ADVERTISEMENT

ಮೋಡಿ ಮಾಡಿದ ಆಫ್ ಸ್ಪಿನ್ನರ್

ಡಿ.ಗರುಡ
Published 13 ನವೆಂಬರ್ 2011, 19:30 IST
Last Updated 13 ನವೆಂಬರ್ 2011, 19:30 IST
ಮೋಡಿ ಮಾಡಿದ ಆಫ್ ಸ್ಪಿನ್ನರ್
ಮೋಡಿ ಮಾಡಿದ ಆಫ್ ಸ್ಪಿನ್ನರ್   

ಸಾಧಿಸಬೇಕು ಇಲ್ಲವೇ ಸಾಯಬೇಕು...! ಇದು ಭಾರತ ತಂಡದಲ್ಲಿ ಭರವಸೆಯ ಸ್ಪಿನ್ ಬೌಲಿಂಗ್ ಕಿರಣವಾಗಿ ಮೂಡಿರುವ ರವಿಚಂದ್ರನ್ ಅಶ್ವಿನ್ ನಂಬಿರುವ ತತ್ವ.

ಮುಗ್ಧನಂತೆ ಹಾಗೂ ಮೆದು ಮಾತುಗಾರನಂತೆ ಕಾಣಿಸಿದರೂ ಹಾಗಿಲ್ಲ ತಮಿಳುನಾಡಿನ ಈ ಯುವ ಬೌಲರ್. ಮೃದುವಾಗಿ ಕಾಣಿಸುವ ಹಾಗೂ ಮಂದಹಾಸ ಬೀರುತ್ತಲೇ ಚೆಂಡನ್ನು ಎಸೆಯುವ ಆಫ್ ಸ್ಪಿನ್ನರ್ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಅಪಾಯಕಾರಿ.

ತಾವಾಡಿದ ಮೊಟ್ಟ ಮೊದಲ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್‌ನ ಒಂಬತ್ತು ವಿಕೆಟ್ ಕಬಳಿಸಿ ಮಿಂಚಿದ ಅಶ್ವಿನ್ ದಿನಬೆಳಗಾಗುವಷ್ಟರಲ್ಲಿ `ಹೀರೊ~ ಆದರು. ಪದಾರ್ಪಣೆಯ ಪಂದ್ಯದಲ್ಲಿಯೇ `ಶ್ರೇಷ್ಠ~ ಆಗುವ ಮೂಲಕ ಕ್ರಿಕೆಟ್ ದಾಖಲೆ ಪುಟದಲ್ಲಿ ಹೆಸರು ನಮೂದಿಸಿದ ಚೆನ್ನೈ ಹುಡುಗ ತನಗೆ ಎದುರಾಗುವ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡುವಂಥ ಛಲಗಾರ.

`ನಾನಿರುವುದೇ ಹೀಗೆ; ನಿಮಗೆ ಹೇಗೆ ಕಾಣಿಸುತ್ತೇನೋ...?~ ಎಂದು ಹೇಳುವ ಇಪ್ಪತ್ತೈದು ವರ್ಷ ವಯಸ್ಸಿನ ಕ್ರಿಕೆಟಿಗನಿಗೆ ಭಾರತ ತಂಡದಲ್ಲಿ ಪ್ರಮುಖ ಸ್ಪಿನ್ನರ್ ಆಗಿ ಸ್ಥಾನ ಗಟ್ಟಿಗೊಳಿಸಿಕೊಳ್ಳುವ ಆಸೆ.

ಈಗಿನ್ನೂ ಕ್ರಿಕೆಟ್ ಜೀವನದ ಮಹತ್ವದ ಘಟ್ಟಕ್ಕೆ ಕಾಲಿಟ್ಟಿರುವ ಅಶ್ವಿನ್ `ಕನಸುಗಳನ್ನು ಕಂಡು ಅವುಗಳನ್ನು ನನಸು ಮಾಡಿಕೊಳ್ಳಲು ತಕ್ಕ ಪ್ರಯತ್ನ ಮಾಡಬೇಕು~ ಎಂದು ನಂಬಿರುವ ಯುವಕ. ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಅಂಗಳದಲ್ಲಿ ದಂಗುಗೊಳಿಸುವ ಈ ಬೌಲರ್, ಎದುರು ಕುಳಿತು ಪ್ರಶ್ನೆ ಕೇಳುವವರನ್ನು ಮಾತಿನ ಸ್ಪಿನ್ ಮೋಡಿಯಿಂದ ಬೌಲ್ಡ್ ಮಾಡಬಲ್ಲರು. ಅದಕ್ಕೆ ಇಲ್ಲಿ ಕೆಲವು ಪ್ರಶ್ನೋತ್ತರಗಳು ಸಾಕ್ಷಿಯಾಗಿ ಸಾಲುಗಟ್ಟಿವೆ.

ಮುಗ್ಧರಂತೆ ಕಾಣಿಸುತ್ತೀರಾ?
ನಿಮಗೆ ಹಾಗೆ ಅನಿಸಿದರೆ ನಾನೇನು ಮಾಡಲು ಸಾಧ್ಯ? ನಾನು ಹಾಗಿಲ್ಲ. ಮಾತು ಹಾಗೂ ಕೃತಿಯಲ್ಲಿ ತುಂಬಾ ನೇರ ಹಾಗೂ ದಿಟ್ಟ. ಅನೇಕ ಬಾರಿ ಹೀಗೆ ಕೆಲವರು ಹೇಳಿದ್ದಾರೆ. ನಾನು ಕನ್ನಡಿ ನೋಡಿಕೊಂಡಾಗ ನನಗೆ ಹಾಗೆಂದು ಕಾಣಿಸಿಲ್ಲ. ಕೆಲವೊಮ್ಮೆ ನಾನಾಡುವ ನೇರ ಮಾತುಗಳು ಕೆಲವರಿಗೆ ಸಹನೀಯ ಎನಿಸುವುದಿಲ್ಲ ಎನ್ನುವುದೂ ಗೊತ್ತು.

ನಗುನಗುತ್ತಾ ಬೌಲಿಂಗ್?
ಅದು ನನ್ನ ಸಹಜತೆ. ಆದರೆ ಎದುರಾಳಿ ಬ್ಯಾಟ್ಸ್‌ಮನ್‌ಗಳ ಕಣ್ಣಲ್ಲಿ ಕಣ್ಣಿಟ್ಟು ಚೆಂಡನ್ನು ಎಸೆಯುತ್ತೇನೆ. ಕೆಲವೊಮ್ಮೆ ನನ್ನ ಮಂದಹಾಸಕ್ಕೆ ಕಿಡಿಯಾಗಿ ಬ್ಯಾಟ್ ಬೀಸಿ ಎಡವಿದ್ದೂ ಇದೆ. ತುಂಬಾ ಗಂಭೀರವಾಗಿ ಇರುವುದಕ್ಕೆ ಆಗುವುದಿಲ್ಲ. ಬೌಲಿಂಗ್ ಮಾಡುವುದು ಸಂತಸ ನೀಡುತ್ತದೆ. ಅಂಗಳದಲ್ಲಿ ಇರುವ ಪ್ರತಿಯೊಂದು ಕ್ಷಣವನ್ನು ಅನುಭವಿಸುತ್ತೇನೆ. ಬೇಗ ಬೇಸರಗೊಳ್ಳುವುದಿಲ್ಲ. ನಿರಾಸೆಯಿಂದ ಕೈಚೆಲ್ಲಿ ನಿಲ್ಲುವುದೂ ಇಲ್ಲ. ಈ ಎಸೆತದಲ್ಲಿ ಇಲ್ಲವೆಂದರೆ ಇನ್ನೊಂದು ಎಸೆತದಲ್ಲಿ ವಿಕೆಟ್ ಸಿಕ್ಕೀತು ಎಂದು ಯೋಚಿಸುತ್ತೇನೆ.

ಐಪಿಎಲ್ ಪ್ರೊಡಕ್ಟ್ ಎನ್ನಲಾಗುತ್ತದೆ?
ವಿಶ್ಲೇಷಣೆ ಮಾಡುವವರ ಅಭಿಪ್ರಾಯ. ಸ್ವಲ್ಪ ಮಟ್ಟಿಗೆ ನನಗೂ ಹಾಗೇ ಅನಿಸುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಟೂರ್ನಿಯಲ್ಲಿ ಆಡಿದ್ದಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ನನಗೆ ಅನೇಕ ಮಹತ್ವದ ಘಟ್ಟದಲ್ಲಿ ಬೌಲಿಂಗ್ ಮಾಡುವ ಅವಕಾಶ ಮಾಡಿಕೊಟ್ಟರು. ಯಶಸ್ಸು ಕೂಡ ಸಿಕ್ಕಿತು. ಅದು ನನ್ನ ಅದೃಷ್ಟ.

ಟ್ವೆಂಟಿ-20, ಏಕದಿನ ಹಾಗೂ ಟೆಸ್ಟ್...?
ಒಬ್ಬ ಬೌಲರ್‌ಗೆ ಟಿ-20ಯಲ್ಲಿ ಅವಕಾಶ ತೀರ ಕಡಿಮೆ. ಏಕದಿನ ಕ್ರಿಕೆಟ್‌ನಲ್ಲಿ ಹತ್ತು ಓವರು ಬೌಲ್ ಮಾಡಬಹುದು. ಅಲ್ಲಿ ಬೌಲರ್ ಸ್ವಲ್ಪ ಮಟ್ಟಿಗೆ ತೃಪ್ತಿಪಡಬಹುದು. ಟೆಸ್ಟ್‌ನಲ್ಲಿ ಮಾತ್ರ ಸಾಕಷ್ಟು ಅವಕಾಶ. ಸ್ಪಿನ್ ಬೌಲರ್ ದೀರ್ಘ `ಸ್ಪೆಲ್~ ಮಾಡುವುದು ಅಗತ್ಯ ಹಾಗೂ ಅನಿವಾರ್ಯ ಎನಿಸುತ್ತದೆ. ಟಿ-20ಯಲ್ಲಿ ನಾಲ್ಕು ಓವರ್ ಕೋಟಾ. ತೃಪ್ತಿ ಸಿಗುವುದಿಲ್ಲ. ಆದರೂ ಜನರು ಇಷ್ಟಪಡುವ ಕ್ರಿಕೆಟ್ ಪ್ರಕಾರವದು. ನನ್ನ ಅದೃಷ್ಟವೆಂದರೆ ಚುಟುಕು ಕ್ರಿಕೆಟ್‌ನಲ್ಲಿಯೂ ಹೆಚ್ಚು ವಿಕೆಟ್ ಪಡೆಯಲು ಸಾಧ್ಯವಾಗಿದ್ದು. ಐಪಿಎಲ್‌ನಲ್ಲಿಯಂತೂ ಪಂದ್ಯದ ಸ್ವರೂಪ ಬದಲಿಸುವಂಥ ವಿಕೆಟ್‌ಗಳನ್ನು ಪಡೆದಿದ್ದೇನೆ ಎನ್ನುವ ಸಮಾಧಾನ.

ತಂಡದಲ್ಲಿರುವ ಹಿರಿಯರಿಂದ ಮಾರ್ಗದರ್ಶನ?
ಸಚಿನ್ ತೆಂಡೂಲ್ಕರ್ ಅವರೆದುರು ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವಾಗ ಅನೇಕ ಅಮೂಲ್ಯವಾದ ಸಲಹೆಗಳು ಸಿಗುತ್ತವೆ. ಅವರು ಪ್ರತಿಯೊಂದು ಎಸೆತವನ್ನು ಸೂಕ್ಷ್ಮವಾಗಿ ಗಮನಿಸಿ ಹೇಗಿತ್ತೆಂದು ಹೇಳುತ್ತಾರೆ. ಅದೇ ರೀತಿಯಲ್ಲಿ ರಾಹುಲ್ ದ್ರಾವಿಡ್ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ಕೂಡ ಒಳ್ಳೆ ಮಾರ್ಗದರ್ಶಕರು. ವಿಕೆಟ್ ಕೀಪರ್ ಕೂಡ ಆಗಿರುವ ನಾಯಕ ಮಹೇಂದ್ರ ಸಿಂಗ್ ದೋನಿ ಕ್ಷೇತ್ರದಲ್ಲಿ ಇದ್ದಾಗ ದಾಳಿಯಲ್ಲಿ ಮಾಡಬೇಕಾದ ಬದಲಾವಣೆಗಳನ್ನು ತಿಳಿಸುತ್ತಾರೆ.

ಕ್ರಿಕೆಟ್ ಜೀವನದ ಗುರಿ?
ಕ್ರಿಕೆಟ್ ನನ್ನ ಕಾಯಕ. ಆಡುತ್ತಾ ಸಾಗುತ್ತೇನೆ. ಹೆಚ್ಚು ವಿಕೆಟ್ ಪಡೆಯಬೇಕು ಎಂದು ಪ್ರತಿಯೊಬ್ಬ ಬೌಲರ್ ಬಯಸುವುದು ಸಹಜ. ನನ್ನ ಆಶಯವೂ ಅದೇ ಆಗಿದೆ. ಆದರೆ ವಿಕೆಟ್ ಎಷ್ಟು ಪಡೆದೆ ಎನ್ನುವುದಕ್ಕಿಂತ ನಾನು ಪಡೆದ ವಿಕೆಟ್‌ಗಳಿಂದ ತಂಡವು ಗೆಲುವು ಪಡೆಯಲು ಸಾಧ್ಯವಾಯಿತೇ? ಎಂದು ಕೊನೆಯಲ್ಲಿ ವಿಶ್ಲೇಷಣೆ ಮಾಡಬೇಕು. ದೇಶದ ತಂಡವು ಹೆಚ್ಚು ಗೆಲುವು ಪಡೆಯಲು ಕಾರಣನಾದ ಬೌಲರ್ ಎನಿಸಿಕೊಳ್ಳಬೇಕು. ಅದೇ ಉದ್ದೇಶ ಹಾಗೂ ಗುರಿ.

ಕ್ರಿಕೆಟ್ ಹಾಗೂ ಕೌಟುಂಬಿಕ ಜೀವನ ಹೊಂದಾಣಿಕೆ?
ಈಗಷ್ಟೇ ಟೆಸ್ಟ್ ಕ್ರಿಕೆಟಿಗ ಆಗಿದ್ದೇನೆ. ಕೌಟುಂಬಿಕ ಜೀವನವೂ ಹೊಸದು. ಹೇಗೆ ಸರಿದೂಗಿಸಿಕೊಳ್ಳಬೇಕು ಎನ್ನುವುದನ್ನು ಅನುಭವದಿಂದಲೇ ಕಲಿಯಬೇಕು! 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.