ADVERTISEMENT

ದೆಹಲಿ ಫಲಿತಾಂಶ | 55 ಕ್ಷೇತ್ರಗಳಲ್ಲಿ ಆಪ್, 7 ರಲ್ಲಿ ಬಿಜೆಪಿ ಗೆಲುವು, ಖಾತೆ ತೆರೆಯದ ಕಾಂಗ್ರೆಸ್

ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಫೆ.8ರಂದು ಮತದಾನದ ನಂತರ ಪ್ರಕಟವಾಗಿದ್ದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಆಪ್) ಮುನ್ನಡೆಯನ್ನು ಖಚಿತಪಡಿಸಿ, ಕೇಜ್ರಿವಾಲ್ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಖಚಿತ ಎಂಬ ಅಭಿಪ್ರಾಯ ನೀಡಿದ್ದವು. ಅದರಂತೆಯೇ ಆಪ್‌ 70 ಕ್ಷೇತ್ರಗಳಲ್ಲಿ 55 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ್ದು, 7ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು 1 ರಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್‌ ಖಾತೆಯನ್ನೇ ತೆರಿದಿಲ್ಲ. ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ತಾಜಾ ಅಪ್‌ಡೇಟ್ಸ್‌ ಇಲ್ಲಿ ಲಭ್ಯ.

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 15:51 IST
Last Updated 11 ಫೆಬ್ರುವರಿ 2020, 15:51 IST

55 ಕ್ಷೇತ್ರಗಳಲ್ಲಿ ಆಪ್‌, 7ರಲ್ಲಿ ಬಿಜೆಪಿಗೆ ಗೆಲುವು

70 ವಿಧಾನಸಭಾ ಕ್ಷೇತ್ರಗಳಲ್ಲಿ ಆಮ್‌ ಆದ್ಮಿ ಪಕ್ಷವು ಈಗಾಗಲೇ 55 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದು, 7 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 7 ಕ್ಷೇತ್ರಗಳಲ್ಲಿ ಗೆದ್ದಿದ್ದು 1ರಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ ದೆಹಲಿಯಲ್ಲಿ ಖಾತೆಯನ್ನೇ ತೆರೆಯಲಿಲ್ಲ.

ಎಸ್ಸಿ ಮೀಸಲು ಕ್ಷೇತ್ರದ ಎಲ್ಲಾ 12 ಸ್ಥಾನಗಳು ಎಎಪಿ ಪಾಲಿಗೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು ಎಸ್ಸಿ ಮೀಸಲು ಕ್ಷೇತ್ರಗಳಾ ಎಲ್ಲಾ 12 ಕಡೆಗಳಲ್ಲಿ 12 ಸಾವಿರ ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದೆ. 

ಇತ್ತೀಚಿನ ವರದಿ ಬಂದಾಗ ಆಪ್ 28, ಬಿಜೆಪಿ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು 35 ಸ್ಥಾನಗಳಲ್ಲಿ ಆಪ್, 5ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಜನರ ತೀರ್ಪಿಗೆ ತಲೆ ಬಾಗುತ್ತೇವೆ... 

ದೆಹಲಿ ಜನರ ತೀರ್ಪಿಗೆ ತಲೆ ಬಾಗುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟ್ವೀಟ್‌ ಮಾಡಿದ್ದಾರೆ. 

ADVERTISEMENT

ಆಪ್ 11, ಬಿಜೆಪಿ 1 ಕ್ಷೇತ್ರದಲ್ಲಿ ಗೆಲುವು...

ಫಲಿತಾಂಶ ನಿಚ್ಚಳವಾಗುತ್ತಿದ್ದು ಆಪ್ 52 ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿವೆ ಎಂದು ಚುನಾವಣೆ ಆಯೋಗ ಪ್ರಕಟಿಸಿದೆ.

63 ಕ್ಷೇತ್ರಗಳಲ್ಲಿ ಆಪ್ ಮುನ್ನಡೆ, 7ರಲ್ಲಿ ಬಿಜೆಪಿ

ಫಲಿತಾಂಶ ನಿಚ್ಚಳವಾಗುತ್ತಿದ್ದು ಆಪ್ ಮುನ್ನಡೆಯಿರುವ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಿಜೆಪಿ ಮುನ್ನಡೆ ದಾಖಲಿಸಿದ್ದ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಧ್ಯಾಹ್ನ 3.40ರ ವೇಳೆಯಲ್ಲಿ ಆಪ್ 63 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 7 ಕ್ಷೇತ್ರಗಳಲ್ಲಿ ಮುಂದಿತ್ತು. 18 ಕ್ಷೇತ್ರಗಳಲ್ಲಿ ಆಪ್ ಮತ್ತು 1 ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ ಎಂದು ಆಯೋಗ ಘೋಷಿಸಿದೆ.

ದ್ವೇಷದ ರಾಜಕಾರಣ ಒಲ್ಲೆನೆಂದ ಮತದಾರರು: ಮನೀಶ್ ಸಿಸೊಡಿಯಾ

ಪತಾಪರ್‌ಗಂಜ್‌ ಕ್ಷೇತ್ರದಿಂದ ಮತ್ತೆ ಆಯ್ಕೆಯಾಗಿರುವುದು ಖುಷಿತಂದಿದೆ. ಬಿಜೆಪಿ ದ್ವೇಷದ ರಾಜಕೀಯಕ್ಕೆ ಯತ್ನಿಸಿತು. ಆದರೆ ಜನರು ತಮಗಾಗಿ ಕೆಲಸ ಮಾಡುವವರನ್ನು ಅಶೀರ್ವದಿಸಿದರು’ ಎಂದು ತೀವ್ರ ಪೈಪೋಟಿಯ ನಂತರ ಪತಾಪರ್‌ಗಂಜ್‌ ಕ್ಷೇತ್ರದಿಂದ ಜಯಗಳಿಸಿದ ಮನೀಶ್‌ ಸಿಸೊಡಿಯಾ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದರು.

ಬಿಜೆಪಿಯ ಮತಗಳಿಕೆ ಪ್ರಮಾಣ ಏರಿಕೆ: ಆಪ್‌, ಕಾಂಗ್ರೆಸ್‌ಗೆ ಇಳಿಕೆ

ಈವರೆಗಿನ ಎಣಿಕೆಯ ಮಾಹಿತಿ ಪ್ರಕಾರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 41.59ರಷ್ಟು ಮತಗಳಿಸಿದೆ. 2015ಕ್ಕೆ ಹೋಲಿಸಿದರೆ ಬಿಜೆಪಿ ಮತಗಳಿಗೆ ಪ್ರಮಾಣ ಶೇ 9.38ರಷ್ಟು ಹೆಚ್ಚಾಗಿದೆ. ಆಪ್‌ ಶೇ 52.39ರಷ್ಟು ಮತಗಳಿಸಿದೆ. 2015ಕ್ಕೆ ಹೋಲಿಸಿದರೆ ಇದು ಶೇ 1.95ರಷ್ಟು ಕಡಿಮೆ. ಕಾಂಗ್ರೆಸ್‌ ಶೇ 4.39ರಷ್ಟು ಮತಗಳಿಸಿದೆ. 2015ಕ್ಕೆ ಹೋಲಿಸಿದರೆ ಇದು ಶೇ 5.27ರಷ್ಟು ಕಡಿಮೆ.

3 ಗಂಟೆಯ ಮಾಹಿತಿ: ಆಪ್ 60, ಬಿಜೆಪಿ 10

ಮಧ್ಯಾಹ್ನ 3 ಗಂಟೆಗೆ ಲಭ್ಯವಿದ್ದ ಮಾಹಿತಿ ಪ್ರಕಾರ ಆಪ್ 55, ಬಿಜೆಪಿ 10 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ. 5 ಕ್ಷೇತ್ರಗಳಲ್ಲಿ ಆಪ್ ಜಯಗಳಿಸಿದೆ.

ಕೊನೆಗೂ ಗೆದ್ದ ಮನೀಶ್ ಸಿಸೊಡಿಯಾ

ತೀವ್ರ ಕುತೂಹಲ ಕೆರಳಿಸಿದ್ದ ಪತಾಪರ್‌ಗಂಜ್ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಪೈಪೋಟಿಯ ನಂತರ ಆಪ್‌ನ ಮನೀಶ್ ಸಿಸೊಡಿಯಾ ಗೆಲುವಿನ ನಗೆ ಬೀರಿದರು. ‘ಶಿಕ್ಷಣ ಸಚಿವರು ಹೇಗಿರಬೇಕು? ಮನೀಶ್‌ ಥರ ಇರಬೇಕು’ ಎಂದು ಘೋಷಣೆಗಳು ಮತ ಎಣಿಕೆ ಕೇಂದ್ರದ ಸುತ್ತ ಮಾರ್ದನಿಸಿತು.

ದೆಹಲಿ ಮತದಾರರಿಗೆ ಕುಮಾರಸ್ವಾಮಿ ಅಭಿನಂದನೆ

‘ಹಣ, ತೋಳ್ಬಲಗಳಿಲ್ಲದೆಯೂ ಅಭಿವೃದ್ಧಿಯನ್ನೇ ಮಾನದಂಡವಾಗಿಸಿ ಯಶಸ್ವಿ ರಾಜಕಾರಣದ ಸಾಧ್ಯತೆಯನ್ನು ಸಾಕ್ಷಿಕರಿಸಿದ AAP ಹಾಗೂ ದೆಹಲಿ ಮತದಾರರಿಗೆ ಅಭಿನಂದನೆಗಳು’ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್ ಸೋಲಿಗೇನು ಕಾರಣ?

ಇದು ಕೋಮುವಾದಕ್ಕೆ ಆದ ಸೋಲು: ಚಿದಂಬರಂ

ದೆಹಲಿಯ ಜನರು ಬಿಜೆಪಿ ಮುಂದಿಟ್ಟ ಕೋಮು ಧ್ರುವೀಕರಣ, ವಿಭಜನೆ ಮತ್ತು ಅಪಾಯಕಾರಿ ವಿಚಾರಗಳನ್ನು ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್‌ಗೆ ಕಿವಿಮಾತು ಹೇಳಿದ ಅಲ್ಕಾ ಲಂಬಾ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಲ್ಕಾ ಲಂಬಾ ಸೋಲನುಭವಿಸಿದ್ದಾರೆ.

‘ಈ ಬಾರಿಯ ಚುನಾವಣೆಯಲ್ಲಿ ಹಿಂದೂ ಮತ್ತು ಮುಸ್ಲಿಮರ ಮತಗಳು ಧ್ರುವೀಕರಣಗೊಂಡವು. ದೆಹಲಿಯ ಜನರಿಗಾಗಿ ಕಾಂಗ್ರೆಸ್‌ ಹೊಸ ಮುಖಗಳೊಂದಿಗೆ ದೀರ್ಘ ಕಾಲದ ಹೋರಾಟಕ್ಕೆ ಸಜ್ಜಾಗಬೇಕು’ ಎಂದು ಅಲ್ಕಾ ಲಂಬಾ ಟ್ವೀಟ್ ಮಾಡಿದ್ದಾರೆ.

ಐದು ಬಾರಿ ಶಾಸಕರಾಗಿದ್ದ ಪ್ರಹ್ಲಾದ್ ಸಿಂಗ್ ಸಹನಾಯ್ 21,409 ಮತಗಳಿಸಿ ಈ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಬಿಜೆಪಿಯ ಸುಮನ್ ಕುಮಾರ್ ಗುಪ್ತಾ 2,775 ಮತಗಳೊಂದಿಗೆ 2ನೇ ಸ್ಥಾನ ಗಳಿಸಿದರು. 869 ಮತಗಳಿಸಿದ ಅಲ್ಕಾ ಲಂಬಾ 3ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

2015ರ ಚುನಾವಣೆಯಲ್ಲಿ ಆಪ್ ಟಿಕೆಟ್‌ ಮೇಲೆ ಚಾಂದಿನಿಚೌಕ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲಂಬಾ ಜಯಗಳಿಸಿದ್ದರು. ಆದರೆ ನಂತರದ ದಿನಗಳಲ್ಲಿ ಕೇಜ್ರಿವಾಲ್ ಜೊತೆಗೆ ವೈಮನಸ್ಯ ಮೂಡಿ ಪಕ್ಷದಿಂದ ದೂರ ಸರಿದಿದ್ದರು.

ತಮ್ಮ 19ನೇ ವಯಸ್ಸಿನಲ್ಲಿ (1995–96) ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಲಂಬಾ ಬಿಎಸ್‌ಸಿ ಪದವೀಧರೆ.

ಇವಿಎಂ ಬಗ್ಗೆ ದಿಗ್ವಿಜಯ್ ಅನುಮಾನ

ದೆಹಲಿಯ ಆಪ್ ಗೆಲುವಿನಲ್ಲಿ ಬೆಂಗಳೂರಿಗೇನು ಪಾಠವಿದೆ?

ದೈತ್ಯನೆದುರು ಜಯಿಸಿದ ಪುಟಾಣಿ: ಕಾಂಗ್ರೆಸ್ ವ್ಯಾಖ್ಯಾನ

ಆಪ್‌ ವಿಜಯ: ಸಿಹಿ ಹಂಚಿದ ಜೆಡಿಎಸ್

ಬೆಂಗಳೂರು: ದೆಹಲಿಯಲ್ಲಿ ಆಪ್ ವಿಜಯವನ್ನು ಜೆಡಿಎಸ್ ಸಿಹಿ ಹಂಚುವ ಮೂಲಕ ಸ್ವಾಗತಿಸಿತು. ರಾಷ್ಟ್ರೀಯ ಕಾರ್ಯಕಾರಿಣಿ ಮುಕ್ತಾಯವಾದ ಬಳಿಕ ಮಹಾ ಅಧಿವೇಶನ ಆರಂಭಕ್ಕೆ ಮೊದಲು ಎಎಪಿಗೆ ಲಭಿಸಿದ ಜಯವನ್ನು ಸಂಭ್ರಮಿಸಲಾಯಿತು.

ಪಕ್ಷದ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಮಾತನಾಡಿ, ಎಎಪಿ ಭರ್ಜರಿಯಾಗಿ ಮರು ಆಯ್ಕೆ ಆಗುತ್ತದೆ ಎಂದಾದರೆ ನಾವು ಏಕೆ ಅದೇ ಸಾಧನೆ ಮಾಡಬಾರದು? ಕಾಂಗ್ರೆಸ್, ಬಿಜೆಪಿ ಬಗ್ಗೆ ಬೇಸರಗೊಂಡು ಮನೆಯಲ್ಲಿ ಕುಳಿತವರನ್ನು ಪಕ್ಷಕ್ಕೆ ಕರೆಸಿಕೊಂಡು ಪಕ್ಷವನ್ನು ಬಲಪಡಿಸಬೇಕು ಎಂದರು.

ಕೋಮುವಾದದ ವಿರುದ್ಧ ಪ್ರಾಮಾಣಿಕತೆ ವಿಜಯ: ಎನ್‌ಸಿಪಿ ವ್ಯಾಖ್ಯಾನ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ದೆಹಲಿ ಮತದಾರರು ತಕ್ಕಶಾಸ್ತಿ ಮಾಡಿದ್ದಾರೆ ಎಂದು ಎನ್‌ಸಿಪಿ ವಕ್ತಾರ ಮಹೇಶ್ ತಪಸೆ ಮುಂಬೈನಲ್ಲಿ ಹೇಳಿಕೆ ನೀಡಿದ್ದಾರೆ.

ಅರವಿಂದ ಕೇಜ್ರಿವಾಲ್ ಮತ್ತು ಆಪ್ ಪಕ್ಷವನ್ನು ನಾವು ಅಭಿನಂದಿಸುತ್ತೇವೆ. ದೆಹಲಿಯ ಜನರು ಜನಪ್ರಿಯ ಗಿಮಿಕ್‌ಗಳು, ಸಮಾಜದ ಧ್ರುವೀಕರಣ ಮತ್ತು ಕೋಮುವಾದವನ್ನು ತಿರಸ್ಕರಿಸಿದ್ದಾರೆ. ಅಭಿವೃದ್ಧಿ, ಪ್ರಾಮಾಣಿಕತೆ ಮತ್ತು ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದು ಬಿಜೆಪಿ/ಆರ್‌ಎಸ್‌ಎಸ್‌ಗೆ ಆಗಿರುವ ಹಿನ್ನಡೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

ಆಪ್ ಕಚೇರಿಯಲ್ಲಿ ಪ್ರಶಾಂತ್ ಕಿಶೋರ್

ದೆಹಲಿಯ ಆಪ್ ಕಚೇರಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಹರ್ಷಚಿತ್ತರಾಗಿ ಇತರ ನಾಯಕರೊಂದಿಗೆ ಮಾತುಕತೆ ನಡೆಸಿದರು.

ಸುಧಾರಿಸಿತು ಬಿಜೆಪಿ ಸ್ಥಿತಿ

ಮಧ್ಯಾಹ್ನ 1 ಗಂಟೆಗೆ ಲಭ್ಯವಿದ್ದ ಮುನ್ನಡೆ–ಹಿನ್ನಡೆ ಮಾಹಿತಿ. 12 ಗಂಟೆಗೆ ಲಭ್ಯವಿದ್ದ ಮಾಹಿತಿಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿತ್ತು. 1 ಗಂಟೆಯ ಹೊತ್ತಿಗೆ ಇದು 14 ಸ್ಥಾನಗಳಿಗೆ ಏರಿಕೆಯಾಗಿದೆ.

ಟ್ವಿಟರ್‌ನಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಕೇಜ್ರಿವಾಲ್

ದೆಹಲಿಯ ಆಮ್‌ ಆದ್ಮಿ ಪಕ್ಷದ ಕಚೇರಿ ಎದುರು ಕಾಣಿಸಿಕೊಂಡ ಈ ಮಫ್ಲರ್‌ ಮಗು ಇದೀಗ ಸಾಮಾಜಿಕ ಮಾಧ್ಯಮದ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಆಪ್‌ ತನ್ನ ಟ್ವಿಟರ್ ಅಕೌಂಟ್‌ನಲ್ಲಿ ಟ್ವೀಟ್ ಮಾಡಿದ ಫೋಟೊವನ್ನು ಮಧ್ಯಾಹ್ನ 12.50ರ ಹೊತ್ತಿಗೆ 1.3 ಸಾವಿರ ಮಂದಿ ರಿಟ್ವೀಟ್ ಮಾಡಿದ್ದರು. 8.9 ಮಂದಿ ಲೈಕ್ ಮಾಡಿದ್ದರು.

ಸಿಎಎ ಹೋರಾಟದ ಕೇಂದ್ರ ಬಿಂದು ಶಾಹೀನ್‌ ಬಾಗ್‌ ಇರುವ ಕ್ಷೇತ್ರದಲ್ಲಿ ಯಾರು ಮುಂದು?

ಮತ್ತೊಮ್ಮೆ ಅಧಿಕಾರದತ್ತ ಆಮ್ ಆದ್ಮಿ

ಬಿಜೆಪಿಗೆ ಯಾಕೆ ಹೀಗಾಯ್ತು: ಕಮಲ್‌ನಾಥ್ ಪ್ರಶ್ನೆ

ದೆಹಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಾಧನೆಯ ಬಗ್ಗೆ ನಮಗೆ ಗೊತ್ತಿತ್ತು. ಆದರೆ ಗೆದ್ದೇಬಿಡ್ತೀವಿ ಎಂದು ಬೀಗುತ್ತಿದ್ದ ಬಿಜೆಪಿಗೆ ಯಾಕೆ ಹೀಗಾಯ್ತು ಅನ್ನೋದು ಸದ್ಯದ ಪ್ರಶ್ನೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್ ಹೇಳಿಕೆ ನೀಡಿದ್ದಾರೆ.

ದೆಹಲಿ ರಾಜಕಾರಣದಲ್ಲಿ ಅಪ್ರಸ್ತುತವಾಗುತ್ತಿದೆಯೇ ಬಿಎಸ್‌ಪಿ?

ಕೇಜ್ರಿವಾಲ್‌ ಲೆಕ್ಕಾಚಾರ!!!

ದೆಹಲಿ ಗದ್ದುಗೆಯತ್ತ ಆಪ್‌ ಸಾಗುವುದು ನಿಚ್ಚಳವಾದ ನಂತರ ಕೇಜ್ರಿವಾಲ್ ಸಹಜವಾಗಿಯೇ ‘ಪ್ರಜಾಪ್ರಭುತ್ವದ ಗೆಲುವು’ ಎಂಬ ಹೇಳಿಕೆ ನೀಡಬಹುದು ಎಂದು ಊಹಿಸಿರುವ ವ್ಯಂಗ್ಯಚಿತ್ರಕಾರರೊಬ್ಬರ ಕಲಾಕೃತಿ ಇದು.

ದೆಹಲಿ ಮತದಾರರನ್ನು ಅಭಿನಂದಿಸಿದ ಪ್ರಶಾಂತ್ ಭೂಷಣ್

‘ದೇಶದ ಆತ್ಮವನ್ನು ಉಳಿಸಿದ್ದಕ್ಕಾಗಿ ಧನ್ಯವಾದಗಳು ದೆಹಲಿ’ ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.

58 ಕ್ಷೇತ್ರಗಳಲ್ಲಿ ಬಲವಾಯ್ತು ಆಪ್

ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ 58 ಕ್ಷೇತ್ರಗಳಲ್ಲಿ ಆಪ್ ಮತ್ತು 12 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಮುನ್ನಡೆ–ಹಿನ್ನಡೆ

ಮಧ್ಯಾಹ್ನ 12 ಗಂಟೆಗೆ ಲಭ್ಯವಿದ್ದ ಮುನ್ನಡೆ, ಹಿನ್ನಡೆ ಮಾಹಿತಿ

ಕೇಜ್ರಿವಾಲ್ ಮುನ್ನಡೆ

ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್‌ 6,399 ಮತಗಳ ಮುನ್ನಡೆ ದಾಖಲಿಸಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಲ್ಲಿ ಜಯಗಳಿಸಿದವರು ಮುಖ್ಯಮಂತ್ರಿಯಾಗುವುದು ವಾಡಿಕೆ.

ಮುಂದಿನ ಚುನಾವಣೆಗೆ ಸಿದ್ಧರಾಗೋಣ: ಕಾಂಗ್ರೆಸ್ ನಾಯಕ

ಕಾಂಗ್ರೆಸ್ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ದೆಹಲಿಯಲ್ಲಿ ಶೀಲಾ ದೀಕ್ಷಿತ್‌ ಸ್ಥಾನ ತುಂಬಬಲ್ಲ ಸಮರ್ಥರಿಗಾಗಿ ಹುಡುಕಾಟ ನಡೆಸಿ, ಗುರುತಿಸಿ, ಬೆಂಬಲಿಸಬೇಕು. 4 ವರ್ಷಗಳ ನಂತರದ ಚುನಾವಣೆಗೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ ಕಚೇರಿಗಳಲ್ಲಿ ನೀರವ ಮೌನ

ದೆಹಲಿಯ ಆಪ್ ಕಚೇರಿಯಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್‌ ಕಚೇರಿಗಳಲ್ಲಿ ನೀರವ ಮೌನ ಮನೆಮಾಡಿದೆ.

ಪಂಜಾಬ್‌ನಲ್ಲಿ ಸಂಭ್ರಮಾಚರಣೆ

ದೆಹಲಿಯಲ್ಲಿ ಆಪ್ ಮುನ್ನಡೆಯನ್ನು ಪಂಜಾಬ್‌ನ ಕಾರ್ಯಕರ್ತರು ಸಂಭ್ರಮದಿಂದ ಸ್ವಾಗತಿಸಿದರು.

ಆಪ್ ನಾಯಕ ಮನೀಶ್ ಸಿಸೊಡಿಯಾ ಹಿನ್ನಡೆ

ದೆಹಲಿಯ ಪ್ರತಾಪ್ ಗಂಜ್ ಕ್ಷೇತ್ರದಲ್ಲಿ ಮನೀಶ್ ಸಿಸೊಡಿಯಾ ಹಿನ್ನಡೆ. ಬಿಜೆಪಿಯ ರವೀಂದರ್ ನೇಗಿ 1400 ಮತಗಳಿಂದ ಮುನ್ನಡೆ.

ಆಯೋಗದ ಮಾಹಿತಿ ಪ್ರಕಾರ ಆಪ್ 52, ಬಿಜೆಪಿ 18

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಆಪ್ 52, ಬಿಜೆಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಶೇ 50ರ ಗಡಿದಾಡಿದ ಆಪ್ ಮತಗಳಿಕೆ

ಬೆಳಿಗ್ಗೆ 10.22ರವರೆಗಿನ ಮತ ಎಣಿಕೆ ಆಂಕಿಅಂಶಗಳ ಪ್ರಕಾರ ಒಟ್ಟು ಚಲಾವಣೆಯಾದ ಮತಗಳಲ್ಲಿ ಆಪ್ ಶೇ 51.07, ಬಿಜೆಪಿ ಶೇ 41.30 ಮತ್ತು ಕಾಂಗ್ರೆಸ್ ಶೇ 4.29 ಮತಗಳನ್ನು ಗಳಿಸಿದೆ.

53 ಕ್ಷೇತ್ರಗಳಲ್ಲಿ ಆಪ್ ಮುನ್ನಡೆ

ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು ಬೆಳಿಗ್ಗೆ 11 ಗಂಟೆ ವೇಳೆಗೆ ಒಟ್ಟು 53 ಕ್ಷೇತ್ರಗಳಲ್ಲಿ ಆಪ್, 17 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ದಾಖಲಿಸಿದೆ. ಕಾಂಗ್ರೆಸ್‌ನ ಶೂನ್ಯ ಸಾಧನೆ ಮುಂದುವರಿದಿದೆ.

ದೆಹಲಿ ಚುನಾವಣೆ: ನೀವು ತಿಳಿಯಬೇಕಾದ 8 ಅಂಶಗಳು

ಸಂಭ್ರಮಾಚರಣೆಗೆ ಪಟಾಕಿ ಬೇಡ ಎಂದ ಕೇಜ್ರಿವಾಲ್

ಮೀಮ್ ಲೋಕದಲ್ಲಿ ದೆಹಲಿ ಚುನಾವಣೆ: ಹರಿಯುತ್ತಿದೆ ಹಾಸ್ಯದ ಹೊಳೆ

ಯಾರ ಮತಗಳಿಕೆಯಿಂದ ಯಾರಿಗೆ ಲಾಭ?

ನಾಲ್ಕಂಕಿ ತಲುಪ್ತಾರಾ ಪೂನಂ ಆಜಾದ್

ಸಂಗಮ್ ವಿಹಾರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಕ್ರಿಕೆಟಿಗ ಕೀರ್ತಿ ಆಜಾದ್‌ ಪತ್ನಿ ಪೂನಂ ಆಜಾದ್ ಈವರೆಗಿನ ಮತ ಎಣಿಕೆಯಲ್ಲಿ ಕೇವಲ 970 ಮತಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಆಪ್‌ನ ದಿನೇಶ್ ಮೊಹಾನಿಯಾ 27,385 ಮತ್ತು ಜೆಡಿಯುನ ಶಿವಚರಣ್ ಲಾಲ್ ಗುಪ್ತ 12,729 ಮತಗಳಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ 4387 ಮತಗಳ ಮುನ್ನಡೆ

ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ 4,387 ಮತಗಳ ಅಂತರದಿಂದ ಮುಂದಿದ್ದಾರೆ. ಈವರೆಗಿನ ಮತ ಎಣಿಕೆಯಲ್ಲಿ ಕೇಜ್ರಿವಾಲ್ 7820 ಮತಗಳಿಸಿದ್ದರೆ, ಬಿಜೆಪಿ 3,433 ಮತ್ತು ಕಾಂಗ್ರೆಸ್‌ 652 ಮತ ಗಳಿಸಿದೆ.

50ರ ಗಡಿದಾಟಿದ ಆಪ್, 19ಕ್ಕೆ ಕುಸಿದ ಬಿಜೆಪಿ

ಬೆಳಿಗ್ಗೆ 10.30ರವೇಳೆಗೆ ಲಭ್ಯವಿದ್ದ ಮಾಹಿತಿ ಪ್ರಕಾರ ಆಮ್ ಆದ್ಮಿ ಪಕ್ಷವು 51 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ. ಈ ಮೊದಲು 21 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದ್ದ ಬಿಜೆಪಿ 19 ಕ್ಷೇತ್ರಗಳಿಗೆ ಕುಸಿದಿದೆ. ಕಾಂಗ್ರೆಸ್‌ನ ಶೂನ್ಯ ಸ್ಥಿತಿ ಮುಂದುವರಿದಿದೆ.

50ರಲ್ಲಿ ಆಪ್, 20ರಲ್ಲಿ ಬಿಜೆಪಿ ಮುನ್ನಡೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಬೆಳಿಗ್ಗೆ 10 ಗಂಟೆ ಹೊತ್ತಿಗೆ 50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಬಿಜೆಪಿ 20 ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಪಕ್ಷೇತರರು ಯಾವುದೇ ಕ್ಷೇತ್ರದಲ್ಲಿ ಮುನ್ನಡೆ ದಾಖಲಿಸಿಲ್ಲ. ಮತ ಎಣಿಕೆ ಆರಂಭವಾದಾಗ ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿತ್ತು.

ಕೇಜ್ರಿವಾಲ್ ವಿಜಯಿ

ಫೆಬ್ರುವರಿ 11, 2015ರಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ಕಾರ್ಟೂನ್

ದೆಹಲಿಯಲ್ಲಿ ಆಪ್ ಗೆಲುವು, ಬೆಂಗಳೂರಿಗೇನು ಪಾಠ

ದೆಹಲಿಯ ಜನರ ಮನಸ್ಸು ಗೆದ್ದ ಆಪ್‌ನಂಥ ಪಕ್ಷವೊಂದರ ನಿರೀಕ್ಷೆಯಲ್ಲಿ ಬೆಂಗಳೂರು ಮಹಾನಗರವೂ ಇದೆಯೇ? ಫೆ.15, 2015ರಂದು ಪ್ರಕಟವಾಗಿದ್ದ ಈ ಬರಹ ಒಮ್ಮೆ ಓದಿ...

2015ರಲ್ಲಿ ನಿಚ್ಚಳ ಬಹುಮತ

2015ರಲ್ಲಿ ನಿಚ್ಚಳ ಬಹುಮತ ಗಳಿಸಿದ್ದ ಆಪ್. 

2013ರಲ್ಲಿ ಆಪ್ ಗೆಲುವಿನ ವಿಶ್ಲೇಷಣೆ

2013ರಲ್ಲಿ ಆಪ್ ಗೆಲ್ಲಲು ಇದ್ದ ಕಾರಣಗಳಿವು.

ಆಪ್ ಕಚೇರಿಯಲ್ಲಿ ಸಂಭ್ರಮಾಚರಣೆ

ಪಕ್ಷದ ಮುನ್ನಡೆ ಖಾತ್ರಿಯಾದ ನಂತರ ದೆಹಲಿಯ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಸಂಭ್ರಮದ ವಾತಾವರಣ. ಅಭಿಮಾನಿಗಳಿಂದ ಹರ್ಷೋದ್ಗಾರ.

ಜಾರ್ಜ್, ರಾಮ್‌ನಾರಾಯಣ್ ನೆನಪಿಸಿದ ಗೆಲುವು

2013ರ ವಿಧಾನಸಭಾ ಚುನಾವಣೆಯಲ್ಲಿಯೂ ಆಪ್ ಗಮನಾರ್ಹ ಸಾಧನೆ ಮಾಡಿತ್ತು.

2013ರಲ್ಲಿಯೂ ಆಪ್ ಗಮನಾರ್ಹ ಸಾಧನೆ

2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿಯೂ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಆಪ್) ಗಮನಾರ್ಹ ಸಾಧನೆ ಮಾಡಿತ್ತು.

ಮೂರು ಕ್ಷೇತ್ರಗಳಲ್ಲಿ ಮತ ಎಣಿಕೆ ಸ್ಥಗಿತ

ದೆಹಲಿಯ ಶಕುರ್ ಬಸ್ತಿ, ಆದರ್ಶ ನಗರ ಮತ್ತು ಉತ್ತರ ದೆಹಲಿ ಕ್ಷೇತ್ರಗಳಲ್ಲಿ ಮತ ಎಣಿಕೆ ಸ್ಥಗಿತಗೊಂಡಿದೆ.

ಎರಡು ಕ್ಷೇತ್ರಗಳಲ್ಲಿ ಆರಂಭವಾಗಿಲ್ಲ ಮತ ಎಣಿಕೆ

ದೆಹಲಿಯ ಡಿಯೊಲಿ ಮತ್ತು ಆದರ್ಶ ನಗರ ಕ್ಷೇತ್ರಗಳಲ್ಲಿ ಈವರೆಗೆ ಮತ ಎಣಿಕೆ ಆರಂಭವಾಗಿಲ್ಲ. 

ಮತ ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿಗಳು

ಅಕ್ಷರಧಾಮ್ ಮತ ಎಣಿಕೆ ಕೇಂದ್ರದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮತ್ತು ಪ್ರತಾಪ್‌ಗಂಜ್ ಕ್ಷೇತ್ರದ ಅಭ್ಯರ್ಥಿ ಮನೀಶ್ ಸಿಸೊಡಿಯಾ ಮತ್ತು ಬಿಜೆಪಿ ಅಭ್ಯರ್ಥಿ ರವಿ ನೇಗಿ.

ಪಟೇಲ್ ನಗರದಲ್ಲಿ ಕೃಷ್ಣಾ ತೀರತ್ ಮುನ್ನಡೆ

ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ನಾಯಕಿ ಕೃಷ್ಣಾ ತೀರತ್‌ ಅವರು ಪಟೇಲ್‌ ನಗರ್‌ ವಿಧಾನಸಭೆ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಎಎಪಿ ಅಭ್ಯರ್ಥಿ ರಾಜ್‌ ಕುಮಾರ್‌ ಆನಂದ್‌ ಅವರು ಮುನ್ನಡೆ ಸಾಧಿಸಿದ್ದಾರೆ.

ಅತಿ ಶ್ರೀಮಂತ ಅಭ್ಯರ್ಥಿ ಮುನ್ನಡೆ

ಚುನಾವಣೆ ಕಣದಲ್ಲಿರುವ ಅತೀ ಶ್ರೀಮಂತ ಅಭ್ಯರ್ಥಿ ಎಎಪಿಯ ಧರ್ಮಪಾಲ ಲಕ್ರಾ ಅವರು ಮುಂಡ್ಕಾ ಕ್ಷೇತ್ರದಲ್ಲಿ ಮುನ್ನಡೆ ಕಾದುಕೊಂಡಿದ್ದಾರೆ.

ಮುನ್ನಡೆ–ಹಿನ್ನಡೆ

ಬೆಳಿಗ್ಗೆ 8.30ರ ಮುನ್ನಡೆ–ಹಿನ್ನಡೆ ಚಿತ್ರಣ.

54 ಕ್ಷೇತ್ರಗಳಲ್ಲಿ ಆಪ್ ಮುನ್ನಡೆ

ಆಪ್ 54, ಬಿಜೆಪಿ 15 ಮತ್ತು ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

14 ಕ್ಷೇತ್ರಗಳಲ್ಲಿ ಆಪ್ ಹಿನ್ನಡೆ

ಕ್ಷೇತ್ರಗಳ ಮುನ್ನಡೆ ಮತ್ತು ಹಿನ್ನಡೆ ಲೆಕ್ಕಾಚಾರದಲ್ಲಿ ಆಡಳಿತಾರೂಢ ಎಎಪಿ ಕಳೆದ ಬಾರಿಗಿಂತಲೂ 10 ರಿಂದ 14 ಕ್ಷೇತ್ರಗಳಲ್ಲಿ ಹಿಂದೆಬಿದ್ದಿದೆ. ಬಿಜೆಪಿ 10–12 ಕ್ಷೇತ್ರಗಳನ್ನು ಈ ಬಾರಿ ಹೆಚ್ಚುವರಿಯಾಗಿ ಗಳಿಸಿಕೊಳ್ಳುವ ಮುನ್ಸೂಚನೆ ನೀಡಿದೆ. ಈ ಮಧ್ಯೆ, ಕಳೆದ ಬಾರಿ ಶೂನ್ಯ ಸಂಪಾದನೆ ಮಾಡಿದ್ದ ಕಾಂಗ್ರೆಸ್‌ ಕೂಡ 1ರಿಂದ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಪಡೆಯುವ ಮುನ್ಸೂಚನೆ ನೀಡಿದೆ.

ನಿಚ್ಚಳ ಬಹುಮತದತ್ತ ಆಪ್‌

ಈವರೆಗಿನ ಎಣಿಕೆ ಪ್ರಕಾರ 53ರಲ್ಲಿ ಆಪ್, 14ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕೇಜ್ರಿವಾಲ್, ಸಿಸೊಡಿಯಾ ಮುನ್ನಡೆ

ನವದೆಹಲಿ ಕ್ಷೇತ್ರದಲ್ಲಿ ಆಪ್‌ನ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಮತ್ತು ಪರಾಗ್‌ಗಂಜ್ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮುನ್ನಡೆ.

ನಟಿ ಅಲ್ಕಾ ಲಂಬಾಗೆ ಹಿನ್ನಡೆ

ಚಾಂದಿನಿ ಚೌಕ್‌ನಲ್ಲಿ ಅಲ್ಕಾ ಲಂಬಾ ಹಿನ್ನಡೆ. ಕಳೆದ ಬಾರಿ ಆಪ್‌ನಿಂದ ಗೆಲುವು ಸಾಧಿಸಿದ್ದ ನಟಿ ಅಲ್ಕಾ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಸ್ಪರ್ಧಿಸಿದ್ದರು.

ಮಹಾರಾಣಿ ಬಾಗ್ ಕ್ಷೇತ್ರದಲ್ಲಿ ಮತಎಣಿಕೆ ಆರಂಭ

ಆಪ್ 19, ಬಿಜೆಪಿ 8, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ

ಅಂಚೆ ಮತಗಳ ಎಣಿಕೆ ಅರಂಭವಾಗಿದೆ. ಆಪ್ 19, ಬಿಜೆಪಿ 8 ಮತ್ತು ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

ಮುಂದಿನ 5 ವರ್ಷ ನಮ್ಮದೇ ಆಡಳಿತ: ಆಪ್

ದೆಹಲಿಯಲ್ಲಿ ಐದು ವರ್ಷ ಆಡಳಿತ ನಡೆಸಿರುವ ನಾವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಹೀಗಾಗಿ ನಾವೇ ಅಧಿಕಾರಕ್ಕೆ ಬರುತ್ತೇವೆ. – ಮನೀಶ್‌ ಸಿಸೋಡಿಯಾ, ದೆಹಲಿ ಉಪ ಮುಖ್ಯಮಂತ್ರಿ.

ಬಿಜೆಪಿಗೆ ದೆಹಲಿ ಮುಖ್ಯಮಂತ್ರಿ ಗದ್ದುಗೆ

ನಮಗೆ ವಿಶ್ವಾಸವಿದೆ. ದೆಹಲಿಯಲ್ಲಿ ಇಂದು ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ 55 ಸ್ಥಾನಗಳನ್ನು ಗೆದ್ದರೂ ಅಚ್ಚರಿ ಇಲ್ಲ. – ಮನೋಜ್‌ ತಿವಾರಿ, ದೆಹಲಿ ಬಿಜೆಪಿ ಅಧ್ಯಕ್ಷ

ಗೆಲುವಿನ ವಿಶ್ಲೇಷಣೆ

ಫೆಬ್ರುವರಿ 11, 2015ರ ಸಂಪಾದಕೀಯದಲ್ಲಿ ಆಪ್ ಗೆಲುವಿನ ವಿಶ್ಲೇಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.