ADVERTISEMENT

ಮೈಸೂರಿನಲ್ಲಿ ಮಹಿಳಾ ಫುಟ್‌ಬಾಲ್‌

ಗಿರೀಶದೊಡ್ಡಮನಿ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST
ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಅಂತರ ಜಿಲ್ಲಾ ಮಹಿಳಾ ಫುಟ್‌ಬಾಲ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಮೈಸೂರು ಮತ್ತು ಬೆಳಗಾವಿ ತಂಡಗಳ ನಡುವೆ ನಡೆದ ಹಣಾಹಣಿ 	ಪ್ರಜಾವಾಣಿ ಚಿತ್ರ: ಇರ್ಷಾದ್ ಮಹಮ್ಮದ್
ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಅಂತರ ಜಿಲ್ಲಾ ಮಹಿಳಾ ಫುಟ್‌ಬಾಲ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಮೈಸೂರು ಮತ್ತು ಬೆಳಗಾವಿ ತಂಡಗಳ ನಡುವೆ ನಡೆದ ಹಣಾಹಣಿ ಪ್ರಜಾವಾಣಿ ಚಿತ್ರ: ಇರ್ಷಾದ್ ಮಹಮ್ಮದ್   

ಬರೋಬ್ಬರಿ ಅರವತ್ತು ವರ್ಷಗಳ ಹಿಂದಿನ ಮಾತು.  ಮಹಿಳೆಯರು ಮನೆಯ ನಾಲ್ಕು ಗೋಡೆಗಳಿಂದ ಹೊರಗೆ ಬರಲು ಹಲವು ಕಟ್ಟುಪಾಡು ಗಳಿದ್ದ ಕಾಲದಲ್ಲಿಯೇ ದೊಡ್ಡಕೆರೆ ಫುಟ್‌ಬಾಲ್ ಮೈದಾನದಲ್ಲಿ ಮಹಿಳಾ ಫುಟ್‌ಬಾಲ್ ಟೂರ್ನಿ ನಡೆದಿತ್ತು.

  1954ರಲ್ಲಿ ಮೈಸೂರು ರಾಜ್ಯದ ಫುಟ್‌ಬಾಲ್್ ಕ್ರೀಡೆಯ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಮೈಸೂರಿನಲ್ಲಿ ಆ ಕಾಲದ ಧೀಮಂತ ಆಟಗಾರ ಬಿ. ಶ್ರೀನಿವಾಸ್ ಅಯ್ಯಂಗಾರ್ ಅವರ ಪ್ರಗತಿಪರ ಮತ್ತು ಕ್ರಾಂತಿಕಾರಕ ವಿಚಾರಧಾರೆಯಿಂದಾಗಿ ಇದು ಸಾಧ್ಯವಾಗಿತ್ತು. 

ಈಗ ಬರೋಬ್ಬರಿ ಆರು ದಶಕಗಳ ನಂತರ ಮತ್ತೊಮ್ಮೆ ರಾಜ್ಯದ ಮಹಿಳಾ ಫುಟ್‌ಬಾಲ್‌ ಕ್ರೀಡೆಯನ್ನು ಪುನಶ್ಚೇತನಗೊಳಿಸಲು ಮೈಸೂರೇ ವೇದಿಕೆಯಾಯಿತು. ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ  ಫೆಬ್ರುವರಿ 27 ರಿಂದ ಮಾರ್ಚ್‌ 1ರವರೆಗೆ ಆಯೋಜಿಸಿದ್ದ ಅಂತರ ಜಿಲ್ಲಾಮಟ್ಟದ ಮಹಿಳಾ ಫುಟ್‌ಬಾಲ್ ಟೂರ್ನಿ ಮೈಸೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಟದ ಬೆಳವಣಿಗೆಗೆ ಹೊಸ ಹಾದಿ ತೋರುವ ಭರವಸೆ ಮೂಡಿಸಿತು.

ಉದ್ಯೋಗಾವಕಾಶ ಇಲ್ಲ:
ಒಂದು ಸಮಯದಲ್ಲಿ ಕರ್ನಾಟಕದ ಮಹಿಳಾ ಫುಟ್‌ಬಾಲ್ ತಂಡವೆಂದರೆ ಇಡೀ ಭಾರತದಲ್ಲಿಯೇ ಜನಪ್ರಿಯವಾಗಿತ್ತು. ಆದರೆ 90ರ ದಶಕದ ನಂತರ ಆಟದ ಆಕರ್ಷಣೆ ಕಡಿಮೆಯಾಯಿತು. ಇದಕ್ಕೆ ಕಾರಣ ರಾಷ್ಟ್ರೀಯ ಚಾಂಪಿಯನ್‌ಷಿಪ್ ಗೆದ್ದವರಿಗೆ ಮತ್ತು ಭಾಗವಹಿಸಿದ ವನಿತೆಯರಿಗೆ ಯಾವುದೇ ಉದ್ಯೋಗಾವಕಾಶ ಇಲ್ಲದೇ ಇರುವುದು ಆಟದ ಬೆಳವಣಿಗೆಗೆ ಅಡ್ಡಿಯಾಯಿತು.

‘ಅದೊಂದು ಸಮಯ ಇತ್ತು ಕರ್ನಾಟಕದ ಮಹಿಳಾ ತಂಡ ಎಂದರೆ ಬೇರೆ ಎಲ್ಲ ರಾಜ್ಯಗಳೂ ಹೆದರುತ್ತಿದ್ದವು. 1984ರಲ್ಲಿ ನಾವು ಗೆದ್ದಾಗ ಚಿತ್ರಾ ನಮಗೆ ಕೋಚ್ ಆಗಿದ್ದರು. ಮೇರಿ ವಿಕ್ಟೋರಿಯಾ, ಉಮಾ ಕಿಟ್ಟು (ಒಲಿಂಪಿಯನ್ ಕಿಟ್ಟು ಅವರ ಪುತ್ರಿ), ತಾರಾ ತಂಡದಲ್ಲಿದ್ದರು. ಆಗ ಹೆಚ್ಚು  ಸೌಲಭ್ಯಗಳು ಇರಲಿಲ್ಲ. ಅಲ್ಲದೇ ಹುಡುಗಿಯರಿಗೆ ಕೌಟುಂಬಿಕ ಮತ್ತು ಸಾಮಾಜಿಕ ಕಟ್ಟಳೆಗಳು ಬಹಳಷ್ಟಿತ್ತು. ಆದರೂ ಉತ್ತಮ ತಂಡ ಆಗಿತ್ತು. ಆದರೆ 90ರ ದಶಕದ ನಂತರ ಆಟವು ನೇಪಥ್ಯಕ್ಕೆ ಸರಿಯತೊಡಗಿತು. ಹುಡುಗಿಯರೂ ಹೆಚ್ಚು ಬರುತ್ತಿಲ್ಲ’ ಎಂದು ಅಂತರ ಜಿಲ್ಲಾ ಟೂರ್ನಿಯ   ಆಯೋಜನೆಯ ರೂವಾರಿಯಾಗಿರುವ ಕೋಚ್ ರಮಣಿ ಹೇಳುತ್ತಾರೆ. 

ಸದ್ಯ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ದೈಹಿಕ ಶಿಕ್ಷಕಿಯಾಗಿರುವ ರಮಣಿಯವರು, ತಾವು ಮಾಡಿದ ದೈಹಿಕ ಶಿಕ್ಷಣ ಪದವಿ ಆಧಾರದ ಮೇಲೆಯೇ ನೌಕರಿ ಪಡೆದದ್ದು. ಕ್ರೀಡಾಕೋಟಾದಲ್ಲಿ ನೌಕರಿ ಪಡೆ ಯಲು ಅರ್ಹರಾಗಿದ್ದರು ಅವರಿಗೆ ಅವಕಾಶ ಸಿಗಲಿಲ್ಲ ಎಂಬ ಕೊರಗನ್ನೂ ಅವರು ವ್ಯಕ್ತಪಡಿಸುತ್ತಾರೆ.

ಸದ್ಯ ಫುಟ್‌ಬಾಲ್ ಸಂಸ್ಥೆಯು 14, 17 ವರ್ಷದೊಳಗಿನವರು ಮತ್ತು ಸೀನಿಯರ್ ವಿಭಾಗದ ಟೂರ್ನಿಗಳು ನಡೆಯುತ್ತವೆ. ಆದರೂ ಮಕ್ಕಳನ್ನು  ಆಟದತ್ತ ಸೆಳೆಯಲು ಆಗುತ್ತಿಲ್ಲ.  ಏಕೆಂದರೆ ಪುರುಷ ಆಟಗಾರರಿಗೆ ಇರುವಷ್ಟು ಸೌಲಭ್ಯ ಮತ್ತು ಉದ್ಯೋಗಾವಕಾಶ ಮಹಿಳೆಯರಿಗೆ ಸಿಗುತ್ತಿಲ್ಲ.

‘ಈ ಟೂರ್ನಿಯಲ್ಲಿ ಭಾಗವಹಿಸಿದ್ದ ಕೊಡಗು ತಂಡವು ಉತ್ತಮವಾಗಿದೆ. ಅಲ್ಲಿ ಹಾಕಿ ಆಡುವ ಹುಡುಗಿಯರು ಫುಟ್‌ಬಾಲ್‌ ಕೂಡ ರೂಢಿಸಿಕೊಂಡಿ ದ್ದಾರೆ. ಅಲ್ಲದೇ ತುಮಕೂರು, ಧಾರವಾಡ ತಂಡಗಳು ಚೆನ್ನಾಗಿವೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯರನ್ನು ಗುರುತಿಸಿ ರಾಜ್ಯ ತಂಡವನ್ನು ರೂಪಿಸುವ ಯೋಚನೆ ಇದೆ. ಮೈಸೂರಿನ ಕೆಲವು ಶಾಲೆಗಳಲ್ಲಿ ಇರುವ ತಂಡಗಳು ಚೆನ್ನಾಗಿವೆ. ಮುಂದಿನ ದಿನಗಳಲ್ಲಿ ಅವುಗಳಿಂದ ಪ್ರತಿಭಾವಂತ ರನ್ನು ಆಯ್ಕೆ ಮಾಡಿ ಜಿಲ್ಲಾ ತಂಡವನ್ನು ರೂಪಿ ಸುವ ಯೋಜನೆಯೂ ಇದೆ. ಅಲ್ಲದೇ ಮಹಿಳೆಯರ ರಾಷ್ಟ್ರಮಟ್ಟದ ಟೂರ್ನಿಯನ್ನು ಆಯೋಜಿಸಲಾಗುವುದು’ ಎಂದು ರಮಣಿ ಹೇಳುತ್ತಾರೆ.

ರಾಜ್ಯ ಸಂಸ್ಥೆಯು ಈ ಟೂರ್ನಿಗೆ ಒಂದೂವರೆ ಲಕ್ಷ ರೂಪಾಯಿ ಅನುದಾನ ನೀಡಿದ್ದು, ಎಲ್ಲ ತಂಡಗಳ ಆಟಗಾರ್ತಿಯರಿಗೆ ಸಮವಸ್ತ್ರ ಮತ್ತಿತರ ವ್ಯವಸ್ಥೆ ಗಳನ್ನೂ ಮಾಡಿಕೊಟ್ಟಿದೆ. ಮೈಸೂರು ವಿಶ್ವವಿದ್ಯಾಲ ಯವೂ ಮೈದಾನ ಮತ್ತಿತರ ಸೌಲಭ್ಯಗಳ ಸಹಕಾರ ನೀಡಿತ್ತು. ಇದರೊಂದಿಗೆ ರಾಜ್ಯದ ಮಹಿಳಾ ಫುಟ್‌ಬಾಲ್‌ನ ಮಹತ್ವದ ಟೂರ್ನಿಯೊಂದು ಮೈಸೂರಿನ ಇತಿಹಾಸದ ಪುಟಗಳಲ್ಲಿ ಸೇರಿತು.

ಫುಟ್‌ಬಾಲ್‌ ಜನಪ್ರಿಯವಾಗಿತ್ತು
ಅದೊಂದು ಕಾಲವಿತ್ತು. ಮೈಸೂರಿನಲ್ಲಿ ಫುಟ್‌ಬಾಲ್ ತುಂಬಾ ಜನಪ್ರಿಯವಾಗಿತ್ತು. ಪುರುಷರ ಫುಟ್‌ಬಾಲ್‌ ಕ್ರೀಡೆಯಂತೂ ಬಹಳ ಚೆನ್ನಾಗಿ ನಡೆಯುತ್ತಿತ್ತು. ಸಾಕಷ್ಟು ತಂಡಗಳೂ, ಕ್ಲಬ್‌ಗಳೂ ಇಲ್ಲಿದ್ದವು. 1954ರಲ್ಲಿ ಬಿ.ವಿ. ಅಯ್ಯಂಗಾರ್ ಅವರು ಕೇರಳದ ಎರಡು ಮಹಿಳಾ ತಂಡಗಳನ್ನು ಕರೆಸಿ ಆಡಿಸಿದ್ದರು. ದೊಡ್ಡಕೆರೆಯ ಫುಟ್‌ಬಾಲ್ ಮೈದಾನದಲ್ಲಿ ಈ ಪಂದ್ಯಗಳು ನಡೆದಿದ್ದವು. ಆ ಕಾಲದಲ್ಲಿಯೇ ವನಿತೆಯರ ಫುಟ್‌ಬಾಲ್ ಕ್ರೀಡೆಗೆ ಅಯ್ಯಂಗಾರ್ ಅವರು ಪ್ರೋತ್ಸಾಹ ನೀಡಿದ್ದರು.
–ಪ್ರೊ. ಶೇಷಣ್ಣ, ವಿಶ್ರಾಂತ ಪ್ರಾಚಾರ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.