ್ಷರಶಃ ಬಿರುಗಾಳಿಯನ್ನೇ ಎಬ್ಬಿಸಿದ್ದವು. ಮರುಭೂಮಿಯ ಗಿರಿ-ಕಂದರ, ಕುರುಚಲು ಕಾಡು, ಗಾಲಿಗಳು ಹೂತು ಹೋಗುವಂತೆ ಉಸುಕು ತುಂಬಿಕೊಂಡ ದುರ್ಗಮ ಹಾದಿ... ಎಲ್ಲೆಂದರಲ್ಲಿ `ರುಮ್ ರುಮ್~ ಸದ್ದೇ ಸದ್ದು. ಮರಳುಗಾಡಿನ ಹಡಗು ಸಾಗದ ಸ್ಥಳದಲ್ಲೂ ಕಾರುಗಳು ಮಿಂಚಿನ ವೇಗದಲ್ಲಿ ಓಡಿದವು.
ಕಳೆದ ವಾರ ಮಾರುತಿ ಸುಜುಕಿ ಕಂಪೆನಿಯು ನಾದರ್ನ್ ಮೋಟಾರ್ ಸ್ಪೋರ್ಟ್ಸ್ ಸಂಸ್ಥೆ ಸಹಯೋಗದಲ್ಲಿ ಹತ್ತನೇ ವರ್ಷದ `ಡಸರ್ಟ್ ಸ್ಟಾರ್ಮ್~ ಮೋಟಾರ್ ರಾಲಿ ಏರ್ಪಡಿಸಿತ್ತು. ರಾಜಸ್ತಾನದ ಸರ್ದಾರ್‌ಶಹರ್ ಎಂಬ ಪಟ್ಟಣದ ಹತ್ತಿರ ಥಾರ್ ಮರುಭೂಮಿಯಿಂದ ಶುರುವಾದ ಈ ಸ್ಪರ್ಧೆ, ಕೊನೆಗೊಂಡಿದ್ದು ಅಹಮದಾಬಾದ್‌ನಲ್ಲಿ. ಆರು ದಿನಗಳ ಈ ರ‌್ಯಾಲಿಯಲ್ಲಿ ಕಾರುಗಳು ಪ್ರತಿನಿತ್ಯ ಸರಾಸರಿ 600 ಕಿ.ಮೀ. ದೂರವನ್ನು ಮರಳಿನ ಹಾದಿಯಲ್ಲೇ ಕ್ರಮಿಸಬೇಕಿತ್ತು.
ನಾದರ್ನ್ ಮೋಟಾರ್ ಸ್ಪೋರ್ಟ್ಸ್ ಸಂಸ್ಥೆಯ ಜಯೇಶ್ ದೇಸಾಯಿ -ದೊಡ್ಡ ಉದ್ಯಮಿಯಾಗಿರುವ ಇವರು ದೇಶದ ಮೋಟಾರ್ ಕ್ರೀಡಾ ಕ್ಷೇತ್ರದಲ್ಲಿ ಜೆಡಿ ಎಂದೇ ಖ್ಯಾತರಾಗಿದ್ದಾರೆ- ತಮ್ಮ ತಂಡ ಕಟ್ಟಿಕೊಂಡು ಕಾರು ಚಾಲಕರಿಗೆ ಸವಾಲು ಆಗುವಂತಹ ದುರ್ಗಮ ದಾರಿಯನ್ನೇ ಹುಡುಕಿ ಇಟ್ಟಿದ್ದರು. ರಾಜಸ್ತಾನದ ಮರುಭೂಮಿ ಜತೆಗೆ ಗುಜರಾತಿನ ಲವಣ ಭೂಮಿಯೂ ಸೇರಿಕೊಂಡು ಚಾಲಕರಿಗೆ ಒಂದಿಲ್ಲೊಂದು ಕಡೆ ಖೆಡ್ಡಾ ಕಾದಿದೆ ಎಂಬ ಸಂದೇಶ ರವಾನಿಸಿತ್ತು.
ಡಸರ್ಟ್ ಸ್ಟಾರ್ಮ್ ರಾಲಿಗಳ ಪೈಕಿ ಈ ಸಲದ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಸ್ಪರ್ಧಿಗಳು ಭಾಗಹಿಸಿದ್ದರು. 137 ಕಾರುಗಳು, ನಾಲ್ಕು ಟ್ರಕ್‌ಗಳು ಮತ್ತು 16 ಮೋಟಾರ್ ಬೈಕ್‌ಗಳು ರಾಲಿಯಲ್ಲಿ ಪಾಲ್ಗೊಂಡಿದ್ದವು. ಥಂಡರ್ ಬೋಲ್ಟ್ ತಂಡದ ಸುರೇಶ್ ರಾಣಾ ಮತ್ತು ಅಶ್ವಿನ್ ನಾಯಕ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಮಾರುತಿ ಸುಜುಕಿ ಸಂಸ್ಥೆಯ ಹರ್ಷವನ್ನು ಇಮ್ಮಡಿಗೊಳಿಸಿದರು. ಗೌರವ್ ಗಿಲ್, ಗೌರವ್ ಚಿರಿಪಾಲ್, ಲೋಹಿತ್ ಅರಸ್, ಸನ್ನಿ ಸಿಧು, ಲೆಫ್ಟಿನಂಟ್ ಕರ್ನಲ್ ಶಕ್ತಿ ಬಜಾಜ್, ಅಭಿಷೇಕ್ ಮಿಶ್ರಾ, ನವೀನ್ ಗೋಯಲ್, ಸಂಜಯ್ ರಾಮ್ ಟಕಾಲೆ ಅವರಂತಹ ಘಟಾನುಘಟಿ ಚಾಲಕರು ಪಾಲ್ಗೊಂಡಿದ್ದರು.
ಮೋಟಾರ್ ಸ್ಪೋರ್ಟ್ಸ್ ಎನ್ನುವುದು ಇತರ ಕ್ರೀಡೆಗಳಂತಲ್ಲ. ಸಿರಿವಂತರಿಗೆ ಮಾತ್ರ ಈ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಸಾಧ್ಯ. ಲಕ್ಷಾಂತರ ರೂಪಾಯಿ ಮೌಲ್ಯದ ಸ್ವಂತದ ವಾಹನ ಇರಬೇಕು. ಅದಕ್ಕೆ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳುವಷ್ಟು ದುಡ್ಡು ಜೇಬಿನಲ್ಲಿ ಇರಬೇಕು. ಪ್ರಶಸ್ತಿ ಮೊತ್ತ ಹೆಚ್ಚೇನು ಇರದಿದ್ದರೂ ಆಟದ ಮೇಲಿನ ಪ್ರೀತಿಯಿಂದ ಅದರಲ್ಲಿ ಭಾಗವಹಿಸುವ ಮನೋಭಾವ ಇರಬೇಕು. ಸ್ಪರ್ಧೆಯಲ್ಲಿ ಪಾಲ್ಗೊಂಡ ಬಹುತೇಕ ಚಾಲಕರು ದೊಡ್ಡ ಸಿರಿವಂತರೇ ಆಗಿದ್ದರು.
ರಾಜಸ್ತಾನದಿಂದ ಬಂದಿದ್ದ 66 ವರ್ಷದ ಅಜ್ಜ ಪ್ರದೀಪ್ ಗುಪ್ತಾ ಆಗರ್ಭ ಶ್ರೀಮಂತ. ಕಾರು ಚಾಲನೆ ಅವರಿಗೊಂದು ಶೋಕಿ. ಬಹುದೊಡ್ಡ ಹಣಕಾಸು ಸಂಸ್ಥೆ ಹೊಂದಿರುವ ಅವರು ಇತ್ತೀಚೆಗಷ್ಟೇ ರಾಜಸ್ತಾನ ಬ್ಯಾಂಕ್ ಖರೀದಿಸಿದ್ದಾರಂತೆ. ಅಂದಹಾಗೆ ಅವರ ಕಾರು ಸಿಂಗಪುರದಿಂದ ಬಂದಿತ್ತು.
ಗುಜರಾತಿನ ಕೌಶಲ್ ಪಟೇಲ್ ಮತ್ತು ಗೌರವ್ ಪಟೇಲ್ ಜೋಡಿ ಕೂಡ ಕ್ರೀಡೆ ಮೇಲಿನ `ಪ್ಯಾಶನ್~ನಿಂದ ಸ್ಪರ್ಧಿಸಲು ಬಂದಿತ್ತು. ಎಲ್ಲಕ್ಕಿಂತ ಹೆಚ್ಚಿನ ಗಮನ ಸೆಳೆದವರೆಂದರೆ ಅದು ಮೋನಿಕಾ ಜಿಂದಾಲ್ ಮತ್ತು ಹರ್ವೀನ್ ತಲ್ವಾರ್ ಎಂಬ 24ರ ಹರೆಯದ ಜೋಡಿ. ಮೋನಿಕಾ ಚಂಡೀಗಡದ ಹುಡುಗಿಯಾದರೆ, ಹರ್ವೀನ್ ದೆಹಲಿ ಯುವತಿ. ಚಾಲಕ ಮತ್ತು ನೆವಿಗೇಟರ್ ಸ್ಥಾನಗಳೆರಡರಲ್ಲೂ ಮಹಿಳೆಯರೇ ತುಂಬಿದ್ದ ಏಕೈಕ ತಂಡ ಅವರದ್ದಾಗಿತ್ತು.
ಹೊಸ ಮಾರುತಿ ಸ್ವಿಫ್ಟ್ ಗಾಡಿ ಚಲಾಯಿಸಿದ ಈ ಜೋಡಿಗೆ ಇದು ಮೊದಲ ರಾಲಿಯಾಗಿತ್ತು. ಈ ಎಂಜಿನಿಯರಿಂಗ್ ವಿದ್ಯಾರ್ಥಿನಿಯರ ಪಾಲಿಗೆ ಕಾರು ಚಾಲನೆ ಒಂದು ಹವ್ಯಾಸವಂತೆ. ಮಾರುತಿ ಸಂಸ್ಥೆಯ ಪರವಾಗಿ ಇವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಶಸ್ತಿ ಗೆಲ್ಲದಿದ್ದರೂ ಸ್ಪರ್ಧೆಯುದ್ದಕ್ಕೂ ಕೇಂದ್ರಬಿಂದುವಾಗಿಯೇ ಇದ್ದರು.
ಆರ್ಮಿ ಅಡ್ವೆಂಚರ್ಸ್ ತಂಡದ ಹಲವು ಸೇನಾನಿಗಳು ಚಾಂಪಿಯನ್‌ಷಿಪ್‌ನ ತೂಕ ಹೆಚ್ಚಿಸಿದರು. ಎಎಂಡಬ್ಲ್ಯು ತಂಡದ ಟ್ರಕ್‌ಗಳು ರ‌್ಯಾಲಿಗೆ ಕೋಡು ಮೂಡಿಸಿದ್ದವು. ಟ್ರಕ್‌ಗಳ ಚಾಲಕರಾದ ಅಜಯ್ ಸಿಂಗ್, ಸುಭನ್‌ರಾವ್ ಶಿಂಧೆ, ಪವನ್ ಸಿಂಗ್, ಒಮರ್ ಖಾನ್ ಮೊದಲಾದವರು ಮೊದಲ ಸಲ ರಾಲಿಯಲ್ಲಿ ಪಾಲ್ಗೊಂಡ ಸಂಭ್ರಮದಲ್ಲಿದ್ದರು.
ಎಕ್ಸ್‌ಪ್ಲೋರ್ ವಿಭಾಗದಲ್ಲಿ ಎಂ.ಡಿ. ಗಣೇಶಮೂರ್ತಿ, ಟಿ.ನಾಗರಾಜನ್ ಜೋಡಿ, ಎಂಡ್ಯೂರ್‌ನಲ್ಲಿ ಸತೀಶ್ ಗೋಪಾಲಕೃಷ್ಣನ್, ಸವೇರಾ ಸೋಜಾ ಜೋಡಿ, ಎಂಡ್ಯೂರ್ ಪ್ಲಸ್‌ನಲ್ಲಿ ಅಮಿತ್ ತ್ಯಾಗಿ ಮತ್ತು ಮೋಟೋಕ್ವಾಡ್ ವಿಭಾಗದಲ್ಲಿ ರಾಜ್‌ಸಿಂಗ್ ರಾಠೋಡ್ ಟ್ರೋಫಿ ಎತ್ತಿ ಹಿಡಿದರು.
ಮೂರೂವರೆ ಸಾವಿರ ಕಿ.ಮೀ. ಉದ್ದದ ಈ ಪಶ್ಚಿಮ ಭಾರತದ ಮಹಾ ಯಾತ್ರೆಯಲ್ಲಿ ಬಿಕಾನೇರ್, ಜೈಸಲ್ಮೇರ್, ಪೋಖ್ರಾನ್, ಕಚ್, ಭುಜ್, ವೈಟ್ ಡಸರ್ಟ್, ಕಾಂಡ್ಲಾದ ಕಡಲ ತೀರದಂತಹ ಸ್ಥಳಗಳನ್ನು ಸಂದರ್ಶಿಸುವ ಭಾಗ್ಯವನ್ನು ಚಾಲಕರು ಪಡೆದಿದ್ದರು. ರ‌್ಯಾಲಿಯಲ್ಲಿ ಪಂಜಾಬ್, ಹರಿಯಾಣ, ದೆಹಲಿ, ರಾಜಸ್ತಾನದ ವಾಹನಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡರೂ ಕರ್ನಾಟಕದ ಸಾಧಕರಿಗೆ ಅಲ್ಲೇನು ಕೊರತೆ ಇರಲಿಲ್ಲ. ಮಂಗಳೂರಿನ ಅಶ್ವಿನ್, ಮೂಸಾ ಶರೀಫ್, ಮೈಸೂರಿನ ಲೋಹಿತ್, ಪಿವಿಎಸ್ ಮೂರ್ತಿ ಸೇರಿದಂತೆ ಹಲವರು ಅಲ್ಲಿ ಕನ್ನಡದ ಕಲರವ ಎಬ್ಬಿಸಿದ್ದರು.
ಕಡಲಿನ ಅಬ್ಬರಕ್ಕೆ ಸವಾಲು ಎಸೆಯುವಂತೆ ದೂಳಿನ ಮೋಡಗಳನ್ನು ತೇಲಿ ಬಿಡುತ್ತಿದ್ದ ರ‌್ಯಾಲಿ ಕಾರುಗಳು ಮಾತ್ರ ಸ್ಪರ್ಧೆಗೆ ಸಾಕ್ಷಿಯಾದ ಸಾವಿರಾರು ಮಂದಿಗೆ ಸದಾ ಮನದಂಗಳದಲ್ಲಿ ಅಚ್ಚಳಿಯದೆ ಉಳಿಯುವಂತಹ ನೆನಪುಗಳನ್ನು ಎತ್ತಿ ಕೊಟ್ಟವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.