ADVERTISEMENT

ಅಖಿಲ ಭಾರತ ಮುಷ್ಕರ: ಸಹಜ ಸ್ಥಿತಿಯಲ್ಲಿ ಜನಜೀವನ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬುಧವಾರದ ಸಾರ್ವತ್ರಿಕ ಮುಷ್ಕರದಿಂದ ರಾಜ್ಯದ ಜನಜೀವನಕ್ಕೆ ಯಾವುದೇ ತೊಂದರೆ ಆಗದಂತೆ ಸರ್ಕಾರ ನಿಗಾ ವಹಿಸಿದೆ. ಸಾರಿಗೆ ಸಂಸ್ಥೆ ಬಸ್‌ಗಳು ಮತ್ತು ಬೆಂಗಳೂರಿನ ನಮ್ಮ ಮೆಟ್ರೊ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಹಾಲು, ಔಷಧ, ಆಂಬ್ಯುಲೆನ್ಸ್‌ ಮತ್ತು ವೈದ್ಯಕೀಯ ಸೇವೆಯಲ್ಲಿಯೂ ಸಮಸ್ಯೆ ಕಾಣಿಸಿಕೊಂಡಿಲ್ಲ.ಮುಷ್ಕರದಲ್ಲಿ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಮತ್ತು ಇಲಾಖೆಗಳ ನೌಕರರು ಭಾಗವಹಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 10:36 IST
Last Updated 8 ಜನವರಿ 2020, 10:36 IST

ಗದಗ: ಕಾರ್ಮಿಕ ಸಂಘಟನೆಗಳಿಂದ ಶಾಂತಿಯುತ ಮುಷ್ಕರ

ಗದಗ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲೆಯಲ್ಲಿ ಬುಧವಾರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಮುಷ್ಕರ ಶಾಂತಿಯುತವಾಗಿ ನಡೆಯಿತು.

ಮೆರವಣಿಗೆಗೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡು, ನಡು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ದಾವಣಗೆರೆ ಕ್ಲಾಕ್ ಟವರ್ ಬಳಿ ವಿವಿಧ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.

ADVERTISEMENT

ಬೆಳಗಾವಿ: ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

ಬೆಳಗಾವಿ: ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಮುಷ್ಜರಕ್ಕೆ ಬೆಂಬಲ‌ ಸೂಚಿಸಿ‌ ಎಂಟು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ಕಾರ್ಮಿಕರು ಬುಧವಾರ‌ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಸಂಭಾಜಿ ವೃತ್ತದಲ್ಲಿ ಸೇರಿದ ಅವರು  ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ, ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಎಐಟಿಸಿಯುಸಿ, ಸಿಐಟಿಯು, ಪಂಚಾಯತ್ ನೌಕರರ ಸಂಘ, ಅಂಗನವಾಡಿ ಸಂಘ, ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಕೆಎಸ್ ಆರ್ ಟಿಸಿ, ಅಕ್ಷರ ದಾಸೋಹ ನೌಕರರ ಸಂಘ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಭಾಗಿಯಾದರು. ಪ್ರತಿಭಟನೆ ವೇಳೆ ಕೆಲ ಹೊತ್ತು ನಗರದಲ್ಲಿ ಟ್ರಾಫಿಕ್ ಜಾಮ್  ಕಿರಿಕಿರಿ ಉಂಟಾಯಿತು. 

ಕಲಬುರ್ಗಿ: ಕಾರ್ಮಿಕರ ಮೆರವಣಿಗೆಯು ಜಗತ್ ಸರ್ಕಲ್ ತಲುಪಿದ್ದು, ಸರ್ಕಲ್ ನಿಂದ ಹೊರಡುವ ಎಲ್ಲ ರಸ್ತೆಗಳು ಬಂದ್ ಆಗಿವೆ. ವಾಹನ ಸಂಚಾರ ಸ್ಥಗಿತಗೊಂಡಿದೆ. 

ಕಲಬುರ್ಗಿ: ಅಖಿಲ‌ ಭಾರತ ಸಾರ್ವತ್ರಿಕ ಮುಷ್ಕರದ ‌ಹಿನ್ನೆಲೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ನಗರದ ಗಂಜ್ ನಿಂದ ಜಗತ್ ವೃತ್ತದವರೆಗೆ ಮೆರವಣಿಗೆ ‌ನಡೆಸುತ್ತಿದ್ದಾರೆ.

ಮಂಗಳೂರು: ಬಸ್,‌ ಅಟೋ ಸಂಚಾರ‌ ಸಹಜ: ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ಮಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ಹಾಗೂ ಹಲವು ಬೇಡಿಕೆಗಳನ್ನು ಮುಂದಿಟ್ಟು ದೇಶದಾದ್ಯಂತ ಬುಧವಾರ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ.

ಎಡಪಕ್ಷಗಳ ಮುಖಂಡರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯಲಿದೆ. ಪ್ರಸ್ತುತ ಪರಿಸ್ಥಿತಿ ಸರಿಯಿಲ್ಲದ ಹಿನ್ನಲೆಯಲ್ಲಿ ಬಂದ್‌ಗೆ ಕರೆ ನೀಡುವುದಿಲ್ಲ ಎಂದು ತಿಳಿಸಿದ್ದರು. 

ಕಾಸರಗೋಡಿನಲ್ಲಿ ಬಂದ್‌ನ ಪರಿಣಾಮ ಉಂಟಾಗಿದ್ದು ಶಾಲಾ ಕಾಲೇಜುಗಳು, ಹೊಟೇಲ್‌ಗಳು, ಪೆಟ್ರೋಲ್‌ ಬಂಕ್‌ಗಳು ಇತರೆ ಅಂಗಡಿ ಮುಗ್ಗಟ್ಟುಗಳು ತೆರೆದಿಲ್ಲ. ಬಸ್‌ ಸಂಚಾರದಲ್ಲೂ ವ್ಯತ್ಯಯ ಕಂಡುಬಂದಿದೆ. ಕೇರಳಕ್ಕೆ ಬಸ್ ಸಂಚಾರ‌ ನಿಲ್ಲಿಸಲಾಗಿದ್ದು, ಕೇರಳ‌ ಸಾರಿಗೆ ಸಂಸ್ಥೆ ಬಸ್ ಗಳು ಮಂಗಳೂರು ಬಸ್ ನಿಲ್ದಾಣದಲ್ಲಿಯೇ ನಿಲುಗಡೆಯಾಗಿವೆ.

ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಬಂದ್‌ನಿಂದಾಗಿ ಯಾವುದೇ ವ್ಯತ್ಯಯವಾಗಿಲ್ಲ. ಶಾಲಾ ಕಾಲೇಜುಗಳು, ಇತರೆ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿದೆ. ಖಾಸಗಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳು ಎಂದಿನಂತೆಯೆ ಸಂಚರಿಸುತ್ತಿವೆ. ಅಟೋ ರಿಕ್ಷಾಗಳು, ಟ್ಯಾಕ್ಸಿಗಳು ಓಡಾಡುತ್ತಿವೆ.

ವಿವಿಧ ಕಾರ್ಮಿಕ ಸಂಘಟನೆಗಳು ನಗರದ ಪುರಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದವು.

ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.

ಬೆಂಗಳೂರು ಗ್ರಾಮಾಂತರ : ಮುಷ್ಕರದಿಂದ ದೂರ ಉಳಿದ ಸಂಘಟನೆಗಳು

ವಿಜಯಪುರ: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಇಲ್ಲಿನ ಕಾರ್ಮಿಕ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಆಟೋ ಚಾಲಕರು ಸೇರಿದಂತೆ ಖಾಸಗಿ ಬಸ್ ಮಾಲೀಕರ ಸಂಘ ಸೇರಿದಂತೆ ಯಾವುದೇ ಸಂಘಟನೆಗಳು ಬೆಂಬಲ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಜನಜೀವನ ಎಂದಿನಂತೆ ಇತ್ತು. 

ಅಂಗಡಿ ಮುಂಗಟ್ಟುಗಳು, ಸಾರಿಗೆ ವ್ಯವಸ್ಥೆ, ಸಿನಿಮಾ ಮಂದಿರಗಳು, ರೇಷ್ಮೆಗೂಡಿನ ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಿದವು.  ಶಾಲಾ ಕಾಲೇಜುಗಳು, ಬ್ಯಾಂಕುಗಳು, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಕೊರತೆ ಕಂಡು ಬರಲಿಲ್ಲ. 

ರಾಯಚೂರು: ಹೋರಾಟಕ್ಕೆ ಸಿಮೀತವಾದ ಮುಷ್ಕರ

ರಾಯಚೂರು: ಸಿಂಧನೂರು ನಗರವೊಂದನ್ನು ಹೊರತುಪಡಿಸಿ ಜಿಲ್ಲೆಯಾದ್ಯಂತ ಅಖಿಲ ಭಾರತ ಮುಷ್ಕರ ಹೋರಾಟಕ್ಕೆ ಸಿಮೀತವಾಗಿದೆ. 

ಸಿಂಧನೂರಿನಲ್ಲಿ ಬಹುತೇಕ ಮಳಿಗೆಗಳು ಸ್ವಯಂಪ್ರೇರಿತರಾಗಿ ಬಂದ್ ಮಾಡಿಕೊಂಡಿದ್ದಾರೆ. ಇನ್ನುಳಿದಂತೆ ಜನಜೀವನ ಎಂದಿನಂತೆ ಆರಂಭವಾಗಿದೆ.

ರಾಯಚೂರು ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರಗತಿಪರ ಸಂಘಟನೆಗಳು ಧರಣಿ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ನಿರ್ಣಯಗಳ‌ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಎಲ್ಲ ಕಡೆಗಳಲ್ಲೂ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ. ಮೆರವಣಿಗೆ ನಡೆಸಲು ಅವಕಾಶ ನೀಡಿಲ್ಲ.

ಕಲಬುರ್ಗಿ: ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ತಡೆಯಲು ‌ಮುಂದಾಗಿ ನಿಲ್ದಾಣದಲ್ಲಿ ಧರಣಿ ಕುಳಿತಿದ್ದ ಸಿಐಟಿಯು ಕಾರ್ಮಿಕ ‌ಸಂಘಟನೆ ಮುಖಂಡ ಮಾರುತಿ ಮಾನ್ಪಡೆ ಅವರನ್ನು ‌ಪೊಲೀಸರು ಅಲ್ಲಿಂದ ಎಬ್ಬಿಸಿದರು.

ವಿಜಯಪುರ: ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

ವಿಜಯಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ನಿರ್ಧಾರಗಳ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಸ್, ಆಟೊ, ಖಾಸಗಿ ವಾಹನಗಳು ಎಂದಿನಂತೆ ಸಂಚರಿಸುತ್ತಿವೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಅಂಗಡಿ ಮುಂಗಟ್ಟುಗಳು ತೆರೆದಿದ್ದು, ವ್ಯಾಪಾರ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಕಾಂಗ್ರೆಸ್ ಕಾರ್ಮಿಕ ಘಟಕದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಇಲ್ಲಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಹೊರಟು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ.

ಚಿಕ್ಕಬಳ್ಳಾಪುರ: ಮಧ್ಯರಾತ್ರಿ ಮುಖಂಡನ ಬಂಧನ

ಚಿಕ್ಕಬಳ್ಳಾಪುರ: ಚಿಂತಾಮಣಿಯಲ್ಲಿ ಬುಧವಾರ ಮುಷ್ಕರವನ್ನು  ವಿಫಲಗೂಳಿಸಲು ಪೊಲೀಸರು ಮಂಗಳವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಸಿಪಿಎಂ ಮುಖಂಡ ಕೃಷ್ಣಾರೆಡ್ಡಿ ಅವರನ್ನು ಮನೆಗೆ ನುಗ್ಗಿ ಬಂಧಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.

ಹೊಸಪೇಟೆ: ಬಸ್ ಸಂಚಾರಕ್ಕೆ ತಡೆ, ಬಹುತೇಕ ಅಂಗಡಿ ಮುಗ್ಗಟ್ಟು ಬಂದ್

ಹೊಸಪೇಟೆ: ಕಾರ್ಮಿಕ ಸಂಘಟನೆಗಳು ಕರೆಕೊಟ್ಟಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಿಗ್ಗೆಯಿಂದ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಗಳ ಬಸ್ಸುಗಳಿಗೆ ಸಿ.ಐ‌.ಟಿ.ಯು ಕಾರ್ಯಕರ್ತರು ತಡೆವೊಡ್ಡಿದ್ದಾರೆ. ಇದರಿಂದಾಗಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಬಹುತೇಕ ಅಂಗಡಿ ಮುಗ್ಗಟ್ಟುಗಳು ಮುಚ್ಚಿವೆ.

ಖಾಸಗಿ ಶಾಲೆಗಳು ನಿನ್ನೆಯೇ ರಜೆ ಘೋಷಿಸಿದ್ದವು. ಸರ್ಕಾರಿ ಶಾಲಾ ಕಾಲೇಜುಗಳು ತೆರದಿವೆ. ಆದರೆ, ವಿದ್ಯಾರ್ಥಿಗಳ ಹಾಜರಾತಿ ಹೇಳಿಕೊಳ್ಳುವಂತಿಲ್ಲ. ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿದೆ. ಎಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.  ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಕಾರ್ಮಿಕ ಸಂಘಟನೆಗಳು ಸಿದ್ಧತೆ ನಡೆಸಿವೆ.

ಹೊಸಕೋಟೆಯಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ ಮುಚ್ಚಲು ಒತ್ತಾಯಿಸಲಾಯಿತು. 

ದೇವನಹಳ್ಳಿಯಲ್ಲಿ ಯಥಾಸ್ಥಿತಿಯಲ್ಲಿ ಜನ ಜೀವನ

ದೇವನಹಳ್ಳಿ: ಸಾರ್ವತ್ರಿಕ ಮುಷ್ಕರ ಹಿನ್ನೆಲೆಯಲ್ಲಿ ಜನ ಜೀವನ ಯಥಾ ಸ್ಥಿತಿ ಮುಂದುವರಿದಿದೆ. ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಪೊಲೀಸ್ ಗಸ್ತು ಪಡೆ ಸಂಚರಿಸುತ್ತಿದೆ.  ಸಂಚಾರ ವ್ಯವಸ್ಥೆ ಯಥಾಸ್ಥಿತಿ ಇದ್ದು, ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಅಂಗಡಿ ಮುಂಗಟ್ಟುಗಳು ವಹಿವಾಟು ನಡೆಸುತ್ತಿದೆ.

ಮೈಸೂರಿನಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿ

ಮೈಸೂರು: ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ಮುಷ್ಕರಕ್ಕೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಂಗಡಿಗಳು ತೆರೆದಿದ್ದು ಬಸ್ ಸಂಚಾರ ಎಂದಿನಂತಿದೆ. ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.

ಇದೀಗ ಕಾರ್ಮಿಕರು ಪ್ರತಿಭಟನಾ ಜಾಥಾ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ‌. ಮಧ್ಯಾಹ್ನ ಪುರಭವನದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ. ಕಾರ್ಖಾನೆಗಳಲ್ಲಿ ಉತ್ಪಾದನಾ ಚಟುವಟಿಕೆಗಳು‌ ಸ್ಥಗಿತಗೊಂಡಿವೆ.

ದೊಡ್ಡಬಳ್ಳಾಪುರದಲ್ಲಿ ಮುಷ್ಕರವನ್ನು ಬೆಂಬಲಿಸಿ ಬೈಕ್ ಜಾಥಾ ನಡೆಸಲಾಯಿತು.

ದೊಡ್ಡಬಳ್ಳಾಪುರ: ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ದೊಡ್ಡಬಳ್ಳಾಪುರ:  ವಿವಿಧ ಕಾರ್ಮಿಕ ಹಾಗೂ ರೈತ ಸಂಘಟನೆಗಳು ಕರೆ ನೀಡಿರುವ ಗ್ರಾಮೀಣ ಭಾರತ ಮುಷ್ಕರಕ್ಕೆ ತಾಲ್ಲೂಕಿನಲ್ಲಿ ಮಿಶ್ರಪ್ರತಿಕ್ರಿಯೆ ವ್ಯಾಕ್ತವಾಗಿದೆ. 

ಬೆಳಿಗ್ಗೆ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಕೆಲವೇ ಜನ ರೈತರು ತರಕಾರಿಗಳನ್ನು ಮಾರಾಟಕ್ಕೆ ತಂದಿದ್ದರು. ಮುಷ್ಕರದ ಹಿನ್ನೆಲೆಯಲ್ಲಿ ಖರೀದಿದಾರರು ಕಡಿಮೆಯಾಗಿದ್ದರು. ತರಕಾರಿ ಮಾರುಕಟ್ಟೆಗೆ ಬೆಳಿಗ್ಗೆಯೇ ರೈತ ಸಂಘಟನೆ ಕಾರ್ಯಕರ್ತರು ಭೇಟಿ ನೀಡಿ ವಹಿವಾಟು ಬಂದ್ ಮಾಡುವಂತೆ ಮಾನವಿ ಮಾಡಿದರು.

ರಾಜ್ಯ ರೈತ ಸಂಘ, ಸಿಐಟಿಯು, ಎಐಸಿಟಿಯು ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬೈಕ್ ರ್ಯಾಲಿ ನಡೆಸಿ ಕೈಗಾರಿಕೆಗಳು ಬಂದ್ ಮಾಡುವಂತೆ ಹಾಗೂ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಬಸ್‌ಗಳ ಸಂಚಾರ ವಿರಳವಾಗಿತ್ತು. ಅಂಗಡಿಗಳು ದಿನ ನಿತ್ಯದಂತೆ ಬಾಗಿಲು ತೆರಿದಿದ್ದು, ಶಾಲಾ, ಕಾಲೇಜುಗಳು ತೆರೆದಿವೆ.

ಚಿತ್ರದುರ್ಗ: ಮುಷ್ಕರ ನಡೆಸುತ್ತಿದ್ದ 30 ಮಂದಿ ಬಂಧನ

ಚಿತ್ರದುರ್ಗ: ಹತ್ತಕ್ಕೂ ಅಧಿಕ ಟ್ರೇಡ್ ಯೂನಿಯನ್ ಗಳು ಕರೆ ನೀಡಿದ್ದ ಸಾವ್ರತ್ರಿಕ ಮುಷ್ಕರ ಹಿನ್ನೆಲೆಯಲ್ಲಿ ಬುಧವಾರ ಮುಷ್ಕರ ನಡೆಸುತ್ತಿದ್ದ ಕಮ್ಯುನಿಸ್ಟ್ ಸೇರಿ ಇತರೆ ಸಂಘಟನೆಗಳ 30 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಘಟನೆಗಳಿಗೆ ಜಿಲ್ಲಾಧಿಕಾರಿ ವೃತ್ತದ ಮುಂಭಾಗ ಪ್ರತಿಭಟಿಸಲು ಅವಕಾಶ ನೀಡಲಾಗಿತ್ತು. ಆದರೆ, ಗಾಂಧಿ ವೃತ್ತದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ಇದರಿಂದ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುವ ಸಾಧ್ಯತೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಂಧಿಸಿದ್ದಾರೆ.

ಎಂದಿನಂತೆ ರೈಲು, ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಶಾಲಾ-ಕಾಲೇಜುಗಳು ತೆರೆದಿವೆ. 

ಪ್ರಮುಖ ಮಾರ್ಗಗಳಲ್ಲಿನ ಅಂಗಡಿ ಮುಂಗಟ್ಟು, ಹೋಟೆಲ್ ಗಳು ತೆರೆದಿದ್ದು, ಮುಷ್ಕರದ ಬಿಸಿ ನಾಗರಿಕರಿಗೆ ತಟ್ಟಿಲ್ಲ.

ದಾವಣಗೆರೆ: ಮುಷ್ಕರದ ಪರಿಣಾಮ ಇಲ್ಲ 

ದಾವಣಗೆರೆ: ಮುಷ್ಕರದ ಪರಿಣಾಮ  ಜನಜೀವನಕ್ಕೆ ಆಗಿಲ್ಲ. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಎಂದಿನಂತೆ ಹೋಗಿದ್ದಾರೆ. ಬಸ್ ಗಳ ಸಂಚಾರ ಇದೆ. ಅಂಗಡಿಗಳು ತೆರೆದಿವೆ. ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ.

ತುಮಕೂರು: ಮುಷ್ಕರ ಬೆಂಬಲಿಸುವಂತೆ ಮನವಿ

ತುಮಕೂರು: ರಾಷ್ಟ್ರವ್ಯಾಪಿ ಕರೆನೀಡಿರುವ ಮುಷ್ಕರ ಬೆಂಬಲಿಸುವಂತೆ ನಾಗರಿಕರಿಗೆ ಕಾರ್ಮಿಕ ಸಂಘಟನಗಳ   ಮುಖಂಡರು ಮನವಿ ಮಾಡಿದರು.

ಹಾವೇರಿ ಜಿಲ್ಲೆಗೆ ತಟ್ಟದ ಬಂದ್ ಬಿಸಿ

ಹಾವೇರಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ  ಸರ್ಕಾರಿ ಮತ್ತು ಖಾಸಗಿ ಬಸ್, ಆಟೊಗಳು ಸಂಚರಿಸುತ್ತಿವೆ. ಜನಜೀವನ ಎಂದಿನಂತೆಯೇ ಇದೆ.

ಬಂದ್ ಬೆಂಬಲಿಸಿ 11 ಗಂಟೆಗೆ  ಕಾರ್ಮಿಕ ಸಂಘಟನೆಗಳು ನಗರದ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಿವೆ. ಎಐಟಿಯುಸಿ, ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ. 

ಸಹಜ ಸ್ಥಿತಿಯಲ್ಲಿ ತುಮಕೂರಿನಲ್ಲಿನ ಜನಜೀವನ

ತುಮಕೂರು: ತುಮಕೂರಿನಲ್ಲಿ ಜನ ಜೀವನ ಸಹಜವಾಗಿದೆ. ಬಸ್ ಸಂಚಾರ ಎಂದಿನಂತೆ ಇದೆ. 

ನಗರದ ಟೌನ್ ಹಾಲ್ ವೃತ್ತದ ಬಳಿ ಸೇರಿರುವ ಸಿಐಟಿಯು ಕಾರ್ಯಕರ್ತರು ಕಾರ್ಮಿಕರಿಗೆ ಕನಿಷ್ಠ ವೇತನ 18 ಸಾವಿರ ನಿಗದಿ ಮಾಡಬೇಕು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡ ಬೇಕು, ಜಿಲ್ಲೆ ಗೆ ಸಮಗ್ರ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಬಿಎಸ್ ಎನ್ ಎಲ್ ಕಚೇರಿ ಬಳಿ 11.30 ಬಹಿರಂಗ ಸಮಾವೇಶ ನಡೆಯಲಿದೆ. ಪೊಲೀಸರು ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದರಿಂದಾಗಿ ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ನೆನ್ನೆ ಕಲ್ಲಡ್ಕ ಪ್ರಭಾಕರ ಭಟ್ ಪಾಲ್ಗೊಂಡಿದ್ದ ಸಿಎಎ ಪರ ಜಾಗೃತಿ ಜಾಥಾಕ್ಕೆ‌ ಅನುಮತಿ ನೀಡಿದ್ದಾರೆ. ನಮಗೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲಬುರ್ಗಿ: ಮುಷ್ಕರದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸರ್ಕಾರಿ ಬಸ್ ಸೇವೆ ಸ್ಥಗಿತಗೊಳಿಸಿದ್ದಕ್ಕೆ ಅಧಿಕಾರಿಗಳ ಮೇಲೆ ಪ್ರಯಾಣಿಕರು ಆಕ್ರೋಶ ಹೊರಹಾಕಿದರು. ಬಳಿಕ ಕಲಬುರ್ಗಿ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಬಸ್ ಸೇವೆ ಆರಂಭಗೊಂಡಿದೆ. 

ಬೆಂಗಳೂರಿಗೆ ತಟ್ಟದ ಮುಷ್ಕರದ ಬಿಸಿ

ಬೆಂಗಳೂರು: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರದ ಬಿಸಿ ನಗರಕ್ಕೆ ತಟ್ಟಿಲ್ಲ. ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಎಂದಿನಂತೆ ಸಂಚಾರಿಸುತ್ತಿವೆ. ಶಾಲಾ- ಕಾಲೇಜುಗಳು ಎಂದಿನಂತೆ ಆರಂಭವಾಗಿವೆ. ಎಲ್ಲ ಕಡೆ ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿವೆ. ಜನ ನಿತ್ಯದ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ

ಮೆಟ್ರೊ ರೈಲು ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಎಂದಿನಂತೆ ಓಡಾಡುತ್ತಿದೆ. ಆಟೊ ಓಡಾಟ ಕೂಡಾ ಎಂದಿನಂತೆ ಇದೆ. ಕೆ.ಆರ್. ಮಾರುಕಟ್ಟೆಯಲ್ಲಿ ಸಹಜ ಸ್ಥಿತಿ ಇದ್ದು, ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕೆ.ಆರ್. ಮಾರುಕಟ್ಟೆಯಲ್ಲಿ ಪೊಲೀಸ್ ಹಾಗೂ ಒಂದು ಕೆಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿದೆ.

ಮುಷ್ಕರ ವಿರೋಧಿಸಿ ಕರುನಾಡ ಸಂಘಟನೆಯಿಂದ‌ ಕೆ.ಆರ್. ಮಾರುಕಟ್ಟೆಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಯಿತು. ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಗುಲಾಬಿ ನೀಡಿ ಮುಷ್ಕರಕ್ಕೆ ಸಂಘಟನೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ನಗರದ ಟೌನ್ ಹಾಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶ ನಿರಾಕರಿಸಲಾಗಿದೆ. ಭದ್ರತೆಗೆ ಎರಡು ಕೆಎಸ್ಆರ್ಪಿ  ತುಕಡಿ, ಒಂದು ಸಿಎಆರ್ ಮತ್ತು  ಒಂದು  ವಾಟರ್ ಜೆಟ್ ನಿಯೋಜಿಸಲಾಗಿದೆ. ಇಲ್ಲಿ ಭದ್ರತೆಗೆ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಬೆಳಗಾವಿ: ತಟ್ಟದ ಮುಷ್ಕರದ ಬಿಸಿ

ಬೆಳಗಾವಿ: ಜನಜೀವನ ಎಂದಿನಂತೆಯೇ ಇದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಿಲ್ಲ. ಬಸ್‌ಗಳ ಸಂಚಾರ ಇದೆ. ಅಂಗಡಿಗಳು ತೆರೆದಿವೆ. ಮಧ್ಯಾಹ್ನ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ.

ಕಲಬುರ್ಗಿ: ಸರ್ಕಾರಿ ಬಸ್ ಸೇವೆ ಸ್ಥಗಿತ

ಕಲಬುರ್ಗಿ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 

ಕಲಬುರ್ಗಿ: ಬಸ್ ಸಂಚಾರ ತಡೆ ಯತ್ನ: ಪೊಲೀಸರ ಮಧ್ಯ ಪ್ರವೇಶ

ಕಲಬುರ್ಗಿ: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆ ನೀಡಿರುವ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ನಗರದ ಬಸ್ ನಿಲ್ದಾಣದಲ್ಲಿ ‌ಬಸ್ ಸಂಚಾರ ತಡೆಯಲು ‌ಯತ್ನಿಸಿದರು.

ಬಸ್ಗಳ ಮುಂದೆ ಕುಳಿತು ಪ್ರತಿಭಟನೆ ಮಾಡಲು ಮುಂದಾದ ವೇಳೆ ಪ್ರತಿಭಟನಾಕಾರರು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಳಿಕ ಬಸ್ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು‌. ನಂತರ ಬಸ್ ನಿಲ್ದಾಣದ ಬಳಿ ಘೋಷಣೆ ಕೂಗಿ ಕೇಂದ್ರ ‌ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ನೀತಿಗಳನ್ನು ‌ಖಂಡಿಸಿ ಘೋಷಣೆ ‌ಕೂಗಿದರು‌.

ಚಿಕ್ಕಬಳ್ಳಾಪುರ: ಜಿಲ್ಲಾ ಬಂದ್‌ಗೆ ಅನುಮತಿ ನಿರಾಕರಣೆ

ಚಿಕ್ಕಬಳ್ಳಾಪುರ: ಕಾರ್ಮಿಕ ಸಂಘಟನೆಗಳು ಮತ್ತು ನೌಕರರ ಸಂಘಗಳು ಬುಧವಾರ ಕರೆ ನೀಡಿದ್ದ ಮುಷ್ಕರಕ್ಕೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಿಪಿಎಂ, ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಜನವಾದಿ ಮಹಿಳಾ ಸಂಘಟನೆ ಜಿಲ್ಲೆಯಲ್ಲಿ ಬುಧವಾರ ಜಿಲ್ಲಾ ಬಂದ್‌ ನಡೆಸಲು ತೀರ್ಮಾನಿಸಿ ಪ್ರಚಾರ ಕೂಡ ನಡೆಸಿದ್ದವು. ಆದರೆ ಬಂದ್‌ ನಡೆಸಲು ಪೊಲೀಸ್‌ ಇಲಾಖೆ ಅನುಮತಿ ನಿರಾಕರಿಸಿತು.

ಜಿಲ್ಲೆಯಲ್ಲಿ ಬುಧವಾರ ಶಾಲೆಗಳಿಗೆ ರಜೆ ಘೋಷಿಸಿಲ್ಲ. ಜತೆಗೆ, ಹೋಟೆಲ್‌ಗಳು, ವಾಣಿಜ್ಯ ಉದ್ಯಮವೂ ಮುಷ್ಕರಕ್ಕೆ ಪೂರಕವಾಗಿ ಸ್ಪಂದಿಸಿಲ್ಲ. ಕೆಎಸ್‌ಆರ್‌ಟಿಸಿ ಬಸ್‌, ಆಟೊಗಳ ಸಂಚಾರವೂ ಸಹಜ ಸ್ಥಿತಿಯಲ್ಲಿದೆ. ಹೀಗಾಗಿ ಮುಷ್ಕರ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ.

ನಗರದಲ್ಲಿ ಬೆಳಿಗ್ಗೆ ರಾಲಿ ನಡೆಸಿದ ಪ್ರತಿಭಟನಾಕಾರರು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ತಮ್ಮ ವೈಫಲ್ಯಗಳ ವಿರುದ್ಧ ನಡೆಯುತ್ತಿರುವ ಬಂದ್ ವಿಫಲಗೊಳಿಸಲು ಪೊಲೀಸರನ್ನು ಬಳಸಿಕೊಳ್ಳುತ್ತಿವೆ. ಬಂದ್‌ ಹತ್ತಿಕ್ಕುವ ಸರ್ಕಾರಗಳ ಧೋರಣೆಗಳನ್ನು ಖಂಡಿಸುತ್ತೇವೆ’ ಎಂದು ಹೇಳಿದರು.

ಮುಷ್ಕರ: ಎಂದಿನಂತೆ ಸಂಚಾರ

ಯಾದಗಿರಿ: ವಿವಿಧ ಕಾರ್ಮಿಕ ಸಂಘಟನೆಗಳು ಭಾರತ್ ಮುಷ್ಕರ ಕರೆ ನೀಡಿದ್ದರೂ ನಗರದ ವಿವಿಧೆಡೆ ಜನ ಸಂಚಾರ ಎಂದಿನಂತೆ ಇದೆ. ನಗರದೆಲ್ಲೆಡೆ ಅಂಗಡಿ ಮುಂಗಟ್ಟುಗಳು, ಬೀದಿವ್ಯಾಪಾರ, ಆಟೋಗಳ ಸಂಚಾರ ಎಂದಿನಂತೆ ಆರಂಭವಾಗಿದೆ. ಬಸ್‌ಗಳ ಓಡಾಟವೂ ವ್ಯತ್ಯಯವಾಗಿಲ್ಲ. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಮುಷ್ಕರ ಜನರ ಬದುಕಿನ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ.

ಉಡುಪಿ: ವ್ಯಾಪಾರಕ್ಕೆ ಧಕ್ಕೆಯಿಲ್ಲ

ಉಡುಪಿ: ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಜೀವನ ಎಂದಿನಂತಿದ್ದು, ಖಾಸಗಿ ಹಾಗೂ ಕೆಎಸ್ಆರ್‌ಟಿಸಿ ಬಸ್ ಸಂಚಾರ ಇದೆ. ಶಾಲಾ ಕಾಲೇಜುಗಳು ತೆರೆದಿವೆ. ವ್ಯಾಪಾರ ವಹಿವಾಟಿಗೂ ಅಡ್ಡಿಯಾಗಿಲ್ಲ.

ರಾಮನಗರ: ಹೆದ್ದಾರಿ ಸಂಚಾರಕ್ಕೆ ಧಕ್ಕೆಯಿಲ್ಲ

ರಾಮನಗರ: ಜಿಲ್ಲೆಯಾದ್ಯಂತ ಬುಧವಾರ ಜನಜೀವನ ಎಂದಿನಂತೆ ಇದೆ. ಮುಷ್ಕರ ಕರೆ ಹೆಚ್ಚು ಪರಿಣಾಮ ಬೀರಿಲ್ಲ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸಾಮಾನ್ಯವಾಗಿದೆ. ಶಾಲೆ, ಕಾಲೇಜುಗಳು, ಅಂಗಡಿಗಳು ಎಂದಿನಂತೆ ತೆರೆದಿವೆ.

ಬಾಗಲಕೋಟೆ: ನೀರಸ ಪ್ರತಿಕ್ರಿಯೆ

ಬಾಗಲಕೋಟೆ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲೆ-ಕಾಲೇಜು ಎಂದಿನಂತೆಯೇ ತೆರೆದಿದ್ದು, ವಾಹನಗಳ ಓಡಾಟವೂ ಮಾಮೂಲಿನಂತೆಯೇ ಇದೆ.

'ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಯಾರೂ ಬಂದು ಹೇಳದ ಕಾರಣ ಶಾಲೆಗಳಿಗೆ ರಜೆ ಕೊಟ್ಟಿಲ್ಲ ಎಂದು ಡಿಡಿಪಿಐ ಶ್ರೀಶೈಲ ಬಿರಾದಾರ ತಿಳಿಸಿದರು. ಚಳಿಯ ಕಾರಣ ಮುಂಜಾನೆ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆ ಇತ್ತು. ಆದರೆ ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ತೆರಳುವ ಧಾವಂತದಲ್ಲಿದ್ದರು.

ಬೀದರ್: 12 ಗಂಟೆಗೆ ಪ್ರತಿಭಟನೆ

ಬೀದರ್: ಕಾರ್ಮಿಕ ಸಂಘಟನೆಗಳು ನೀಡಿರುವ ಮುಷ್ಕರ ಕರೆಗೆ ಗಡಿ ಜಿಲ್ಲೆ ಬೀದರ್‌ನಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ  ಬಸ್ ಗಳ ಓಡಾಟ ಸಾಮಾನ್ಯವಾಗಿದೆ. ಒಟ್ಟು 562 ಬಸ್ ಗಳು ರಸ್ತೆಗಿಳಿದಿದ್ದು ಸಂಚಾರದ ಮೇಲೆ ಬಂದ್ ಪರಿಣಾಮ ಬೀರಿಲ್ಲ. ಎಂದಿನಂತೆ ಜನ ಜೀವನ ಸಹಜವಾಗಿದೆ.  ಶಾಲಾ ಕಾಲೇಜುಗಳಿಗೆ ರಜೆ ನೀಡಿಲ್ಲ. ವಿಧ್ಯಾರ್ಥಿಗಳು ಶಾಲೆಗೆ ಹೊರಟಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಧ್ಯಾಹ್ನ 12 ಗಂಟೆಗೆ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ನೀಡಲಿದ್ದಾರೆ.

ಮಂಗಳೂರು: ಡಿವೈಎಫ್‌ಐ ಪ್ರತಿಭಟನೆ

ಮಂಗಳೂರು: ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ  ಡಿವೈಎಫ್ಐ ವತಿಯಿಂದ ಮಂಗಳೂರು ಹೊರವಲಯದ ಕುತ್ತಾರ್ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಳ್ಳಾರಿ: ಶಾಲೆಗಳಿಗೆ ಬಾರದ ವಿದ್ಯಾರ್ಥಿಳು

ಬಳ್ಳಾರಿ: ನಗರದಲ್ಲಿ ಜನಜೀವನ ಎಂದಿನಂತೆ‌ ನಡೆದಿದೆ. ಬಸ್, ಆಟೋರಿಕ್ಷಾ ಸಂಚಾರ, ಪೆಟ್ರೋಲ್ ಬಂಕ್‌ಗಳು ಆರಂಭವಾಗಿವೆ. ಶಾಲೆ ಕಾಲೇಜುಗಳಿಗೆ ರಜೆ ನೀಡಿಲ್ಲ. ಆದರೆ ಹಳ್ಳಿಗಳಿಂದ ವಿದ್ಯಾರ್ಥಿಗಳು ಬಂದಿಲ್ಲ.

ಬೆಳಿಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇದೆ. ಜನರೂ ಹೊರಗೆ ಬಂದಿಲ್ಲ. ಕಾರ್ಮಿಕ ಸಂಘಟನೆಗಳ ಮುಖಂಡರಿಗೆ ನಗರದ ಬುಡಾ ಆವರಣದಲ್ಲಿ ಸಭೆ ನಡೆಸಲು ಮಾತ್ರ ಪೊಲೀಸರು ಅನುಮತಿ ನೀಡಿದ್ದಾರೆ. ಮೆರವಣಿಗೆ ನಡೆಯುವುದಿಲ್ಲ. ಸಭೆ ಬಳಿಕ ಜಿಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಎಚ್ಚರಿಕೆ

ರಾಯಚೂರು ಬಸ್ ನಿಲ್ದಾಣ ಖಾಲಿಖಾಲಿ

ರಾಯಚೂರು: ಅಖಿಲ ಭಾರತ್ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣವು ಪ್ರಯಾಣಿಕರಿಲ್ಲದೆ ಖಾಲಿಖಾಲಿಯಾಗಿದೆ. ಬಸ್‌ಗಳ ಸಂಚಾರ ಎಂದಿನಂತೆ ಮುಂದುವರಿದ್ದರೂ ವಿವಿಧ ಊರುಗಳಿಗೆ ತೆರಳಲು ಯೋಜನೆ ಮಾಡಿಕೊಂಡ ಜನರು, ಸಂಚಾರಕ್ಕೆ‌ ವ್ಯತ್ಯಯ ಉಂಟಾಗಬಹುದು ಎಂದು ನಿಲ್ದಾಣದ ಕಡೆಗೆ ಬರುತ್ತಿಲ್ಲ.

ಬಸ್ ಗಳೆಲ್ಲವೂ ಬೆರಳೆಣಿಕೆ ಪ್ರಯಾಣಿಕರೊಂದಿಗೆ ಸಂಚರಿಸುತ್ತಿವೆ. ಕೇಂದ್ರ ಬಸ್ ನಿಲ್ದಾಣದಲ್ಲಿ ಮಾತ್ರ ಬಂದ್ ವಾತಾವರಣ ಕಾಣುತ್ತಿದೆ.

ನಗರದೆಲ್ಲೆಡೆ ಅಂಗಡಿಗಳು, ಬೀದಿವ್ಯಾಪಾರ, ಆಟೊಗಳ ಸಂಚಾರ ಎಂದಿನಂತೆ ಆರಂಭವಾಗಿದೆ. ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಧಾವಂತದಲ್ಲಿ ಹೋಗುತ್ತಿರುವುದು ಕಂಡುಬಂತು.

ನಗರದಲ್ಲಿ ಒಟ್ಟಾರೆ ಜನದಟ್ಟಣೆ ಕಡಿಮೆಯಾಗಿದೆ. ಬೇರೆ ಊರುಗಳಿಂದ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ. ನಗರದ ಜನರು ಕೂಡಾ ಅಲ್ಲಲ್ಲಿ ಪ್ರತಿನಿತ್ಯ ಗುಂಪುಗಳಲ್ಲಿ ಕಾಣಿಸುತ್ತಿದ್ದ ದೃಶ್ಯ ಇಂದು ಕಾಣುತ್ತಿಲ್ಲ.

ಹುಬ್ಬಳ್ಳಿ: ಪೊಲೀಸ್ ಬಂದೋಬಸ್ತ್

ಹುಬ್ಬಳ್ಳಿಯಲ್ಲಿ ವಾಹನಗಳ ಸಂಚಾರ‌ ಎಂದಿನಂತೆ‌ ಇದೆ. ಬಸ್ ನಿಲ್ದಾಣ ಹಾಗೂ ಡಿಪೊಗಳ ಮುಂದೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.  ಹೋಟೆಲ್‌ಗಳು ತೆರೆದಿವೆ.

ಚಿಕ್ಕಮಗಳೂರು: ಸಹಜ ಸ್ಥಿತಿಯಲ್ಲಿ ಜನಜೀವನ

ಚಿಕ್ಕಮಗಳೂರಿನಲ್ಲಿ ಜನಜೀವನ ಸಹಜವಾಗಿದೆ. ವಾಹನ ಸಂಚಾರ ಎಂದಿನಂತೆ ಇದೆ.

ಮಡಿಕೇರಿಯಿಂದ‌ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ಗೆ ಕಲ್ಲು

ಮಡಿಕೇರಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ಕಾರ್ಮಿಕ ಸಂಘಟನೆಗಳು ಬುಧವಾರ ಮುಷ್ಕರಕ್ಕೆ ಕರೆ ನೀಡಿದ್ದು, ಕೊಡಗು ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ.

ಆದರೆ, ಮಡಿಕೇರಿಯ ಚೈನ್‌ಗೇಟ್ ಬಳಿ ಕಿಡಿಗೇಡಿಗಳು ಕೆಎಸ್ಆರ್‌ಟಿಸಿ ಬಸ್ ಮೇಲೆ ಕಲ್ಲು ತೂರಿದ್ದಾರೆ. ಬಸ್‌ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಈ ಬಸ್ ಅನ್ನು ಸುದರ್ಶನ ವೃತ್ತದ ಬಳಿಯ ಡಿಪೊಕ್ಕೆ ತಂದು ನಿಲುಗಡೆ ಮಾಡಲಾಗಿದೆ.

ಮುಷ್ಕರ ನಿರ್ವಹಣೆಗೆ ಸರ್ಕಾರ ಸಜ್ಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.